ವಿಕೆಟ್ ಕೀಪರ್ಸ್.. ಬೆಸ್ಟ್ ಫಿನಿಶರ್ಸ್ – ಧೋನಿ Or ಡಿಕೆ.. ಯಾರಿಗೆ ಲಾಸ್ಟ್ IPL?
ತಲಾ & ಬಾಸ್ ಕ್ರಿಕೆಟ್ ಜರ್ನಿ ಹೇಗಿತ್ತು?

ವಿಕೆಟ್ ಕೀಪರ್ಸ್.. ಬೆಸ್ಟ್ ಫಿನಿಶರ್ಸ್ – ಧೋನಿ Or ಡಿಕೆ.. ಯಾರಿಗೆ ಲಾಸ್ಟ್ IPL?ತಲಾ & ಬಾಸ್ ಕ್ರಿಕೆಟ್ ಜರ್ನಿ ಹೇಗಿತ್ತು?

ರಾಯಲ್ ಚಾಲೆಂಜರ್ಸ್​ ಬೆಂಗಳೂರು ವರ್ಸಸ್ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯಕ್ಕೆ ಕೆಲವೇ ಗಂಟೆಗಳಷ್ಟೇ ಬಾಕಿ ಉಳಿದಿವೆ. ಆರ್​ಸಿಬಿ ಮ್ಯಾಚ್ ಗೆದ್ದು ಪ್ಲೇಆಫ್​ಗೆ ಹೋಗ್ಲಪ್ಪ ಅಂತಾ ಕೋಟ್ಯಂತರ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸ್ತಿದ್ದಾರೆ. ಮತ್ತೊಂದ್ಕಡೆ ಸಿಎಸ್​ಕೆ ಫ್ಯಾನ್ಸ್ ಕೂಡ ಪಂದ್ಯ ಗೆಲ್ಲೋ ಭರವಸೆಯಲ್ಲಿದ್ದಾರೆ. ಆದ್ರೆ ಈ ಪ್ಲೇಆಫ್ ಲೆಕ್ಕಾಚಾರದ ನಡುವೆ ಇಬ್ಬರು ದಿಗ್ಗಜ ಆಟಗಾರರಲ್ಲಿ ಒಬ್ಬರಿಗೆ ಇದೇ ಐಪಿಎಲ್​ನ ಕೊನೇ ಪಂದ್ಯವಾಗಲಿದೆ. ಕ್ರಿಕೆಟ್ ಲೆಜೆಂಡ್ ಮಹೇಂದ್ರ ಸಿಂಗ್ ಧೋನಿ ಮತ್ತು ದಿನೇಶ್ ಕಾರ್ತಿಕ್ ಇಬ್ಬರಲ್ಲಿ ಒಬ್ಬರು ಶನಿವಾರದ ಮ್ಯಾಚ್ ಮೂಲಕ ಐಪಿಎಲ್​ಗೆ ವಿದಾಯ ಹೇಳಲಿದ್ದಾರೆ. ಆರ್​ಸಿಬಿ ಗೆದ್ದರೆ ಧೋನಿ ಪಾಲಿಗೆ ಇದೇ ಲಾಸ್ಟ್ ಮ್ಯಾಚ್. ಸಿಎಸ್​ಕೆ ಗೆದ್ದರೆ ದಿನೇಶ್ ಕಾರ್ತಿಕ್​ಗೆ ಅದುವೇ ವಿದಾಯದ ಪಂದ್ಯ. ವಿಕೆಟ್ ಕೀಪರ್ಸ್, ಬೆಸ್ಟ್ ಫಿನಿಶರ್ಸ್ ಆಗಿ ತಂಡಕ್ಕೆ ಆಸರೆಯಾಗ್ತಿದ್ದ ಧೋನಿ ಮತ್ತು ಡಿಕೆ ಐಪಿಎಲ್ ಜರ್ನಿ ಹೇಗಿತ್ತು? ಇಬ್ಬರೂ ಎದುರಿಸಿದ ಟೀಕೆಗಳೆಷ್ಟು? ಇವ್ರ ನಿವೃತ್ತಿ ತಂಡಗಳಿಗೆ ಅದೆಂಥಾ ಹೊಡೆತ ನೀಡುತ್ತೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಆರ್‌ಸಿಬಿ Vs ಸಿಎಸ್‌ಕೆ ಹೈವೋಲ್ಟೇಜ್‌ ಮ್ಯಾಚ್‌ – ಈ ರಸ್ತೆಯಲ್ಲಿ ಸಂಚಾರದಲ್ಲಿ ಭಾರಿ ಬದಲಾವಣೆ  

ಚೆನ್ನೈನ ಚಿನ್ನ ಧೋನಿ!

ಚೆನ್ನೈ ತಂಡದ ಜೀವಾಳ, ಮಾಜಿ ನಾಯಕ ಎಂ.ಎಸ್‌ ಧೋನಿ ಅವರಿಗೆ ಇದೇ ಕೊನೆಯ ಐಪಿಎಲ್‌ ಸೀಸನ್‌ ಆಗಿರಲಿದೆ. ಈಗಾಗಲೇ ಅವರು ಚೆನ್ನೈನ ಜನತೆಗೆ ಧನ್ಯವಾದ ತಿಳಿಸಿದ್ದು, ನಾಳೆ ಏನಾದರೂ ಆರ್‌‌ಸಿಬಿ ವಿರುದ್ಧ ಚೆನ್ನೈ ಸೋತರೆ ಧೋನಿ ಐಪಿಎಲ್‌ಗೆ ನಿವೃತ್ತಿ ಘೋಷಿಸುವುದು ಖಂಡಿತ. ಹಾಗೇ ಇದೇ ಕೊನೆಯ ಐಪಿಎಲ್‌ ಪಂದ್ಯವಾಗಲಿದೆ. ಐಪಿಎಲ್‌ನ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಡಿರುವ 14 ಸೀಸನ್​ಗಳ ಪೈಕಿ 12 ಸಲ ಪ್ಲೇ ಆಫ್​ಗೆ 10 ಬಾರಿ ಫಿನಾಲೆಗೆ ಕೊಂಡೊಯ್ದಿದ್ದಾರೆ. 5 ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ. 2020ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಧೋನಿ ಐಪಿಎಲ್‌ನಿಂದಲೂ ಈ ವರ್ಷ ನಿವೃತ್ತರಾಗುತ್ತಾರೆ ಎನ್ನಲಾಗಿದೆ. 2008ರಲ್ಲೇ ಐಪಿಎಲ್​ಗೆ ಪದಾರ್ಪಣೆ ಮಾಡಿದ್ದ ಧೋನಿ, ಇಲ್ಲಿಯವರೆಗೆ 263 ಪಂದ್ಯಗಳನ್ನು ಆಡಿದ್ದಾರೆ. ಮತ್ತು 39.23 ರ ಸರಾಸರಿಯೊಂದಿಗೆ 5,218 ರನ್ ಗಳಿಸಿದ್ದಾರೆ. 24 ಆಫ್ ಸೆಂಚುರಿ ಬಾರಿಸಿದ್ದು, ಗರಿಷ್ಠ ಐಪಿಎಲ್ ಸ್ಕೋರ್ 84 ರನ್ ಆಗಿದೆ. ಸದ್ಯ ಧೋನಿಯವ್ರಿಗೆ ಚೆನ್ನೈ ಫ್ರಾಂಚೈಸಿಯು 12 ಕೋಟಿ ರೂಪಾಯಿ ಸಂಭಾವನೆ ನೀಡುತ್ತಿದೆ. 2024ರ ಐಪಿಎಲ್ ಟೂರ್ನಿಯಲ್ಲಿ ಸಿಎಸ್​ಕೆಗೆ ಬೆಸ್ಟ್ ಫಿನಿಶರ್ ಆಗಿರೋ ಧೋನಿ 136 ರನ್ ಗಳಿಸಿದ್ದಾರೆ. ಅದೂ ಕೂಡ 226.67ರ ಸ್ಟ್ರೈಕ್ ರೇಟ್​ನಲ್ಲಿ ಅನ್ನೋದೇ ವಿಶೇಷ.

ಸದ್ಯ 42 ವರ್ಷದ ಧೋನಿ ಈ ಸೀಸನ್​ ಮೂಲಕ ಐಪಿಎಲ್​ಗೆ ವಿದಾಯ ಹೇಳ್ತಾರೆ ಎನ್ನಲಾಗಿದೆ. ಮತ್ತೊಂದ್ಕಡೆ ಆರ್​ಸಿಬಿಯ ಆಪತ್ಬಾಂಧವ 39 ವರ್ಷದ ದಿನೇಶ್​ ಕಾರ್ತಿಕ್​ಗೂ ಇದೇ ಕೊನೆಯ ಐಪಿಎಲ್​ ಟೂರ್ನಿ. ಈ ಸೀಸನ್​ ಆರಂಭಕ್ಕೂ ಮುನ್ನವೇ ವಿದಾಯದ ಸುಳಿವನ್ನ ಸ್ವತಃ ದಿನೇಶ್​ ಕಾರ್ತಿಕ್​​ ನೀಡಿದ್ದರು. ಹೀಗಾಗಿ ಆರ್​ಸಿಬಿ ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ಟೀಮ್ ಸೋತ್ರೆ ಡಿಕೆಗೆ ಇದೇ ಕೊನೇ ಪಂದ್ಯವಾಗಲಿದೆ. ಫಾಫ್ ಪಡೆ ಸಂಕಷ್ಟದಲ್ಲಿದ್ದಾಗ್ಲೇ ತಂಡಕ್ಕೆ ಆಸರೆಯಾಗ್ತಿದ್ದ ಆರ್​ಸಿಬಿಯ ಬೆಸ್ಟ್ ಫಿನಿಶರ್, ವಿಕೆಟ್ ಕೀಪರ್ ಡಿಕೆ ಬಾಸ್ ಬಗ್ಗೆ ಹೇಳಲೇಬೇಕು.

ಆರ್ ಸಿಬಿಯ ಆಪತ್ಬಾಂಧವ ಡಿಕೆ! 

ಐಪಿಎಲ್​ನಲ್ಲಿ ಆಡ್ತಿರುವ ಡಿಕೆ ಹಲವು ಫ್ರಾಂಚೈಸಿಗಳಲ್ಲಿ ಆಡಿದ್ದಾರೆ. 2008ರಿಂದ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಿದ್ದ ಡಿಕೆ, 2011ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನ ಸೇರಿಕೊಂಡಿದ್ದರು. ಬಳಿಕ 2012-13ರಲ್ಲಿ ಮುಂಬೈ ಇಂಡಿಯನ್ಸ್, 2015ರ ಆರ್​ಸಿಬಿ, 2016-17ರಲ್ಲಿ ಗುಜರಾತ್ ಲಯನ್ಸ್ ಪರ ಆಡಿದ್ದರು. 2018ರಿಂದ 21ರವರೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದಾರೆ.  2022ರಿಂದ ಮತ್ತೆ ಆರ್​ಸಿಬಿ ಸೇರಿಕೊಂಡ ದಿನೇಶ್ ಕಾರ್ತಿಕ್ ಆರ್‌ಸಿಬಿ ತಂಡದಲ್ಲೇ ಉಳಿದಿದ್ದಾರೆ. 2022ರಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ 5.5 ಕೋಟಿ ರೂಪಾಯಿಗೆ ಆರ್‌ಸಿಬಿ ತಂಡ ಖರೀದಿಸಿತ್ತು. ಆದ್ರೆ ಡಿಕೆ ಪ್ರದರ್ಶನದ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಕ್ರಿಕೆಟ್‌ ಆಡೋದನ್ನ ಬಿಟ್ಟು ಕಾಮೆಂಟ್ರಿ ಹೇಳಲು ನೀನು ಬೆಸ್ಟ್ ಎಂದು ವ್ಯಂಗ್ಯ ಮಾಡಿದ್ದರು.ಆದ್ರೆ ಡಿಕೆ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ.. ನಿವೃತ್ತಿ ಬಗ್ಗೆ ಟೀಕಿಸಿದವರಿಗೂ ಕೂಡಾ ತನ್ನ ಬ್ಯಾಟ್ ಮೂಲಕವೇ ತಿರುಗೇಟು ಕೊಟ್ಟಿದ್ದರು. ಕೇವಲ ಸಿಕ್ಸ್‌ ಫೋರ್‌ಗಳ ಮೂಲಕ ಅಬ್ಬರಿಸಿ ಬಾಯಿ ಮುಚ್ಚಿಸಿದ್ದರು.  ಇದೀಗ ಆರ್​ಸಿಬಿಗೆ ಬೆಸ್ಟ್ ಫಿನಿಶರ್ ಆಗಿ ಆರ್​ಸಿಬಿಯ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿದ್ದಾರೆ.  ನಿವೃತ್ತಿಯ ಅಂಚಿನಲ್ಲೂ ಬ್ಯಾಟ್ ಮೂಲಕವೇ ಮಿಂಚು ಹರಿಸಿದ್ದಾರೆ. 2024 ರ ಐಪಿಎಲ್ ಟೂರ್ನಿಯಲ್ಲಿ 13 ಪಂದ್ಯಗಳನ್ನ ಆಡಿರುವ ಡಿಕೆ 301 ರನ್​ಗಳನ್ನ ಕಲೆ ಹಾಕಿದ್ದಾರೆ. 83 ರನ್ ಅವ್ರ ಹೈಯೆಸ್ಟ್ ಸ್ಕೋರ್ ಆಗಿದೆ. 194.19 ಸ್ಕ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸುವ ಡಿಕೆ ಆರ್​ಸಿಬಿಗೆ ಯಾವಾಗ್ಲೂ ಆಸರೆಯಾಗಿದ್ದಾರೆ. ಒಟ್ಟಾರೆ ಐಪಿಎಲ್ ಕರಿಯರ್​ನಲ್ಲಿ ಈವರೆಗೂ 255 ಪಂದ್ಯ ಆಡಿರುವ ಡಿಕೆ 4817 ರನ್ ಬಾರಿಸಿದ್ದಾರೆ.

ಅಸಲಿಗೆ 2008ರಲ್ಲಿ ಐಪಿಎಲ್ ಪ್ರಾರಂಭವಾದಾಗಿನಿಂದ ಪ್ರತಿ ಆವೃತ್ತಿಯಲ್ಲೂ ಈವರೆಗೂ ಕಾಣಿಸಿಕೊಂಡ ಆಟಗಾರರು 7 ಮಂದಿ ಮಾತ್ರ. ಸಿಎಸ್‌ಕೆ ನಾಯಕ ಧೋನಿ, ಆರ್‌ಸಿಬಿಯ ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್ ರೋಹಿತ್ ಶರ್ಮಾ, ಶಿಖರ್ ಧವನ್, ವೃದ್ಧಿಮಾನ್ ಸಹ ಮತ್ತು ಮನೀಶ್ ಪಾಂಡೆ ಮಾತ್ರ. ಆದ್ರೀಗ ಧೋನಿ ಮತ್ತು ಡಿಕೆ ಇಬ್ಬರೂ ಸಹ ತಮ್ಮ ಅಂತಿಮ ಪಂದ್ಯಕ್ಕೆ ಸಿದ್ಧರಾಗ್ತಿದ್ದಾರೆ. ಆರ್‌‌ಸಿಬಿ ಮತ್ತು ಚೆನ್ನೈ ಪಂದ್ಯದಲ್ಲಿ ಗೆದ್ದ ತಂಡ ಮಾತ್ರ ಮುಂದಿನ ಪ್ಲೇಆಫ್‌ಗೆ ಲಗ್ಗೆಯಿಡಲಿದೆ. ಸೋತ ತಂಡ ಲೀಗ್‌ನಿಂದ ಹೊರಬೀಳಲಿದೆ. ಹೀಗಾಗಿ ಗೆದ್ದರೆ ಆ ತಂಡಕ್ಕೆ ಇನ್ನೂ ಪ್ಲೇಆಫ್‌ನಲ್ಲಿ ಒಂದು ಅಥವಾ 2 ಪಂದ್ಯ ಸಿಗಲಿದೆ. ಆದರೆ ಸೋತರೆ ಇದೇ ಕೊನೆಯ ಪಂದ್ಯವಾಗಲಿದೆ. ಹೀಗಾಗಿ ಇವರಿಬ್ಬರು ಪ್ರತಿನಿಧಿಸುವ ಈ 2 ತಂಡದಲ್ಲಿ ಯಾವ ತಂಡ ಸೋಲುತ್ತದೆಯೋ ಆ ತಂಡದ ಒಬ್ಬ ಆಟಗಾರ ಗುಡ್‌‌ಬೈ ಹೇಳುವುದು ಖಚಿತವಾಗಿದೆ. ಅದೆಲ್ಲಾ ಏನೇ ಇದ್ರೂ ಧೋನಿ ಮತ್ತು ಡಿಕೆ ಇಬ್ಬರು ಸಹ ಕ್ರಿಕೆಟ್ ಕಂಡ ಅತ್ಯದ್ಬುತ ಆಟಗಾರರು. ಮುಂದಿನ ಸೀಸನ್​ನಲ್ಲಿ ಅವ್ರಿಲ್ಲ ಅನ್ನೋದನ್ನ ಅಭಿಮಾನಿಗಳಿಗೆ ನೆನಪಿಸಿಕೊಳ್ಳೋಕೂ ಆಗಲ್ಲ. ಜೊತೆಗೆ ಅವ್ರ ನಿವೃತ್ತಿ ಆಯಾ ತಂಡಕ್ಕೆ ದೊಡ್ಡ ನಷ್ಟವೇ ಸರಿ.

Shwetha M