ಕೊಹ್ಲಿ ಗೈರು.. ಪ್ಲೇಯಿಂಗ್ 11 ಹೇಗೆ? – ಒಂದೇ ಅಭ್ಯಾಸ ಪಂದ್ಯ ಸಾಕಾಗುತ್ತಾ?
World Cup ಗೆಲ್ಲಲು ಅದೆಷ್ಟು ಸವಾಲು?
ಟಿ-20 ವಿಶ್ವಕಪ್ ಕದನಕ್ಕೆ ಕೌಂಟ್ಡೌನ್ ಶುರುವಾಗಿದೆ. ಚುಟುಕು ಕ್ರಿಕೆಟ್ನ ಅಧಿಪತಿಯಾಗಲು 20 ರಾಷ್ಟ್ರಗಳ ನಡುವೆ ಮಹಾಕದನವೇ ನಡೆಯಲಿದೆ. ಈಗಾಗ್ಲೇ ಎಲ್ಲಾ ತಂಡಗಳು ಪ್ರಾಕ್ಟೀಸ್ ಮೂಲಕ ಗೇಮ್ ಪ್ಲ್ಯಾನ್ ಸಿದ್ಧ ಮಾಡಿಕೊಳ್ತಿವೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಆಟಗಾರರು ನ್ಯೂಯಾರ್ಕ್ನಲ್ಲಿ ಕಸರತ್ತು ಶುರು ಮಾಡಿದ್ದಾರೆ. ಜೂನ್ 1 ರಂದು ನಡೆಯುವ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ರೆಡಿಯಾಗ್ತಿದ್ದಾರೆ. ಆದ್ರೆ ಇಷ್ಟು ದಿನ ಐಪಿಎಲ್ ಮೂಡ್ನಲ್ಲಿದ್ದ ಟೀಂ ಇಂಡಿಯಾ ಆಟಗಾರರಿಗೆ ವಿಶ್ವಕಪ್ ಕದನದಲ್ಲಿ ಸಾಲು ಸಾಲು ಸವಾಲುಗಳಿವೆ. ತಂಡ ಕೂಡ ಬ್ಯಾಲೆನ್ಸ್ಡ್ ಆಗಿಲ್ಲ. ಹೀಗಾಗಿ ಹೆಡ್ ಕೋಚ್ ರಾಹುಲ್ ದ್ರಾವಿಡ್ ಹಾಗೇ ಕ್ಯಾಪ್ಟನ್ ರೋಹಿತ್ ಶರ್ಮಾ ಮುಂದೆ ಅನೇಕ ಚಾಲೆಂಜಸ್ಗಳಿವೆ. ಅಷ್ಟಕ್ಕೂ ವಿಶ್ವಕಪ್ ಕನಸಿನೊಂದಿಗೆ ಅಮೆರಿಕಕ್ಕೆ ಹಾರಿರುವ ಟೀಂ ಇಂಡಿಯಾದಲ್ಲಿ ಏನೆಲ್ಲಾ ಗೊಂದಲಗಳಿವೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: 1962ರಲ್ಲಿ ಭಾರತದ ಮೇಲೆ ಚೀನಾ ದಾಳಿ – ಮಣಿಶಂಕರ್ ಅಯ್ಯರ್ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ!
2 ತಿಂಗಳ ಕಾಲ ಐಪಿಎಲ್ನಲ್ಲಿ ಬ್ಯುಸಿಯಾಗಿದ್ದ ಟೀಮ್ ಇಂಡಿಯಾ ಆಟಗಾರರು, ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟಕ್ಕಾಗಿ ಅಮೆರಿಕಾ ತಲುಪಿದ್ದಾರೆ. ನ್ಯೂಯಾರ್ಕ್ನಲ್ಲಿ ಪ್ರಾಕ್ಟೀಸ್ನಲ್ಲಿ ತೊಡಗಿದ್ದಾರೆ. ಆದ್ರೆ ಟೂರ್ನಿ ಆರಂಭಕ್ಕೂ ಮುನ್ನವೇ ಹೆಡ್ ಕೋಚ್ ರಾಹುಲ್ ದ್ರಾವಿಡ್ ಆ್ಯಂಡ್ ರೋಹಿತ್ ಶರ್ಮಾಗೆ ಹೊಸ ಟೆನ್ಶನ್ ಶುರುವಾಗಿದೆ. ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಹಾಗೆಯೇ ಜೂನ್ 9 ರಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಆದ್ರೆ ಟೀಂ ಇಂಡಿಯಾದಲ್ಲಿ ಮಾತ್ರ ಇನ್ನೂ ಯಾವುದೊಂದೂ ಸರಿ ಇಲ್ಲ. ಭಾರತ ತಂಡ ಈಗಾಗ್ಲೇ ಅಭ್ಯಾಸ ಆರಂಭಿಸಿದ್ರೂ ವಿರಾಟ್ ಕೊಹ್ಲಿ ಇನ್ನೂ ತಂಡವನ್ನ ಸೇರಿಕೊಂಡಿಲ್ಲ. ವೀಸಾ ಪೇಪರ್ ವರ್ಕ್ಗಳ ವಿಳಂಬದಿಂದ ಕಿಂಗ್ ಕೊಹ್ಲಿ ಅಮೆರಿಕಕ್ಕೆ ತೆರಳುವುದು ತಡವಾಗಿದೆ.
ಟೀಂ ಇಂಡಿಯಾನೇ ಸಿದ್ಧವಾಗಿಲ್ಲ!
ಟಿ20 ವಿಶ್ವಕಪ್ ಮುಡಿಗೇರಿಸಿಕೊಳ್ಳೋಕೆ ಇತರೆ ತಂಡಗಳು ಬ್ಲೂಪ್ರಿಂಟ್ ರೆಡಿ ಮಾಡಿಕೊಂಡಿವೆ. ಎದುರಾಳಿ ಪಡೆಯನ್ನ ಹೇಗೆ ಬೇಟೆಯಾಡಬೇಕು ಎಂಬ ಬಗ್ಗೆ ಲೆಕ್ಕಾಚಾರ ಹಾಕ್ತಿದ್ದಾರೆ. ಆದ್ರೆ ಐಪಿಎಲ್ನಲ್ಲಿ ಬ್ಯುಸಿಯಾಗಿದ್ದ ಟೀಂ ಇಂಡಿಯಾ ಮಾತ್ರ ಇನ್ನು ಗೇಮ್ ಪ್ಲ್ಯಾನ್ ರೆಡಿ ಮಾಡಿಲ್ಲ. ಅಷ್ಟೇ ಯಾಕೆ ಇನ್ನೂ ಕೆಲ ಆಟಗಾರರು ಟೀಮ್ ಸೇರಿಕೊಂಡಿಲ್ಲ. ಇದು ಹಲವು ಗೊಂದಲಗಳನ್ನ ಹುಟ್ಟು ಹಾಕಿದೆ. ಅಲ್ದೇ ಜೂನ್ 5ರಂದು ಟೀಮ್ ಇಂಡಿಯಾದ ಅಭಿಯಾನ ಶುರುವಾಗಲಿದೆ. ಇದಕ್ಕೂ ಮುನ್ನ ಜೂನ್1 ರಂದು ಬಾಂಗ್ಲಾ ಎದುರು ಒಂದೇ ಒಂದು ಅಭ್ಯಾಸ ಪಂದ್ಯವನ್ನಷ್ಟೇ ಭಾರತ ಆಡಲಿದೆ. ವಿಷ್ಯ ಅಂದ್ರೆ ತಂಡದಲ್ಲಿರುವ ಹಲವು ಆಟಗಾರರಿಗೆ ಅಮೆರಿಕಾ ಹಾಗೂ ವೆಸ್ಟ್ ಇಂಡೀಸ್ ಕಂಡೀಷನ್ಸ್ನಲ್ಲಿ ಆಡಿದ ಅನುಭವವೇ ಇಲ್ಲ. ಇದೆಲ್ಲಕ್ಕಿಂತ ಮಿಗಿಲಾಗಿ ಈ ಕಂಡೀಷನ್ಸ್ ಭಾರತೀಯ ಹವಾಮಾನಕ್ಕೆ ತದ್ವಿರುದ್ಧ. ಹೀಗಾಗಿ ಈ ವಾತಾವರಣಕ್ಕೆ ಒಗ್ಗಿಕೊಳ್ಳುವ ಚಾಲೆಂಜ್ ಕೂಡ ಟೀಮ್ ಇಂಡಿಯಾ ಆಟಗಾರರಿಗೆ ಇದೆ. 8 ದಿನ ಮುಂಚೆ ಅಮೆರಿಕಾಗೆ ಕಾಲಿಟ್ಟಿರುವ ಆಟಗಾರರು ಈ ವಾತವಾರಣಕ್ಕೆ ಎಷ್ಟರ ಮಟ್ಟಿಗೆ ಒಗ್ಗಿಕೊಳ್ಳುತ್ತಾರೆ ಎಂಬ ಪ್ರಶ್ನೆ ಕಾಡ್ತಿದೆ.
ಈ ಟೆನ್ಷನ್ ಒಂದ್ಕಡೆಯಾದ್ರೆ ಮತ್ತೊಂದ್ಕಡೆ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ಹಲವರ ಪ್ರದರ್ಶನ ಹೇಳಿಕೊಳ್ಳುವಂತಿಲ್ಲ. ವಿರಾಟ್ ಕೊಹ್ಲಿ, ಜಸ್ಪ್ರಿತ್ ಬುಮ್ರಾ, ಆರ್ಶ್ದೀಪ್, ಕುಲ್ದೀಪ್ ಯಾದವ್ ಬಿಟ್ಟರೆ, ಉಳಿದೆಲ್ಲ ಆಟಗಾರರು ಐಪಿಎಲ್ನಲ್ಲಿ ಪರದಾಡಿದ್ದಾರೆ. ನಾಯಕ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್ ಕೂಡ ಫಾರ್ಮ್ನಲ್ಲಿ ಇಲ್ಲ. ಸಂಜು ಫಾರ್ಮ್ನಲ್ಲಿದ್ದರೂ, ಚಾಲೆಂಜಿಂಗ್ ಕಂಡೀಷನ್ಸ್ನಲ್ಲಿ ಕೈಕೊಟ್ಟಿದ್ದಾರೆ. ಇದೇ ಈಗ ಟೀಮ್ ಇಂಡಿಯಾ ಪಾಲಿಗೆ ದೊಡ್ಡ ತಲೆನೋವಾಗಿದೆ. ಅಲ್ದೇ ಹಲವು ವಿಚಾರಗಳಲ್ಲಿ ಕ್ಲಾರಿಟಿಯೇ ಇಲ್ಲ.
ಬೆಸ್ಟ್ ಪ್ಲೇಯಿಂಗ್ ಇಲೆವೆನ್ ಹೇಗೆ?
ವಿಶ್ವಕಪ್ ಬರುತ್ತೆ ಅಂದ್ರೆ ತಿಂಗಳುಗಳ ಮೊದಲೇ ಟೀಮ್ ಸಿದ್ಧವಾಗಿರುತ್ತೆ. ಯಾವ್ ಸ್ಲಾಟ್ಗೆ ಯಾರನ್ನ ಫಿಕ್ಸ್ ಮಾಡಬೇಕು? ಮಿಡಲ್ ಆರ್ಡರ್, ಆಲ್ರೌಂಡರ್ಸ್, ಸ್ಪಿನ್ನರ್, ಫಾಸ್ಟ್ ಬೌಲರ್ಸ್ ಹೀಗೆ ಎಲ್ಲಾ ಸ್ಲಾಟ್ಗಳಲ್ಲಿ ಇಂತಹ ಆಟಗಾರರೇ ಫಿಕ್ಸ್ ಅಂತ ರೆಡಿಯಾಗಿರಬೇಕು. ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾ ಸ್ಲಾಟ್ವೊಂದು ಬಿಟ್ಟರೆ, ಉಳಿದ್ಯಾವ ಸ್ಲಾಟ್ಗೂ ಯಾರೊಬ್ಬರೂ ಫಿಕ್ಸ್ ಆಗಿಲ್ಲ. ಹೀಗಾಗಿ ಬೆಸ್ಟ್ ಪ್ಲೇಯಿಂಗ್ ಇಲೆವೆನ್ ಆಯ್ಕೆ ನಿಜಕ್ಕೂ ಕೋಚ್ ಆ್ಯಂಡ್ ಕ್ಯಾಪ್ಟನ್ಗೆ ಸವಾಲಾಗಿದೆ. ಹಾಗೇ ಟೀಮ್ ಇಂಡಿಯಾದಲ್ಲಿ ಕೋರ್ ಗ್ರೂಪ್ ಇಲ್ಲ. ಒಂದಷ್ಟು ಮಂದಿ ಏಕದಿನ ಫಾರ್ಮೆಟ್ನಲ್ಲಿ ಬ್ಯುಸಿಯಾಗಿದ್ದ ಆಟಗಾರರಾಗಿದ್ರೆ ಇನ್ನೂ ಕೆಲ ಆಟಗಾರರು ಟಿ20ಗೆ ಮಾತ್ರವೇ ಸೀಮಿತವಾಗಿದ್ರು. ಈ ಪೈಕಿ ರೋಹಿತ್, ವಿರಾಟ್ ಕೊಹ್ಲಿ ಐಪಿಎಲ್ ಆರಂಭಕ್ಕೂ ಮುನ್ನವೇ ಟಿ20ಗೆ ವಾಪಾಸ್ ಆಗಿದ್ರು. ಬೂಮ್ರಾಗೂ ಕೂಡ ಐರ್ಲೆಂಡ್ ಸರಣಿಯೇ ಲಾಸ್ಟ್. ಇಂಜುರಿಯಿಂದ ದೂರವಾಗಿದ್ದ ಹಾರ್ದಿಕ್, ಐಪಿಎಲ್ ಬಳಿಕ ಆಡ್ತಿರೋ ಫಸ್ಟ್ ಟಿ20 ಮ್ಯಾಚ್. ಪಂತ್ ಕೂಡ ಇದೇ ಲಿಸ್ಟ್ನಲ್ಲಿದ್ದಾರೆ.
ವಿಶೇಷ ಅಂದ್ರೆ ವಿಶ್ವಕಪ್ ತಂಡದಲ್ಲಿರೋ ಆಟಗಾರರು ಮಹತ್ವದ ಟೂರ್ನಿಗೂ ಮುನ್ನ ಒಟ್ಟಾಗಿ ಒಂದೇ ಒಂದು ಟಿ20 ಸರಣಿಯನ್ನೂ ಆಡಿಲ್ಲ. ಇದ್ರಿಂದ ತಂಡದಲ್ಲಿ ಸಮನ್ವಯತೆಯ ಕೊರತೆ ಕಾಡುವ ಆತಂಕವೂ ಇದೆ. ಒಟ್ನಲ್ಲಿ ವಿಶ್ವ ಗೆಲ್ಲೋಕೆ ಸಿದ್ಧವಾಗ್ತಿರೋ ದ್ರಾವಿಡ್ ಮತ್ತು ರೋಹಿತ್ ಮುಂದೆ ಸವಾಲುಗಳ ಪಟ್ಟಿಯೇ ಇದೆ. ಇದನ್ನೆಲ್ಲಾ ಮೆಟ್ಟಿ ಹೇಗಿ ಪರ್ಫಾರ್ಮ್ ಮಾಡ್ತಾರೆ ಅನ್ನೋದೇ ಈಗಿರುವ ಪ್ರಶ್ನೆ.