ಆಸೀಸ್ ಗೆ ಹುಲಿ.. RCBಯಲ್ಲಿ ಇಲಿ – ಗೇಮ್ ಚೇಂಜರ್ ಆಗಿದ್ದ ಮ್ಯಾಕ್ಸ್ ವೆಲ್ RCB ಪಾಲಿಗೆ ಫ್ಲಾಪ್ ಹೀರೋ!
ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ಕಪ್ ಗೆದ್ದಿಲ್ಲದೇ ಇರಬಹುದು. ಆದ್ರೆ ಆರ್‌ಸಿಬಿ ಸಂಪಾದಿಸಿರೋ ಅಭಿಮಾನಿಗಳನ್ನ ಬಹುಶಃ ಜಗತ್ತಿನ ಯಾವ ಕ್ರಿಕೆಟ್ ಟೀಂ ಕೂಡ ಸಂಪಾದಿಸಿರೋಕೆ ಸಾಧ್ಯನೇ ಇಲ್ಲ. ಸತತ 16 ವರ್ಷಗಳಿಂದ ಟ್ರೋಫಿ ಗೆಲ್ಲದಿದ್ರೂ ಅಷ್ಟೇ ಲಾಯಲ್ ಆಗಿ ಫ್ಯಾನ್ಸ್ ಸಪೋರ್ಟ್ ಮಾಡ್ತಿದ್ದಾರೆ. ಮುಂದೆನೂ ಮಾಡ್ತಾನೇ ಇರ್ತಾರೆ. ಹೌದು ನಮ್ಮ ಟೀಂ ಅಂತಾ ಅಭಿಮಾನಿಗಳಿಗೆ ಎಷ್ಟೇ ಹೆಮ್ಮೆ ಇದ್ರೂ ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಹೌದು ಕಪ್ ಬೇಕಿತ್ತು ಅನ್ಸೇ ಅನ್ಸುತ್ತೆ ಅಲ್ವಾ.. ಈ ಸಲ ಹೆಣ್ಮಕ್ಕಳ ಟೀಂ 2ನೇ ಆವೃತ್ತಿಯಲ್ಲೇ ಚಾಂಪಿಯನ್ ಆಗಿದ್ರು. ಹೀಗಾಗಿ ಐಪಿಎಲ್ನಲ್ಲಿ ಆರ್‌ಸಿಬಿ ಹುಡುಗ್ರು ಕೂಡ ಕಪ್ ಗೆದ್ರೆ ಎಷ್ಟ್ ಚೆನ್ನಾಗಿರುತ್ತೆ ಅಂತಾ ಖುಷಿ ಪಡ್ತಿದ್ರು. ಆದ್ರೆ ಆರ್‌ಸಿಬಿ ಸೋಲಿಗೆ ಆರ್‌ಸಿಬಿ ಆಟಗಾರರೇ ಕಾರಣ ಆಗ್ತಿದ್ದಾರೆ ಅನ್ನೋದೇ ನೋವಿನ ಸಂಗತಿ. ಅದ್ರಲ್ಲೂ ಸ್ಟಾರ್ ಬ್ಯಾಟ್ಸ್ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಫ್ಲಾಪ್ ಶೋನಿಂದಾಗೇ ಬೆಂಗಳೂರು ಟೀಂಗೆ ಎಫೆಕ್ಟ್ ಆಗ್ತಿದೆ. ಮ್ಯಾಕ್ಸಿ ಮೇಲೆ ಇಟ್ಟ ನಿರೀಕ್ಷೆ ಸುಳ್ಳಾಗಿದ್ದೇಗೆ..? ಮ್ಯಾಕ್ಸಿ ಆಡೋದನ್ನೇ ಮರೆತ್ರಾ..? ತಗೊಂಡಿರೋ ಹಣಕ್ಕಾದ್ರೂ ನಿಯತ್ತು ಬೇಡ್ವಾ..? ಆಸಿಸ್ ಆಟಗಾರ ಟ್ರೋಲ್ ಆಗ್ತಿರೋದೇಕೆ..? ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಆರೆಂಜ್ ಆರ್ಮಿಗೆ ಸೋಲುಣಿಸುತ್ತಾ ಆರ್‌ಸಿಬಿ? – ಆರ್‌ಸಿಬಿ ಫೇಲ್ಯೂರ್‌ಗೆ ಆ ಇಬ್ಬರೇ ಕಾರಣನಾ..?
ಏಪ್ರಲ್ 11ರಂದು ವಾಂಖೇಡೆ ಸ್ಟೇಡಿಯಮ್ನಲ್ಲಿ ಮುಂಬೈ ವಿರುದ್ಧದ ಪಂದ್ಯದ ಬಳಿಕ ಆರ್‌ಸಿಬಿ ಫ್ಯಾನ್ಸ್ ರೊಚ್ಚಿಗೆದ್ದಿದ್ದಾರೆ. ಸೊನ್ನೆ ಸುತ್ತಿ ಔಟಾದ ಮ್ಯಾಕ್ಸ್‌ವೆಲ್ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ಯಾಕಂದ್ರೆ ವಾಂಖೆಡೆ ಸ್ಟೇಡಿಯಂನಲ್ಲಿ ಅತೀ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದು ಗ್ಲೆನ್ ಮ್ಯಾಕ್ಸ್‌ವೆಲ್ ಮೇಲೆ. ಅದೇ ಸ್ಟೇಡಿಯಂನಲ್ಲಿ ಮ್ಯಾಕ್ಸಿ ಡಬಲ್ ಸೆಂಚುರಿ ಹೊಡೆದು ದಾಖಲೆಗಳ ಮೇಲೆ ದಾಖಲೆಗಳನ್ನ ಬರೆದಿದ್ರು. ಆದ್ರೆ ಆರ್‌ಸಿಬಿ ಪರ ಆಡುವಾಗ ಮಾತ್ರ ಅಟ್ಟರ್ ಪ್ಲಾಫ್ ಆಗಿದ್ರು. ರಜತ್ ಪಟೀದಾರ್ ಔಟಾದ ಬಳಿಕ ಕ್ರೀಸ್‌ಗೆ ಇಳಿದಿದ್ದ ಮ್ಯಾಕ್ಸಿ ಈ ಮ್ಯಾಚ್ನಲ್ಲಾದ್ರೂ ಆಡ್ತಾರೇನೋ ಅಂತಾ ಎಲ್ರೂ ಕಾಯ್ತಿದ್ರು. ಆದ್ರೆ ಮ್ಯಾಕ್ಸಿ ಮಾತ್ರ ಬಂದಷ್ಟೇ ಸ್ಪೀಡ್ನಲ್ಲೇ ಸೊನ್ನೆ ಸುತ್ತಿ ಪೆವಿಲಿಯನ್ ಸೇರಿಕೊಂಡಿದ್ರು. ಮ್ಯಾಕ್ಸಿ ಏನಾದರೂ ಸ್ವಲ್ಪನಾದ್ರೂ ರನ್ ಬಾರಿಸಿದ್ರೆ ಸ್ಕೋರ್ ಇನ್ನಷ್ಟು ಹೆಚ್ಚಿಸಲು ಸಹಾಯಕವಾಗುತ್ತಿತ್ತು. ಹಾಗಂತ ಮ್ಯಾಕ್ಸಿ ಏನು ಮುಂಬೈ ವಿರುದ್ಧದ ಪಂದ್ಯದಲ್ಲಷ್ಟೇ ಫ್ಲಾಪ್ ಆಗ್ಲಿಲ್ಲ. ಇದಕ್ಕೂ ಮುಂಚೆ ಆಡಿದ್ದ ಐದೂ ಪಂದ್ಯಗಳಲ್ಲೂ ಬಂದ ಪುಟ್ಟ ಹೋದ ಪುಟ್ಟ ಅನ್ನುವಂತೆಯೇ ಇದ್ರು. ಆರ್‌ಸಿಬಿ ತಂಡದ ಪರ 5ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಗ್ಲೆನ್ ಮ್ಯಾಕ್ಸ್‌ವೆಲ್, ಬ್ಯಾಟಿಂಗ್ ಪಿಚ್‌ನಲ್ಲಿಯಾದರೂ ಸ್ಪೋಟಕ ಬ್ಯಾಟ್ ಮಾಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಅದೇ ರಾಗ, ಅದೇ ತಾಳ ಎಂಬಂತೆ ವಿಕೆಟ್ ಒಪ್ಪಿಸಿದರು. ಶ್ರೇಯಸ್ ಗೋಪಾಲ್ ಅವರ ಎಸೆತದಲ್ಲಿ ಮ್ಯಾಕ್ಸ್‌ವೆಲ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಆ ಮೂಲಕ ಖಾತೆ ತೆರೆಯದೆ ಪೆವಿಲಿಯನ್‌ಗೆ ತೆರಳಿದರು. ಇದಕ್ಕೂ ಮುನ್ನ ಗ್ಲೆನ್ ಮ್ಯಾಕ್ಸ್‌ವೆಲ್ ಆಡಿದ್ದ ಐದು ಪಂದ್ಯಗಳಲ್ಲಿ ಎರಡು ಬಾರಿ ಡಕ್‌ಔಟ್ ಸೇರಿದಂತೆ ಕೇವಲ 32 ರನ್ ಗಳಿಸಿದ್ದರು. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಡಕ್‌ಔಟ್ ಆಗಿದ್ದ ಮ್ಯಾಕ್ಸಿ, ಎರಡನೇ ಪಂದ್ಯದಲ್ಲಿ 3, ಮೂರನೇ ಪಂದ್ಯದಲ್ಲಿ 28 ರನ್, ನಾಲ್ಕನೇ ಪಂದ್ಯದಲ್ಲಿ ಡಕ್‌ಔಟ್, ಐದನೇ ಪಂದ್ಯದಲ್ಲಿ ಒಂದು ರನ್ ಹಾಗೂ ಆರನೇ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ರು. ಅಲ್ದೇ ಮ್ಯಾಕ್ಸಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಡಕ್‌ಔಟ್ ಆದ ಕೆಟ್ಟ ದಾಖಲೆಯಲ್ಲಿ ರೋಹಿತ್ ಶರ್ಮಾ ಮತ್ತು ದಿನೇಶ್ ಕಾರ್ತಿಕ್ ಅವರನ್ನು ಸರಿಗಟ್ಟಿದ್ದಾರೆ. ಈ ಮೂವರು ಆಟಗಾರರು ಇದೀಗ 17 ಬಾರಿ ಸೊನ್ನೆ ಸುತ್ತಿದ್ದಾರೆ. ಇದೇ ಕಾರಣಕ್ಕೆ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಆಸ್ಟ್ರೇಲಿಯಾ ಪರ ಹುಲಿ ರೀತಿ ಬ್ಯಾಟ್ ಮಾಡುವ ಮ್ಯಾಕ್ಸಿ ಆರ್‌ಸಿಬಿ ಪರ ಇಲಿಯಂತೆ ಆಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಹಾಗೇ ಎಬಿಡಿ ಮತ್ತು ಮ್ಯಾಕ್ಸಿ ಫೂಟ್ಪ್ರಿಂಟ್ಗಳ ಮೂಲಕ ಟೀಕೆ ಮಾಡಿದ್ದಾರೆ. ಎಬಿಡಿ 360 ಡಿಗ್ರಿಯಲ್ಲಿ ನಿಂತು ಬ್ಯಾಟ್ ಬೀಸಿದ್ರೆ ಮ್ಯಾಕ್ಸಿಯದ್ದು ಕ್ರೀಸ್‌ಗೆ ಬರುವ ಮತ್ತು ಹೋಗುವ ಮಾರ್ಕ್ಗಳನ್ನ ಮಾತ್ರ ಹಾಕಿ ಲೇವಡಿ ಮಾಡಿದ್ದಾರೆ. ಹಾಗೇ ಮ್ಯಾಕ್ಸ್‌ವೆಲ್ ಗೆ ಯಾರೋ ಮಾಟಮಂತ್ರ ಮಾಡಿಸಿರಬೇಕು. ಅದಕ್ಕೆ ಹೀಗೆ ಔಟ್ ಆಗ್ತಿದ್ದಾರೆ. ಇದೇ ಗ್ರೌಂಡ್‌ನಲ್ಲಿ ವಿಶ್ವಕಪ್‌ನಲ್ಲಿ 200 ರನ್ ಬಾರಿಸಿದ್ದ ಮ್ಯಾಕ್ಸ್‌ವೆಲ್ ಈಗ ಸೊನ್ನೆಗೆ ಔಟಾಗ್ತಾರೆ ಅಂದ್ರೆ ಅದಕ್ಕೆ ಮಾಟಮಂತ್ರವೇ ಕಾರಣ ಅಂತಾ ಕಾಲೆಳೆಯುತ್ತಿದ್ದಾರೆ. ಅಷ್ಟೇ ಅಲ್ದೇ ಐಪಿಎಲ್ನ ಬಿಗ್ಗೆಸ್ಟ್ ಫ್ರಾಡ್ ಎಂದು ಟ್ರೋಲ್ ಮಾಡುತ್ತಿದ್ದಾರೆ. ಇನ್ನೂ ಕೆಲವ್ರು ಹಳ್ಳಿಕಾರ್ ಸಂತೋಷ್ ಹೇಳಿರುವ ಹೇಳಿಕೆಯನ್ನೇ ಸಿಂಕ್ ಮಾಡಿ ರುಬ್ಬುತ್ತಿದ್ದಾರೆ. ಅವ್ರು ಹೆಂಡ್ರು ಮಕ್ಳು ಚೆನ್ನಾಗಿರ್ಲಪ್ಪ ಎಂದು ಮ್ಯಾಕ್ಸಿ ಫೋಟೋ ಹಾಕಿ ಟ್ರೋಲ್ ಮಾಡುತ್ತಿದ್ದಾರೆ.
ಮ್ಯಾಕ್ಸಿ ಏನು ಸಾಮಾನ್ಯ ಪ್ಲೇಯರ್ ಅಲ್ಲ. ಸಿಂಗಲ್ ಆಗಿ ನಿಂತು ಇಡೀ ಪಂದ್ಯದ ಚಿತ್ರಣವನ್ನೇ ಬದಲಿಸುವ ತಾಕತ್ತು ಇರುವ ಆಟಗಾರ. ಇದೇ ವಾಂಖೆಡೆ ಸ್ಟೇಡಿಯಮ್ನಲ್ಲಿ ಮ್ಯಾಕ್ಸ್‌ವೆಲ್ 2023ರ ಏಕದಿನ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ರಣರೋಚಕ ದ್ವಿಶತಕ ಬಾರಿಸಿದ್ದರು. ಕಾಲಿನ ಗಾಯದ ನಡುವೆಯೂ ಏಕಾಂಗಿ ಹೋರಾಟ ನಡೆಸಿದ್ದ ಮ್ಯಾಕ್ಸಿ, ಕೇವಲ 128 ಎಸೆತಗಳಲ್ಲಿ ತಾನೊಬ್ಬನೇ 201 ರನ್ ಗಳಿಸಿದರು. ಆ ಮೂಲಕ ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಸಿಡಿಸಿದ ವಿಶ್ವದ 11ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ರು. ಅವರ ಈ ಹೋರಾಟದ ಇನ್ನಿಂಗ್ಸ್ನಲ್ಲಿ 21 ಬೌಂಡರಿ, 10 ಸಿಕ್ಸರ್ಗಳೂ ಇದ್ದವು. ಹೀಗೆ ಒಂದೇ ಮ್ಯಾಚ್ನಲ್ಲಿ ಹಲವು ದಾಖಲೆಗಳನ್ನ ಬರೆದಿದ್ದರು. ಆಸಿಸ್ ಪರ ಅಬ್ಬರಿಸುವಾಗ ಇರುವ ಈ ಸ್ಟ್ರೆಂಥ್ ಈಗ ಮ್ಯಾಕ್ಸಿಗಿಲ್ಲ. ಹೋಗ್ಲಿ ತಗೊಳ್ತಿರೋ ಹಣಕ್ಕೂ ನ್ಯಾಯವಾಗಿ ಪರ್ಫಾರ್ಮ್ ಮಾಡ್ತಿಲ್ಲ. ಯಾಕಂದ್ರೆ ಐಪಿಎಲ್ನಲ್ಲಿ ದೊಡ್ಡ ಮೊತ್ತವನ್ನು ಪಡೆಯುವ ಕ್ರಿಕೆಟಿಗರಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಒಬ್ಬರು. ಅವರು ಪ್ರತಿ ಸೀಸನ್ಗೆ 14.25 ಕೋಟಿ ಪಡೆಯುತ್ತಿದ್ದಾರೆ. ಆದರೆ ಪಡೆದ ಹಣಕ್ಕೆ ನ್ಯಾಯ ಕೂಡ ಕೊಡುತ್ತಿಲ್ಲ. ಇವರೊಂದಿಗೆ 17.50 ಕೋಟಿ ಪಡೆದ ಕ್ಯಾಮರೂನ್ ಗ್ರೀನ್ ಕೂಡ ತೀವ್ರ ನಿರಾಸೆ ಮೂಡಿಸಿದ್ದಾರೆ. ಬೌಲಿಂಗ್ನಲ್ಲಿ ಅಲ್ಜಾರಿ ಜೋಸೆಫ್ ಸಹ 11.50 ಕೋಟಿ ಪಡೆದು ವೈಫಲ್ಯ ಅನುಭವಿಸಿದ್ದಾರೆ. ಇದೇ ಈಗ ಆರ್‌ಸಿಬಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಹಿಗ್ಗಾಮುಗ್ಗಾ ಟ್ರೋಲ್ ಮಾಡ್ತಿದ್ದಾರೆ. ಮೊದಲು ಮ್ಯಾಕ್ಸಿಯನ್ನ ಟೀಮ್ನಿಂದ ಹೊರಗಿಡಿ ಎಂದು ಕಿಡಿ ಕಾರುತ್ತಿದ್ದಾರೆ. ಒಂದು, ಎರಡು ಮ್ಯಾಚ್ನಲ್ಲಿ ಆಡಿಲ್ಲ ಅಂದ್ರೆ ಸಹಿಸಿಕೊಳ್ಬೋದು. ಆರು ಪಂದ್ಯಗಳಲ್ಲೂ ಪ್ಲಾಪ್ ಶೋ ನೀಡಿದ್ರೆ ಯಾಕೆ ಆಡಿಸ್ಬೇಕು. ಕನ್ನಡಿಗರಿಗೆ ಅವಕಾಶ ಕೊಡಿ ಅಂತಾ ಆಗ್ರಹಿಸಿದ್ದಾರೆ. ಸದ್ಯ ಎಸ್ಆರ್ಹೆಚ್ ವಿರುದ್ಧ ಸೋಮವಾರ ಪಂದ್ಯ ನಡೆಯುತ್ತಿದ್ದು, ಮ್ಯಾಕ್ಸ್‌ವೆಲ್ ಆಡೋದು ಡೌಟಿದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಹೆಬ್ಬೆರಳಿಗೆ ಗಾಯವಾಗಿದ್ದು, ತಂಡದಿಂದ ಹೊರಗುಳಿಯಲಿದ್ದಾರೆ. ಇದ್ರಿಂದ ಫ್ಯಾನ್ಸ್ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.