ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗ ಇವರೇ! – ರೋಹಿತ್ ಶರ್ಮಾ, ಧೋನಿ, ಕೊಹ್ಲಿ ಇವರನ್ನೂ ಮೀರಿಸುವ ಆಟಗಾರ ಯಾರು?
ಭಾರತದಲ್ಲಿ ಸದ್ಯ ಲೋಕಸಭಾ ಚುನಾವಣೆಗಿಂತ ಜಾಸ್ತಿ ಸದ್ದು ಮಾಡ್ತಿರೋದು ಐಪಿಎಲ್. ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಎಂಬುದು ಜಗತ್ತಿಗೆ ಗೊತ್ತಿರುವ ವಿಚಾರ. ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾದ ಬಿಸಿಸಿಐ ನಡೆಸುವ ಈ ಟೂರ್ನಿಯಿಂದ ಮಂಡಳಿಯ ಬೊಕ್ಕಸಕ್ಕೆ ಕೋಟಿ ಕೋಟಿ ಹಣ ಬರುತ್ತದೆ. ಆಟಗಾರರು ಮಾತ್ರವಲ್ಲದೆ ಫ್ರಾಂಚೈಸಿಗಳು ಕೂಡಾ ಕೋಟಿ ಲೆಕ್ಕದಲ್ಲಿ ಸಂಪಾದನೆ ಮಾಡುತ್ತವೆ. ಹಾಗೇ ಹಲವು ಆಟಗಾರರು ಉತ್ತಮ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ. ಭಾರತದ ಹಲವು ಆಟಗಾರರು ಬಿಸಿಸಿಐ ಮತ್ತು ಐಪಿಎಲ್ ಒಪ್ಪಂದಗಳಿಂದ ಭಾರಿ ಪ್ರಮಾಣ ಸಂಬಳ ಪಡೆಯುತ್ತಾರೆ. 2024ರಲ್ಲಿ ಬಿಸಿಸಿಐ ಹಾಗೂ ಐಪಿಎಲ್ ಒಪ್ಪಂದಗಳಿಂದ ಅತಿ ಹೆಚ್ಚುಸಂಪಾದಿಸುವ ಟಾಪ್ ಆಟಗಾರರ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಆದ್ರೆ ಒಂದು ಅಚ್ಚರಿಯ ವಿಷ್ಯ ಅಂದ್ರೆ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಆಗ್ಲಿ ಅಭಿಮಾನಿಗಳ ದೇವರಾಗಿರೋ ಧೋನಿಯಾಗ್ಲಿ, ಕೊಹ್ಲಿಯಾಗ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿಲ್ಲ. ಸಂಭಾವನೆ ರೇಸ್ನಲ್ಲಿ ಫಸ್ಟ್ ಪ್ಲೇಸ್ನಲ್ಲಿರೋದು ನಮ್ಮ ಕನ್ನಡಿಗ ಕೆ.ಎಲ್ ರಾಹುಲ್.
ಹೆಚ್ಚು ಸಂಭಾವನೆ ಪಡೆಯುವ ಪ್ಲೇಯರ್ಸ್!
2024 ರ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ಆಟಗಾರ ಬೇರಾರು ಅಲ್ಲ, ಕನ್ನಡಿಗ ಕೆಎಲ್ ರಾಹುಲ್. ಬಲಗೈ ವಿಕೆಟ್ಕೀಪರ್-ಬ್ಯಾಟ್ಸ್ಮನ್ ಮತ್ತು ಭಾರತೀಯ ತಂಡದ ಉಪನಾಯಕ ಕೆ.ಎಲ್ ರಾಹುಲ್ ಐಪಿಎಲ್ 2024 ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ಆಟಗಾರರಾಗಿದ್ದಾರೆ. 2022 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ 17 ಕೋಟಿ ರೂಪಾಯಿ ನೀಡಿ ರಾಹುಲ್ ಅವರನ್ನು ತಮ್ಮ ತಂಡಕ್ಕೆ ಸೇರ್ಪಡೆಗೊಳಿಕೊಂಡಿತ್ತು. ಕೆ.ಎಲ್ ರಾಹುಲ್ ಬಳಿಕ 2ನೇ ಪ್ಲೇಸ್ನಲ್ಲಿ ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಮತ್ತು ರಿಷಭ್ ಪಂತ್ ಇದ್ದಾರೆ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ರೋಹಿತ್ ಶರ್ಮಾರಿಗೆ 16 ಕೋಟಿ ರೂಪಾಯಿ, ಸಿಎಸ್ಕೆ 16 ಕೋಟಿ ರೂಪಾಯಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಿಷಬ್ ಪಂತ್ಗೆ 16 ಕೋಟಿ ರೂಪಾಯಿ ನೀಡ್ತಿದೆ. ಈ ಮೂಲಕ ಈ ಮೂವರು 2ನೇ ಸ್ಥಾನದಲ್ಲಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ಮುಂಬೈ ತಂಡದ ಮತ್ತೊಬ್ಬ ಆಟಗಾರ ಇಶಾನ್ ಕಿಶನ್ ಇದ್ದಾರೆ. ಇಶಾನ್ ಕಿಶನ್ಗೆ ಐಪಿಎಲ್ನಲ್ಲಿ 15.25 ಕೋಟಿ ರೂಪಾಯಿ ವೇತನ ಪಡೆಯುತ್ತಿದ್ದಾರೆ. ಇನ್ನು 4ನೇ ಸ್ಥಾನದಲ್ಲಿ ಇರೋದು ನಮ್ಮ ಕಿಂಗ್ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ. ಇಬ್ಬರೂ ಕೂಡ ತಮ್ಮ ತಮ್ಮ ಫ್ರಾಂಚೈಸಿಗಳಿಂದ ತಲಾ 15 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ನಂತರದ ಸ್ಥಾನದಲ್ಲಿ ರಾಜಸ್ತಾನ ತಂಡದ ಸಂಜು ಸ್ಯಾಮ್ಸನ್ 14 ಕೋಟಿ, ಸಿಎಸ್ಕೆಯ ದೀಪಕ್ ಚಹರ್ 14 ಕೋಟಿ, ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ 12.25 ಕೋಟಿ, ಸಿಎಸ್ ಕೆ ಮಾಜಿ ನಾಯಕ ಎಂಎಸ್ ಧೋನಿ 12 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಅಕ್ಸರ್ ಪಟೇಲ್, ಜಸ್ಪ್ರೀತ್ ಬುಮ್ರಾ ಕೂಡ 12 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.
ಐಪಿಎಲ್ನಲ್ಲಿ ಮಾತ್ರವಲ್ಲದೇ ಬಿಸಿಸಿಐನಿಂದಲೇ ವಾರ್ಷಿಕ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅಸಾಧಾರಣ ಪ್ರದರ್ಶನಗಳ ಮೂಲಕ ತಮ್ಮ ಸಾಂಪಾದನೆ ಹೆಚ್ಚಿಸಿಕೊಂಡಿದ್ದಾರೆ. ಜೊತೆಗೆ ಮೈದಾನದ ಹೊರಗೂ ತಮ್ಮ ಬ್ರ್ಯಾಂಡ್ ಮೌಲ್ಯವನ್ನು ವೃದ್ಧಿಸಿಕೊಂಡಿದ್ದಾರೆ. ಹಾಗೇ ಪ್ರಮುಖ ಬ್ರಾಂಡ್ಗಳ ಅಂಬಾಸಿಡರ್ ಆಗಿದ್ದಾರೆ. ಪ್ರಾಯೋಜಕತ್ವಗಳ ಮೂಲಕ ಹೆಚ್ಚೆಚ್ಚಿನ ಸಂಪಾದನೆ ಮಾಡುತ್ತಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, 2024ರಲ್ಲಿ ಭಾರತದ ಅತ್ಯಂತ ಶ್ರೀಮಂತ ಕ್ರಿಕೆಟಿಗನಾಗಿ ಸಚಿನ್ ತೆಂಡೂಲ್ಕರ್ ಮುಂದುವರೆದಿದ್ದಾರೆ. ಜಂಟಲ್ಮೆನ್ ಗೇಮ್ಗೆ ವಿದಾಯ ಹೇಳಿದರೂ, 165 ಮಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಸಚಿನ್ ಭಾರತದ ಶ್ರೀಮಂತ ಕ್ರಿಕೆಟಿಗನಾಗಿದ್ದಾರೆ. ವಿರಾಟ್ ಕೊಹ್ಲಿ 122 ಮಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಎಂಎಸ್ ಧೋನಿ 127 ಮಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ. ಈ ಮೂಲಕ ಬಾಲಿವುಡ್ ಮಂದಿಗಿಂತ್ಲೂ ಸಂಭಾವನೆ ಮತ್ತು ಸಂಪಾದನೆಯಲ್ಲಿ ಕ್ರಿಕೆಟರ್ಸ್ ಒಂದು ಹೆಜ್ಜೆ ಮುಂದಿದ್ದಾರೆ.