ಜೈಪುರದಲ್ಲಿ ಕಿಂಗ್ ಕೊಹ್ಲಿ ಪ್ರತಿಮೆ – ಮಕ್ಕಳ ಕೋರಿಕೆಗೆ ವಿರಾಟ್ ದರ್ಶನ
ಐಪಿಎಲ್ನಲ್ಲಿ ಆರ್ ಸಿಬಿ ಗೆದ್ದರೂ ಸೋತ್ರೂ ಅಭಿಮಾನಿಗಳ ಜೋಷ್ ಮಾತ್ರ ತಗ್ಗಿಲ್ಲ.. ಅದರಲ್ಲೂ ಕಿಂಗ್ ಕೊಹ್ಲಿ ಅವರನ್ನಂತೂ ಆರ್ ಸಿ ಬಿ ಫ್ಯಾನ್ಸ್ ಆರಾಧಿಸುತ್ತಿದ್ದಾರೆ.. ಈಗ ವಿರಾಟ್ ಅಭಿಮಾನಿಗಳಿಗೆ ಮತ್ತೊಂದು ಖುಷಿಯ ಸುದ್ದಿ ಸಿಕ್ಕಿದೆ. ಭಾರತದ ಲೆಜೆಂಡ್ ಕ್ರಿಕೆಟರ್ಸ್ ಸಾಲಿನಲ್ಲಿ ಈಗ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ.
ಇದು ನಿಜಕ್ಕೂ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಖುಷಿಯ ಸಮಾಚಾರ. ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ ಸ್ಥಾಪನೆಯಾಗಿದೆ. ಕ್ರಿಕೆಟ್ ತಾರೆಯನ್ನು ಮೆಚ್ಚುವ ಅಭಿಮಾನಿಗಳು, ಯುವಕರು, ವಿಶೇಷವಾಗಿ ಮಕ್ಕಳ ಕೋರಿಕೆಯ ಮೇರೆಗೆ ವಿರಾಟ್ ಕೊಹ್ಲಿಯ ಮೇಣದ ಪ್ರತಿಮೆಯನ್ನು ಸ್ಥಾಪಿಸಲಾಗಿದೆ ಎಂದು ಜೈಪುರದ ನಹರ್ಗಢದಲ್ಲಿರುವ ವ್ಯಾಕ್ಸ್ ಮ್ಯೂಸಿಯಂ ಸಂಸ್ಥಾಪಕ ಮತ್ತು ನಿರ್ದೇಶಕ ಅನುಪ್ ಶ್ರೀವಾಸ್ತವ ಹೇಳಿದ್ದಾರೆ.
ಇದನ್ನೂ ಓದಿ: ಕೊಹ್ಲಿಗೆ RCBಯೇ ಉಸಿರು! – ಆರ್ಸಿಬಿ ಸೋಲಿನ ನೋವಲ್ಲಿ ಏಕಾಂಗಿಯಾದ್ರಾ ವಿರಾಟ್ ಕೊಹ್ಲಿ?
ಅನುಪ್ ಶ್ರೀವಾಸ್ತವ ಹೇಳೋ ಪ್ರಕಾರ ಕಳೆದ ವರ್ಷ ವಿರಾಟ್ ಕೊಹ್ಲಿ ಅವರ ಪ್ರತಿಮೆಯನ್ನು ಮಾಡಲು ಪ್ರವಾಸಿಗರಿಂದ ಮನವಿ ಬಂದಿತ್ತಂತೆ. ಅದರಲ್ಲೂ ಮಕ್ಕಳು ಮತ್ತು ಯುವಕರು ವಿರಾಟ್ ಕೊಹ್ಲಿ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ.. ವಿಶ್ವ ಕ್ರಿಕೆಟ್ನಲ್ಲಿ ಅತ್ಯುನ್ನತ ಮಟ್ಟವನ್ನು ತಲುಪಿದ ಅವರು, ಸಚಿನ್ ತೆಂಡುಲ್ಕರ್ ಮತ್ತು ಎಂಎಸ್ ಧೋನಿ ನಂತರ ನಾವು ವಿರಾಟ್ ಕೊಹ್ಲಿಯ ಮೇಣದ ಪ್ರತಿಮೆಯನ್ನು ಮಾಡಲು ನಿರ್ಧರಿಸಿದ್ದೇವು ಅಂತಾ ಹೇಳಿದ್ದಾರೆ.
ಕುಶಲಕರ್ಮಿಗಳಾದ ಗಣೇಶ್ ಮತ್ತು ಲಕ್ಷ್ಮಿ ಅವರು ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆಯನ್ನು ನಿಖರವಾಗಿ ರೂಪಿಸಲು ಸುಮಾರು 2 ತಿಂಗಳ ಕಾಲ ಒಟ್ಟಾಗಿ ಕೆಲಸ ಮಾಡಿದ್ದಾರೆ. ವಿರಾಟ್ ಕೊಹ್ಲಿ ಅವರ ಮೇಣದ ಆಕೃತಿಯನ್ನು 5.9 ಅಡಿ ಎತ್ತರ ಮತ್ತು 35 ಕೆಜಿ ತೂಕದಲ್ಲಿ ವಿನ್ಯಾಸ ಮಾಡಲಾಗಿದೆ. ಮೇಣದ ಪ್ರತಿಮೆಯಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟ್ ಕೂಡ ಇದೆ. ಮೇಣದ ಆಕೃತಿ ಮತ್ತು ಉಡುಪನ್ನು ವಿಶೇಷವಾಗಿ ಬಾಲಿವುಡ್ ಡಿಸೈನರ್ ಬೋಧ್ ಸಿಂಗ್ ವಿನ್ಯಾಸಗೊಳಿಸಿದ್ದಾರೆ.
ವಿರಾಟ್ ಕೊಹ್ಲಿ ಅವರ ಮೇಣದ ಆಕೃತಿಯು ಸುಮಾರು 300 ವರ್ಷಗಳಷ್ಟು ಹಳೆಯದಾದ ಮ್ಯೂಸಿಯಂನ ಅಮೂಲ್ಯ ಸಂಗ್ರಹಕ್ಕೆ 44 ನೇ ಸೇರ್ಪಡೆಯಾಗಿದೆ. ವಿಶ್ವ ಪರಂಪರೆಯ ದಿನವಾದ ಏಪ್ರಿಲ್ 18 ರಂದು ಜೈಪುರ ವಸ್ತುಸಂಗ್ರಹಾಲಯದಲ್ಲಿ ಮೇಣದ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.