ಪ್ರಜ್ವಲ್ ರೇವಣ್ಣ ವಿಚಾರಣೆಗೆ ಹಾಜರಾಗದಿದ್ದರೆ ಅರೆಸ್ಟ್! – ಗೃಹಸಚಿವ ಖಡಕ್ ವಾರ್ನಿಂಗ್
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಕೇಸ್ ದೇಶದಾದ್ಯಂತ ಹಲ್ಚಲ್ ಸೃಷ್ಟಿಸಿದೆ. ಕ್ಷಣ ಕ್ಷಣಕ್ಕೂ ಹೊಸ ಹೊಸ ಟ್ವಿಸ್ಟ್ ಸಿಗುತ್ತಿದೆ. ಒಂದ್ಕಡೆ ಪ್ರಜ್ವಲ್ ರೇವಣ್ಣ ಮಾಜಿ ಕಾರು ಡ್ರೈವರ್ ನಾಪತ್ತೆಯಾಗಿದ್ದಾರೆ. ಇನ್ನೊಂದ್ಕಡೆ ಪ್ರಜ್ವಲ್ ರೇವಣ್ಣ ವಿದೇಶದಿಂದ ಯಾವಾಗ ವಾಪಸ್ ಬರುತ್ತಾರೆ ಅನ್ನೋ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬೆನ್ನಲ್ಲೇ ಗೃಹ ಸಚಿವ ಡಾ.ಜಿ ಪರಮೇಶ್ವರ್ ಪ್ರಜ್ವಲ್ ರೇವಣ್ಣಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಪ್ರಜ್ವಲ್ ರೇವಣ್ಣ ಹಾಜರಾಗದಿದ್ದರೆ ಎಸ್ಐಟಿ ಅಧಿಕಾರಿಗಳು ಅವರಿದ್ದಲ್ಲಿಗೆ ಹೋಗಿ ಅರೆಸ್ಟ್ ಮಾಡುತ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ಆಟ.. ಬಿಜೆಪಿಗೆ ಪ್ರಾಣಸಂಕಟ – ಗೆಲ್ಲಬೇಕಿದ್ದ ಕಮಲ ಮುದುಡುತ್ತಾ?
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಈ ಪ್ರಕರಣ ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪಿದೆ. ಇದೂ ಬಹಳ ಗಂಭೀರವಾದ ವಿಷಯ. ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ತಪ್ಪಿಸಿಕೊಳ್ಳಲು ಅವಕಾಶವೇ ಇಲ್ಲ. ಪ್ರಜ್ವಲ್ ರೇವಣ್ಣ ಹಾಜರಾಗದಿದ್ದರೆ ಎಸ್ಐಟಿ ಅಧಿಕಾರಿಗಳು ಅವರಿದ್ದಲ್ಲಿಗೆ ಹೋಗಿ ಅರೆಸ್ಟ್ ಮಾಡುತ್ತಾರೆ ಎಂದು ಹೇಳಿದ್ದಾರೆ.
ಸಂತ್ರಸ್ತೆಯಿಂದ ದೂರು ಬಂದ ಕೂಡಲೇ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಸಿಐಡಿಗೆ ವಹಿಸಿ ಎಸ್ಐಟಿ ತನಿಖೆಗೆ ಕೊಟ್ಟಿದೆ. ಪ್ರಜ್ವಲ್ ರೇವಣ್ಣ ಅವರು ರಾತ್ರೋರಾತ್ರಿ ವಿದೇಶಕ್ಕೆ ಹೋಗಿದ್ದಾರೆ. ಸೆಕ್ಷನ್ 41(A) ಪ್ರಕಾರ ನೋಟಿಸ್ ನೀಡಿದ್ದು, 24 ಗಂಟೆ ಒಳಗಡೆ ವಿಚಾರಣೆಗೆ ಬರಕಾಗುತ್ತೆ. ಅವರು ಬರದೆ ಹೋದ್ರೆ ಕಾನೂನು ಪ್ರಕಾರ ಅರೆಸ್ಟ್ ಮಾಡಬೇಕಾಗುತ್ತೆ. ಪ್ರಜ್ವಲ್ ರೇವಣ್ಣಗೆ ಲುಕ್ ಔಟ್ ನೊಟೀಸ್ ಕೂಡ ಕೊಡಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಇದೇ ವೇಳೆ, ಸಂತ್ರಸ್ತ ಮಹಿಳೆಯರ ಹೇಳಿಕೆಗಳನ್ನ ರೆಕಾರ್ಡ್ ಮಾಡಲಾಗಿದೆ. ನಿನ್ನೆ ಇನ್ನೊಬ್ಬ ಮಹಿಳೆ ಕೂಡ ದೂರು ಕೊಟ್ಟಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಮಹಿಳೆಯರಿಗೆ ಸರ್ಕಾರ ರಕ್ಷಣೆ ಕೊಡುತ್ತೆ. ಇದರಲ್ಲಿ ಮಹಿಳೆಯರ ಭವಿಷ್ಯ, ಅವರು ಕುಟುಂಬಗಳ ಭವಿಷ್ಯ ಅಡಗಿದೆ. ಹೀಗಾಗಿ ಸರ್ಕಾರ ಈ ವಿಷಯವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.