ಪ್ರಚಾರದ ವೇಳೆ ‘ಸೆಕ್ಸ್’ ಸೋರ್ಸ್ ಆಫ್ ಎನರ್ಜಿ ಎಂದ್ರಾ ಮಹುವಾ?| ಬಿಜೆಪಿಗೆ ಶಾಕ್ ಕೊಟ್ಟ ಗುತ್ತೇದಾರ್! | ಇಂದಿನ ಪ್ರಮುಖ ಸುದ್ದಿಗಳು
ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ರಾಜಕೀಯ ನಾಯಕರ ಹೇಳಿಕೆಗಳು ಹಲ್ಚಲ್ ಸೃಷ್ಟಿಸುತ್ತಿವೆ. ಇದೀಗ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರು ವಿವಾದಕ್ಕೆ ಗುರಿಯಾಗಿದ್ದಾರೆ. ಕೃಷ್ಣನಗರದ ಚುನಾವಣಾ ಪ್ರಚಾರದ ವೇಳೆ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ವರದಿಗಾರರರೊಬ್ಬರು ನಿಮ್ಮ ಎನರ್ಜಿ ಸೀಕ್ರೆಟ್ ಏನು ಅಂತ ಕೇಳಿದ ಪ್ರಶ್ನೆಗೆ ನನ್ನ ಎನರ್ಜಿ ಸೆಕ್ಸ್ ಎಂದಿದ್ದಾರೆ ಎನ್ನಲಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ವಿವಾದಕ್ಕೆ ಗುರಿಯಾದ ಬೆನ್ನಲ್ಲೇ ಪ್ರಶ್ನೆ ಕೇಳಿದ ವರದಿಗಾರ ಸ್ಪಷ್ಟನೆ ನೀಡಿದ್ದಾರೆ. ವೈರಲ್ ಆದ ವಿಡಿಯೋ ಫೇಕ್ .. ನಿಮ್ಮ ಎನರ್ಜಿ ಏನು ಅಂತ ಕೇಳಿದ್ದಕ್ಕೆ ಅವರು ಎಗ್ಸ್ ಅಂದ್ರೆ..ಮೊಟ್ಟೆಗಳು ಅಂತಾ ಹೇಳಿದ್ದಾರೆ. ಮಹುವಾ ಆ ಪದ ಬಳಿಸಿಲ್ಲ. ವೈರಲ್ ಆದ ವಿಡಿಯೋಗೆ ನಕಲಿ ಆಡಿಯೋ ಸೇರಿಸಲಾಗಿದೆ ಅಂತ ಸ್ಪಷ್ಟನೆ ನೀಡಿದ್ದಾರೆ.
ಮೊದಲ ಹಂತದ ಚುನಾವಣೆ ಯಶಸ್ವಿ – ಹಕ್ಕು ಚಲಾಯಿಸಿದ ಸಿನಿ ತಾರೆಯರು
ಇವತ್ತು ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆದಿದೆ. 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 102 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. 102 ಕ್ಷೇತ್ರಗಳ ಒಟ್ಟು 1625 ಅಭ್ಯರ್ಥಿಗಳ ಭವಿಷ್ಯ ಇಂದು ಇವಿಎಂ ಸೇರಿದೆ. ಈ ಬಾರಿ ಲೋಕಸಭೆ ಚುನಾವಣೆ 7 ಹಂತಗಳಲ್ಲಿ ನಡೆಯುತ್ತಿದ್ದು, ಜೂನ್ 4ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಮತದಾನ ಆರಂಭವಾಗುತ್ತಿದ್ದಂತೆಯೇ ಉತ್ತರಾಖಂಡದ ವಿವಿಧ ಬೂತ್ಗಳಲ್ಲಿ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಮತದಾನ ತಡವಾಗಿ ಪ್ರಾರಂಭವಾಯ್ತು.. ಈ ಮಧ್ಯೆ ರಾಮನಗರ ಜಿಲ್ಲೆಯ ಶಿವಪುರ ಬೈಲಜುಡಿಯಲ್ಲಿ 3 ಮತಗಟ್ಟೆ ಅಧಿಕಾರಿಗಳ ಆರೋಗ್ಯ ಹಠಾತ್ ಹದಗೆಟ್ಟಿತ್ತು. ಇದಾದ ಬಳಿಕ ಅವರ ಜಾಗಕ್ಕೆ 3 ಹೊಸ ಅಧಿಕಾರಿಗಳನ್ನು ಕರೆಸಿ, ಮತದಾನ ಮುಂದುವರೆಸಲಾಯ್ತು..
ಇನ್ನು ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ಸಿನಿಮಾ ಸ್ಟಾರ್ಸ್ ಸೇರಿದಂತೆ ಗಣ್ಯರು ತಮ್ಮ ಹಕ್ಕು ಚಲಾಯಿಸಿದ್ದಾರೆ. ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ.. ಕಾಲಿವುಡ್ ಸೂಪರ್ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ವಿಜಯ್ ಸೇತುಪತಿ ಹಾಗೂ ಧನುಷ್ ಸೇರಿದಂತೆ ಸ್ಟಾರ್ ನಟರು ತಮ್ಮ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಮತದಾನ ಮಾಡಿದ್ರು.. ಛಾಯಾಗ್ರಾಹಕರು ಮತ್ತು ವೀಡಿಯೋಗ್ರಾಫರ್ಗಳಿಗೆ ಶಾಯಿ ಅಂಟಿದ ಬೆರಳನ್ನು ಪ್ರದರ್ಶಿಸಿದರು.. ಇನ್ನು ಸ್ಟಾರ್ಸ್ ಮತಗಟ್ಟೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ತಮಿಳುನಾಡಿನ ಎಲ್ಲಾ 39 ಸ್ಥಾನಗಳಿಗೆ ಇವತ್ತು ಮತದಾನ ನಡೆದಿದ್ದು, ಬಿಜೆಪಿ ಅಭ್ಯರ್ಥಿ ಅಣ್ಣಾಮಲೈ ಮತದಾನ ಮಾಡಿದ್ದಾರೆ. ಕರೂರಿನ ಉತ್ತುಪಟ್ಟಿಯಲ್ಲಿರುವ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಬಳಿಕ ಡಿಎಂಕೆ ಮತ್ತು ಎಐಎಡಿಎಂಕೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕೊಯಮತ್ತೂರಿನಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಡಿಎಂಕೆ ಮತ್ತು ಎಐಎಡಿಎಂಕೆ 1,000 ಕೋಟಿ ರೂ. ಖರ್ಚು ಮಾಡಿದೆ ಎಂದಿದ್ದಾರೆ.
ಗೃಹ ಸಚಿವ ಅಮಿತ್ ಶಾ ನಾಮಪತ್ರ ಸಲ್ಲಿಕೆ
ಗುಜರಾತ್ನ ಗಾಂಧಿನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಇವತ್ತು ನಾಮಪತ್ರ ಸಲ್ಲಿಸಿದ್ದಾರೆ. ಮಧ್ಯಾಹ್ನ 12.39ಕ್ಕೆ ಸರಿಯಾಗಿ ಗಾಂಧಿನಗರ ಜಿಲ್ಲಾಧಿಕಾರಿ ಎಂ.ಕೆ.ದಾವೆ ಅವರಿಗೆ ಅಮಿತ್ ಶಾ ನಾಮಪತ್ರ ಸಲ್ಲಿಸಿದರು. ಈ ವೇಳೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಜೊತೆಗಿದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು ಪ್ರತಿನಿಧಿಸಿದ್ದ ಗಾಂಧಿನಗರ ಕ್ಷೇತ್ರದಿಂದಲೇ ಅಮಿತ್ ಶಾ ಕಣಕ್ಕಿಳಿದಿದ್ದಾರೆ. 2019ರಲ್ಲಿ ಗಾಂಧಿನಗರ ಕ್ಷೇತ್ರದಲ್ಲಿ ಅಮಿತ್ ಶಾ 5 ಲಕ್ಷಕ್ಕೂ ಹೆಚ್ಚು ಮತಗಳ ಅಂತರದ ಗೆಲುವು ಸಾಧಿಸಿದ್ದರು. ಈ ಬಾರಿ ಅಮಿತ್ ಶಾ ವಿರುದ್ಧ ಸೋನಲ್ ಪಟೇಲ್ ಅವರನ್ನು ಕಾಂಗ್ರೆಸ್ ಅಖಾಡಕ್ಕಿಳಿಸಿದೆ.
ನಾಮಪತ್ರ ಸಲ್ಲಿಕೆ ವೇಳೆ ಶುಭ ಮುಹೂರ್ತ ಮಿಸ್ – ಬಿಜೆಪಿ ಅಭ್ಯರ್ಥಿ ಏನು ಮಾಡಿದ್ರು ಗೊತ್ತಾ?
ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಇವತ್ತು ನಡೆದಿದ್ದರೆ, ಎರಡನೇ ಹಂತದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇವತ್ತು ಮುಕ್ತಾಯವಾಗಿದೆ. ಈ ನಡುವೆಯೇ ಆಚ್ಚರಿಯ ಘಟನೆಯೊಂದು ನಡೆದಿದೆ. ನಾಮ ಪತ್ರಸಲ್ಲಿಸಲು ಶುಭ ಮುಹೂರ್ತ ಮಿಸ್ ಆಗಿದ್ದಕ್ಕೆ, ಗುಜರಾತ್ನ ನವಸಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರ್ ಪಾಟೀಲ್ ನಾಮಪತ್ರ ಸಲ್ಲಿಸದೇ ನಿನ್ನೆ ವಾಪಸ್ ತೆರಳಿದ್ರು.. ಪಾಟೀಲ್ ಅವರು ಗುರುವಾರ ಮಧ್ಯಾಹ್ನ 12.39ಕ್ಕೆ ವಿಜಯ ಮುಹೂರ್ತದಲ್ಲಿ ನಾಮಪತ್ರ ಸಲ್ಲಿಸಬೇಕಿತ್ತು. ಆದರೆ ಮೆರವಣಿಗೆಯಲ್ಲಿ ಬಂದಿದ್ದರಿಂದ ತಡವಾಯಿತೆಂದು ನಾಮಪತ್ರ ಸಲ್ಲಿಸಲು ಹಿಂಜರಿದಿದ್ದಾರೆ. ಬಿಜೆಪಿ ಅಭ್ಯರ್ಥಿಯ ಈ ನಡೆಯಿಂದ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಬೇಸರಿದಂದ ವಾಪಸ್ ತೆರಳುವಂತಾಗಿತ್ತು. ಇವತ್ತು ಪಾಟೀಲ್ ಅದೇ ಶುಭ ಮುಹೂರ್ತದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.. ವಿಜಯ ಮುಹೂರ್ತದಲ್ಲಿ ಮಧ್ಯಾಹ್ನ 12.39ಕ್ಕೆ ಸಿ ಆರ್ ಪಾಟೀಲ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.. ಈ ಮುಹೂರ್ತದಲ್ಲಿ ನಾಮಪತ್ರ ಸಲ್ಲಿಸಿದರೆ ಗೆಲುವು ಖಚಿತ ಎಂಬುದು ಅಭ್ಯರ್ಥಿಗಳ ನಂಬಿಕೆ. ಸಿ ಆರ್ ಪಾಟೀಲ್ ಕೂಡ ಇದೇ ನಂಬಿಕೆಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ..
ಬಿಜೆಪಿಗೆ ಶಾಕ್ ಕೊಟ್ಟ ಗುತ್ತೇದಾರ್!
ಎಲೆಕ್ಷನ್ ಹೊತ್ತಲ್ಲೇ ಬಿಜೆಪಿಗೆ ಮತ್ತೊಂದು ಹಿನ್ನೆಡೆ ಉಂಟಾಗಿದೆ. ಕಲ್ಯಾಣ ಕರ್ನಾಟಕದ ಭಾಗದಲ್ಲಿ ಹೆಚ್ಚು ಪ್ರಭಾವ ಹೊಂದಿರುವ ಮಾಜಿ ಸಚಿವ ಮತ್ತು ಕಲಬುರಗಿಯ ಪ್ರಭಾವಿ ನಾಯಕ ಮಾಲಿಕಯ್ಯ ಗುತ್ತೇದಾರ್ ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸೇರಿದರು. ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಮಾಲಿಕಯ್ಯ ಗುತ್ತೇದಾರ, ಬಿಜೆಪಿ ನನ್ನನ್ನು ನಡೆಸಿಕೊಂಡ ಬಗ್ಗೆ ಬಹಳ ನೋವಿದೆ. ಹಿಂದುಳಿದ ವರ್ಗದವನನ್ನು ಹೇಗೆ ನಡೆಸಿಕೊಳ್ಳುತ್ತಾರೆಂಬ ಅನುಭವ ಆಗಿದೆ ಅಂತಾ ಹೇಳಿದ್ದಾರೆ.
ಜಾಮೀನಿಗಾಗಿ ಅರವಿಂದ್ ಕೇಜ್ರಿವಾಲ್ ಮ್ಯಾಂಗೋ ಪ್ಲಾನ್!
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜೈಲು ಪಾಲಾಗಿರುವ ಸಿಎಂ ಅರವಿಂದ್ ಕೇಜ್ರಿವಾಲ್ಗೆ ಸಂಕಷ್ಟ ತಪ್ಪಿಲ್ಲ. ಶುಗರ್ ಲೆವಲ್ನಲ್ಲಿ ಭಾರೀ ವ್ಯತ್ಯಾಸ ಆಗುತ್ತಿದೆ. ಹೆಲ್ತ್ ಚೆಕಪ್ ಮಾಡಿಸಬೇಕು ಎಂದು ದೆಹಲಿ ರೋಸ್ ಅವೆನ್ಯೂ ಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿ ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗಂಭೀರ ಆರೋಪ ಮಾಡಿದ್ದಾರೆ. ಕೇಜ್ರಿವಾಲ್ ಅವರು ಜೈಲಿನಲ್ಲಿ ಮಾವಿನ ಹಣ್ಣು ತಿಂದು ಶುಗರ್ ಲೆವೆಲ್ ಜಾಸ್ತಿ ಮಾಡಿಸಿಕೊಂಡಿದ್ದಾರೆ. ರಕ್ತದ ಸಕ್ಕರೆ ಅಂಶ ಏರಿಕೆಯಾದ್ರೆ ಅದರ ಆಧಾರದ ಮೇಲೆ ಜಾಮೀನು ಪಡೆಯಲು ತಂತ್ರ ರೂಪಿಸಿದ್ದಾರೆ ಅಂತಾ ಇಡಿ ಕೋರ್ಟ್ಗೆ ಹೇಳಿದೆ. ಈ ವಾದ ಆಲಿಸಿದ ನ್ಯಾಯಾಲಯ ಕೇಜ್ರಿವಾಲ್ ಅವರ ಡೈಯಟ್ ಚಾರ್ಟ್ ನೀಡಲು ತಿಹಾರ್ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದೆ.
ರಾಹುಲ್ ಗಾಂಧಿ ಭ್ರಷ್ಟಾಚಾರ ಮಾಡಿದ್ದಕ್ಕೆ ಸೋತಿದ್ದಾ? – ಸುಧಾಕರ್
ಭ್ರಷ್ಟಾಚಾರದ ಕಾರಣದಿಂದ ಡಾ ಕೆ ಸುಧಾಕರ್ ಅವರನ್ನು ವಿಧಾನಸಭೆ ಚುನಾವಣೆಯಲ್ಲಿ ಸೋಲಿಸಿದ್ದೀರಿ ಎಂದು ಸಿಎಂ ಸಿದ್ಧರಾಮಯ್ಯ ನೀಡಿರುವ ಹೇಳಿಕೆಗೆ ಸುಧಾಕರ್ ತಿರುಗೇಟು ನೀಡಿದ್ದಾರೆ. 2019ರಲ್ಲಿ ನಿಮ್ಮ ನಾಯಕ ರಾಹುಲ್ ಗಾಂಧಿ ಅವರು 55,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಅಮೇಥಿಯಲ್ಲಿ ಸೋತಿದ್ದರು. ನಿಮ್ಮ ಪ್ರಕಾರ ರಾಹುಲ್ ಗಾಂಧಿ ಭ್ರಷ್ಟಾಚಾರ ಮಾಡಿದ್ದಕ್ಕೆ ಸೋತಿದ್ದಾ? ನನ್ನ ಮೇಲೆ ತನಿಖೆಗೆ ಆದೇಶ ಮಾಡಿದ್ದೀರಿ. ಆದರೆ ಇನ್ನೂ ತನಿಖೆ ನಡೆಯುತ್ತಿರುವಾಗಲೇ, ಸಾಕ್ಷ್ಯ ಸಿಕ್ಕಿದೆ. ನಮಗೆ ಮಾಹಿತಿ ಇದೆ ಎಂದು ಹೇಳಿದ್ದೀರಿ. ಅದರಲ್ಲೇ ನಿಮ್ಮ ತನಿಖೆ ಎಷ್ಟು ಪೂರ್ವಾಗ್ರಹ ಪೀಡಿತ, ಎಷ್ಟು ನಿಷ್ಪಕ್ಷಪಾತ? ಅಂತಾ ಸುಧಾಕರ್ ಪ್ರಶ್ನಿಸಿದ್ದಾರೆ.