ಭದ್ರಕೋಟೆಯಲ್ಲಿ ಗೆಲ್ತಾರಾ ಶೋಭಾ..? – ಪ್ರೊಫೆಸರ್ ಗೆ ಸಿಗುತ್ತಾ ಉತ್ತರ?

 ಭದ್ರಕೋಟೆಯಲ್ಲಿ ಗೆಲ್ತಾರಾ ಶೋಭಾ..? – ಪ್ರೊಫೆಸರ್ ಗೆ ಸಿಗುತ್ತಾ ಉತ್ತರ?

ಬಿಜೆಪಿಯ ಭದ್ರಕೋಟೆ ಅಂತಾನೇ ಕರೆಸಿಕೊಳ್ಳೋ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬೇರೆಯದ್ದೇ ಲೆಕ್ಕಾಚಾರ ನಡೀತಿದೆ. ಒಕ್ಕಲಿಗ ಅಭ್ಯರ್ಥಿಗಳ ನಡುವಿನ ಕದನ ಬಿಜೆಪಿ ಹಾಗೂ ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯೂ ಆಗಿದೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಹಾಲಿ ಸಂಸದೆಯಾಗಿರುವ ಶೋಭಾ ಕರಂದ್ಲಾಜೆ ಈ ಬಾರಿ ಬೆಂಗಳೂರು ಉತ್ತರಕ್ಕೆ ವಸಲೆ ಬಂದಿದ್ದು ಪಕ್ಷದಲ್ಲೇ ವಿರೋಧ ಎದುರಿಸುತ್ತಿದ್ದಾರೆ. ನೆಲೆಯೇ ಇಲ್ಲದ ಕ್ಷೇತ್ರದಲ್ಲಿ ಗೆದ್ದು ಬೀಗಲು ಹವಣಿಸುತ್ತಿರೋ ಕಾಂಗ್ರೆಸ್​​ನಿಂದ ಪ್ರೊ. ಎಂ. ವಿ. ರಾಜೀವ್ ಗೌಡ ಅಭ್ಯರ್ಥಿಯಾಗಿದ್ದು ಹಲವು ಸವಾಲುಗಳನ್ನ ಎದುರಿಸುತ್ತಿದ್ದಾರೆ.

ಇದನ್ನೂ ಓದಿ: ಮಂಡ್ಯ ಅಖಾಡದಿಂದ ಹಿಂದೆ ಸರಿದ ಸುಮಲತಾ – ಕಡೇ ಕ್ಷಣದಲ್ಲಿ ಹೆಚ್‌ಡಿಕೆ ಪರ ಪ್ರಚಾರ ಕ್ಯಾನ್ಸಲ್‌!

ಶೋಭಾ Vs ರಾಜೀವ್ ಗೌಡ

ಒಂದು ಕಾಲದಲ್ಲಿ ಕಾಂಗ್ರೆಸ್ ವಶದಲ್ಲಿದ್ದ ಬೆಂಗಳೂರು ಉತ್ತರ ಕ್ಷೇತ್ರವನ್ನ 2004ರಲ್ಲಿ ಬಿಜೆಪಿ ತನ್ನ ವಶಕ್ಕೆ ಪಡೆಯಿತು. ಕೇಂದ್ರದ ಮಾಜಿ ಸಚಿವ ಸಿ. ಕೆ. ಜಾಫರ್ ಷರೀಫ್ 7 ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.   2004ರಿಂದ ಕ್ಷೇತ್ರದಲ್ಲಿ ಬಿಜೆಪಿಯ ಹೆಚ್. ಟಿ. ಸಾಂಗ್ಲಿಯಾನ, ಡಿ. ಬಿ. ಚಂದ್ರೇಗೌಡ ಮತ್ತು ಡಿ. ವಿ. ಸದಾನಂದ ಗೌಡ ಆಯ್ಕೆಯಾಗಿದ್ದಾರೆ. ಹಾಲಿ ಸಂಸದ ಡಿ. ವಿ. ಸದಾನಂದ ಗೌಡರಿಗೆ ಟಿಕೆಟ್ ಕೈ ತಪ್ಪಿದ್ದು, ಉಡುಪಿ-ಚಿಕ್ಕಮಗಳೂರು ಬಿಟ್ಟು ಶೋಭಾ ಕರಂದ್ಲಾಜೆ ಅವರಿಗೆ ಬೆಂಗಳೂರು ಉತ್ತರದ ಟಿಕೆಟ್ ನೀಡಲಾಗಿದೆ. ಶೋಭಾ ಕರಂದ್ಲಾಜೆ ಮತ್ತು ಕಾಂಗ್ರೆಸ್‌ನ ಪ್ರೊ. ಎಂ. ವಿ. ರಾಜೀವ್ ಗೌಡ ಇಬ್ಬರೂ ಸಹ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಸದ್ಯ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ 5ರಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಉಳಿದ ಮೂರು ಕಾಂಗ್ರೆಸ್ ವಶದಲ್ಲಿದೆ. ಈ ಬಾರಿ ಬಿಜೆಪಿಗೆ ಜೆಡಿಎಸ್‌ನ ಬೆಂಬಲವೂ ಇರೋದು ಪ್ಲಸ್ ಪಾಯಿಂಟ್ ಆಗಲಿದೆ. ಇನ್ನು ರಾಜ್ಯಸಭೆಯ ಮಾಜಿ ಸದಸ್ಯರಾದ ಪ್ರೊ. ರಾಜೀವ್ ಗೌಡ ಮೊದಲ ಬಾರಿಗೆ ಲೋಕಸಭೆ ಚುನಾವಣೆ ಎದುರಿಸುತ್ತಿದ್ದಾರೆ. ಕರ್ನಾಟಕದಲ್ಲಿ ಮೋದಿ ಅಲೇಯೇ ಇಲ್ಲ ಎಂದು ರಾಜೀವ್ ಗೌಡ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ಸಹಾಯಕವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಮತ್ತೊಂದೆಡೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಕ್ಷೇತ್ರದಲ್ಲಿ ಗೋ ಬ್ಯಾಕ್ ಅಭಿಯಾನ ಎದುರಿಸಿದ್ದರು. ಆಗ ಪಕ್ಷ ಅವರನ್ನು ಬೆಂಗಳೂರು ಉತ್ತರದಿಂದ ಕಣಕ್ಕಿಳಿಸಿದೆ. ಮೊದಲು ಇಲ್ಲಿಯೂ ಅವರಿಗೆ ಟಿಕೆಟ್ ನೀಡಲು ವಿರೋಧ ವ್ಯಕ್ತವಾಗಿತ್ತು. ಈಗ ಎಲ್ಲವೂ ಸರಿ ಇದೆ ಎಂಬಂತೆ ಚುನಾವಣಾ ಪ್ರಚಾರ ಸಾಗುತ್ತಿದೆ.

ಸ್ವಾತಂತ್ರ್ಯ ಹೋರಾಟಗಾರರ ಮನೆತನ, ಪ್ರತಿಷ್ಠಿತ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ ಅನುಭವ ರಾಜೀವ್ ಗೌಡರಿಗೆ ಇದೆ. ಆದ್ರೆ ಸ್ಥಳೀಯರಾಗಿದ್ದರೂ ಮತದಾರರಿಗೆ ಅಭ್ಯರ್ಥಿಯ ಪರಿಚಯ ಇಲ್ಲದಿರುವುದು, ಹೈಪ್ರೊಫೈಲ್ ರಾಜಕಾರಣೆಯಾಗಿರುವ ಜನಸಾಮಾನ್ಯರಿಗೆ ಸಿಗುವುದಿಲ್ಲವೆಂಬ ಅಳುಕು ಸಹ ಇದೆ. ಕ್ಷೇತ್ರದಲ್ಲಿ  ಜಾತಿವಾರು ಲೆಕ್ಕಾಚಾರ ನೋಡುವುದಾದರೆ, ಒಟ್ಟು 13 ಲಕ್ಷ ಒಕ್ಕಲಿಗ ಮತದಾರರ ಮೇಲೆ ಬಿಜೆಪಿ, ಕಾಂಗ್ರೆಸ್ ಕಣ್ಣಿಟ್ಟಿದೆ. ಇದೇ ಕಾರಣಕ್ಕೆ ಅದೇ ಸಮುದಾಯದ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಿದ್ದಾರೆ. ಜೆಡಿಎಸ್ ಬೆಂಬಲದೊಂದಿಗೆ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಕ್ಷೇತ್ರದಲ್ಲಿ ನಿರಂತರ ಪ್ರಚಾರ ನಡೆಸುತ್ತಿದ್ದು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿದ ಅಭಿವೃದ್ಧಿ ಕೆಲಸಗಳು, ಈಗ ಘೋಷಣೆ ಮಾಡಿರುವ ಪ್ರಣಾಳಿಕೆ ಕುರಿತು ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜೀವ್ ಗೌಡ ಅವರು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡುತ್ತಿದ್ದಾರೆ. ಆರೋಪ, ಪ್ರತ್ಯಾರೋಪ, ಮಾತಿನ ವಾಗ್ದಾಳಿ ಹೀಗೆ, ಕ್ಷೇತ್ರದಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳಿಂದ ಪ್ರಚಾರ ಜೋರಾಗಿಯೇ ನಡೆಯುತ್ತಿದೆ. ಏಪ್ರಿಲ್ 26ರಂದು ಮತದಾನ ನಡೆಯಲಿದ್ದು, ಮತದಾರರ ಆಯ್ಕೆ ಯಾರೆಂಬುದೇ ಕುತೂಹಲ ಕೆರಳಿಸಿದೆ.

Shwetha M