12 ಬಾರಿ ಕ್ಯಾನ್ಸರ್ ಕಾಡಿದರೂ ಗೆದ್ದ ಮಹಿಳೆ..!- 2ರಿಂದ 36 ವರ್ಷದವರೆಗೆ ಕ್ಯಾನ್ಸರ್ ವಿರುದ್ಧ ಕಾದಾಟ..!
ಮಾರಣಾಂತಿಕ ಕಾಯಿಲೆಯನ್ನ ಗೆದ್ದಿದ್ದು ಹೇಗೆ ಗೊತ್ತಾ ?
ಕ್ಯಾನ್ಸರ್. ಇದು ಆಧುನಿಕ ಪ್ರಪಂಚದ ಮಹಾಕಾಯಿಲೆ. ಈ ಕಾಯಿಲೆಯ ಬಗ್ಗೆ ತಿಳಿದುಕೊಂಡಷ್ಟು ಹೆಚ್ಚೆಚ್ಚು ಗಾಬರಿಯಾಗುವುದು ಕೂಡಾ ಅಷ್ಟೇ ಸತ್ಯ. ಕ್ಯಾನ್ಸರ್ ಅನ್ನೋ ಕಾಯಿಲೆ ಕೇವಲ ಬೀಡಿ ಸಿಗರೇಟ್ ಸೇದುವವರಿಗೆ ಮಾತ್ರ ಅಪಾಯಕಾರಿ ಅಲ್ಲ. ಆರೋಗ್ಯಕರ ಜೀವನ ಶೈಲಿ ಮಾಡುವವರೂ ಕೂಡಾ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಗೆ ಬಲಿಯಾದ ಉದಾಹರಣೆಗಳು ನಮ್ಮ ಮುಂದಿವೆ. ಅಂತಹ ಘಟನೆಗಳು ಮನುಷ್ಯನಿಗೆ ಕ್ಯಾನ್ಸರ್ ಹೇಗೆ ಬರುತ್ತದೆ ಅನ್ನೋ ಪ್ರಶ್ನೆಗಳನ್ನೂ ಮೂಡಿಸುತ್ತದೆ. ಆದರೆ ಅಂತಹ ಪ್ರಶ್ನೆಗಳಿಗೆ ಉತ್ತರ ಸಿಗುವಂತಹ ಅಪರೂಪದ ವೈದ್ಯಕೀಯ ಘಟನೆಯೊಂದು ವರದಿಯಾಗಿದೆ.
ಇದನ್ನೂ ಓದಿ: ಇ-ಸಿಗರೇಟ್ ನಿಂದಲೂ ಆರೋಗ್ಯಕ್ಕೆ ಕಂಟಕ ತಪ್ಪಿದ್ದಲ್ಲ.. ಎಚ್ಚರ!
ಒಂದು ಕಡೆ ಮನುಷ್ಯನ ಕೆಲ ಜೀವನ ಶೈಲಿಯಿಂದ ಈ ಕಾಯಿಲೆ ಬಂದರೆ ಇನ್ನೊಂದು ಕಡೆ ಇದೂ ಮನುಷ್ಯ ದೇಹದಲ್ಲಿ ನಡೆಯುವ ಕೆಲವೊಂದು DNA ರೂಪಾಂತರದಿಂದಲೂ ಬರುತ್ತದೆ ಎಂದೂ ಈ ಹಿಂದಿನ ಕೆಲ ಅಧ್ಯಯನಗಳಿಂದ ತಿಳಿದು ಬಂದಿತ್ತು. ಈ DNA ರೂಪಾಂತರ ದೇಹದ ಒಳಗೆ ನಮಗೆ ಅಂದಾಜಿಸಲಾಗದಂತೆ ನಡೆಯುವ ಪ್ರಕ್ರಿಯೆಯಾಗಿರೋದ್ರಿಂದ ಇದರಿಂದ ತಪ್ಪಿಸಿಕೊಳ್ಳೋದು ಮಾತ್ರ ಸಾಧ್ಯವಿಲ್ಲ. ಆದರೆ ಇಲ್ಲೊಬ್ಬರು ಮಹಿಳೆ, ತನ್ನ ದೇಹದಲ್ಲಿ ನಡೆದ ಒಂದು ನಿರ್ದಿಷ್ಟ DNA ರೂಪಾಂತರದಿಂದ 12 ಬಾರಿ ಕ್ಯಾನ್ಸರ್ ನ್ನ ಎದುರಿಸಿದ್ದಳು. ಮತ್ತು ಅದರ ವಿರುದ್ಧ ಹೋರಾಡಿ ಗೆದ್ದಿದ್ದಳು.
ಸ್ಪಾನಿಶ್ ನ್ಯೂಸ್ ಪೇಪರ್ ನ ಈ ಒಂದು ವರದಿಯ ಪ್ರಕಾರ, 36 ವಯಸ್ಸಿನ ಮಹಿಳೆಯೊಬ್ಬರು, ಎರಡು ವರ್ಷವಿದ್ದಾಗಲೇ ಕ್ಯಾನ್ಸರ್ ಕಾಯಿಲೆಯನ್ನ ಎದುರಿಸಬೇಕಾಗಿ ಬಂತು. ಇದಾದ ನಂತರ 15 ನೇ ವರ್ಷದಲ್ಲಿ ಆಕೆ ಮತ್ತೊಮ್ಮೆ ಗರ್ಭಕೋಶದ ಕ್ಯಾನ್ಸರ್ ಗೆ ತುತ್ತಾಗಬೇಕಾಯಿತು. ಮತ್ತೆ ಆಕೆ 20 ವರ್ಷವಾದಾಗ ಮತ್ತೊಮ್ಮೆ ಲಾಲಗ್ರಂಥಿ ಟ್ಯೂಮರ್ ಗೆ ಒಳಗಾಗುತ್ತಾಳೆ. ಹೀಗೆ ಆಕೆಯ ಜೀವನದ 36 ವರುಷದಲ್ಲಿ 12 ಬಾರಿ ಕ್ಯಾನ್ಸರ್ ಗೇ ತುತ್ತಾಗುತ್ತಾಳೆ. ಹಾಗಾಗಿ ಈ ಅಪರೂಪದ ಘಟನೆಯಿಂದ ಅಚ್ಚರಿಗೊಂಡ ಸ್ಪಾನಿಶ್ ಕ್ಯಾನ್ಸರ್ ರಿಸರ್ಚ್ ಸೆಂಟರ್ ನಿಂದ ಇದರ ಬಗ್ಗೆ ಕೇಸ್ ಸ್ಟಡಿ ನಡೆಯುತ್ತದೆ. ಆಗ ಗೊತ್ತಾಗಿದ್ದೇ ಆಕೆಯ ದೇಹದಲ್ಲಿ ನಡೆದ ಒಂದು ವಿಚಿತ್ರ DNA ರೂಪಾಂತರ. ಹೌದೂ ಆಕೆಯ ದೇಹದಲ್ಲಿ ಇದ್ದ MAD1L1 ಎಂಬ ಒಂದು ಜೀನ್ ನಲ್ಲಿ ನಡೆದ ರೂಪಾಂತರ ಆಕೆಯನ್ನ ಅಷ್ಟೊಂದು ಬಾರಿ ಕ್ಯಾನ್ಸರ್ ನಿಂದ ಕಂಗೆಡಿಸುತ್ತದೆ.
ಅಲ್ಲಿವರೆಗೂ ಅಂತಹ ಒಂದು DNA ರೂಪಾಂತರ ಮನುಷ್ಯನ ದೇಹದಲ್ಲಿ ಆಗೋದು ವೈದ್ಯಕೀಯ ಇತಿಹಾಸದಲ್ಲಿ ನೋಡಿರಲಿಲ್ಲವಂತೆ. ಆದರೆ ಇನ್ನೊಂದು ಅಚ್ಚರಿಯ ವಿಷಯವೇನಂದರೆ ಆಕೆಯ ದೇಹದಲ್ಲಿ ಉತ್ಪತ್ತಿಯಾದ ಅಗಾಧವಾದ ರೋಗ ನಿರೋಧಕ ಶಕ್ತಿಯೇ ಆಕೆಯನ್ನ 12 ಬಾರಿ ಕ್ಯಾನ್ಸರ್ ನಿಂದ ಗೆಲ್ಲಿಸಿರೋದು. ಹಾಗೇ ಆ ರೋಗ ನಿರೋಧಕ ಶಕ್ತಿ ಹೆಚ್ಚಾಗಲೂ ಇದೇ ಒಂದು ನಿರ್ದಿಷ್ಟ DNA ರೂಪಾಂತರ ಕಾರಣವಂತೆ. ಆಕೆಯ ಆನುವಂಶಿಕ ದೋಷವೇ ಆಕೆಯನ್ನ ಕಾಪಾಡುತ್ತಾ ಇರೋದು ಅನ್ನೋದು ವೈದ್ಯ ತಂಡದ ಅಭಿಪ್ರಾಯವಾಗಿದೆ. ಸದ್ಯ ಆಕೆ ಎಲ್ಲರಂತೆ ಸಾಮಾನ್ಯ ಜೀವನ ನಡೆಸುತ್ತಾ ಇದ್ದಾಳೆ ಅನ್ನೋದು ಸ್ಪಾನಿಶ್ ನ್ಯೂಸ್ ಪೇಪರ್ ನಲ್ಲಿ ವರದಿಯಾಗಿದೆ.