ಶ್ರದ್ಧಾ ಹತ್ಯೆ ಪ್ರಕರಣ- ಅಫ್ತಾಬ್ ಪೊಲೀಸರ ಅತಿಥಿಯಾಗಿದ್ದು ಹೇಗೆ?

ಶ್ರದ್ಧಾ ಹತ್ಯೆ ಪ್ರಕರಣ- ಅಫ್ತಾಬ್ ಪೊಲೀಸರ ಅತಿಥಿಯಾಗಿದ್ದು ಹೇಗೆ?

ನವದೆಹಲಿ: ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಪ್ರೇಯಸಿಯನ್ನು ಆರು ತಿಂಗಳ ಹಿಂದೆ ಕತ್ತು ಹಿಸುಕಿ ಕೊಲೆ ಮಾಡಿ ಕ್ರೌರ್ಯ ಮೆರೆದಿದ್ದ ಪಾತಕಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಹತ್ಯೆ 6 ತಿಂಗಳ ಹಿಂದೆ ನಡೆದಿದ್ದರೂ ಈ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈ ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ, ಈ ಹಂತಕ ಪೊಲೀಸರ ಅತಿಥಿಯಾಗಿದ್ದು ಹೇಗೆ ಎಂಬ ಬಗೆಗಿನ ಇಂಟರೆಸ್ಟಿಂಗ್ ಸಂಗತಿಗಳು ಬಯಲಾಗಿವೆ.

ಇದನ್ನೂ ಓದಿ: ಶ್ರದ್ದಾ ಹತ್ಯೆ ಪ್ರಕರಣ- ಮೇ 18ರ ರಾತ್ರಿ ನಡೆದಿದ್ದೇನು?

ಪ್ರಕರಣ ಬೆಳಕಿಗೆ ಬಂದದ್ದು ಹೇಗೆ?  

ಮಹಾರಾಷ್ಟ್ರದ ಪಾಲ್ಘರ್ ನಿವಾಸಿಯಾದ ಶ್ರದ್ಧಾಳ ತಂದೆ ವಿಕಾಸ್ ಮದನ್ ವಾಲ್ಕರ್  ನವೆಂಬರ್‌ನಲ್ಲಿ ಮಗಳ ವಿಚಾರಕ್ಕಾಗಿ ಪೊಲೀಸರನ್ನು ಸಂಪರ್ಕಿಸಿದ್ದರು. ತನ್ನ ಮಗಳು ಮೇ ತಿಂಗಳಿಂದ ನಾಪತ್ತೆಯಾಗಿದ್ದಾಳೆ. ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ, ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ದೂರು ನೀಡಿದ್ದರು. ಅದರ ಬೆನ್ನತ್ತಿ ತನಿಖೆ ಆರಂಭಿಸಿದ ಪೊಲೀಸರಿಗೆ ನಿಗೂಢ ಕೊಲೆಯ ಸುಳಿವು ಸಿಕ್ಕಿತ್ತು. ಆರಂಭಿಕ ತನಿಖೆಯಲ್ಲಿ ಶ್ರದ್ಧಾಳ ಮೊಬೈಲ್ ಕೊನೆಯ ಬಾರಿ ಎಲ್ಲಿ ಸಿಗ್ನಲ್ ಸಿಕ್ಕಿದೆ ಎಂಬುದು ಪತ್ತೆಯಾಗಿತ್ತು. ಅದನ್ನು ಆಧರಿಸಿ ತನಿಖೆ ಆರಂಭಿಸಿದ ಪೊಲೀಸರಿಗೆ ಆಕೆಯ ಲಿವ್-ಇನ್ ಪಾರ್ಟನರ್ ಅಫ್ತಾಬ್ ಮೇಲೆ ಅನುಮಾನ ಮೂಡಿತ್ತು. ಆದರೆ, ಆತನನ್ನು ವಿಚಾರಣೆ ಮಾಡಿದಾಗ ತನಗೇನೂ ಗೊತ್ತಿಲ್ಲವೆಂದು ಅಮಾಯಕನಂತೆ ನಟಿಸಿದ್ದ. ಆತನ ವಿರುದ್ಧ ಸಾಕ್ಷಿಗಳೂ ಸಿಕ್ಕಿರಲಿಲ್ಲ. ಕೊನೆಗೆ ಈ ಪ್ರಕರಣವನ್ನು ದೆಹಲಿ ಪೊಲೀಸರಿಗೆ ವರ್ಗಾಯಿಸಲಾಯಿತು.

ಅಫ್ತಾಬ್ ಪೊಲೀಸರ ಕೈಗೆ ಸಿಕ್ಕಿಬಿದ್ದದ್ದು ಹೇಗೆ?

ದೆಹಲಿ ಪೊಲೀಸರ ತನಿಖೆಯ ಸಂದರ್ಭದಲ್ಲಿ ಅಫ್ತಾಬ್ ಮತ್ತು ಶ್ರದ್ಧಾ ದೆಹಲಿಗೆ ಬಂದು ಛತ್ತರ್‌ಪುರ ಪಹಾಡಿ ಪ್ರದೇಶದಲ್ಲಿ ಬಾಡಿಗೆ ಅಪಾರ್ಟ್​ಮೆಂಟ್‌ನಲ್ಲಿ ವಾಸಿಸಲು ಪ್ರಾರಂಭಿಸಿದ್ದಾರೆ ಎಂದು ಗೊತ್ತಾಗಿತ್ತು. ಅಲ್ಲಿ ಹೋಗಿ ಪರಿಶೀಲಿಸಿದಾಗ ಆ ಫ್ಲಾಟ್​ನಲ್ಲಿ ಸಿಕ್ಕ ಕೆಲವು ಸುಳಿವುಗಳನ್ನು ಆಧರಿಸಿ ಮತ್ತೊಮ್ಮೆ ಅಫ್ತಾಬ್​ನನ್ನು ವಿಚಾರಣೆ ಮಾಡಿದಾಗ ಆತ ಶ್ರದ್ಧಾಳನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರು ತಿಂಗಳ ಹಿಂದೆ ಶ್ರದ್ಧಾಳನ್ನು ಕತ್ತು ಹಿಸುಕಿ ಕೊಂದು, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿ ಮತ್ತು ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ವಿಲೇವಾರಿ ಮಾಡಿರುವುದಾಗಿ ಅಫ್ತಾಬ್ ಒಪ್ಪಿಕೊಂಡಿದ್ದಾನೆ. ಆತ ಕ್ರೌರ್ಯವನ್ನು ಕೇಳಿದ ಪೊಲೀಸರೇ ಶಾಕ್ ಆಗಿದ್ದರು. ಕೊಲೆ ನಡೆದು 6 ತಿಂಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಅಫ್ತಾಬ್​ ಇದೀಗ ಜೈಲಿನಲ್ಲಿದ್ದಾನೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

suddiyaana