ಕೆಪಿಸಿಸಿ ಅಧ್ಯಕ್ಷರು ಬದಲಾಗಲಿದ್ದಾರೆಯೇ? – ಕಾಂಗ್ರೆಸ್ ನಾಯಕರು ಹೇಳಿದ್ದೇನು?
ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳುವ ಹೊತ್ತಿನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಅಧ್ಯಕ್ಷರು ಬದಲಾಗಲಿದ್ದಾರೆ ಎನ್ನುವ ಹೊಸ ಚರ್ಚೆ ಆರಂಭವಾಗಿದೆ. ಆ ಹುದ್ದೆ ಸಂಭಾಳಿಸಲು ನಾನು ರೆಡಿ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಕೂಡ ಹೇಳಿದ್ದರು. ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ಕಾಂಗ್ರೆಸ್ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ: ಪ್ರಜ್ವಲ್ ವೀಡಿಯೋ ಬೆನ್ನತ್ತಿದ ಎಸ್ಐಟಿ – ವೀಡಿಯೋ ಮಾಡಿದ್ದು ಯಾವ ದೇಶದಿಂದ?
ಈ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಜಿ ಸಿ ಚಂದ್ರಶೇಖರ್ ಮಾತನಾಡಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಯಾವುದೇ ಬದಲಾವಣೆಗಿದು ಕಾಲವಲ್ಲ. ಮುಂಬರುವ ಬಿಬಿಎಂಪಿ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಡಿಕೆ.ಶಿವಕುಮಾರ್ ಅವರ ನೇತೃತ್ವದಲ್ಲಿಯೇ ಪಕ್ಷ ಎದುರಿಸಲಿದೆ. ಚುನಾವಣೆ ಕುರಿತು ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರೊಂದಿಗೆ ಚರ್ಚಿಸಲಿದೆ. ಶಿವಕುಮಾರ್ ನೇತೃತ್ವದಲ್ಲಿಯೇ ಚುನಾವಣೆ ನಡೆಯಲಿದೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಸಚಿವ ಸ್ಥಾನ ತೊರೆಯಲು ಸಿದ್ಧ ಎಂಬ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಕೆಪಿಸಿಸಿ ಅಧ್ಯಕ್ಷರಾಗುವ ಬಯಕೆ ಹಲವರಿಗಿದೆ. ಆದರೆ, ಈ ವಿಚಾರವನ್ನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕೇ ವಿನಃ ಸಾರ್ವಜನಿಕವಾಗಿ ಮಾತನಾಡಿ ಪಕ್ಷಕ್ಕೆ ಮುಜುಗರ ಉಂಟು ಮಾಡಬಾರದು ಎಂದು ಸಲಹೆ ನೀಡಿದರು.