ಇನ್ನೂ ಸಿಗದ ಜಾಮೀನು..  ವಿಚಾರಣೆ ಮುಂದಕ್ಕೆ.. ಹೆಚ್‌ ಡಿ ರೇವಣ್ಣಗೆ ಮತ್ತೆ ಹಿನ್ನಡೆ – ಕೋರ್ಟ್‌ ಎಸ್‌ಐಟಿಗೆ ನೋಟಿಸ್ ನೀಡಿದ್ಯಾಕೆ?

ಇನ್ನೂ ಸಿಗದ ಜಾಮೀನು..  ವಿಚಾರಣೆ ಮುಂದಕ್ಕೆ.. ಹೆಚ್‌ ಡಿ ರೇವಣ್ಣಗೆ ಮತ್ತೆ ಹಿನ್ನಡೆ – ಕೋರ್ಟ್‌ ಎಸ್‌ಐಟಿಗೆ ನೋಟಿಸ್ ನೀಡಿದ್ಯಾಕೆ?

ಲೋಕಸಭಾ ಚುನಾವಣಾ ಹೊತ್ತಲಿ ಹಾಸನ ಕ್ಷೇತ್ರದ ಪೆನ್‌ ಡ್ರೈ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಮಾತ್ರವಲ್ಲದೇ ರಾಷ್ಟ್ರ ರಾಜಕಾರಣದಲ್ಲೂ ಸಾಕಷ್ಟು ಸದ್ದು ಮಾಡುತ್ತಿದೆ. ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಿಡ್ನ್ಯಾಪ್‌ ಕೇಸ್‌ನಲ್ಲಿ ಮಾಜಿ ಸಚಿವ ಎಚ್.‌ಡಿ. ರೇವಣ್ಣ ಅರೆಸ್ಟ್‌ ಆಗಿದ್ದಾರೆ. ಜಾಮೀನು ಅರ್ಜಿ ಸಲ್ಲಿಸಿದ್ದ ರೇವಣ್ಣಗೆ ಮತ್ತೆ ಹಿನ್ನಡೆಯಾಗಿದೆ.

ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌ – ಪ್ರೂಫ್​ ಸಮೇತ ಬಂದು ಸರ್ಕಾರವನ್ನು ಪ್ರಶ್ನಿಸಿದ ಹೆಚ್‌ಡಿಕೆ!

ಎಸ್‌ಐಟಿ ಬಂಧನದಲ್ಲಿರುವ ಜೆಡಿಎಸ್ ಶಾಸಕ ಎಚ್‌ಡಿ ರೇವಣ್ಣ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು.  ಎಚ್‌ಡಿ ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದೂಡಿದೆ. ಅಷ್ಟೇ ಅಲ್ಲದೇ ನ್ಯಾಯಾಧೀಶ ಸಂತೋಷ ಗಜಾನನ ಭಟ್, ಆರೋಪಿ ಪೊಲೀಸ್ ಕಸ್ಟಡಿಯಲ್ಲಿ ಇರುವಾಗ ಆತ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಬಹುದೇ ಎಂಬ ಬಗ್ಗೆ ಆಕ್ಷೇಪಣೆ ಸಲ್ಲಿಸಿ‘ ಎಂದು ಎಸ್ಐಟಿಗೆ ಆದೇಶಿಸಿ ನೋಟಿಸ್ ಜಾರಿಮಾಡಿದ್ದು, ವಿಚಾರಣೆಯನ್ನು ಬುಧವಾರ (ಮೇ 8) ಬೆಳಗ್ಗೆ 11 ಗಂಟೆಗೆ ಮುಂದೂಡಿದರು.

ವಿಚಾರಣೆ ವೇಳೆ ಅರ್ಜಿದಾರ ರೇವಣ್ಣ ಪರ ಹಾಜರಾಗಿದ್ದ ಹೈಕೋರ್ಟ್ ಹಿರಿಯ ವಕೀಲ ಸಿವಿ ನಾಗೇಶ್, ಆರೋಪಿಗೆ ಜಾಮೀನು ನೀಡಲು ಸಾಧ್ಯವಿರುವ ಕಾನೂನಿನ ಅಂಶಗಳು ಹಾಗೂ ಸುಪ್ರೀಂಕೋರ್ಟ್ ತೀರ್ಪಿನ ಪೂರ್ವ ನಿದರ್ಶನಗಳನ್ನು ವಿವರಿಸಿದರು.

ಏಪ್ರಿಲ್ 29 ರಂದು ಮಹಿಳೆಯೊಬ್ಬರನ್ನು ಅಪಹರಿಸಿದ ಆರೋಪದ ಮೇಲೆ ರೇವಣ್ಣ ಮತ್ತು ಅವರ ಆಪ್ತ ಸತೀಶ್ ಬಾಬಣ್ಣ ವಿರುದ್ಧ ಗುರುವಾರ ರಾತ್ರಿ ಪ್ರಕರಣ ದಾಖಲಾಗಿದೆ. ಹಾಸನ ಸಂಸದ ಪ್ರಜ್ವಲ್ ರೇವಣ್ಣ ತನ್ನ ತಾಯಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯ ಪುತ್ರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಬಾಬಣ್ಣನನ್ನು ಎಸ್‌ಐಟಿ ಕಸ್ಟಡಿಗೆ ಪಡೆದುಕೊಂಡಿದೆ. ಪ್ರಜ್ವಲ್ ವಿರುದ್ಧ ಸಾಕ್ಷಿ ಹೇಳದಂತೆ ಒತ್ತಾಯಿಸಿ ಮಹಿಳೆಯನ್ನು ಅಪಹರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Shwetha M