ಕನ್ನಡಿಗ ರಾಹುಲ್ ಗೆ ಅವಮಾನ! – ಸ್ಟಾರ್ ಕ್ರಿಕೆಟಿಗರ ಮೇಲೆ ಮಾಲೀಕರ ದರ್ಪ ಹೇಗಿರುತ್ತೆ ಗೊತ್ತಾ?
ಗೆಲುವಿಗೆ ಎಲ್ಲರೂ ಅಪ್ಪಂದಿರು. ಆದ್ರೆ ಸೋಲು ಅನಾಥ ಅನ್ನೋ ಮಾತಿದೆ. ಅದು ಅಕ್ಷರಶಃ ನಿಜ. ಗೆದ್ದಾಗ ಸಂಭ್ರಮಿಸೋ ಜನ ಸೋಲನ್ನ ಒಪ್ಪಿಕೊಳ್ಳೋಕೂ ತಯಾರಿರಲ್ಲ. ಸದ್ಯ ಐಪಿಎಲ್ ಟೂರ್ನಿಯ ಎಲ್ಎಸ್ಜಿ ಫ್ರಾಂಚೈಸಿಯ ಮಾಲೀಕನ ಕಥೆಯೂ ಹೀಗೇ ಇದೆ. ಬುಧವಾರದ ಐಪಿಎಲ್ ಪಂದ್ಯವನ್ನ ನೋಡಿದ್ರೆ ನಿಮಗೆಲ್ಲಾ ಇದು ಅರ್ಥವಾಗಿರುತ್ತೆ. ಸೋಶಿಯಲ್ ಮೀಡಿಯಾದಲ್ಲೂ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಂತ ಆಟಗಾರರ ಮೇಲೆ ಸಿಟ್ಟಾಗೋದು, ಕೂಗಾಡೋದು ಇವ್ರೊಬ್ರೇ ಅಲ್ಲ. ಟೀಂ ಇಂಡಿಯಾದಲ್ಲಿ ಆಡುವ ಸ್ಟಾರ್ ಕ್ರಿಕೆಟರ್ಸ್ ಕೂಡಾ ಐಪಿಎಲ್ ಫ್ರಾಂಚೈಸಿಯಿಂದ ಎಷ್ಟೆಲ್ಲಾ ಒತ್ತಡಕ್ಕೆ ಒಳಗಾಗಿರ್ತಾರೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ:IPLನಲ್ಲಿ ಅಬ್ಬರಿಸದ ರೋಹಿತ್ ವಿಶ್ವಕಪ್ ಗೆಲ್ತಾರಾ? – ಫ್ಯಾನ್ಸ್ ಕೆರಳಿದ್ದು ಯಾಕೆ?
ಬುಧವಾರ ಹೈದ್ರಾಬಾದ್ ಮತ್ತು ಲಕ್ನೋ ನಡುವಿನ ಪಂದ್ಯದಲ್ಲಿ ಎರಡು ವಿಚಾರಗಳು ಹೈಲೆಟ್ ಆಗಿತ್ತು. ಒಂದು ಲಕ್ನೋ ನೀಡಿದ್ದ ಟಾರ್ಗೆಟ್ ಅನ್ನ ಹೈದ್ರಾಬಾದ್ ಜಸ್ಟ್ 9.4 ಓವರ್ಗಳಲ್ಲೇ ರೀಚ್ ಆಗಿತ್ತು. ಇದು ಟಿ-20 ಇತಿಹಾಸದಲ್ಲೇ ದಾಖಲೆಯ ಚೇಸಿಂಗ್. ಆದ್ರೆ ಇದಕ್ಕಿಂತ ಹೆಚ್ಚು ಸದ್ದು ಮಾಡ್ತಿರೋ ಸುದ್ದಿ ಅಂದ್ರೆ ಅದು ಪಂದ್ಯದ ಬಳಿಕ ಎಲ್ಎಸ್ಜಿ ತಂಡದ ನಾಯಕ ಕೆ.ಎಲ್ ರಾಹುಲ್ರನ್ನ ಫ್ರಾಂಚೈಸಿ ಮಾಲೀಕ ನಡೆಸಿಕೊಂಡ ರೀತಿ. ಸೋಲಿನ ಸಂಪೂರ್ಣ ಹೊಣೆಯನ್ನ ರಾಹುಲ್ ತಲೆಗೇ ಕಟ್ಟಿದ್ದ ಮಾಲೀಕ ಸಂಜೀವ್ ಗೋಯೆಂಕಾ ಕ್ರೀಡಾಂಗಣದಲ್ಲೇ ರಾಹುಲ್ರನ್ನ ಹಿಗ್ಗಾಮುಗ್ಗಾ ಬೈದಿದ್ರು. ಟೀಂ ಇಂಡಿಯಾದಲ್ಲಿ ಘಟಾನುಘಟಿ ರಾಷ್ಟ್ರಗಳ ವಿರುದ್ಧವೇ ಅಬ್ಬರಿಸಿದ್ದ ರಾಹುಲ್ ಅಕ್ಷರಶಃ ಅಸಹಾಕರಾಗಿದ್ರು. ಹಾಗಾಂತ ಇದೊಂದೇ ಫ್ರಾಂಚೈಸಿ ಮಾಲೀಕರೇನೂ ಹೀಗೆ ಕೂಗಾಡಿಲ್ಲ. ಈ ಬಾರಿಯ ಐಪಿಎಲ್ನಲ್ಲಿ ಹೈದ್ರಾಬಾದ್, ಮುಂಬೈ, ಡೆಲ್ಲಿ, ಪಂಜಾಬ್ ತಂಡಗಳ ಮಾಲೀಕರೂ ಗ್ರೌಂಡ್ನಲ್ಲೇ ಸಿಟ್ಟು ಹೊರಹಾಕಿದ್ದಾರೆ. ತಂಡದ ಸೋಲು ಟೀಂ ಕ್ಯಾಪ್ಟನ್ಗಳ ಮೇಲೆ ಎಂಥಾ ಪರಿಣಾಮ ಬೀರುತ್ತೆ ಅನ್ನೋದಕ್ಕೆ ಕೆಲ ಉದಾಹರಣೆಗಳು ಇವೆ.
ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಎಲ್ಎಸ್ಜಿ ನಾಯಕ ಕೆ.ಎಲ್.ರಾಹುಲ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದ್ರೆ ಬ್ಯಾಟಿಂಗ್ನಲ್ಲಿ ವೈಫಲ್ಯ ಕಂಡ ಲಕ್ನೋ ಬ್ಯಾಟ್ಸ್ಮನ್ಗಳು 4 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತ್ತು. ಕೆಎಲ್ ರಾಹುಲ್ 33 ಬಾಲ್ಗಳಲ್ಲಿ ಗಳಿಸಿದ್ದು 29 ರನ್ ಅಷ್ಟೇ. ಮತ್ತೊಂದೆಡೆ ಹೈದ್ರಾಬಾದ್ ತಂಡ 10 ಓವರ್ಗೂ ಮೊದ್ಲೇ ಈ ಟಾರ್ಗೆಟ್ನ ರೀಚ್ ಮಾಡಿತ್ತು. ಇದೇ ಟಾರ್ಗೆಟ್ ಹಾಗೂ ಚೇಸಿಂಗ್ ಎಲ್ಎಸ್ಜಿ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿತ್ತು. ಕೆ.ಎಲ್.ರಾಹುಲ್ ಟೆಸ್ಟ್ ಪಂದ್ಯ ಆಡಿದಂತೆ ಬ್ಯಾಟಿಂಗ್ ಮಾಡಿದ್ರು. ಮತ್ತೊಂದ್ಕಡೆ ಲಕ್ನೋ ಬೌಲಿಂಗ್ ವಿಭಾಗ ತೀರಾ ಕಳಪೆ ಪ್ರದರ್ಶನ ತೋರಿತ್ತು. ಒಂದೂ ವಿಕೆಟ್ ಉರುಳಿಸೋಕೆ ಆಗ್ದೇ ಯದ್ವಾತದ್ವಾ ರನ್ ಕೊಟ್ರು. ತಂಡದ ಪ್ರದರ್ಶನಕ್ಕೆ ಸಿಟ್ಟಾದ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ಕೆ.ಎಲ್ ರಾಹುಲ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೈ ತೋರಿಸಿ ಏರು ಧ್ವನಿಯಲ್ಲಿ ಬೈದಿದ್ದಾರೆ. ಗೋಯೆಂಕಾರ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಂಜೀವ್ ಗೋಯೆಂಕಾ ವರ್ತನೆಯ ಬಗ್ಗೆ ಬಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಹಣ ಯಾವತ್ತೂ ಶಿಷ್ಟಾಚಾರವನ್ನ ಕಲಿಸಲ್ಲ. ನಾಯಕರು ಯಾವಾಗಲೂ ಸಾರ್ವಜನಿಕವಾಗಿ ಹೊಗಳುತ್ತಾರೆ ಮತ್ತು ಖಾಸಗಿಯಾಗಿ ಟೀಕಿಸುತ್ತಾರೆ. ಆದ್ರೆ ರಾಹುಲ್ ಜೊತೆಗೆ ಗೋಯೆಂಕಾ ಅವರ ವರ್ತನೆ ವೃತ್ತಿಪರವಲ್ಲ ಹಾಗೂ ಸ್ವೀಕಾರಾರ್ಹವಲ್ಲ ಎಂದು ಕಿಡಿ ಕಾರಿದ್ದಾರೆ. ಆಟಗಾರರನ್ನ ಇಷ್ಟು ಕೀಳಾಗಿ ನಡೆಸಿಕೊಳ್ಳೋ ಇಂಥಾ ಫ್ರಾಂಚೈಸಿಯಿಂದ ರಾಹುಲ್ ಹೊರ ಬರ್ಬೇಕು, ನಮ್ಮ ಆರ್ಸಿಬಿಗೆ ಬನ್ನಿ ರಾಜನಂತೆ ನೋಡಿಕೊಳ್ತೇವೆ ಅಂತಾ ಒತ್ತಾಯಿಸಿದ್ದಾರೆ. ಇದು ನಿಜಕ್ಕೂ ಭಯಾನಕ, ಅಸಹ್ಯಕರ, ಕರುಣಾಜನಕ ಅಂತಾ ಅಸಮಾಧಾನ ಹೊರ ಹಾಕಿದ್ದಾರೆ. ಟೀಂ ಇಂಡಿಯಾದ ಆಟಗಾರ ಕೆ.ಎಲ್ ರಾಹುಲ್ರನ್ನ ನೀವು ಈ ರೀತಿ ನಡೆಸಿಕೊಳ್ಳೋದು ಸರಿ ಇಲ್ಲ ಅಂತಾ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ.
ಒಂದ್ಕಡೆ ತಂಡದ ಸೋಲು, ಫ್ರಾಂಚೈಸಿ ಮಾಲೀಕನ ಬೈಗುಳದಿಂದ ಬೇಸರಗೊಂಡಿದ್ದ ಕೆ.ಎಲ್ ರಾಹುಲ್ ಪಂದ್ಯದ ಬಳಿಕ ಹೇಳಿದ ಮಾತು ಅವ್ರ ನೋವನ್ನ ಹೊರ ಹಾಕಿತ್ತು. ನಾನು ಮಾತಿನಿಂದ ಸೋತಿದ್ದೇನೆ ಎಂದು ತಮ್ಮ ಅಸಹಾಯಕ ಸ್ಥಿತಿಯನ್ನ ಹೇಳಿಕೊಂಡಿದ್ರು. ಹಾಗಂತ ಐಪಿಎಲ್ನಲ್ಲಿ ಮಾಲೀಕರ ಇಂಥಾ ವರ್ತನೆ ಹೊಸತೇನೂ ಅಲ್ಲ. ಬ್ಯಾಟಿಂಗ್ನಲ್ಲಿ ಬಲಾಢ್ಯವಾಗಿರೋ ಹೈದ್ರಾಬಾದ್ ತಂಡ ಕೂಡ ಸಾಕಷ್ಟು ಬಾರಿ ಮುಗ್ಗರಿಸಿದೆ. ಇಂಥಾ ಟೈಮಲ್ಲಿ ಎಸ್ಆರ್ಹೆಚ್ ತಂಡದ ಸಿಇಒ ಕಾವ್ಯಾ ಮಾರನ್ ಸ್ಟೇಡಿಯಂನಲ್ಲೇ ಸಿಟ್ಟು ಹೊರ ಹಾಕಿದ್ದಾರೆ. ಹಾಗೇ ಮುಂಬೈ ಇಂಡಿಯನ್ಸ್ ಮಾಲೀಕರಾದ ನೀತಾ ಅಂಬಾನಿ ಕೂಡ ಡ್ರೆಸ್ಸಿಂಗ್ ರೂಮ್ಗೆ ತೆರಳಿ ತಮ್ಮ ತಂಡದ ಆಟಗಾರರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇನ್ನು ಪಂಜಾಬ್ ಕಿಂಗ್ಸ್ ತಂಡದ ಓನರ್ ಪ್ರೀತಿ ಜಿಂಟಾ ಕೂಡ ಇಂಥದ್ದೇ ಆಕ್ರೋಶ ತೋರಿಸಿದ್ದಾರೆ. ಇನ್ನು ಕೆಕೆಆರ್ ತಂಡದ ಒಡೆಯ ಶಾರುಖ್ ಖಾನ್ ತಮ್ಮ ತಂಡ ಸೋತಾಗ ತಾವೇ ಕಣ್ಣೀರು ಹಾಕಿದ ಪ್ರಸಂಗವೂ ಇದೆ. ಇಲ್ಲಿ ನಾವು ಒಂದನ್ನ ಹೇಳ್ಬೇಕು. ಎಲ್ಲಾ ತಂಡಗಳ ಓನರ್ಗಳು ಗೆಲುವನ್ನ ಸಂಭ್ರಮಿಸಿ ಸೋಲಿಗೆ ಸಿಟ್ಟು ತೋರಿಸ್ತಾರೆ. ಆದ್ರೆ ನಮ್ಮ ಆರ್ಸಿಬಿಯ ಮಾಲೀಕರು ಮಾತ್ರ ಪಂದ್ಯದ ವೇಳೆ ಕಾಣಿಸಿಕೊಳ್ಳೋದೇ ಇಲ್ಲ. ಒಟ್ನಲ್ಲಿ ಆಟ ಅಂದ್ಮೇಲೆ ಒಬ್ರು ಗೆಲ್ಲಲೇಬೇಕು ಮತ್ತೊಬ್ರು ಸೋಲಲೇಬೇಕು. ಆದ್ರೆ ಗೆದ್ದಾಗ ಖುಷಿ ಪಡೋ ಅವ್ರು ಸೋತಾಗಲೂ ಆಟಗಾರರ ಜೊತೆ ನಿಲ್ಲಬೇಕು. ಆತ್ಮಸ್ಥೈರ್ಯ ತುಂಬಬೇಕು. ಅದನ್ನ ಬಿಟ್ಟು ಶಾಲೆಯಲ್ಲಿ ಸಣ್ಣಮಕ್ಕಳನ್ನ ಬೈದಂತೆ ಎಲ್ಲರ ಮುಂದೆಯೇ ಬೈದ್ರೆ ಅದು ಮಾಲೀಕನ ಮನಸ್ಥಿತಿಯನ್ನ ತೋರಿಸುತ್ತೆ ಅಷ್ಟೇ.