ಜರ್ಮನಿಯಿಂದ ಬೆಂಗಳೂರಿಗೆ ಬರುತ್ತಾರಾ ಪ್ರಜ್ವಲ್? – ರೇವಣ್ಣ ಮನೆಯಲ್ಲಿ ಹೋಮ ಹವನ!

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ದೇಶದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಶ್ಲೀಲ ವಿಡಿಯೋ ಪ್ರಕರಣದ ನಂತರ ತಲೆಮರೆಸಿಕೊಂಡಿರುವ ಸಂಸದನನ್ನು ಬಂಧಿಸುವಂತೆ ರಾಜ್ಯದ ಹಲವು ಕಡೆಗಳಲ್ಲಿ ಒತ್ತಾಯ ಕೇಳಿಬಂದಿದೆ. ಎಸ್‌ಐಟಿ ಈ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದು, 24 ಗಂಟೆ ಒಳಗೆ ವಿಚಾರಣೆಗೆ ಹಾಜರಾಗ ಬೇಕು ಎಂದು ನೋಟಿಸ್ ನೀಡಿದೆ. ಈ ಬೆನ್ನಲ್ಲೇ ಸಂಸದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್ ವಾದಿಸಲು ವಿಶೇಷ ಅಭಿಯೋಜಕರನ್ನು ನೇಮಿಸಿದ ಸರ್ಕಾರ – ಈಶ್ವರಪ್ಪ ಪುತ್ರನಿಗೂ ಅಶ್ಲೀಲ ಸಿಡಿ ಭೀತಿ
ಎಸ್‌ಐಟಿ ವಿಚಾರಣೆಗೆ ಕರೆದರೆ ಪ್ರಜ್ವಲ್ ವಿಚಾರಣೆಗೆ ಹಾಜರಾಗುತ್ತಾರೆ ಎಂದು ಈ ಪ್ರಕರಣದ ಎ1 ಆರೋಪಿ ಹೆಚ್‌ಡಿ ರೇವಣ್ಣ ಹೇಳಿದ್ದರು. ಈ ಬೆನ್ನಲ್ಲೇ ಎಸ್‌ಐಟಿ ತಂದೆ ಮಗನಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದೆ. ಇದೀಗ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಮೇ 3 ಮಧ್ಯರಾತ್ರಿ ಬೆಂಗಳೂರಿನ ಕೆಂಪೇಗೌಡ ಏರ್‌ಫೋರ್ಟ್‌ಗೆ ಪ್ರಜ್ವಲ್ ರೇವಣ್ಣ ಆಗಮಿಸಲಿದ್ದು, ಮೇ 4ರಂದು ವಿಚಾರಣೆಗೆ ಹಾಜರಾಗುತ್ತಾರೆ ಎಂದು ಮೂಲಗಳು ಹೇಳುತ್ತಿವೆ.
ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣ ದೇಶಕ್ಕೆ ಮರಳಲು ಲುಪ್ತನಾ ಏರ್‌ಲೈನ್ಸ್ ನಲ್ಲಿ ಟಿಕೆಟ್ ಬುಕ್ ಮಾಡಿದ್ದಾರೆ. ಜರ್ಮನಿಯ ಫ್ರಾಂಕ್‌ಪರ್ಟ್‌ನಲ್ಲಿ ವಿದೇಶಿ ಪ್ರವಾಸದಲ್ಲಿರುವ ಪ್ರಜ್ವಲ್ ರೇವಣ್ಣ ತಮ್ಮ ವಕೀಲರ ಜೊತೆ ಸಂಪರ್ಕ ಸಾಧಿಸಿದ್ದು, ತಮ್ಮ ವಿರುದ್ಧ ದಾಖಲಾದ ಪ್ರಕರಣ ರದ್ದುಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನು ಪ್ರಕರಣದಲ್ಲಿ ಎ1 ಆರೋಪಿ ಸ್ಥಾನದಲ್ಲಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಸದ್ಯ ಸಂಕಷ್ಟದಿಂದ ಪಾರಾಗಲು ದೇವರ ಮೊರೆ ಹೋಗಿದ್ದಾರೆ. ಹೊಳೆನರಸೀಪುರದ ತಮ್ಮ ಮನೆಯಲ್ಲಿ ಅಗ್ನಿಕುಂಡ ನಿರ್ಮಿಸಿ ಮನೆದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬುಧವಾರ ಬೆಳ್ಳಂ ಬೆಳಗ್ಗೆಯೇ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಮಾಜಿ ಸಚಿವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಎಲ್ಲ ಸಂಕಷ್ಟಗಳು ದೂರವಾಗಲೆಂದು ಮೆನಯಲ್ಲೇ ಅಗ್ನಿಕುಂಡ ನಿರ್ಮಿಸಿ ಹೋಮ ನೆರವೇರಿಸಿದ್ದಾರೆ. ನಂತರ ಬೆಂಗಳೂರಿಗೆ ತೆರಳಿದ್ದಾರೆ.