ದ್ರಾವಿಡ್ ಗೆ ಕೊನೇ ವಿಶ್ವಕಪ್ ಯುದ್ಧ – 3 ವರ್ಷ.. ICC ಟ್ರೋಫಿ ಗೆಲ್ಲದ ನೋವು!
ಯಾರಿಗೆ ಟೀಂ ಇಂಡಿಯಾ ಕೋಚ್ ಪಟ್ಟ?

ದ್ರಾವಿಡ್ ಗೆ ಕೊನೇ ವಿಶ್ವಕಪ್ ಯುದ್ಧ – 3 ವರ್ಷ.. ICC ಟ್ರೋಫಿ ಗೆಲ್ಲದ ನೋವು!ಯಾರಿಗೆ ಟೀಂ ಇಂಡಿಯಾ ಕೋಚ್ ಪಟ್ಟ?

ಐಪಿಎಲ್ ಟೂರ್ನಿ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದ್ದು ಬಳಿಕ ಜೂನ್ ತಿಂಗಳಲ್ಲಿ ಐಸಿಸಿ ಟಿ-20 ವಿಶ್ವಕಪ್ ಕದನ ಆರಂಭವಾಗಲಿದೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಸಾರಥ್ಯದಲ್ಲಿ ನಡೆಯಲಿರುವ ಈ ರಣರೋಚಕ ಕಾಳಗಕ್ಕೆ ಈಗಾಗ್ಲೇ ತಂಡಗಳೂ ಪ್ರಕಟವಾಗಿವೆ. ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಲ್ಲಿ ಭಾರತೀಯ ಸೇನೆ ಕೂಡ ಸಜ್ಜಾಗಿದೆ. ಆದ್ರೀಗ ಬಿಸಿಸಿಐ ಕೋಚ್ ರಾಹುಲ್ ದ್ರಾವಿಡ್ ಅವರ ಅವಧಿ ಮುಕ್ತಾಯವಾಗುತ್ತಿದ್ದು, ಬಿಸಿಸಿಐ ಮಹತ್ವದ ಘೋಷಣೆ ಮಾಡಿದೆ. ಹಾಗಾದ್ರೆ ಕನ್ನಡಿಗ ರಾಹುಲ್ ದ್ರಾವಿಡ್ ಯುಗಾಂತ್ಯವಾಯ್ತಾ..? ಯಾರಾಗ್ತಾರೆ ಬಿಸಿಸಿಐ ಕೋಚ್? ಯಾರೆಲ್ಲಾ ರೇಸ್​ನಲ್ಲಿದ್ದಾರೆ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಲಕ್ನೋ ವಿರುದ್ಧ 19 ರನ್ ಗಳಿಂದ ಗೆದ್ದು ಬೀಗಿದ ಡೆಲ್ಲಿ – ಪ್ಲೇ ಆಫ್ ಕನಸು ಜೀವಂತ

2024ರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಮುಕ್ತಾಯದ ನಂತರ ಟೀಮ್ ಇಂಡಿಯಾ ಹೆಡ್​ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರ ಅಂತ್ಯಗೊಳ್ಳಲಿದೆ. ಎರಡು ವಾರಗಳಲ್ಲಿ ಮುಕ್ತಾಯವಾಗುವ ಐಪಿಎಲ್ ಮಧ್ಯೆಯೇ, ನೂತನ ಕೋಚ್​ ಹುಡುಕಾಟ ನಡೆಸುತ್ತಿರುವ ಬಿಸಿಸಿಐ, ಈಗಾಗಲೇ ಅರ್ಜಿ ಆಹ್ವಾನಿಸಿದೆ. ವಿಶ್ವಕಪ್​ಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ಟೀಮ್ ಇಂಡಿಯಾ, ಈಟೂರ್ನಿಯ ನಂತರ ನೂತನ ಕೋಚ್​ ಅಡಿಯಲ್ಲಿ ಕಣಕ್ಕಿಳಿಯಲಿದೆ. ಕೆಲ ದಿನಗಳ ಹಿಂದಷ್ಟೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಜೈ ಶಾ ಹೊಸ ಕೋಚ್ ನೇಮಕದ ಬಗ್ಗೆ ಮಾಹಿತಿ ನೀಡಿದ್ರು. ಇದೀಗ ಬಿಸಿಸಿಐ ಮುಖ್ಯ ಕೋಚ್‌ಗಾಗಿ ಜಾಹೀರಾತನ್ನು ಬಿಡುಗಡೆ ಮಾಡಿದೆ. ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಮಂಡಳಿಯು ಅಧಿಕೃತ ಘೋಷಣೆ ಮಾಡಿದ್ದು, ಮೇ 27 ಗೆ ಗಡುವನ್ನು ನಿಗದಿ ಪಡಿಸಿದೆ. ಅಂದರೆ ಕೋಚ್ ಆಗಲು ಬಯಸುವವರು ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದು ರಾಹುಲ್ ದ್ರಾವಿಡ್ ಅವರ ಯುಗಾಂತ್ಯವೇ ಎಂಬ ಚರ್ಚೆಗಳನ್ನು ಹುಟ್ಟುಹಾಕಿದೆ. ಅಷ್ಟಕ್ಕೂ ಬಿಸಿಸಿಐ ಕೋಚ್ ಸೇವಾವಧಿ ಎಷ್ಟು ವರ್ಷ ಅನ್ನೋದನ್ನ ನೋಡೋಣ.

ಕೋಚ್ ಅರ್ಹತೆ & ಸೇವಾವಧಿ!  

ಬಿಸಿಸಿಐ ತನ್ನ ಜಾಹೀರಾತಿನಲ್ಲಿ ಕೋಚ್‌ನ ನಿಯಮಗಳು ಮತ್ತು ಷರತ್ತುಗಳ ಬಗ್ಗೆ ವಿವರಿಸಿದೆ. ಇದರ ಪ್ರಕಾರ, ಹೊಸ ಕೋಚ್ ಮೂರುವರೆ ವರ್ಷಗಳ ಅವಧಿಯನ್ನು ಪಡೆಯುತ್ತಾರೆ. ಇದು ಜುಲೈ 1, 2024 ರಿಂದ ಡಿಸೆಂಬರ್ 31, 2027 ರವರೆಗೆ ಇರುತ್ತದೆ. ಅಂದರೆ 2027ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಬಳಿಕ ಅಧಿಕಾರಾವಧಿ ಕೊನೆಗೊಳ್ಳಲಿದೆ. ಆದ್ರೆ ವೇತನದ ಬಗ್ಗೆ ಇಂತಿಷ್ಟೇ ಎಂದು ಬಹಿರಂಗ ಪಡಿಸಿಲ್ಲ. ಈ ಬಗ್ಗೆ ಅಭ್ಯರ್ಥಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಮತ್ತು ಅನುಭವದ ಆಧಾರದ ಮೇಲೆ ವೇತನವನ್ನು ನಿರ್ಧರಿಸಲಾಗುವುದು ಎಂದು ಮಂಡಳಿ ಸ್ಪಷ್ಟಪಡಿಸಿದೆ. ವಿಶ್ವದ ಅತ್ಯಂತ ಶಕ್ತಿಶಾಲಿ ತಂಡಗಳಲ್ಲಿ ಒಂದಾಗಿರುವ ಭಾರತ ಕ್ರಿಕೆಟ್ ತಂಡದ ಕೋಚ್​ಗೆ ಭಾರಿ ಜವಾಬ್ದಾರಿ ಮತ್ತು ಒತ್ತಡ ಇರಲಿದ್ದು, ಇಂತಹ ಪರಿಸ್ಥಿತಿಯಲ್ಲಿ ಸರಿಯಾದ ಕೋಚ್ ನೇಮಕಕ್ಕೆ ಮಂಡಳಿ ಹಲವು ಷರತ್ತುಗಳನ್ನು ಹಾಕಿದೆ. ಕೋಚ್ ಆಗಲು ಅರ್ಜಿ ಸಲ್ಲಿಸುವವರು ಕನಿಷ್ಠ 30 ಟೆಸ್ಟ್ ಪಂದ್ಯಗಳನ್ನು ಅಥವಾ 50 ಏಕದಿನ ಪಂದ್ಯಗಳನ್ನು ಆಡಿರಬೇಕು. ಅಥವಾ ಕನಿಷ್ಠ 2 ವರ್ಷಗಳ ಕಾಲ ಪೂರ್ಣ ಸದಸ್ಯರ ಟೆಸ್ಟ್ ಆಡುವ ದೇಶದ ಮುಖ್ಯ ಕೋಚ್ ಆಗಿರಬೇಕು. ಅಥವಾ 3 ವರ್ಷಗಳ ಕಾಲ ಯಾವುದೇ ಅಸೋಸಿಯೇಟ್ ಸದಸ್ಯ ತಂಡ ಅಥವಾ ಯಾವುದೇ ಐಪಿಎಲ್ ತಂಡ, ಪ್ರಥಮ ದರ್ಜೆ ತಂಡ, ಯಾವುದೇ ದೇಶದ A ತಂಡದ ತರಬೇತುದಾರರಾಗಿರಬೇಕು. ಅಥವಾ ಬಿಸಿಸಿಐನ ಲೆವೆಲ್-3 ಕೋಚಿಂಗ್ ಪ್ರಮಾಣಪತ್ರವನ್ನು ಹೊಂದಿರಬೇಕು. ಹಾಗೇ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಕೋಚ್ ಆಯ್ಕೆಗಾಗಿ, ಬಿಸಿಸಿಐಯ ಕ್ರಿಕೆಟ್ ಸಲಹಾ ಸಮಿತಿ ಎಲ್ಲಾ ಅಭ್ಯರ್ಥಿಗಳನ್ನು ಸಂದರ್ಶನ ಮಾಡುತ್ತದೆ ಮತ್ತು ನಂತರ ಮಂಡಳಿಗೆ ಅದರ ಶಿಫಾರಸನ್ನು ಕಳುಹಿಸುತ್ತದೆ.

ಮುಂದಿನ ತಿಂಗಳು ಅಮೆರಿಕ ಮತ್ತು ವೆಸ್ಟ್‌ಇಂಡೀಸ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನೊಂದಿಗೆ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಕೊನೆಗೊಳ್ಳಲಿದೆ. ಮುಂದಿನ ಮೂರೂವರೆ ವರ್ಷಗಳ ಅವಧಿಗೆ ಭಾರತೀಯ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆ ಜಬಾಬ್ದಾರಿಯನ್ನ ಹೊಸಬರಿಗೆ ವಹಿಸಲಾಗುತ್ತದೆ. ಇನ್ನು ರಾಹುಲ್ ದ್ರಾವಿಡ್ ಅಧಿಕಾರಾವಧಿಯಲ್ಲಿ ಟೀಂ ಇಂಡಿಯಾ ಸಾಧನೆ ಏನು ಅನ್ನೋದನ್ನ ಹೇಳ್ತೇನೆ.

ಐಸಿಸಿ ಟ್ರೋಫಿ ಗೆಲ್ಲದ ಭಾರತ!    

T20 ವಿಶ್ವಕಪ್ 2021 ರ ನಂತರ ಬಿಸಿಸಿಐ ರಾಹುಲ್ ದ್ರಾವಿಡ್ ಅವರನ್ನು ಭಾರತದ ಕೋಚ್ ಆಗಿ ನೇಮಿಸಲಾಯಿತು. ಏಕದಿನ ವಿಶ್ವಕಪ್ 2023 ರ ನಂತರ ಇವರ ಅವಧಿ ಕೊನೆಗೊಂಡಿತ್ತು. ಆದರೆ ಟೀಮ್ ಇಂಡಿಯಾದ ಪ್ರದರ್ಶನವನ್ನು ಪರಿಗಣಿಸಿ, ಮಂಡಳಿಯು ಅವರಿಗೆ ವಿಸ್ತರಣೆಯನ್ನು ನೀಡಲು ನಿರ್ಧರಿಸಿತು. ಹೀಗಾಗಿ ಟಿ20 ವಿಶ್ವಕಪ್ 2024 ರವರೆಗೆ ರಾಹುಲ್​ರನ್ನ ಇರಿಸಿದೆ. ಇದೀಗ ದ್ರಾವಿಡ್ ಮತ್ತೊಮ್ಮೆ ಕೋಚ್ ಆಗಲು ಬಯಸಿದರೆ ಅವರೂ ಅರ್ಜಿ ಸಲ್ಲಿಸಬಹುದು ಎಂದು ಬಿಸಿಸಿಐ ಈಗಾಗಲೇ ಸ್ಪಷ್ಟಪಡಿಸಿದೆ. ಆದ್ರೆ ದ್ರಾವಿಡ್ ಕೋಚ್ ಆಗಿ ಮುಂದುವರಿಯಲು ಬಯಸುತ್ತಾರೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಎಲ್ಲರ ಕಣ್ಣಿದೆ. ಇನ್ನು ಭಾರತ ತಂಡದ ಹೆಡ್​ಕೋಚ್​ ಆಗಿ ನೇಮಕಗೊಂಡ ರಾಹುಲ್​ ದ್ರಾವಿಡ್, ಒಟ್ಟು ಮೂರು ಐಸಿಸಿ ಟೂರ್ನಮೆಂಟ್​ಗಳಲ್ಲಿ ಮಾರ್ಗದರ್ಶಕರಾಗಿದ್ದಾರೆ. 2022ರ ಟಿ20 ವಿಶ್ವಕಪ್, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಮತ್ತು ಏಕದಿನ ವಿಶ್ವಕಪ್​​ನಲ್ಲಿ ಭಾರತ ತಂಡಕ್ಕೆ ಹೆಡ್​ಕೋಚ್ ಆಗಿದ್ದರು. ಇದೀಗ 4ನೇ ಐಸಿಸಿ ಟೂರ್ನಿಯಲ್ಲಿ ಟೀಮ್ ಇಂಡಿಯಾಗೆ ಕೋಚ್​ ಆಗಿ ಸೇವೆ ಸಲ್ಲಿಸಲು ಸಿದ್ಧರಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಭಾರತ ಹಲವು ಸರಣಿ ಗೆದ್ದರೂ ಐಸಿಸಿ ಟ್ರೋಫಿ ಜಯಿಸಲು ಸಾಧ್ಯವಾಗಿಲ್ಲ. 2023ರ ಏಕದಿನ ವಿಶ್ವಕಪ್​ ಕದನದಲ್ಲಿ ಫೈನಲ್​ವರೆಗೂ ಹೋಗಿ ಮುಗ್ಗರಿಸಿತ್ತು.

ಸದ್ಯ ರಾಹುಲ್ ದ್ರಾವಿಡ್ ರಿಂದ ತೆರವಾಗ್ತಿರೋ ಅವ್ರ ಸ್ಥಾನದ ಮೇಲೆ ಮೂವರು ಕಣ್ಣಾಕಿದ್ದಾರೆ.  ಭಾರತದ ಮಾಜಿ ಕ್ರಿಕೆಟಿಗ ಹಾಗೂ ಎನ್​ಸಿಎ ನಿರ್ದೇಶಕ ವಿವಿಎಸ್ ಲಕ್ಷ್ಮಣ್ ಈ ಸ್ಥಾನಕ್ಕಾಗಿ ಮುಂಚೂಣಿಯಲ್ಲಿದ್ದಾರೆ. ಈಗಾಗಲೇ ದ್ರಾವಿಡ್ ಅನುಪಸ್ಥಿತಿಯಲ್ಲಿ ಹೆಡ್​ಕೋಚ್​ ಆಗಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಅನಿಲ್ ಕುಂಬ್ಳೆ ಸಹ ಈ ಸ್ಪರ್ಧೆಯಲ್ಲಿದ್ದಾರೆ. ಭಾರತದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ವೀರೇಂದ್ರ ಸೆಹ್ವಾಗ್ ಕೂಡ ರಾಹುಲ್ ದ್ರಾವಿಡ್ ಬದಲಿಗೆ ಅಗ್ರ ಹೆಸರು. ಹಾಗೇ ಜಸ್ಟಿಂಗ್ ಲ್ಯಾಂಗರ್, ಅಜಯ್ ಜಡೇಜಾ, ಟಾಮ್ ಮೂಡಿ, ಆಶಿಶ್ ನೆಹ್ರಾ ಹೆಸ್ರು ಕೂಡ ಮುಂಚೂಣಿಯಲ್ಲಿದೆ. ಆದ್ರೆ ಅಂತಿಮವಾಗಿ ಯಾರು ಕೋಚ್ ಜವಾಬ್ದಾರಿ ಹೊತ್ತುಕೊಳ್ತಾರೆ ಅನ್ನೋದೇ ಈಗಿರುವ ಪ್ರಶ್ನೆ.

Shwetha M