ರಣದೀಪ್ ಸುರ್ಜೇವಾಲಾಗೆ ಚುನಾವಣಾ ಆಯೋಗದಿಂದ ಶಾಕ್! – 2 ದಿನ ಚುನಾವಣಾ ಪ್ರಚಾರಕ್ಕೆ ನಿಷೇಧ
ಬಿಜೆಪಿ ಸಂಸದೆ ಹೇಮಾಮಾಲಿನಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ವಿರುದ್ಧ ಚುನಾವಣಾ ಆಯೋಗ ಕ್ರಮಕೈಗೊಂಡಿದೆ. ರಣದೀಪ್ ಸುರ್ಜೇವಾಲಾ ಅವರ ಮೇಲೆ ಚುನಾವಣಾ ಪ್ರಚಾರ ಕೈಗೊಳ್ಳದಂತೆ 48 ಗಂಟೆಗಳ ಕಾಲ ನಿಷೇಧ ಹೇರಲಾಗಿದೆ.
ಇದನ್ನೂ ಓದಿ: ನನಗೂ, ನನ್ನ ಮಗನಿಗೆ ಭವಿಷ್ಯ ಇಲ್ಲ ಎಂದೇ ಈ ನಿರ್ಧಾರ ಕೈಗೊಂಡೆ! – ಶಾಕಿಂಗ್ ಹೇಳಿಕೆ ಕೊಟ್ಟ ಈಶ್ವರಪ್ಪ
ಕೈತಾಲ್ನ ಫರಾಲ್ ಗ್ರಾಮದಲ್ಲಿ ಪ್ರಚಾರದ ವೇಳೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಸುರ್ಜೇವಾಲಾ, ಮಥುರಾದ ಬಿಜೆಪಿ ಸಂಸದೆ ಹಾಗೂ ಹಿರಿಯ ನಟಿ ಹೇಮಾ ಮಾಲಿನಿ ಕುರಿತಾಗಿ ಅಶ್ಲೀಲ ಹೇಳಿಕೆ ನೀಡಿದ್ದರು. ನಾವು ಶಾಸಕರು/ಸಂಸದರನ್ನು ಯಾಕೆ ಆಯ್ಕೆ ಮಾಡುತ್ತೇವೆ? ಅವರು ನಮ್ಮ ದನಿಯನ್ನು ಅಲ್ಲಿ ಕೇಳಬೇಕು ಎನ್ನುವುದು ಇದರ ಹಿಂದಿನ ಉದ್ದೇಶ. ನಮ್ಮ ಮನವಿಗಳು ಅಲ್ಲಿ ಸಲ್ಲಿಕೆಯಾಗಬೇಕು. ಆದರೆ ಹೇಮಾ ಮಾಲಿನಿ ಅವರನ್ನು ನೆಕ್ಕೋಕೆ ಸಂಸದರನ್ನಾಗಿ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸುರ್ಜೇವಾಲ್ ವಿರುದ್ದ ಕ್ರಮಕೈಗೊಳ್ಳುವಂತೆ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಇದೀಗ ಚುನಾವಣಾ ಆಯೋಗ ರಣದೀಪ್ ಸುರ್ಜೇವಾಲಾ ಅವರನ್ನು 2 ದಿನಗಳ ಕಾಲ ಚುನಾವಣಾ ಪ್ರಚಾರಕ್ಕೆ ನಿರ್ಬಂಧಿಸಿ ಆದೇಶ ಹೊರಡಿಸಿದೆ.
ಇಸಿಐ ಆದೇಶದ ಪ್ರಕಾರ, ಸುರ್ಜೇವಾಲಾ ಅವರು ನ 48 ಗಂಟೆಗಳ ಕಾಲ ಚುನಾವಣಾ ರ್ಯಾಲಿಗಳು ಅಥವಾ ಸಾರ್ವಜನಿಕ ಸಭೆಗಳನ್ನು ನಡೆಸುವಂತಿಲ್ಲ. ಭಾರತದ ಸಂವಿಧಾನದ 324 ನೇ ವಿಧಿಯ ಅಡಿಯಲ್ಲಿ ಯಾವುದೇ ಸಾರ್ವಜನಿಕ ಸಭೆಗಳು, ಸಾರ್ವಜನಿಕ ಮೆರವಣಿಗೆಗಳು, ಸಾರ್ವಜನಿಕ ರ್ಯಾಲಿಗಳು, ರೋಡ್ ಶೋಗಳು ಮತ್ತು ಸಂದರ್ಶನಗಳು, ಮಾಧ್ಯಮಗಳಲ್ಲಿ ಸಾರ್ವಜನಿಕ ಹೇಳಿಕೆಗಳನ್ನು ನಡೆಸದಂತೆ ರಣದೀಪ್ ಸುರ್ಜೆವಾಲಾ ಅವರನ್ನು ನಿರ್ಬಂಧಿಸುತ್ತದೆ ಎಂದು ಚುನಾವಣಾ ಸಮಿತಿಯು ತನ್ನ ನೋಟಿಸ್ನಲ್ಲಿ ತಿಳಿಸಿದೆ.