ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ – ಯಕ್ಷಗಾನ ಲೋಕದ ಗಾನ ಕೋಗಿಲೆ ಇನ್ನು ನೆನಪು ಮಾತ್ರ
ಬಡಗು ತಿಟ್ಟು ಯಕ್ಷಗಾನದ ಖ್ಯಾತ ಭಾಗವತ, ಉಭಯ ತಿಟ್ಟುಗಳಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಸುಬ್ರಹ್ಮಣ್ಯ ಧಾರೇಶ್ವರ ಅವರು ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ. ಬೆಂಗಳೂರಿನ ತಮ್ಮ ಪುತ್ರನ ಮನೆಯಲ್ಲಿದ್ದ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಬೆಳಗ್ಗೆ 4.30ರ ಸುಮಾರಿಗೆ ಇಹಲೋಕ ತ್ಯಜಿಸಿದರು.
ಇದನ್ನೂ ಓದಿ: ಕರುನಾಡಲ್ಲಿ ಅಣ್ಣಾವ್ರ ನೆನಪು – ವರನಟ ಡಾ. ರಾಜ್‌ಕುಮಾರ್ ಸಮಾಧಿಗೆ ಕುಟುಂಬಸ್ಥರಿಂದ ಪೂಜೆ ಸಲ್ಲಿಕೆ
ಯಕ್ಷಗಾನ ರಂಗ ಕಂಡ ಅತ್ಯಂತ ಪ್ರಯೋಗಶೀಲ ಭಾಗವತರಾಗಿದ್ದ ಸುಬ್ರಹ್ಮಣ್ಯ ಧಾರೇಶ್ವರ ಅಗಲಿಕೆಗೆ ಯಕ್ಷಗಾನ ಪ್ರೇಮಿಗಳಿಗೆ ಆಘಾತ ತಂದಿದೆ. ಕರಾವಳಿಯ ಗಾನ ಕೋಗಿಲೆ ಕಾಳಿಂಗ ನಾವುಡರ ನಿಧನದ ನಂತರ ಭಾಗವತಿಕೆಗೆ ಸ್ಟಾರ್ ವ್ಯಾಲ್ಯೂ ತಂದ ಭಾಗವತರಾಗಿದ್ದರು ಸುಬ್ರಹ್ಮಣ್ಯ ಧಾರೇಶ್ವರ. ತನ್ನ ಮಧುರ ಕಂಠದಿಂದ ದಶಕಗಳ ಕಾಲ ಯಕ್ಷಪ್ರೇಮಿಗಳನ್ನು ರಂಜಿಸಿದ್ದರು. ಇವರಿಗೆ ಈಗ 61 ವರ್ಷ ಪ್ರಾಯವಾಗಿತ್ತು. ಇತ್ತೀಚಿಗಿನ ಸಾಮಾಜಿಕ ಪ್ರಸಂಗದಲ್ಲಿ ಜಾಸ್ತಿ ಭಾಗವತಿಕೆ ಮಾಡದಿದ್ದರೂ, ಪುರಾಣ ಪ್ರಸಂಗಗಳಲ್ಲಿ ಧಾರೇಶ್ವರರ ಭಾಗವತಿಕೆ ಕೇಳೋದೇ ಯಕ್ಷಪ್ರೇಮಿಗಳಿಗೆ ತುಂಬಾ ಇಷ್ಟವಾಗುತ್ತಿತ್ತು.
ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. 46 ವರ್ಷಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಅವರು ಪೆರ್ಡೂರು, ಅಮೃತೇಶ್ವರಿ ಮೇಳ, ಹಿರೇಮಹಾಲಿಂಗೇಶ್ವರ ಮೇಳ, ಶಿರಸಿ ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ತಿರುಗಾಟ ನಡೆಸಿದ್ದರು. ಬಡಗು ತಿಟ್ಟಿನ ಜನಪ್ರಿಯ ಮೇಳವಾಗಿರುವ ಪೆರ್ಡೂರು ಮೇಳವೊಂದರಲ್ಲೇ 28 ವರ್ಷಗಳ ಕಾಲ ತಿರುಗಾಟ ನಡೆಸಿದ್ದರು.