ಕಾಲೆಳೆದ ಕಮಿನ್ಸ್ ಗೆ ಪಾಠ ಕಲಿಸಿದ ಕೊಹ್ಲಿ – ಕಾವ್ಯಾ ಟ್ರೋಲ್
ಫೈನಲಿ ಆರ್ಸಿಬಿ ಫ್ಯಾನ್ಸ್ ಹ್ಯಾಪಿಯಾಗಿದ್ದಾರೆ. ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದೇವೆ ಎನ್ನುತ್ತಿದ್ದ ಹೈದ್ರಾಬಾದ್ ಆಟಗಾರರನ್ನ ಅವರದ್ದೇ ನೆಲದಲ್ಲಿ ಬೆಂಗಳೂರು ಬೌಲರ್ಸ್ ಬಗ್ಗು ಬಡಿದಿದ್ದಾರೆ. ಅದ್ರಲ್ಲೂ ಆರ್ಸಿಬಿ ವಿರುದ್ಧದ ಕಳೆದ ಮ್ಯಾಚ್ನಲ್ಲಿ ಐತಿಹಾಸಿಕ ರನ್ ಹೊಡೆದಾಗ ನಾನೂ ಬಾಟರ್ ಆಗ್ಬೇಕಿತ್ತು ಎಂದು ಕಿಚಾಯಿಸಿದ್ದ ಪ್ಯಾಟ್ ಕಮಿನ್ಸ್ಗೆ ಸೋಲಿನ ಆಘಾತ ನೀಡಿ ಸೇಡು ತೀರಿಸಿಕೊಂಡಿದ್ದಾರೆ. ಮತ್ತೊಂದೆಡೆ ಗ್ರೌಂಡ್ನಲ್ಲಿ ಇಷ್ಟು ದಿನ ಸಿಟ್ಟು, ಬೇಸರ, ಹತಾಶೆಯಿಂದಲೇ ಕಾಣಿಸಿಕೊಳ್ತಿದ್ದ ವಿರಾಟ್ ಕೊಹ್ಲಿ ಮನ ಬಿಚ್ಚಿ ನಕ್ಕಿದ್ದಾರೆ. ಎಸ್ಆರ್ಹೆಚ್ ಮತ್ತು ಆರ್ಸಿಬಿ ನಡುವಿನ ಗುರುವಾರದ ಪಂದ್ಯದ ಬಗೆಗಿನ ರೋಚಕ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: RCB ವಿರುದ್ಧ ಸೋತ ಸಿಟ್ಟಲ್ಲಿ ಕಮಿನ್ಸ್ ಸಿಡಿಮಿಡಿ – SRH ತಂಡದ ಓನರ್ ಕಾವ್ಯ ಮಾರನ್ ನೋವಿಗೂ ಕೊನೆಯಿಲ್ಲ..!
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಗುರುವಾರದ ಮ್ಯಾಚ್ ಭಾರೀ ಕುತೂಹಲ ಮೂಡಿಸಿತ್ತು. ಟೂರ್ನಿಯಲ್ಲಿ 3 ಬಾರಿ 250 ಪ್ಲಸ್ ರನ್ ಹೊಡೆದಿದ್ದ ಹೈದ್ರಾಬಾದ್ ಆಟಗಾರರು ನಾವು ಆರ್ಸಿಬಿ ವಿರುದ್ಧ 300 ರನ್ ಹೊಡೆಯುತ್ತೇವೆ ಅಂತಾ ಬಿಲ್ಡಪ್ ಕೊಟ್ಟಿದ್ರು. ಅದ್ರಲ್ಲೂ ಕಳೆದ ಬಾರಿ ಆರ್ಸಿಬಿ ವಿರುದ್ಧ 287 ರನ್ ಸಿಡಿಸಿ ದಾಖಲೆ ಬರೆದಿದ್ದ ಹೈದ್ರಾಬಾದ್ ಈ ಸಲ ಅದನ್ನೂ ಬ್ರೇಕ್ ಮಾಡ್ತೇವೆ ಅನ್ನೋ ಓವರ್ ಕಾನ್ಫಿಡೆನ್ಸ್ನಲ್ಲಿದ್ರು. ಆದ್ರೆ ಪ್ರತಿಷ್ಠೆಯ ಕದನದಲ್ಲಿ ಆರ್ಸಿಬಿ ಪ್ಲೇಯರ್ಸ್ ಬಲಿಷ್ಠ ಹೈದ್ರಾಬಾದ್ ಆಟಗಾರರ ಸದ್ದಡಗಿಸಿದ್ದಾರೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆರ್ಸಿಬಿ 20 ಓವರ್‌ಗಳಲ್ಲಿ 206 ರನ್ ಗಳಿಸಿತು. ಆರ್ಸಿಬಿ ಪರ ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿಸ್ ಜೋಡಿ ಒಳ್ಳೆಯ ಇನ್ನಿಂಗ್ ಶುರು ಮಾಡಿದ್ರು. ಆದ್ರೆ ಫಾಫ್ 12 ಬಾಲ್ಗಳಲ್ಲಿ 25 ರನ್ ಗಳಿಸಿದ್ದಾಗಲೇ ನಟರಾಜನ್ಗೆ ವಿಕೆಟ್ ಒಪ್ಪಿಸಿದ್ರು. ಬಳಿಕ ಬಂದ ವಿಲ್ ಜಾಕ್ಸ್ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲೇ ಇಲ್ಲ. 9 ಬಾಲ್ಗೆ 6 ರನ್ ಗಳಿಸಿದ್ದಾಗಲೇ ಮಾರ್ಕಂಡೆ ಕ್ಲೀನ್ ಬೌಲ್ಡ್ ಮಾಡಿದ್ರು. ಈ ವೇಳೆ ಒತ್ತಡಕ್ಕೆ ಸಿಲುಕಿದ್ದ ಆರ್ಸಿಬಿಗೆ ರಜತ್ ಪಟೀದಾರ್ ಆಸರೆಯಾದ್ರು. ಬಳಿಕ ಕೊಹ್ಲಿ ಹಾಗೂ ಪಟೀದಾರ್ ಅರ್ಧ ಶತಕದ ಮೂಲಕ ತಂಡಕ್ಕೆ ನೆರವಾದ್ರು. ಕೊಹ್ಲಿ 43 ಎಸೆತಗಳಲ್ಲಿ 51 ರನ್ ಗಳಿಸಿದ್ರೆ ಪಟೀದಾರ್ ಕೇವಲ 20 ಎಸೆತಗಳಲ್ಲಿ ಭರ್ಜರಿ 5 ಸಿಕ್ಸ್ ಮತ್ತು 2 ಫೋರ್ಗಳ ಮೂಲಕ 50 ರನ್ ಸಿಡಿಸಿದ್ರು. ಕ್ಯಾಮರೂನ್ ಗ್ರೀನ್ 20 ಎಸೆತಗಳಲ್ಲಿ 37 ರನ್ ಬಾರಿಸಿದ್ರೆ ಲೊಮ್ರೊರ್ 7, ದಿನೇಶ್ ಕಾರ್ತಿಕ್ 11, ಸ್ವಪ್ನಿಲ್ ಸಿಂಗ್ 12 ರನ್ ಗಳಿಸಿದ್ರು. ಒಟ್ಟಾರೆ 7 ವಿಕೆಟ್ ನಷ್ಟಕ್ಕೆ 206 ರನ್ಗಳನ್ನ ಕಲೆ ಹಾಕಿದ್ರು. 206 ರನ್ ಸ್ಪರ್ಧಾತ್ಮಕ ಸ್ಕೋರ್ ಆಗಿದ್ರೂ ಹೈದ್ರಾಬಾದ್ನಂಥ ತಂಡಕ್ಕೆ ಆರ್ಸಿಬಿ ಕೊಟ್ಟಿರೋ 207 ರನ್ಗಳ ಟಾರ್ಗೆಟ್ ಅದ್ಯಾವ ಲೆಕ್ಕ.. ಟ್ರಾವಿಸ್ ಹೆಡ್ ಮತ್ತೆ ಅಭಿಷೇಕ್ ಇಬ್ರೇ 15 ಓವರ್‌ಗಳಲ್ಲಿ ಅಷ್ಟೂ ರನ್ ಹೊಡೀತಾರೆ ಅಂತಾನೇ ಎಲ್ರೂ ಅನ್ಕೊಂಡಿದ್ರು. ಆದ್ರೆ ಫಾರ್ ದಿ ಫಸ್ಟ್ ಟೈಂ ಆರ್ಸಿಬಿ ಬೌಲರ್ಸ್ ಹೈದ್ರಾಬಾದಿಗಳನ್ನ ಬೆಂಡೆತ್ತಿದ್ರು.
ಸ್ಫೋಟಕ ಆರಂಭಿಕ ಬ್ಯಾಟ್ಸ್ಮನ್ ಟ್ರಾವಿಸ್ ಹೆಡ್ ಜಸ್ಟ್ 1 ರನ್ ಗಳಿಸಿ ಪೆವಿಲಿಯನ್ ಸೇರಿದ್ರು. ವಿಲ್ ಜಾಕ್ಸ್ ಬೌಲಿಂಗ್ಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದ್ರು. ಬಳಿಕ ಬಂದ ಏಡೆನ್ ಮಾರ್ಕ್ರಾಮ್ ಕೂಡ 7 ರನ್‌ಗಳಿಸಿ ಸ್ವಪ್ನಿಲ್ ಸಿಂಗ್ ಎಲ್ಬಿಡಬ್ಲ್ಯೂ ದಾಳಿಗೆ ಔಟಾದ್ರು. ಅಭಿಷೇಕ್ ಶರ್ಮಾ ಮತ್ತು ಪ್ಯಾಟ್ ಕಮಿನ್ಸ್ ತಲಾ 31 ಮತ್ತು ಶಹಬಾಜ್ ಅಹ್ಮದ್ ಔಟಾಗದೆ 40 ರನ್ ಗಳಿಸುವ ಮೂಲಕ ಗೆಲುವಿಗಾಗಿ ಹೋರಾಟ ನೀಡಿದರು. ನಿತೀಶ್ ಕುಮಾರ್ ರೆಡ್ಡಿ 13 ರನ್, ಹೆನ್ರಿಚ್ ಕ್ಲಾಸಿನ್ 7 ರನ್, ಅಬ್ದುಲ್ ಸಮೀದ್ 10 ರನ್, ಭುವನೇಶ್ವರ್ ಕುಮಾರ್ 13 ರನ್ ಗಳಿಸಲಷ್ಟೇ ಸಾಧ್ಯವಾಯ್ತು. ಈ ಮೂಲಕ ಆರ್ಸಿಬಿ ಬೌಲರ್ಗಳ ದಾಳಿಗೆ ತುತ್ತಾದ ಎಸ್ಆರ್ಹೆಚ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದೊಂದಿದೆ 171 ರನ್ ಕಲೆ ಹಾಕಿ ಪಂದ್ಯವನ್ನ ಕೈ ಚೆಲ್ಲಿತು. ಬೆಂಗಳೂರು ಪಂದ್ಯವನ್ನು 35 ರನ್‌ಗಳಿಂದ ಆರ್ಸಿಬಿ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾಯಿತು. ಇದರೊಂದಿಗೆ ಹಿಂದಿನ ಪಂದ್ಯದ ಸೋಲಿಗೆ ಆರ್ಸಿಬಿ ಸೇಡು ತೀರಿಸಿಕೊಂಡಿದೆ. ಆರ್ಸಿಬಿ ಪರ ವಿಲ್ ಜ್ಯಾಕ್ಸ್ 1 ವಿಕೆಟ್, ಯಶ್ ದಯಾಳ್ 1 ವಿಕೆಟ್, ಸ್ವಪ್ನಿಲ್ ಸಿಂಗ್ 2 ವಿಕೆಟ್, ಕರ್ಣ್ ಶರ್ಮಾ 2 ವಿಕೆಟ್, ಕ್ಯಾಮರೂನ್ ಗ್ರೀನ್ 2 ವಿಕೆಟ್ ಪಡೆಯುವ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದರು.
ಅಸಲಿಗೆ ಹೈದ್ರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಗೆಲುವಿಗೆ ಬೌಲರ್ಗಳೇ ಮೇನ್ ರೀಸನ್. ಇಷ್ಟು ದಿನ ಆರ್ಸಿಬಿ ಬೌಲಿಂಗ್ ಕಳಪೆ ಎಂದೇ ಎಲ್ಲರೂ ದೂರುತ್ತಿದ್ದರು. ಆದರೆ ನಿನ್ನೆ ಅದೇ ಬೌಲಿಂಗ್ ಯುನಿಟ್ ತಂಡಕ್ಕೆ ಗೆಲುವು ತಂದುಕೊಟ್ಟಿದೆ. ಅದರಲ್ಲಿಯೂ ಪಂದ್ಯಕ್ಕೆ ರಿಯಲ್ ಮ್ಯಾಚ್ ಟರ್ನಿಂಗ್ ಪಾಯಿಂಟ್ ಎಂದರೆ ಅದು ಮೊದಲ ಓವರ್. SRH ತಂಡದ ಆಕ್ರಮಣಕಾರಿ ಬ್ಯಾಟರ್ ಟ್ರಾವಿಸ್ ಹೆಡ್ ಅವರು ವಿಲ್ ಜ್ಯಾಕ್ಸ್ ಓವರ್ ನಲ್ಲಿ 1 ರನ್ ಗಳಿಸಿ ಔಟ್ ಆದರು. ಇದು ಎಸ್ಆರ್ಹೆಚ್ಗೆ ಬಿದ್ದ ಬಹುದೊಡ್ಡ ಹೊಡೆತ. ಅಲ್ಲದೇ ಮತ್ತೊಬ್ಬ ಆಕ್ರಮಣಕಾರಿ ಬ್ಯಾಟರ್ ಆಗಿದ್ದ ಅಭಿಷೇಕ್ ಶರ್ಮಾ ಅವರನ್ನು ಯಶ್ ದಯಾಳ್ 3.4ನೇ ಓವರ್ಗೆ ಪೆವೆಲಿಯನ್ ಸೇರಿಸಿದರು. ಅದ್ರಲ್ಲೂ ಹೈದರಾಬಾದ್ ತಂಡದ ಟಾಪ್ 4 ಡೇಂಜರಸ್ ಬ್ಯಾಟ್ಸ್ಮನ್ ಗಳನ್ನು ಪವರ್ ಪ್ಲೇ ಅಲ್ಲಿಯೇ ಔಟ್ ಮಾಡುವ ಮೂಲಕ ಪಂದ್ಯವನ್ನ ಆರ್ಸಿಬಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ನಿನ್ನೆಯ ಮ್ಯಾಚ್ನಲ್ಲಿ ಸ್ವಪ್ನಿಲ್ ಸಿಂಗ್ ಬಗ್ಗೆ ಹೇಳಲೇಬೇಕು. 4.2ನೇ ಓವರ್ಗೆ ಮಾರ್ಕಮ್ ಅವರನ್ನು ಹಾಗೂ ಹೆನ್ರಿಚ್ ಕ್ಲಾಸಿನ್ ಅವರನ್ನು 4.6 ಓವರ್ ನಲ್ಲಿ ಸ್ವಪ್ನಿಲ್ ಸಿಂಗ್ ಔಟ್ ಮಾಡುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದರು.
ಹೈದ್ರಾಬಾದ್ ವಿರುದ್ಧದ ಗೆಲುವಿನ ಮೂಲಕ ಆರ್ಸಿಬಿ ಪ್ಲೇಆಫ್ ಆಸೆ ಇನ್ನೂ ಜೀವಂತವಾಗಿ ಉಳಿದಿದೆ. ಆದರೆ ಈ ಆಸೆ ಜೀವಂತವಾಗಿರಬೇಕಾದರೆ ಆರ್ಸಿಬಿ ತಂಡಕ್ಕೆ ಕಠಿಣ ಸವಾಲುಗಳೂ ಇವೆ. ಈಗಾಗ್ಲೇ ನಡೆದಿರೋ 9 ಪಂದ್ಯಗಳ ಪೈಕಿ ಆರ್ಸಿಬಿ 7 ಪಂದ್ಯ ಸೋತು 2ರಲ್ಲಿ ಮಾತ್ರ ಗೆದ್ದಿದೆ. ಮುಂದಿನ 5 ಪಂದ್ಯಗಳನ್ನು ಆರ್ಸಿಬಿ ಗೆಲ್ಲಲೇಬೇಕು. ಅದೂ ಕೂಡ ಉತ್ತಮ ರನ್ರೇಟ್ ನಲ್ಲಿಯೂ ಗೆಲ್ಲಬೇಕಿದೆ. ಆಗ ಮಾತ್ರ ಪ್ಲೇಆಫ್ ತಲುಪಬಹುದು. ಇದರ ಜೊತೆಗೆ ಬೇರೆ ತಂಡಗಳ ಗೆಲುವು ಸೋಲು ಪ್ರಮುಖವಾಗಿರುತ್ತದೆ. ಅಂಕಪಟ್ಟಿಯಲ್ಲಿ ಟಾಪ್ 3 ತಂಡಗಳಾದ ರಾಜಸ್ಥಾನ್, ಕೋಲ್ಕತ್ತಾ ಮತ್ತು ಹೈದರಾಬಾದ್ ತಂಡಗಳು ಕ್ರಮವಾಗಿ 22 ಅಂಕ, 20 ಅಂಕ ಮತ್ತು 20 ಅಂಕದೊಂದಿಗೆ ಪ್ಲೇಆಫ್ ಪ್ರವೇಶಿಸಬೇಕು. ಅಂದರೆ ರಾಜಸ್ಥಾನ್ ರಾಯಲ್ಸ್ 22 ಅಂಕ ಸಂಪಾದಿಸಬೇಕು. ಅಂದರೆ ಮುಂದಿನ ಎಲ್ಲಾ ಪಂದ್ಯ ರಾಜಸ್ಥಾನ್ ಗೆಲ್ಲಬೇಕು. ಹೈದರಾಬಾದ್ ಕೂಡ ಮುಂದಿನ ಎಲ್ಲಾ ಪಂದ್ಯ ಗೆದ್ದು 20 ಅಂಕ ಪಡೆಯಬೇಕು. ಕೋಲ್ಕತ್ತಾ ಸಹ 20 ಅಂಕ ಗಳಿಸಬೇಕು. ಈ ರೀತಿ ಆದ್ರೆ ಮಾತ್ರ ಉಳಿದ ತಂಡಗಳು 14 ಅಂಕ ಗಳಿಸುತ್ತವೆ. ಆರ್ಸಿಬಿ ಸಹ ಮುಂದಿನ ಎಲ್ಲಾ ಪಂದ್ಯ ಗೆದ್ದರೆ 14 ಅಂಕ ಇರುತ್ತದೆ. ಅದ್ರಲ್ಲೂ ಮುಖ್ಯವಾಗಿ ಲಕ್ನೋ ಸೂಪರ್ ಜೈಂಟ್ಸ್ ತನ್ನ ಮುಂದಿನ 6 ಪಂದ್ಯಗಳ ಪೈಕಿ 2ರಲ್ಲಿ ಮಾತ್ರ ಗೆದ್ದು ಉಳಿದ 4 ಪಂದ್ಯ ಸೋಲಬೇಕು. ಚೆನ್ನೈ ಸೂಪರ್ ಕಿಂಗ್ಸ್ ಸಹ ತನ್ನ ಮುಂದಿನ ಪಂದ್ಯಗಳಲ್ಲಿ ಸೋತರೆ, ಬೆಂಗಳೂರು ತಂಡ ಗೆದ್ದು ರನ್ರೇಟ್ ಸುಧಾರಿಸಿಕೊಂಡರೆ 14 ಅಂಕಗಳ ಜೊತೆ ರನ್ ರೇಟ್ ಆಧಾರದ ಮೇಲೆ ನೇರವಾಗಿ 4ನೇ ಸ್ಥಾನದಿಂದ ಪ್ಲೇಆಫ್ ಪ್ರವೇಶಿಸುತ್ತದೆ. ಆದ್ರೆ ಇದು ಸಾಧ್ಯವಾಗಬೇಕಾದ್ರೆ ಪವಾಡ ನಡೀಬೇಕು ಅಷ್ಟೇ.. ಇನ್ನು ನಿನ್ನೆಯ ಪಂದ್ಯದಲ್ಲಿ ಮತ್ತೊಂದಷ್ಟು ಇಂಟ್ರೆಸ್ಟಿಂಗ್ ಸಂಗತಿಗಳು ನಡೆದವು. ಬಲಿಷ್ಠ ತಂಡವಾಗಿದ್ದ ಹೈದರಾಬಾದ್ ತಂಡದ ಒಂದೊಂದೇ ವಿಕೆಟ್ಗಳು ಬೀಳುತ್ತಾ ಹೋದಂತೆ ಇಡೀ ಮೈದಾನ ಸೈಲೆಂಟ್ ಆಗಿತ್ತು. ವಿರಾಟ್ ಕೊಹ್ಲಿ ಮುಖದಲ್ಲಿ ನಗು ರಾರಾಜಿಸುತ್ತಿತ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೆಡ್, ಕ್ಲಾಸೆನ್ರಂಥ ಸ್ಟಾರ್ ಆಟಗಾರರು ಔಟ್ ಆಗುತ್ತಿದ್ದಂತೆ ಎಸ್ಆರ್ಎಚ್ನ ಸಿಇಒ ಕಾವ್ಯಾ ಮಾರನ್ ಮುಖ ಸಪ್ಪೆಯಾಗಿತ್ತು. ಈ ಫೋಟೋಗಳು ಸಹ ಸಾಕಷ್ಟು ವೈರಲ್ ಆಗಿವೆ. ಒಟ್ನಲ್ಲಿ ಕಳೆದ ಮ್ಯಾಚ್ನಲ್ಲಿ ಬೆಂಗಳೂರಲ್ಲಿ ಸೋಲಿನ ಆಘಾತ ನೀಡಿದ್ದ ಹೈದ್ರಾಬಾದ್ಗೆ ನಿನ್ನೆಯ ಪಂದ್ಯದಲ್ಲಿ ಗೆಲುವಿನ ಮೂಲಕ ಆರ್ಸಿಬಿ ಸೇಡು ತೀರಿಸಿಕೊಂಡಿದೆ.