ಕ್ಯಾಪ್ಟನ್ ಆದ್ರೂ ಕಳಪೆ ಫಾರ್ಮ್.. – ಪಾಂಡ್ಯಗೆ ಬಿಸಿಸಿಐ ಟಾಸ್ಕ್ ಏನು?

ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ರೋಹಿತ್ ಶರ್ಮಾ ವಿಚಾರವಾಗಿ ಸೌಂಡ್ ಮಾಡ್ತಿದ್ದಾರೆ ಹೊರತು ಆಟದಲ್ಲಿ ಸದ್ದು ಮಾಡ್ತಿಲ್ಲ. ಜೊತೆಗೆ ಬೌಲಿಂಗ್ ಮಾಡೋದ್ರಲ್ಲೂ ಇಂಟ್ರೆಸ್ಟ್ ತೋರಿಸ್ತಿಲ್ಲ. ಕ್ಯಾಪ್ಟನ್ ಅನ್ನೋ ಗತ್ತು ತೋರಿಸ್ತಿರೋದು ಬಿಟ್ರೆ ಉತ್ತಮ ಫಾರ್ಮ್ನಲ್ಲಿರೋದು ಎಲ್ಲೂ ಕಾಣ್ತಿಲ್ಲ. ಈಗ ಹಾರ್ದಿಕ್ ಪಾಂಡ್ಯ ಅವರ ಪರ್ಫಾಮೆನ್ಸ್ ವಿಚಾರ ಬಿಸಿಸಿಐಗೂ ತಲೆನೋವಾಗಿದೆ. ಯಾಕೆಂದರೆ, ಪಾಂಡ್ಯರನ್ನೇ ಮೀರಿಸೋ ಆಟಗಾರರು ಈ ಬಾರಿಯ ಐಪಿಎಲ್ ಸೀಸನ್ನಲ್ಲಿ ಆಡ್ತಿದ್ದಾರೆ. ಈ ಜ್ಯೂನಿಯರ್ ಆಟಗಾರರು ಕೂಡ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಮೇಲೇನೇ ಫೋಕಸ್ ಮಾಡ್ತಿದ್ದಾರೆ. ಹೀಗಾಗಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಸಿಗಬೇಕು ಅಂದ್ರೆ ಬಿಸಿಸಿಐ ಒಂದು ಕಂಡೀಷನ್ ಹಾಕಿದೆ. ಜೊತೆಗೆ ಕೋಚ್ ದ್ರಾವಿಡ್ ಹಾಗೂ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಹೊಸ ಟಾಸ್ಕ್ ಕೂಡಾ ಪಾಂಡ್ಯಗೆ ನೀಡಿದ್ದಾರೆ. ಈ ಟಾಸ್ಕ್ ನೀಡೋದ್ರಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಪಾಲೂ ಕೂಡಾ ಇದೆ. ಹಾಗಿದ್ರೆ ಹಾರ್ದಿಕ್ ಪಾಂಡ್ಯ ಮುಂದಿರೋ ಸವಾಲೇನು?, ಬಿಸಿಸಿಐ ನೀಡಿರೋ ಟಾಸ್ಕ್ ಏನು?, ಕ್ಯಾಪ್ಟನ್ ರೋಹಿತ್ ಶರ್ಮಾ ತನಗಾದ ಅವಮಾನ ತೀರಿಸಿಕೊಳ್ಳಲು ಯಾವ ರೀತಿ ಪ್ಲ್ಯಾನ್ ಮಾಡಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ..
ಇದನ್ನೂ ಓದಿ: ತವರಿನಲ್ಲೇ ಗುಜರಾತ್ ಟೈಟಾನ್ಸ್ಗೆ ಹೀನಾಯ ಸೋಲು – ಡೆಲ್ಲಿ ಕ್ಯಾಪಿಟಲ್ಸ್ಗೆ 6 ವಿಕೆಟ್ಗಳಿಂದ ಭರ್ಜರಿ ಜಯ
2023ರ ವಂಡೇ ವರ್ಲ್ಡ್ಕಪ್ ವೇಳೆ ಪಾಂಡ್ಯ ಇಂಜ್ಯೂರಿಗೆ ಒಳಗಾಗಿದ್ರು. ಅದಾದ್ಮೇಲೆ ಇದುವರೆಗೂ ಪಾಂಡ್ಯಾ ಟೀಮ್ ಇಂಡಿಯಾ ಪರ ಒಂದೇ ಒಂದು ಮ್ಯಾಚ್ ಆಡಿಲ್ಲ. ಟೀಂ ಇಂಡಿಯಾಗೆ ಕಮ್ಬ್ಯಾಕ್ ಮಾಡೋಕೆ ಹಾರ್ದಿಕ್ ಪಾಂಡ್ಯ ತುದಿಗಾಲಲ್ಲಿ ನಿಂತಿದ್ದಾರೆ. ಆದ್ರೆ, ಟೀಮ್ ಇಂಡಿಯಾ ಸೇರಿಕೊಳ್ಳೋದು ಪಾಂಡ್ಯ ಪಾಲಿಗೆ ಅಷ್ಟೊಂದು ಈಸಿಯಾಗ್ತಿಲ್ಲ. ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಬೇಕು ಅಂದ್ರೆ ಈ ಬಾರಿ ಐಪಿಎಲ್ನಲ್ಲಿ ತನ್ನನ್ನು ತಾನು ಪ್ರೂವ್ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಪಾಂಡ್ಯ ಮೇಲಿದೆ. ಜೊತೆಗೆ ಐಪಿಎಲ್ನಲ್ಲಿ ಕೆಲ ಆಟಗಾರರು ಭರ್ಜರಿ ಫಾರ್ಮ್ ತೋರಿಸುತ್ತಿರೋದು ಕೂಡಾ ಹಾರ್ದಿಕ್ ಪಾಂಡ್ಯಗೆ ಹಿನ್ನಡೆಯಾಗಿದೆ.
ಟಿ20 ವಿಶ್ವಕಪ್ ಗೆ ಪಾಂಡ್ಯ ಡೌಟ್?
ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಈಗಾಗಲೇ ಹಲವು ಕ್ರಿಕೆಟಿಗರು ಶಕ್ತಿಮೀರಿ ಪ್ರಯತ್ನ ಪಡುತ್ತಿದ್ದಾರೆ. ಹೀಗಾಗಿಯೇ ಈ ಬಾರಿಯ ಐಪಿಎಲ್ ಪಂದ್ಯಗಳು ನಡೆದಮೇಲೆಯೇ ಟಿ20ಗೆ ಟೀಮ್ ಇಂಡಿಯಾ ಸ್ಕ್ವಾಡ್ ರೆಡಿಮಾಡಲು ಬಿಸಿಸಿಐ ತೀರ್ಮಾನಿಸಿತ್ತು. ಹೀಗಾಗಿ ಐಪಿಎಲ್ನಲ್ಲಿ ಯಂಗಸ್ಟರ್ಸ್ ಶಕ್ತಿ ಮೀರಿ ಆಡುತ್ತಿದ್ದಾರೆ. ಜೂನ್ 04 ರಿಂದ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ನಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಬಿಸಿಸಿಐ ಕೂಡಾ ಟಿ20 ವಿಶ್ವಕಪ್ ಗೆಲ್ಲಲು ಮಾಸ್ಟರ್ ಪ್ಲಾನ್ ಮಾಡ್ತಿದೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ತಂಡದ ಹೆಡ್ಕೋಚ್ ರಾಹುಲ್ ದ್ರಾವಿಡ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್, ಮುಂಬೈನಲ್ಲಿ ಭೇಟಿಯಾಗಿ, ಮುಂಬರುವ ಟಿ20 ವಿಶ್ವಕಪ್ ಗೆಲ್ಲಲು ಬೇಕಾದ ತಂತ್ರಗಾರಿಕೆ ಮಾಡಿದ್ದಾರೆ. ಮುಂಬೈ ವಾಂಖೇಡೆ ಮೈದಾನದಲ್ಲಿರುವ ಬಿಸಿಸಿಐ ಕೇಂದ್ರ ಕಚೇರಿಯಲ್ಲಿ ಈ ಮೂವರು ಭೇಟಿಯಾಗಿ, ಮುಂಬರುವ ಟಿ20 ವಿಶ್ವಕಪ್ ಕುರಿತಾಗಿ ಪ್ರಮುಖ ವಿಚಾರಗಳನ್ನು ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ಹೊಸ ಟಾಸ್ಕ್ ನೀಡಿದ್ದಾರೆ ಎನ್ನಲಾಗಿದೆ. ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಹಾರ್ದಿಕ್ ಪಾಂಡ್ಯ ಭಾರತ ತಂಡದಲ್ಲಿ ಸ್ಥಾನ ಪಡೆಯಬೇಕಿದ್ದರೇ, ಮುಂಬೈ ಇಂಡಿಯನ್ಸ್ ನಾಯಕ ಪಾಂಡ್ಯ ಈಗಿನಿಂದಲೇ ಐಪಿಎಲ್ ಟೂರ್ನಿಯಲ್ಲಿ ನಿರಂತರವಾಗಿ ಬೌಲಿಂಗ್ ಮಾಡಬೇಕು ಎನ್ನುವ ಸ್ಪಷ್ಟ ಸಂದೇಶವನ್ನು ಬಿಸಿಸಿಐ ಮೂಲಕ ರವಾನಿಸಿಲಾಗಿದೆ. ಬೌಲಿಂಗ್ ನಲ್ಲಿ ಸಾಮರ್ಥ್ಯ ತೋರದಿದ್ದರೆ ಹಾರ್ದಿಕ್ ಪಾಂಡ್ಯ ಔಟ್ ಮಾಡಲಿದ್ದು, ಹಾರ್ದಿಕ್ ಪಾಂಡ್ಯ ಜಾಗದಲ್ಲಿ ಶಿವಂ ದುಬೆ ಬರಲಿ ಎಂಬ ಆಗ್ರಹವಾಗಿದೆ.
ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, 6 ಪಂದ್ಯಗಳನ್ನಾಡಿ ಕೇವಲ 11 ಓವರ್ಗಳನ್ನು ಬೌಲಿಂಗ್ ಮಾಡಿ 3 ವಿಕೆಟ್ ಮಾತ್ರ ಕಬಳಿಸಿದ್ದಾರೆ. ಪಾಂಡ್ಯ 12ರ ಎಕಾನಮಿಯಲ್ಲಿ ರನ್ ಬಿಟ್ಟುಕೊಡುತ್ತಿರುವುದು ಬಿಸಿಸಿಐ ತಲೆನೋವು ಹೆಚ್ಚಿಸಿದೆ. ಮೇ ಮೊದಲ ವಾರದಲ್ಲಿ ಬಿಸಿಸಿಐ ಆಯ್ಕೆ ಸಮಿತಿಯು ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆಯಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಭರ್ಜರಿ ಫಾರ್ಮ್ನಲ್ಲಿರುವ ಶಿವಂ ದುಬೆ ಟಿ20ಗೆ ಆಯ್ಕೆಯಾಗುವುದು ಬಹುತೇಕ ಖಚಿತ ಎಂದೇ ಹೇಳಲಾಗ್ತಿದೆ. ಒಂದು ವೇಳೆ ಶಿವಂ ದುಬೆ ಆಯ್ಕೆಯಾದರೆ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದಿಂದ ಔಟ್ ಆಗೋದ್ರಲ್ಲಿ ಡೌಟೇ ಇಲ್ಲ. ಇನ್ನು ಭಾನುವಾರ ನಡೆದಿದ್ದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯದ ಸಂದರ್ಭದಲ್ಲಿ ವಿಂಡೀಸ್ ದಿಗ್ಗಜ ಬ್ರಿಯಾನ್ ಲಾರಾ, ಇರ್ಫಾನ್ ಪಠಾಣ್ ಹಾಗೂ ರವಿ ಶಾಸ್ತ್ರಿ ಅವರು ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಅವರ ಬಗ್ಗೆ ಚರ್ಚೆಗಳನ್ನು ನಡೆಸಿದ್ದರು. ಟಿ20 ವಿಶ್ವಕಪ್ ಟೂರ್ನಿ ನಡೆಯುವ ಕೆರಿಬಿಯನ್ ಪಿಚ್ಗಳಲ್ಲಿ ಶಿವಂ ದುಬೆ ಅವರನ್ನು ಆಯ್ಕೆ ಮಾಡಿದರೆ ತಂಡಕ್ಕೆ ದೊಡ್ಡ ಅಸ್ತ್ರವಾಗಲಿದ್ದಾರೆಂದು ಈ ಕ್ರಿಕೆಟ್ ದಿಗ್ಗಜರು ಹೇಳಿದ್ದರು. ಇವರ ಮಾತನ್ನೂ ಕೂಡಾ ಬಿಸಿಸಿಐ ಸೀರಿಯಸ್ ಆಗಿ ಪರಿಗಣಿಸಿದೆ ಅಂತಾನೂ ಹೇಳಲಾಗ್ತಿದೆ. ಬ್ಯಾಟಿಂಗ್ನಲ್ಲಿ ಅಬ್ಬರಿಸುತ್ತಿರುವ ಶಿವಂ ದುಬೆ, ತಾರಾ ಸ್ಪಿನ್ನರ್ ಯಜುವೇಂದ್ರ ಚಹಲ್ರನ್ನು ಬಿಸಿಸಿಐ ಆಯ್ಕೆ ಸಮಿತಿ ವಿಶ್ವಕಪ್ಗೆ ಪರಿಗಣಿಸುವ ಸಾಧ್ಯತೆಯಿದೆ ಅನ್ನೋ ವಿಚಾರ ಬಹುತೇಕ ಪಕ್ಕಾ ಆಗಿದೆ.