ನಾಗಸಂದ್ರ-ಮಾದಾವರ ಮಾರ್ಗದಲ್ಲಿ ಆಗಸ್ಟ್ ಒಳಗೆ ಮೆಟ್ರೋ ಸಂಚಾರ ಶುರು?

ನಾಗಸಂದ್ರ ಹಾಗೂ ಮಾದಾವರದ ನಡುವೆ ಮೆಟ್ರೋ ಸಂಚಾರ ಯಾವಾಗ ಆರಂಭವಾಗುತ್ತದೆ ಅಂತಾ ಜನರು ಕಾಯುತ್ತಿದ್ದರು. ಇದೀಗ ಮೆಟ್ರೋ ಪ್ರಯಾಣಿಕರಿಗೆ ಗುಡ್ನ್ಯೂಸ್ವೊಂದಿದೆ. ಮೆಟ್ರೋ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಆಗಸ್ಟ್ ಆರಂಭದಲ್ಲಿ ಈ ಮಾರ್ಗವನ್ನು ತೆರೆಯಲು ಬೆಂಗಳೂರು ಮೆಟ್ರೋ ರೈಲು ನಿಗಮ ಯೋಜಿಸಿದೆ.
ಇದನ್ನೂ ಓದಿ: ದಸರಾ ಆನೆ ಅರ್ಜುನನ ಸ್ಮಾರಕ ಕಟ್ಟಿಸ್ತಾರಾ ದರ್ಶನ್? – ಒಂದು ಹೆಜ್ಜೆ ಮುಂದೆ ಇಟ್ಟ ಚಾಲೆಂಜಿಂಗ್ ಸ್ಟಾರ್
ನಮ್ಮ ಮೆಟ್ರೋ ಹಸಿರು ಕಾರಿಡಾರ್ನ ನಾಗಸಂದ್ರ ಹಾಗೂ ಮಾದಾವರದ ನಡುವಿನ 3.7 ಕಿಮೀ ಮಾರ್ಗ ಅಕ್ಷರಶಃ ಪಂಚವಾರ್ಷಿಕ ಯೋಜನೆಯಾಗಿತ್ತು. ಕಳೆದ ಐದು ವರ್ಷಗಳಿಂದ ಆಮೆಗತಿಯಲ್ಲಿ ಸಾಗಿದ್ದ ಕಾಮಗಾರಿ ಅಂತಿಮ ಹಂತ ತಲುಪಿದ್ದು ಜುಲೈ ಅಂತ್ಯದ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಮೆಟ್ರೋ ಸಂಚಾರ ಆರಂಭವಾಗಲಿದೆ. 298 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಕೈಗೊಂಡಿದ್ದು, ಜುಲೈ ಅಂತ್ಯ ಅಥವಾ ಆಗಸ್ಟ್ ಆರಂಭದಲ್ಲಿ ಈ ಮಾರ್ಗವನ್ನು ತೆರೆಯಲು ಬೆಂಗಳೂರು ಮೆಟ್ರೋ ರೈಲು ನಿಗಮ ಯೋಜಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತದ ಅಧಿಕಾರಿಗಳು ಮಾಹಿತಿ ನೀಡಿದ್ದು, ಮಾರ್ಗದ ಹಳಿ ಅಳವಡಿಕೆ ಕಾಮಗಾರಿ ಮುಗಿದಿದೆ. ನಡುವಿನ ,ಊರು ಮೆಟ್ರೋ ನಿಲ್ದಾಣದ ಸಿವಿಲ್ ಕಾಮಗಾರಿ ಪೂರ್ಣಗೊಂಡಿದ್ದು, ಇಲ್ಲಿನ್ನೂ ನೆಲಹಾಸಿಗೆ ಗ್ರಾನೈಟ್ ಕಲ್ಲು ಅಳವಡಿಕೆ, ಎಲೆಕ್ಟ್ರಿಕಲ್ ಮತ್ತು ಸಿಗ್ನಲಿಂಗ್ ಹಾಗೂ ಬಣ್ಣ ಬಳಿಯುವ ಕೆಲಸ ಆಗಬೇಕಿದೆ. ಕಾಮಗಾರಿ ಮುಗಿದ ಬಳಿಕ ಜೂನ್ ಹಾಗೂ ಜುಲೈ ಮಧ್ಯಂತರದಲ್ಲಿ ಮಾರ್ಗದ ತಪಾಸಣೆ ನಡೆಯಲಿದ್ದು, ಜುಲೈ ಅಂತ್ಯದ ವೇಳೆಗೆ ಸಂಚಾರ ಆರಂಭವಾಗುವ ಸಾಧ್ಯತೆ ಇದೆ ಎಂದರು.
2017ರಲ್ಲಿ ಕಾಮಗಾರಿ ಆರಂಭವಾಗಿತ್ತು. ಅಂದುಕೊಂಡಂತೆ ಎಲ್ಲವೂ ನಡೆದಿದ್ದರೆ 2019ರ ಮಧ್ಯದ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಭೂಸ್ವಾದೀನ, ಸ್ಥಳೀಯರ ವಿರೋಧ ಹಾಗೂ ನಂತರ ಕೋವಿಡ್ ಸಮಸ್ಯೆ ಸೇರಿ ಹತ್ತು ಹಲವು ಸವಾಲು, ಸಮಸ್ಯೆಗಳ ಕಾರಣದಿಂದ ಐದು ವರ್ಷ ತಡವಾಗಿ ಈ ಮಾರ್ಗ ಮೆಟ್ರೋ ಸಂಚಾರಕ್ಕೆ ಲಭ್ಯವಾಗುತ್ತಿದೆ.

ನೋಡಿರಿ

