ರವೀಂದ್ರ ಜಡೇಜಾ ಆಲ್ರೌಂಡ್ ಆಟ – ಪಂಜಾಬ್ ವಿರುದ್ಧ ಚೆನ್ನೈಗೆ 28 ರನ್ಗಳ ಜಯ
ಪಂಜಾಬ್ ಕಿಂಗ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ಪಂದ್ಯದಲ್ಲಿ ಸಿಎಸ್ಕೆ ಭರ್ಜರಿ ಜಯ ಗಳಿಸಿದೆ. ರವೀಂದ್ರ ಜಡೇಜಾ ಆಲ್ರೌಂಟ್ ಆಟದ ನೆರವಿನಿಂದ ಚೆನ್ನೈ 28 ರನ್ಗಳ ಗೆಲುವು ಸಾಧಿಸಿದೆ.
ಹಿಮಾಚಲ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 167 ರನ್ ಬಾರಿಸಿ, ಪಂಜಾಬ್ ಕಿಂಗ್ಸ್ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ನಿಗದಿತ ಓವರ್ಗಳಲ್ಲಿ 9 ವಿಕೆಟ್ಗಳನ್ನು ಕಳೆದುಕೊಂಡು 139 ರನ್ ಗಳಿಸಿ ಚೆನ್ನೈಗೆ ಶರಣಾಯಿತು.
ಇದನ್ನೂ ಓದಿ:
ಚೆನೈ ಪರ ಆರಂಭಿಕರಾಗಿ ಕಣಕ್ಕಿಳಿದ ಅಜಿಂಕ್ಯ ರಹಾನೆ ಪಂದ್ಯದ ಎರಡನೇ ಓವರ್ನಲ್ಲೇ 9 ರನ್ಗಳಿಗೆ ಆರ್ಶದೀಪ್ ಸಿಂಗ್ಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಎರಡನೇ ವಿಕೆಟ್ಗೆ ನಾಯಕ ಗಾಯಕ್ವಾಡ್ ಹಾಗೂ ಡೇರಿಲ್ ಮಿಚೆಲ್ 32 ಎಸೆತಗಳಲ್ಲಿ 57 ರನ್ಗಳ ಉತ್ತಮ ಜತೆಯಾಟವಾಡಿದರು. ಗಾಯಕ್ವಾಡ್ 32 ರನ್ ಗಳಿಸಿ ರಾಹುಲ್ ಚಹಾರ್ಗೆ ವಿಕೆಟ್ ಒಪ್ಪಿಸಿದರೆ, ಇದರ ಬೆನ್ನಲ್ಲೇ ಕ್ರೀಸ್ಗಿಳಿದ ಶಿವಂ ದುಬೆ ಒಂದೇ ಎಸೆತಕ್ಕೆ ಔಟಾಗಿ ಪೆವಿಲಿಯನ್ಗೆ ಮರಳಿದರು. ಡೇರಿಲ್ ಮಿಚೆಲ್ 30 ರನ್ ಗಳಿಸಿ ಹರ್ಷಲ್ ಪಟೇಲ್ಗೆ ವಿಕೆಟ್ ಒಪ್ಪಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಮೊಯಿನ್ ಅಲಿ 17 ರನ್ ಗಳಿಸಿ ಔಟಾದರು. 11 ರನ್ ಗಳಿಸಿದ್ದ ಮಿಚೆಲ್ ಸ್ಯಾಂಟರ್ಗೆ ರಾಹುಲ್ ಚಹಾರ್ ಪೆವಿಲಿಯನ್ ಹಾದಿ ತೋರಿಸಿದರು. ಶಾರ್ದೂಲ್ ಠಾಕೂರ್ 17 ರನ್ ಗಳಿಸಿ ವಿಕೆಟ್ ಕೈಚೆಲ್ಲಿದರು. ಕ್ರೀಸ್ಗಿಳಿದು ಮೊದಲನೇ ಬಾಲ್ಗೆ ಗೋಲ್ಡನ್ ಡಕ್ ಆಗಿ ಎಂ.ಎಸ್.ಧೋನಿ 18 ವರ್ಷಗಳ ಬಳಿಕ ಕೆಟ್ಟ ದಾಖಲೆ ಬರೆದರು. ಕೊನೆಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ರವೀಂದ್ರ ಜಡೇಜಾ 26 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 43 ರನ್ ಬಾರಿಸಿ, ಸವಾಲಿನ ಮೊತ್ತ ದಾಖಲಿಸಲು ತಂಡಕ್ಕೆ ನೆರವಾದರು.
ಪಂಜಾಬ್ ಕಿಂಗ್ಸ್ ತಂಡದ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ರಾಹುಲ್ ಚಹಾರ್ 23 ರನ್ ನೀಡಿ 3 ಹಾಗೂ ಹರ್ಷಲ್ ಪಟೇಲ್ 24 ರನ್ ನೀಡಿ 3 ವಿಕೆಟ್ ಕಿತ್ತು ಮಿಂಚಿದರು. ಆರ್ಶದೀಪ್ ಸಿಂಗ್ 2 ಹಾಗೂ ನಾಯಕ ಸ್ಯಾಮ್ ಕರ್ರನ್ ಒಂದು ವಿಕೆಟ್ ಕಬಳಿಸಿದರು.
ಚೆನ್ನೈ ನೀಡಿದ್ದ 168 ರನ್ ಗುರಿ ಬೆನ್ನತ್ತಿದ ಪಂಜಾಬ್ ಬ್ಯಾಟರ್ಗಳ ಕಳಪೆ ಪ್ರದರ್ಶನದಿಂದ ಸೋಲನುಭವಿಸಿತು. ಆರಂಭಿಕರಾಗಿ ಕ್ರೀಸ್ಗಿಳಿದಿದ್ದ ಪ್ರಭಾಸಿಮ್ರಾನ್ ಸಿಂಗ್ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ ಸಿಂಗ್ (30) ಆಟಕ್ಕೆ ಸ್ಪಿನ್ನರ್ ಜಡೇಜಾ ಬ್ರೇಕ್ ಹಾಕಿದರು. ಸಿಂಗ್ ಬಳಿಕ ಯಾವೊಬ್ಬ ಆಟಗಾರನೂ ಹೆಚ್ಚು ಸಮಯ ಕ್ರೀಸ್ನಲ್ಲಿ ನಿಲ್ಲಲಿಲ್ಲ. ಜಾನಿ ಬೈಸ್ರ್ಟೋವ್ 7, ಶಶಾಂಕ್ ಸಿಂಗ್ 27, ಸ್ಯಾಮ್ ಕರ್ರನ್ 7 ರಿಂದ ಬ್ಯಾಟಿಂಗ್ ವೈಫಲ್ಯ ಕಂಡುಬಂತು. ರಿಲೀ ರೊಸೊವ್ 0, ಜಿತೇಶ್ ಶರ್ಮಾ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು. ಅಶುತೋಷ್ ಶರ್ಮಾ 3, ಹಪ್ರ್ರೀತ್ ಬ್ರಾರ್ 17, ಹರ್ಷಲ್ ಪಟೇಲ್ 12, ರಾಹುಲ್ ಚಹಾರ್ 16 ಹಾಗೂ ಕಗಿಸೊ ರಬಾಡ (ಔಟಾಗದೇ) 11 ರನ್ ಗಳಿಸಲಷ್ಟೇ ಶಕ್ತರಾದರು.
ಚೆನ್ನೈ ಪರ ಸ್ಪಿನ್ನರ್ ರವೀಂದ್ರ ಜಡೇಜಾ 3 ವಿಕೆಟ್ ಕಿತ್ತು ಮಿಂಚಿದರು. ತುಷಾರ್ ದೇಶಪಾಂಡೆ, ಸಿಮರ್ಜೀತ್ ಸಿಂಗ್ ತಲಾ 2, ಮಿಚೆಲ್ ಸ್ಯಾಂಟ್ನರ್ ಹಾಗೂ ಶಾರ್ದೂಲ್ ಠಾಕೂರ್ ತಲಾ 1 ವಿಕೆಟ್ ಕಬಳಿಸಿ ತಂಡದ ಗೆಲುವಿಗೆ ಸಹಕಾರಿಯಾದರು.