ಧೋನಿ LOSS.. ಕೊಹ್ಲಿಗೆ LUCK – CSK ಸೋತಿದ್ದಕ್ಕೆ RCBಗೆ ಪ್ಲೇಆಫ್
ಈ ಸವಾಲು ಗೆದ್ರೆ ನಾವೇ ಚಾಂಪಿಯನ್

ಧೋನಿ LOSS.. ಕೊಹ್ಲಿಗೆ LUCK – CSK ಸೋತಿದ್ದಕ್ಕೆ RCBಗೆ ಪ್ಲೇಆಫ್ಈ ಸವಾಲು ಗೆದ್ರೆ ನಾವೇ ಚಾಂಪಿಯನ್

ಫೈನಲಿ ಆರ್​ಸಿಬಿ ಪಾಲಿಗೆ ಏನಾಗ್ಬೇಕಿತ್ತೋ ಅದೇ ಆಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಸೋಲಿಸುವ ಮೂಲಕ ಗುಜರಾತ್ ಟೈಟನ್ಸ್ ಗೆದ್ದು ಬೀಗಿದೆ. ಇದು ಬರೀ ಜಿಟಿ ಗೆಲುವಲ್ಲ. ಒಂಥರ ನಮ್ಮ ಆರ್​ಸಿಬಿ ಪಾಲಿನ ಗೆಲುವು. ಪ್ಲೇ ಆಫ್ ಕನಸಿನಲ್ಲಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಸೆಯನ್ನ ಭದ್ರಗೊಳಿಸಿರುವ ಗಿಲ್ ಪಡೆ ಪಾಯಿಂಟ್ಸ್ ಪಟ್ಟಿಯಲ್ಲಿ ಸಾಕಷ್ಟು ಲೆಕ್ಕಾಚಾರಗಳನ್ನ ತಲೆ ಕೆಳಗಾಗಿಸಿದೆ. ಹಾಗಾದ್ರೆ ಗುಜರಾತ್ ಗೆಲುವು ಚೆನ್ನೈನ ಪ್ಲೇ ಆಫ್ ಕನಸಿಗೆ ಕೊಳ್ಳಿ ಇಡುತ್ತಾ..? ಧೋನಿಯ ಸ್ಟ್ರಾಟಜಿ ಫೇಲ್ ಆಗಿದ್ದೆಲ್ಲಿ..? ಜಿಟಿ ಅಬ್ಬರದ ಬ್ಯಾಟಿಂಗ್​ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಪುಲ್ವಾಮಾ ದಾಳಿಗೆ ಬಿಜೆಪಿಯೇ ನೇರ ಹೊಣೆ..! ಗುಪ್ತಚರ ಬ್ಯೂರೋ ಏನು ಮಾಡುತ್ತಿದೆ? – ರೇವಂತ್‌ ರೆಡ್ಡಿ

ಶುಕ್ರವಾರ ಅಹ್ಮದಾಬಾದಿನ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹೈವೋಲ್ಟೇಜ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ವಿರುದ್ಧ ಗುಜರಾತ್​​​​ ಟೈಟನ್ಸ್​ ಬರೋಬ್ಬರಿ 35 ರನ್​​ಗಳಿಂದ ಗೆದ್ದು ಬೀಗಿದೆ. ಪಾಯಿಂಟ್ಸ್ ಟೇಬಲ್​ನಲ್ಲಿ ಕೊನೇ ಸ್ಥಾನದಲ್ಲಿದ್ದ ಜಿಟಿ ಮತ್ತೆ ಗೆಲುವಿನ ಟ್ರ್ಯಾಕ್​ಗೆ ಗ್ರೇಟ್ ಕಮ್ ಬ್ಯಾಕ್ ಮಾಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ ಟೈಟಾನ್ಸ್ ಪರ ಶುಭ್​ಮನ್ ಗಿಲ್ ಮತ್ತು ಸಾಯಿ ಸುದರ್ಶನ ಸಿಡಿಲಿನಂತೆ ಅಬ್ಬರಿಸಿದ್ರು.

ಸಾಯಿ ಸುದರ್ಶನ್ 51 ಬಾಲ್​ಗಳಲ್ಲಿ 103 ರನ್ ಚಚ್ಚಿದ್ರೆ ಶುಭ್​ಮಲ್ ಗಿಲ್ 55 ಎಸೆತಗಳಲ್ಲಿ 104 ರನ್ ಬಾರಿಸಿದ್ರು. ಸಿಎಸ್​ಕೆ ಬೌಲರ್​​ಗಳ ವಿರುದ್ಧ ಸಿಡಿದೆದ್ದ ಜೋಡಿ ಜೊತೆಯಾಟವಾಡಿದ್ದು ದಾಖಲೆಯ 210 ರನ್​​. ಗಿಲ್​​​ ಐಪಿಎಲ್​ನಲ್ಲಿ 4ನೇ ಸೆಂಚುರಿ ಬಾರಿಸಿದರೆ, ಸಾಯಿ ಚೊಚ್ಚಲ ನೂರು ರನ್ ಸಿಡಿಸಿದ್ರು.  ಶುಭ್ಮನ್​ ಗಿಲ್​​​ ಮತ್ತು ಸಾಯಿ ಸುದರ್ಶನ್​​​ ಸಿಕ್ಸ್​ ಮೇಲೆ ಸಿಕ್ಸ್​ ಹೊಡೆಯುವಾಗ ಸಿಎಸ್​ಕೆ ಫ್ಯಾನ್​​ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸಿಎಸ್​​ಕೆ ತಂಡದ ಪುಟ್ಟ ಅಭಿಮಾನಿ ಬಿಕ್ಕಿ ಬಿಕ್ಕಿ ಅತ್ತ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ. ಗಿಲ್, ಸುದರ್ಶನ್ ಇವರಿಬ್ಬರ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ ಗುಜರಾತ್ 200ರ ಗಡಿ ದಾಟಿತ್ತು. ಹಾಗೇ ಜಿಟಿ ಪರ ಡೇವಿಡ್ ಮಿಲ್ಲರ್ 16, ಶಾರುಖ್ ಖಾನ್ 2 ರನ್​ಗಳ ಮೂಲಕ ಜಿಟಿ ಒಟ್ಟಾರೆ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 231 ರನ್ ಕಲೆ ಹಾಕಿತು. ಇದರೊಂದಿಗೆ ಸಿಎಸ್​ಕೆ ವಿರುದ್ಧ ಅತ್ಯಧಿಕ ಸ್ಕೋರ್​ ಇದಾಗಿದೆ.

ಐಪಿಎಲ್ ಇತಿಹಾಸದಲ್ಲಿ ಜಿಟಿ ತಂಡದ 2ನೇ ಬೃಹತ್​​ ಸ್ಕೋರ್​ ಇದಾಗಿದೆ. ಆಲ್ರೆಡಿ 5 ಸಲ ಚಾಂಪಿಯನ್ ಆಗಿರೋ ಚೆನ್ನೈ ಸೂಪರ್ ಕಿಂಗ್ಸ್ ಈ ಸಲ ಪ್ಲೇ ಆಫ್​ ಗೇರಲು ಪೈಪೋಟಿಯಲ್ಲಿದೆ. ಹೀಗಾಗಿ ಈ ಬಿಗ್ ಟಾರ್ಗೆಟ್ ಅನ್ನ ಸಿಎಸ್​ಕೆ ಟೀಂ ಚೇಸ್ ಮಾಡ್ತಾರೆ ಅಂತಾನೇ ಎಲ್ರೂ ಅನ್ಕೊಂಡಿದ್ರು. ಆದ್ರೆ ಅದಕ್ಕೆ ಜಿಟಿ ಬೌಲರ್ಸ್ ಅವಕಾಶ ಕೊಡ್ಲೇ ಇಲ್ಲ. ಸಿಎಸ್​ಕೆಗೆ ಆರಂಭದಲ್ಲೇ ದೊಡ್ಡ ಆಘಾತ ತಟ್ಟಿತ್ತು. ಮೊದಲ 3 ಓವರ್​ಗಳಲ್ಲೇ ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್​ಮನ್​ಗಳು ಪೆವಿಲಿಯನ್ ಸೇರಿದ್ರು. ಅಜಿಂಕ್ಯ ರಹಾನೆ 1, ರಚಿನ್ ರವೀಂದ್ರ 1, ಋತುರಾಜ್ ಗಾಯಕ್ವಾಡ್ ಶೂನ್ಯಕ್ಕೆ ಔಟಾದರು. ಬಳಿಕ ಒಂದಾದ ಡ್ಯಾರಿಲ್ ಮಿಚೆಲ್ ಮತ್ತು ಮೊಯಿನ್ ಅಲಿ ಮಾರಕ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿದರು.

4ನೇ ವಿಕೆಟ್​ಗೆ 109 ರನ್​ಗಳ ಜೊತೆಯಾಟ ಆಡಿದ ಇಬ್ಬರು ತಲಾ ಅರ್ಧಶತಕ ಸಿಡಿಸಿ ಹೋರಾಟ ನೀಡಿದರು. ಮಿಚೆಲ್ 34 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್​ ಸಹಿತ 63 ರನ್ ಚಚ್ಚಿದರೆ, ಮೊಯಿನ್ 36 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್​ ಸಹಿತ 56 ರನ್ ಬಾರಿಸಿದರು. ಆದರೆ ಶಿವಂ ದುಬೆ 21, ರವೀಂದ್ರ ಜಡೇಜಾ 18 ರನ್ ಗಳಿಸಲಷ್ಟೇ ಶಕ್ತರಾದರು. ಬಳಿಕ ಬಂದ ಎಂಎಸ್ ಧೋನಿ 11 ಎಸೆತಗಳನ್ನ ಎದುರಿಸಿ 26 ರನ್ ಗಳಿಸಿದ್ರು. ಈ ಮೂಲಕ ಸಿಎಸ್​ಕೆ 20 ಓವರ್​ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 196 ರನ್ ಗಳಿಸಲಷ್ಟೇ ಸಾಧ್ಯವಾಯ್ತು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 35 ರನ್​ಗಳಿಂದ ಅಮೋಘ ಗೆಲುವು ಸಾಧಿಸಿತು.

ಕಳೆದ 3 ಪಂದ್ಯಗಳಿಂದ ಸೋತಿದ್ದ ಜಿಟಿ, ಕೊನೆಗೂ ಲಯಕ್ಕೆ ಮರಳಿತು. ಅಲ್ಲದೆ, ತನ್ನ ಪ್ಲೇಆಫ್ ಆಸೆಯನ್ನು ಜೀವಂತವಾಗಿಟ್ಟುಕೊಂಡಿತು. ಆದರೆ, ಈ ಸೋಲು ಸಿಎಸ್​ಕೆ ಪ್ಲೇಆಫ್​ ಹಾದಿಯನ್ನು ಕಠಿಣಗೊಳಿಸಿದೆ. ಪಂದ್ಯದ ಗೆಲುವು ಜಿಟಿ-ಸಿಎಸ್​ಕೆಗಿಂತ ಆರ್​​ಸಿಬಿಗೆ ಹೆಚ್ಚು ಲಾಭ ತಂದಿದೆ. ಪ್ರಸ್ತುತ ಈ ಟೂರ್ನಿಯಲ್ಲಿ 12ರಲ್ಲಿ ​6 ಸೋಲು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ 12 ಅಂಕ ಪಡೆದಿದೆ. ಮತ್ತೊಂದೆಡೆ 10 ಅಂಕ ಪಡೆದಿರುವ ಆರ್​ಸಿಬಿ ಪ್ಲೇಆಫ್ ಪ್ರವೇಶಿಸಲು ಉಳಿದ 2ರಲ್ಲಿ ಗೆಲ್ಲಬೇಕಿದೆ. ಇದು ಸಾಧ್ಯವಾಗಬೇಕೆಂದರೆ ಚೆನ್ನೈ ಈ ಪಂದ್ಯದಂತೆ ಉಳಿದ ಪಂದ್ಯಗಳಲ್ಲೂ ಸೋಲಬೇಕು. ಆಗ ಆರ್​ಸಿಬಿ ಪ್ಲೇಆಫ್​ಗೆ ಎಂಟ್ರಿಕೊಡುವ ಸಾಧ್ಯತೆ ಹೆಚ್ಚಿಸುತ್ತದೆ. ಒಂದು ವೇಳೆ ಸಿಎಸ್​ಕೆ ಈ ಪಂದ್ಯ ಗೆದ್ದಿದ್ದರೆ 14 ಅಂಕ ಪಡೆಯುತ್ತಿತ್ತು. ಇದರೊಂದಿಗೆ ಆರ್​ಸಿಬಿ ಪ್ಲೇಆಫ್ ಹಾದಿ ಬಹುತೇಕ ಅಂತ್ಯವಾಗುತ್ತಿತ್ತು. ಹಾಗೇ ಮುಂದಿನ ಪಂದ್ಯಗಳಲ್ಲಿ ಚೆನ್ನೈನಂತೆಯೇ ಡೆಲ್ಲಿ ಮತ್ತು ಲಕ್ನೋ ತಂಡಗಳು ಎಲ್ಲಾ ಪಂದ್ಯಗಳಲ್ಲಿ ಸೋಲಬೇಕು.

ಡೆಲ್ಲಿ ಮತ್ತು ಆರ್​ಸಿಬಿ ನಡುವೆ ಮೇ 12ರಂದು ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಆರ್​ಸಿಬಿ ಗೆದ್ದು ಡೆಲ್ಲಿ ಸೋಲಬೇಕು. ಹಾಗೇ ಡೆಲ್ಲಿ ಮತ್ತು ಲಕ್ನೋ ಮೇ 14ರಂದು ಮುಖಾಮುಖಿಯಾಗುತ್ತಿದ್ದು, ಆರ್​​ಸಿಬಿ ಪ್ಲೇಆಫ್ ಹಾದಿ ಸುಲಭವಾಗಲು ಡೆಲ್ಲಿ ಸೋಲಬೇಕು. ಯಾಕಂದ್ರೆ ಲಕ್ನೋ ರನ್ ರೇಟ್ ಡೆಲ್ಲಿಗಿಂತಲೂ ಕಳಪೆಯಾಗಿದೆ. ಲಕ್ನೋ ಮತ್ತೊಂದು ಪಂದ್ಯದಲ್ಲಿ ಪರಾಭವಗೊಳ್ಳಬೇಕು. ಉಳಿದ 2ರಲ್ಲಿ ಆರ್​ಸಿಬಿ ಗೆದ್ದರೆ 14 ಅಂಕಗಳೊಂದಿಗೆ ಪ್ಲೇಆಫ್​ಗೆ ಪ್ರವೇಶಿಸಲಿವೆ. ಆದರೆ ನೆಟ್​ ರನ್​ ರೇಟ್ ಕಾಯ್ದುಕೊಳ್ಳಬೇಕು.

ಸದ್ಯ ಶುಕ್ರವಾರದ ಪಂದ್ಯದ ಬಳಿಕ ಪಾಯಿಂಟ್ಸ್ ಟೇಬಲ್​ನಲ್ಲಿ ಸಾಕಷ್ಟು ಏರುಪೇರುಗಳಾಗಿವೆ. ಸಿಎಸ್​ಕೆ ನಾಲ್ಕನೇ ಸ್ಥಾನದಲ್ಲಿದ್ರೆ ಐದು ಮತ್ತು ಆರನೇ ಪ್ಲೇಸ್​ನಲ್ಲಿ ಕ್ರಮವಾಗಿ ಡಿಸಿ ಮತ್ತು ಎಲ್​ಎಸ್​​ಜಿ ತಂಡಗಳಿವೆ. ಆರ್​ಸಿಬಿ ಏಳನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಆದ್ರೆ 10ನೇ ಸ್ಥಾನದಲ್ಲಿದ್ದ ಗುಜರಾತ್ ಟೈಟನ್ಸ್ 8ನೇ ಸ್ಥಾನಕ್ಕೆ ಜಿಗಿದಿದೆ. ಮುಂಬೈ 9ನೇ ಸ್ಥಾನದಲ್ಲಿದ್ದು ಪಂಜಾಬ್ 10ನೇ ಪ್ಲೇಸ್​ನಲ್ಲಿದೆ. ಈ ಮೂಲಕ ಮುಂಬೈ ಮತ್ತು ಪಂಜಾಬ್​ ಪ್ಲೇಆಫ್​ ರೇಸ್​ನಿಂದ ಹೊರಬಿದ್ದಿವೆ. ಜಿಟಿ ತಂಡ ಶುಕ್ರವಾರದ ಗೆಲುವಿನ ಬಳಿಕ ಪ್ಲೇಆಫ್ ಆಸೆಯನ್ನ ಜೀವಂತವಾಗಿರಿಸಿಕೊಂಡಿದೆ.

Shwetha M