ಟೀಂ ಇಂಡಿಯಾಗೆ ಶಮಿ ಅನುಪಸ್ಥಿತಿಯೇ ದೊಡ್ಡ ಹೊಡೆತ! – ಪಂದ್ಯ ಮಿಸ್ ಮಾಡಿಕೊಂಡ ವೇಗದ ಬೌಲರ್!
ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಒಂದು ಪಂದ್ಯವನ್ನೂ ಸೋಲದೆ ಫೈನಲ್ಗೆ ಲಗ್ಗೆ ಇಟ್ಟಿದ್ದ ಟೀಂ ಇಂಡಿಯಾ ಕೊನೇ ಕ್ಷಣದಲ್ಲಿ ಟ್ರೋಫಿ ಕೈಚೆಲ್ಲಿತ್ತು. ಆಸ್ಟ್ರೇಲಿಯಾ ಚಾಂಪಿಯನ್ ಆಗಿತ್ತು. ಇದೀಗ ಟಿ-20 ವಿಶ್ವಕಪ್ಗೆ ಕೆಲವೇ ದಿನಗಳು ಉಳಿದಿದ್ದು ಈ ಬಾರಿಯಾದ್ರೂ ಕಪ್ ಗೆಲ್ಲೋಕೆ ನಾಯಕ ರೋಹಿತ್ ಶರ್ಮಾ ಪಣ ತೊಟ್ಟಿದ್ದಾರೆ. ಆದ್ರೆ ಈ ಬಾರಿ ಟೀಂ ಇಂಡಿಯಾದಲ್ಲಿ ಕಾಡ್ತಿರೋ ಬಹುದೊಡ್ಡ ಕೊರತೆ ಅಂದ್ರೆ ಅದು ಮ್ಯಾಜಿಕಲ್ ಬೌಲರ್ ಮೊಹಮ್ಮದ್ ಶಮಿ. ಏಕದಿನ ವಿಶ್ವಕಪ್ನಲ್ಲಿ ಭಾರತದ ಪರ ಅತ್ಯಮೋಘ ಪ್ರದರ್ಶನ ನೀಡಿದ್ದ ಶಮಿ ಟೀಂ ಇಂಡಿಯಾ ಫೈನಲ್ ಪ್ರವೇಶಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ರು. ಆದ್ರೆ ಈ ಬಾರಿ ಟಿ-20 ವಿಶ್ವಕಪ್ನಲ್ಲಿ ಶಮಿ ಆಡ್ತಾ ಇಲ್ಲ. ಇಂಜುರಿ ಸಮಸ್ಯೆಯಿಂದ ಹೊರ ಬರದ ಶಮಿಯ ಅನುಪಸ್ಥಿತಿ ದೊಡ್ಡ ಮಟ್ಟದ ಹೊಡೆತ ನೀಡುವ ಆತಂಕ ಇದೆ.
ಇದನ್ನೂ ಓದಿ: ಕೋವಿಶೀಲ್ಡ್ ಪಡೆದವರು ತಂಪುಪಾನಿಯ, ಐಸ್ ಕ್ರೀಮ್ ಸೇವಿಸಬಹುದಾ? – ಆರೋಗ್ಯ ಇಲಾಖೆ ಹೇಳಿದ್ದೇನು?
ಶಮಿ ಅನುಪಸ್ಥಿತಿಯೇ ಹೊಡೆತ!
2023ರ ಪುರುಷರ ಏಕದಿನ ವಿಶ್ವಕಪ್ನಲ್ಲಿ ತನ್ನ ಆಕ್ರಮಣಕಾರಿ ಬೌಲಿಂಗ್ನಿಂದಲೇ ಎದುರಾಳಿ ಬ್ಯಾಟರ್ಗಳನ್ನು ಭಾರತ ತಂಡದ ವೇಗಿ ಮೊಹಮ್ಮದ್ ಶಮಿ ಕಟ್ಟಿ ಹಾಕಿದ್ದರು. ಟೂರ್ನಿಯ ಮಧ್ಯದಲ್ಲಿ ತಂಡಕ್ಕೆ ಸೇರ್ಪಡೆಗೊಂಡ ಶಮಿ ವಿಶ್ವದ ಬಲಿಷ್ಠ ತಂಡಗಳ ಎದುರು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ಆಡಿದ 7 ಪಂದ್ಯಗಳಿಂದ ಶಮಿ ಒಟ್ಟು 24 ವಿಕೆಟ್ಗಳನ್ನು ಕಂಬಳಿಸುವ ಮೂಲಕ ವಿಶ್ವಕಪ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಂತೂ ಶಮಿ ಬೌಲಿಂಗ್ಗೆ ಜಗತ್ತೇ ಬೆರಗಾಗಿತ್ತು. ಯಾಕಂದ್ರೆ ಬರೋಬ್ಬರಿ ಏಳು ವಿಕೆಟ್ ಉರುಳಿಸಿ ಮತ್ತೊಂದು ಸಾಧನೆ ಮಾಡಿದ್ದರು. ಹಾಗೇ 3 ಬಾರಿ 5 ವಿಕೆಟ್ಗಳನ್ನ ಗಳಿಸಿದ್ದರು. ಆದ್ರೆ ನವೆಂಬರ್ನಲ್ಲಿ ನಡೆದ ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿದಿದ್ದೇ ಕೊನೆಯ ಪಂದ್ಯ. ವಿಶ್ವಕಪ್ ಟೂರ್ನಿಯಲ್ಲೇ ಸ್ನಾಯುರಜ್ಜು ಗಾಯದಿಂದ ಬಳಲುತ್ತಿದ್ದ ಶಮಿ ನೋವಿನಲ್ಲೂ ಅದ್ಭುತವಾಗಿ ಬೌಲಿಂಗ್ ಮಾಡಿದ್ದರು. ಇದರ ಪ್ರತಿಫಲವಾಗಿಯೇ ಅತಿ ಹೆಚ್ಚು ವಿಕೆಟ್ಗಳನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ರು. ಆದರೇ ಎಲ್ಲಿಯೂ ತಮ್ಮ ನೋವಿನ ಬಗ್ಗೆ ಹೇಳಿಕೊಳ್ಳದ ಶಮಿ ವಿಶ್ವಕಪ್ ಮುಗಿದ ಬಳಿಕ ಫೆಬ್ರವರಿ ತಿಂಗಳಿನಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶಮಿ ಮಾಹಿತಿ ಹಂಚಿಕೊಂಡಿದ್ದರು.
ಅಸಲಿಗೆ ವಿಶ್ವಕಪ್ನ ಆರಂಭಿಕ ಪಂದ್ಯಗಳಲ್ಲಿ ಶಮಿಗೆ ಅವಕಾಶವನ್ನೇ ನೀಡಿರಲಿಲ್ಲ. ಮೊದಲ ನಾಲ್ಕು ಪಂದ್ಯಗಳಲ್ಲಿ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಆಡಿಸಲಾಗಿತ್ತು. ಅದಕ್ಕಾಗಿ ಶಮಿ ಬೆಂಚ್ ಕಾದಿದ್ದರು. ಆದ್ರೆ ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಹಾರ್ದಿಕ್ ಕಾಲಿಗೆ ಗಾಯವಾಗಿ ಹೊರಬಿದ್ದಾಗ ಶಮಿಗೆ ತಂಡದ ಬಾಗಿಲು ತೆರೆಯಿತು. ಸಿಕ್ಕ ಅವಕಾಶವನ್ನ ಚೆನ್ನಾಗೇ ಬಳಸಿಕೊಂಡ ಶಮಿ ಸಾಲು ಸಾಲು ವಿಕೆಟ್ ಗಳನ್ನ ಉರುಳಿಸಿದ್ದರು. ಆದ್ರೆ ಟೂರ್ನಿ ಮುಗಿಯೋ ಹೊತ್ತಿಗೆ ಹಿಮ್ಮಡಿ ಗಾಯ ವಿಪರೀತವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ರು. ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಹಲವು ಪ್ರಮುಖ ಸೀರಿಸ್ಗಳನ್ನ ಶಮಿ ಮಿಸ್ ಮಾಡಿಕೊಂಡಿದ್ದಾರೆ.
ಪಂದ್ಯ ಮಿಸ್ ಮಾಡಿಕೊಂಡ ಶಮಿ!
ಆಸ್ಟ್ರೇಲಿಯಾ ವಿರುದ್ಧ ಏಕದಿನ ವಿಶ್ವಕಪ್ ಸೋತ ಬಳಿಕ ಗಾಯಾಳು ಮೊಹಮ್ಮದ್ ಶಮಿ ಆನೇಕ ಪ್ರಮುಖ ಸಿರೀಸ್ ತಪ್ಪಿಸಿಕೊಂಡರು. ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟಿ-20 ಸರಣಿ, ದಕ್ಷಿಣ ಆಫ್ರಿಕಾ ಪ್ರವಾಸ, ಜನವರಿಯಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಯಿಂದ ಹೊರಗುಳಿದಿದ್ದರು. ಅಲ್ಲದೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಟೆಸ್ಟ್ ಪಂದ್ಯಗಳ ಸರಣಿಗೂ ಶಮಿ ಅಲಭ್ಯರಾಗಿದ್ದರು. ಇನ್ನು ಮಾರ್ಚ್ನಿಂದ ಆರಂಭವಾದ ಐಪಿಎಲ್ಗಾದ್ರೂ ಮರಳುವ ನಿರೀಕ್ಷೆ ಇತ್ತು. ಆದ್ರೆ ಗುಜರಾತ್ ಟೈಟನ್ಸ್ ಪರ ಆಡಬೇಕಿದ್ದ ಶಮಿ ಐಪಿಎಲ್ ಟೂರ್ನಿಯಿಂದಲೇ ಹೊರ ಬಿದ್ದರು. ಕಳೆದ ಎರಡು ಋತುಗಳಿಂದ ಗುಜರಾತ್ ಟೈಟಾನ್ಸ್ ತಂಡದ ಪರವಾಗಿ ಮೊಹಮ್ಮದ್ ಆಡುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಗುಜರಾತ್ ಒಂದು ಬಾರಿ ಚಾಂಪಿಯನ್ ಪಟ್ಟಕ್ಕೇರಿದರೆ, ಕಳೆದ ವರ್ಷ ರನ್ನರ್ ಆಪ್ ಆಗಿದೆ. ಈ ಎರಡು ಆವೃತ್ತಿಗಳಲ್ಲಿ ಗುಜರಾತ್ ತಂಡದ ಈ ಯಶಸ್ಸಿಗೆ ಶಮಿ ಗಣನೀಯ ಕೊಡುಗೆ ನೀಡಿದ್ದಾರೆ. 2022ರ ಐಪಿಎಲ್ನಲ್ಲಿ 20 ವಿಕೆಟ್ ಮತ್ತು 2023ರಲ್ಲಿ 28 ವಿಕೆಟ್ ಕಬಳಿಸಿದ್ದರು. ಹೀಗಾಗಿ 2023ರಲ್ಲಿ ಹೆಚ್ಚಿನ ವಿಕೆಟ್ಗಳನ್ನು ಪಡೆದ ಸಾಧನೆಗೆ ‘ಪರ್ಪಲ್ ಕ್ಯಾಪ್’ ಗಳಿಸಿದರು. ಈವರೆಗೆ ಐಪಿಎಲ್ನಲ್ಲಿ 110 ಪಂದ್ಯಗಳನ್ನು ಆಡಿರುವ ಶಮಿ 8.44ರ ಸರಾಸರಿಯಲ್ಲಿ 127 ವಿಕೆಟ್ ಪಡೆದಿದ್ದಾರೆ. ಆದ್ರೆ ಈ ವರ್ಷ ಶಮಿ ಗಾಯಗೊಂಡಿರುವುದು ಗುಜರಾತ್ ಟೈಟಾನ್ಸ್ ತಂಡಕ್ಕೆ ದೊಡ್ಡ ಹೊಡೆತ ನೀಡಿದೆ. ಬೌಲಿಂಗ್ ಲೈನ್ಅಪ್ ದುರ್ಬಲವಾಗಿದೆ.
2013ರಲ್ಲಿ ದೆಹಲಿಯಲ್ಲಿ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಏಕದಿನ ಕ್ರಿಕೆಟ್ಗೆ ಶಮಿ ಪದಾರ್ಪಣೆ ಮಾಡಿದ್ದ ಶಮಿ ಕಳೆದ ಒಂದು ದಶಕದಲ್ಲಿ ಹತ್ತಾರು ಏರಿಳಿತಗಳನ್ನ ಕಂಡಿದ್ದಾರೆ. ಫಾರ್ಮ್ ಕಳೆದುಕೊಂಡು ಸ್ಥಾನ ಕಳೆದುಕೊಂಡಿದ್ದು, ಗಾಯದಿಂದ ಸ್ಥಾನ ಕಳೆದುಕೊಂಡಿದ್ದು ಮತ್ತು ಅಪಘಾತದ ಗಾಯವೂ ಕಾಡಿತು. ಸಾಲದ್ದಕ್ಕೆ ಪತ್ನಿಯೊಂದಿಗಿನ ಕಲಹವು ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡದಾಗಿ ಸುದ್ದಿ ಮಾಡಿತು. ಬೆಟ್ಟಿಂಗ್ ಆರೋಪಗಳೂ ಕಾಡಿದವು. ಇವೆಲ್ಲದರಿಂದ ಬೇಸತ್ತು ಆತ್ಮಹತ್ಯೆಗೂ ಯತ್ನಿಸಿದ್ದಾಗಿ ಸ್ವತಃ ಶಮಿ ಅವರೇ ಮೂರು ವರ್ಷಗಳ ಹಿಂದೆ ವಿಡಿಯೋವೊಂದರಲ್ಲಿ ಹೇಳಿಕೊಂಡಿದ್ದರು. ಆದ್ರೆ ಇದೆಲ್ಲದನ್ನೂ ಮೆಟ್ಟಿ ವಿಶ್ವಕಪ್ ಕ್ರಿಕೆಟ್ನಲ್ಲಿ ಅತಿ ವೇಗವಾಗಿ 50 ವಿಕೆಟ್ ಗಳಿಸಿದ ಸಾಧನೆ ಮಾಡಿದ್ದರು. ಸದ್ಯ 33 ವರ್ಷದ ವೇಗದ ಬೌಲರ್ ಮೊಹಮ್ಮದ್ ಶಮಿ 2023ರ ವಿಶ್ವಕಪ್ ಫೈನಲ್ನ ನಂತರ ಭಾರತಕ್ಕಾಗಿ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಎಡ ಹಿಮ್ಮಡಿಯ ಶಸ್ತ್ರಚಿಕಿತ್ಸೆ ಬಳಿಕ ವಿಶ್ರಾಂತಿ ಪಡೆಯುತ್ತಿದ್ದು, ಸಂಪೂರ್ಣ ಚೇತರಿಸಿಕೊಂಡಿಲ್ಲ. ಸತತ 8 ತಿಂಗಳುಗಳಿಂದ್ಲೇ ಕ್ರಿಕೆಟ್ನಿಂದ ದೂರ ಉಳಿದಿದ್ದಾರೆ. ಹೀಗಾಗಿ ಆದಷ್ಟು ಬೇಗ ಶಮಿ ಟೀಂ ಇಂಡಿಯಾಗೆ ಮರಳಲಿ ಮತ್ತೆ ತಮ್ಮ ಬೌಲಿಂಗ್ ಜಾದೂ ತೋರಲಿ ಅಂತಾ ಪ್ಯಾನ್ಸ್ ಬೇಡಿಕೊಳ್ತಿದ್ದಾರೆ.