ಮರೆಯಾಯ್ತು ಸ್ಯಾಂಡಲ್ವುಡ್ನ ಮತ್ತೊಂದು ರತ್ನ – ಪ್ರಚಂಡ ಕುಳ್ಳ ದ್ವಾರಕೀಶ್ ಇನ್ನಿಲ್ಲ!
ಸ್ಯಾಂಡಲ್ವುಡ್ನ ನಟ, ನಿರ್ದೇಶಕ ದ್ವಾರಕೀಶ್ ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತದಿಂದ ದ್ವಾರಕೀಶ್ ಅಸುನೀಗಿದ್ದಾರೆ ಅಂತ ಹೇಳಲಾಗ್ತಿದೆ. ಅವರಿಗೆ 81 ವರ್ಷ ವಯಸ್ಸಾಗಿತ್ತು.
ಕನ್ನಡ ಚಿತ್ರರಂಗದ ಲೆಜೆಂಡ್ ನಟ ಕೆಲವು ಸಮಯದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮಂಗಳವಾರ ಬೆಳಗ್ಗೆ ಹೃದಯಾಘಾತದಿಂದ ದ್ವಾರಕೀಶ್ ಅಸುನೀಗಿದ್ದಾರೆ ಅಂತ ಹೇಳಲಾಗ್ತಿದೆ.
ಇದನ್ನೂ ಓದಿ: ಟಾಲಿವುಡ್ಗೆ ಹಾರಿದ ಕಾಂತಾರ ಬೆಡಗಿ – ತೆಲುಗು ಸ್ಟಾರ್ ನಿತಿನ್ ಸಿನಿಮಾಗೆ ಸಪ್ತಮಿ ಗೌಡ ನಾಯಕಿ
ದ್ವಾರಕೀಶ್ ಅವರ ನಿಧನದ ಬಗ್ಗೆ ಅವರ ಪುತ್ರ ಯೋಗಿ ಮಾಹಿತಿ ನೀಡಿದ್ದಾರೆ. ‘ರಾತ್ರಿ ಲೂಸ್ ಮೋಷನ್ ಆಯ್ತು. ರಾತ್ರಿ ನಿದ್ದೆ ಮಾಡಿರಲಿಲ್ಲ. ಬೆಳಿಗ್ಗೆ ಕಾಫಿ ಕುಡಿದು ಎರಡು ಗಂಟೆ ಮಲಗುತ್ತೇನೆ ಎಂದು ನಿದ್ರಿಸಿದ್ದರು. ಮಲಗಿದವರು ಎದ್ದೇ ಇಲ್ಲ. ಅವರಿಗೆ ಹೃದಯಾಘಾತ ಆಗಿದೆ’ ಎಂದು ದ್ವಾರಕೀಶ್ ಪುತ್ರ ಯೋಗಿ ಮಾಹಿತಿ ನೀಡಿದ್ದಾರೆ.
ದ್ವಾರಕೀಶ್ ಅವರು ನಿಧನರಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಹಾಗೂ ಅವರ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ. ಅವರು ಮೃತಪಟ್ಟ ಬಗ್ಗೆ ಈ ಮೊದಲು ಹಲವು ಬಾರಿ ವದಂತಿ ಹಬ್ಬಿತ್ತು. ಈ ಬಾರಿಯೂ ಸಾವಿನ ಸುದ್ದಿ ಸುಳ್ಳಾಗಿರಬಹುದು ಎಂದು ಎಲ್ಲರೂ ಭಾವಿಸಿದ್ದರು. ಈಗ ಅವರ ಕುಟುಂಬದ ಕಡೆಯಿಂದಲೇ ಇದಕ್ಕೆ ಸ್ಪಷ್ಟನೆ ನೀಡಲಾಗಿದೆ.
ದ್ವಾರಕೀಶ್ ಆಗಸ್ಟ್ 190- 1942 ರಂದು ಹುಣಸೂರು ನಲ್ಲಿ ಜನಿಸಿದ್ದರು. ಶಮಾರಾವ್ ಮತ್ತು ಜಯಮ್ಮ ದಂಪತಿಯ ಪುತ್ರ ದ್ವಾರಕೀಶ್, ಶಾರದಾ ವಿಲಾಸ್ ಮತ್ತು ಬನುಮಯ್ಯ ಶಾಲೆಯಲ್ಲಿ ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ನಂತರ CPC ಪಾಲಿಟೆಕ್ ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್ ಮುಗಿಸಿದರು. ನಂತರ ಅವರ ಸೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಶುರುಮಾಡಿದರು. 1963 ರಲ್ಲಿ, ಅವರು ವ್ಯಾಪಾರ ಬಿಟ್ಟು ಸಿನೆಮಾ ನಟನೆಯನ್ನು ಆಯ್ದುಕೊಂಡರು.
ಕನ್ನಡದ ಪ್ರಮುಖ ನಟರಾದ ವಿಷ್ಣುವರ್ಧನ ಜೊತೆಗಿನ ದ್ವಾರಕೀಶ್ ಅವರ ಕಳ್ಳ-ಕುಳ್ಳ ಜೋಡಿ ಎಂದು ಪ್ರಸಿದ್ಧವಾಗಿತ್ತು. ಕನ್ನಡ ಹಾಗೂ ತಮಿಳು ಚಿತ್ರಗಳಿಗೆ ಬಂಡವಾಳ ಹೂಡಿದ್ದಾರೆ ಕರ್ನಾಟಕದ ಕುಳ್ಳ ದ್ವಾರಕೀಶ್. ಕನ್ನಡ ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದ ದ್ವಾರಕೀಶ್ನ ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ.