ಏ. 26 ರಂದು ಮೈಸೂರಿನ ಪ್ರವಾಸಿ ತಾಣಗಳು ಬಂದ್‌ – ಕಾರಣವೇನು ಗೊತ್ತಾ?

ಏ. 26 ರಂದು ಮೈಸೂರಿನ ಪ್ರವಾಸಿ ತಾಣಗಳು ಬಂದ್‌ – ಕಾರಣವೇನು ಗೊತ್ತಾ?

ಲೋಕಸಭೆ ಚುನಾವಣೆ ಕಾವು ಜೋರಾಗಿದೆ. ಮತದಾನದ ದಿನದಂದು ಅನೇಕ ಕಚೇರಿಗಳಿಗೆ ರಜೆ ನೀಡಲಾಗಿದೆ. ಆದರೆ ಕೆಲವರು ರಜೆ ಇದೆ ಎಂದು ಮತದಾನ ಮಾಡದೇ ಪ್ರವಾಸಿ ತಾಣಗಳಿಗೆ ತೆರಳಲು ಮುಂದಾಗಿದ್ದಾರೆ. ಇದೀಗ ಮತದಾನದ ದಿನ ಮೈಸೂರಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.

ಇದನ್ನೂ ಓದಿ: ಸೌಜನ್ಯ ಹೋರಾಟಕ್ಕೆ ಸ್ಟೂಡೆಂಟ್ಸ್ ಬಲ – ನಾಯಕರಿಗೂ ತಟ್ಟುತ್ತಾ NOTA ಬಿಸಿ? 

ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಏಪ್ರಿಲ್ 26ರಂದು ಮೈಸೂರಿನ ಪ್ರವಾಸಿ ತಾಣಗಳನ್ನು ಬಂದ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಮತದಾನದ ದಿನ   ಶುಕ್ರವಾರವಾಗಿದ್ದರಿಂದ ಅಂದು ರಜೆ ಇದೆ. ಶನಿವಾರ, ಭಾನುವಾರ ಹೇಗೂ ರಜೆಯಾದ್ದರಿಂದ ಮತದಾರರು ಪ್ರವಾಸಕ್ಕೆ ಯೋಜನೆ ಹಾಕಿಕೊಂಡು ತೆರಳಿದರೆ ಮತದಾನದ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. ಹೀಗಾಗಿ ಮತದಾನದ ದಿನದಂದು ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮೈಸೂರು ಮೃಗಾಲಯ, ಕಾರಂಜಿ ಕೆರೆ ಸೇರಿದಂತೆ ಇತರ ಪ್ರವಾಸಿ ತಾಣಗಳನ್ನು ಮುಚ್ಚಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಮೈಸೂರು ಮೃಗಾಲಯ ಎಂದೇ ಜನಪ್ರಿಯವಾಗಿರುವ ಶ್ರೀ ಚಾಮರಾಜೇಂದ್ರ ಮೃಗಾಲಯ ಮತ್ತು ಕಾರಂಜಿ ಕೆರೆಯನ್ನು ಏಪ್ರಿಲ್ 26 ರಂದು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಮೈಸೂರಿನ ಆತಿಥ್ಯ ಕ್ಷೇತ್ರದ ಉದ್ದಿಮೆಗಳೂ ಮತದಾನಕ್ಕೆ ಉತ್ತೇಜನ ನೀಡುವ ಕ್ರಮಗಳನ್ನು ಕೈಗೊಂಡಿವೆ. ಮತದಾನ ಮಾಡಿ ಭೇಟಿ ನೀಡುವ ಮತದಾರರಿಗೆ ರಿಯಾಯಿತಿಗಳು ಮತ್ತು ವಿಶೇಷ ಪ್ಯಾಕೇಜ್‌ಗಳನ್ನು ನೀಡುವುದಾಗಿ ಮೈಸೂರಿನ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಘೋಷಿಸಿವೆ.

Shwetha M