ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಗೆ ಜನಬಲ ಸಿಗಬಹುದು..? – ಎಲ್ಲೆಲ್ಲಿ ನೇರಾನೇರ ಪೈಪೋಟಿ ಇದೆ..?
ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬವಾದ ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಮುಗಿದಿದೆ. 14 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ. ಬೆಂಗಳೂರಿನ ನಾಲ್ಕು ಕ್ಷೇತ್ರ ಜತೆಗೆ ಮಂಡ್ಯ, ಮೈಸೂರು, ತುಮಕೂರಿನಲ್ಲಿ ವೋಟಿಂಗ್ ನಡೆದಿದೆ. ಹಾಗೇನೆ ಹಾಸನ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು, ಚಿತ್ರದುರ್ಗ ಹೀಗೆ ಒಟ್ಟು 14 ಕ್ಷೇತ್ರಗಳಲ್ಲಿ ಮತದಾನವಾಗಿದೆ. ಕಾಂಗ್ರೆಸ್ನ 14, ಬಿಜೆಪಿಯ 11, ಜೆಡಿಎಸ್ನ ಮೂವರು ಸೇರಿದಂತೆ ಒಟ್ಟು 247 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದೆ. 14 ಕ್ಷೇತ್ರಗಳ ಪೈಕಿ ಹಲವು ಕ್ಷೇತ್ರಗಳಲ್ಲಿ ನೆಕ್ ಟು ನೆಕ್ ಫೈಟ್ ಇದೆ. ಹಾಗಾದ್ರೆ ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಗೆ ಜನಬಲ ಸಿಗಬಹುದು..? ಎಲ್ಲೆಲ್ಲಿ ನೇರಾನೇರ ಪೈಪೋಟಿ ಇದೆ..? ಚುನಾವಣೋತ್ತರ ಸಮೀಕ್ಷೆ ಏನೇಳುತ್ತೆ ಅನ್ನೋದರ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಸೌಜನ್ಯಗೆ ಸಿಗುತ್ತಾ ನ್ಯಾಯ.. – NOTAಗೆ ಬಿದ್ದ ಮತಗಳೆಷ್ಟು?
14 ಕ್ಷೇತ್ರಗಳ ಪೈಕಿ ಮಂಡ್ಯ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಮೈಸೂರು ಕೊಡಗು ಕ್ಷೇತ್ರಗಳಲ್ಲಿ ತೀವ್ರ ಜಿದ್ದಾಜಿದ್ದಿ ಇದೆ. ಮಂಡ್ಯದಿಂದ ಮೈತ್ರಿ ಅಭ್ಯರ್ಥಿಯಾಗಿ ಹೆಚ್ಡಿ ಕುಮಾರಸ್ವಾಮಿಯೇ ಕಣದಲ್ಲಿದ್ದು ಸ್ಟಾರ್ ಚಂದ್ರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಕುಮಾರಣ್ಣನನ್ನ ಸೋಲಿಸೋಕೆ ಕಾಂಗ್ರೆಸ್ ಸಕಲ ಕಸರತ್ತು ನಡೆಸಿದೆ. ಮೇಲ್ನೋಟಕ್ಕೆ ಹೆಚ್ಡಿಕೆ ಪರ ಒಲವಿದೆ ಅನ್ನಿಸಿದ್ರೂ ಒಳೇಟು ಬೀಳೋ ಸಾಧ್ಯತೆಯೂ ಇದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಹಾಗೂ ಮೈತ್ರಿ ಅಭ್ಯರ್ಥಿ ಡಾ.ಸಿಎನ್ ಮಂಜುನಾಥ್ ಕಣಕ್ಕಿಳಿದಿದ್ದಾರೆ. ಡಿ.ಕೆ ಸುರೇಶ್ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ತಮ್ಮದೇ ಆದ ಹಿಡಿತವನ್ನು ಹೊಂದಿದ್ರೆ ಮಂಜುನಾಥ್ಗೆ ಒಳ್ಳೆಯ ಹೆಸರಿದ್ದು, ತಮ್ಮದೇ ಆದ ಮತಬ್ಯಾಂಕ್ ಅನ್ನು ಹೊಂದಿದ್ದಾರೆ. ಹೀಗಾಗಿ ಇಬ್ಬರ ನಡುವೆ ಪ್ರಬಲ ಪೈಪೋಟಿ ಇದೆ. ಬೆಂಗಳೂರು ಉತ್ತರಕ್ಕೆ ವಲಸೆ ಬಂದಿರೋ ಶೋಭಾ ಕರಂದ್ಲಾಜೆಗೆ ಅದೃಷ್ಟ ಕೈ ಹಿಡಿಯುತ್ತಾ ಅನ್ನೋ ಪ್ರಶ್ನೆ ಇದೆ. ಹಾಗೇ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜೀವ್ ಗೌಡ ಹೊಸ ಮುಖ ಆಗಿರೋದ್ರಿಂದ ಗೆಲುವು ಕೂಡ ಸುಲಭವಾಗಿಲ್ಲ. ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್ ಸೌಮ್ಯಾ ರೆಡ್ಡಿಗೆ ಟಿಕೆಟ್ ನೀಡಿದ್ದರೆ ಬಿಜೆಪಿ ತೇಜಸ್ವಿ ಸೂರ್ಯಗೆ ಟಿಕೆಟ್ ನೀಡಿದೆ. ಸೌಮ್ಯಾ ರೆಡ್ಡಿ ಹಾಗೂ ತೇಜಸ್ವಿ ಸೂರ್ಯ ನಡುವೆ ಜಿದ್ದಿನ ಪ್ರಚಾರ ನಡೆದಿದೆ. ಈ ಕ್ಷೇತ್ರ ಕೂಡ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಎಂ ಲಕ್ಷ್ಮಣ್ ಕಣದಲ್ಲಿದ್ದಾರೆ. ಮೈಸೂರು ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಆದ್ರೆ ಮತದಾರರು ಯಾರಿಗೆ ಮಣೆ ಹಾಕಿದ್ದಾರೆ ಅನ್ನೋದೇ ತೀವ್ರ ಕುತೂಹಲ ಕೆರಳಿಸಿದೆ.
ಮತ್ತೊಂದೆಡೆ ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿರೋದು ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಹೊಡೆತ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗೇ ಮೈತ್ರಿ ನಾಯಕರ ನಡುವಿನ ಮುನಿಸು ಕಾಂಗ್ರೆಸ್ಗೆ ವರವಾಗಬಹುದು ಅನ್ನೋ ಲೆಕ್ಕಾಚಾರವೂ ಇದೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಜಯಪ್ರಕಾಶ್ ಹೆಗ್ಡೆ ಬಿಜೆಪಿಯಿಂದ ಕೋಟ ಶ್ರೀನಿವಾಸ್ ಪೂಜಾರಿ ಕಣದಲ್ಲಿದ್ದಾರೆ. ಇಬ್ಬರೂ ಸಜ್ಜನ ರಾಜಕಾರಣಿಗಳೇ ಆಗಿದ್ದು, ನೇರಾನೇರ ಫೈಟ್ ಇದೆ. ಹಾಸನದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಒಲವಿದ್ರೂ ಕೊನೇ ಕ್ಷಣದ ಕೆಲ ಬೆಳವಣಿಗೆಗಳು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ಗೆ ವರದಾನವಾಗಬಹುದು. ದಕ್ಷಿಣ ಕನ್ನಡದಲ್ಲಿ ಪದ್ಮರಾಜ್ ಮತ್ತು ಕ್ಯಾಪ್ಟನ್ ಬ್ರಿಜೇಶ್ ಚೌಟ ನಡುವೆ ಪೈಪೋಟಿ ಇದ್ರೂ ಸೌಜನ್ಯ ಪರ ನೋಟಾ ಅಭಿಯಾನ ನಡೆದಿರೋದು ಕುತೂಹ ಮೂಡಿಸಿದೆ. ಚಿತ್ರದುರ್ಗದಿಂದ ಕಾಂಗ್ರೆಸ್ನಿಂದ ಚಂದ್ರಪ್ಪ ಬಿಜೆಪಿಯಿಂದ ಗೋವಿಂದ ಕಾರಜೋಳ ಇದ್ದು, ಯಾರಿಗೆ ಜನಬಲ ಅನ್ನೋದೇ ಪ್ರಶ್ನೆಯಾಗಿದೆ. ಚಾಮರಾಜನಗರದಲ್ಲೂ ಸುನೀಲ್ ಬೋಸ್ ಮತ್ತು ಬಾಲರಾಜ್ ನಡುವೆ ಫೈಪೋಟಿ ಮೂಡಿಸಿದೆ. ಬೆಂಗಳೂರು ಕೇಂದ್ರದಲ್ಲಿ ಸಂಸದ ಪಿ.ಸಿ ಮೋಹನ್ ಎದುರು ಕಾಂಗ್ರೆಸ್ನ ಮನಸೂರ್ ಅಲಿಖಾನ್ ಗೆಲ್ಲೋದು ಕಷ್ಟವಿದೆ. ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ಸ್ಟ್ರಾಂಗ್ ಇದ್ರೂ ಗ್ಯಾರಂಟಿ ಯೋಜನೆಗಳು ರಕ್ಷಾ ರಾಮಯ್ಯ ಕೈ ಹಿಡಿಯೋ ನಿರೀಕ್ಷೆ ಇದೆ. ಇನ್ನು ಕೋಲಾರದಲ್ಲಿ ಕೆ.ವಿ.ಗೌತಮ್ ಮತ್ತು ಮಲ್ಲೇಶ್ ಬಾಬು ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ.
ಸದ್ಯ ಕರ್ನಾಟಕದಲ್ಲಿ 14 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಒಟ್ಟಿನಲ್ಲಿ ಕೆಲ ಕ್ಷೇತ್ರಗಳು ಭಾರೀ ಕುತೂಹಲವನ್ನು ಹುಟ್ಟುಹಾಕಿದ್ದು ಯಾರನ್ನು ಮತದಾರರು ಕೈ ಹಿಡಿಯುತ್ತಾರೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಜೂನ್ ನಾಲ್ಕರಂದು ಇದಕ್ಕೆಲ್ಲಾ ಉತ್ತರ ಸಿಗಲಿದೆ.