ಪ್ರಚಾರದ ಕಾವು ಹೆಚ್ಚಾಗುತ್ತಿದ್ದಂತೆ ಹೂವಿನ ಹಾರಕ್ಕೆ ಫುಲ್‌ ಡಿಮ್ಯಾಂಡ್!

ಪ್ರಚಾರದ ಕಾವು ಹೆಚ್ಚಾಗುತ್ತಿದ್ದಂತೆ ಹೂವಿನ ಹಾರಕ್ಕೆ ಫುಲ್‌ ಡಿಮ್ಯಾಂಡ್!

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಕಾವು ರಂಗೇರುತ್ತಿದೆ. ರಾಜಕೀಯ ನಾಯಕರು ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಮುಂದಾಗಿದ್ದಾರೆ. ಸುಡು ಸುಡು ಬಿಸಿಲಿಗೂ ಕ್ಯಾರೇ ಅನ್ನದೇ ಪ್ರಚಾರ ಮಾಡ್ತಾ ಇದ್ದಾರೆ. ಎಲ್ಲ ಪಕ್ಷಗಳ ನಾಯಕರಿಗೆ ಸ್ವಾಗತಿಸಲು ಹೂಗುಚ್ಛ, ಹೂವಿನ ಮಾಲೆಗಳನ್ನು ಹಾಕಿ ಸ್ವಾಗತಿಸುತ್ತಿದ್ದಾರೆ. ಇದೀಗ ಹೂಗುಚ್ಛ, ತರಹೇವಾರಿ ಹೂವು, ಹಣ್ಣಿನ ಹಾರಗಳಿಗೆ ಡಿಮ್ಯಾಂಡ್‌ ಹೆಚ್ಚಾಗಿದೆ.

ಹೌದು, ಚುನಾವಣಾ ಕಾವು ರಂಗೇರುತ್ತಿದ್ದಂತೆ ಹೂವು, ಹಾರ, ಹಣ್ಣುಗಳಿಗೆ ಫುಲ್‌ ಡಿಮ್ಯಾಂಡ್‌ ಹೆಚ್ಚಾಗಿದೆ. ಮೊದ್ಲೆಲ್ಲಾ ಜಿಲ್ಲೆಗೆ ರಾಜ್ಯಮಟ್ಟದ ಅಥವಾ ರಾಷ್ಟ್ರಮಟ್ಟದ ನಾಯಕರು ಬಂದರೆ  ಮಾತ್ರ ಹೂಗುಚ್ಛ ನೀಡಿ ಸ್ವಾಗತಿಸಲಾಗುತ್ತಿತ್ತು. ಆದರೀಗ ಟ್ರೆಂಡ್‌ ಬದಲಾಗಿದ್ದು, ಪ್ರಚಾರ, ರ್ಯಾಲಿಗೆ ಬರುವ ತಮ್ಮ ನೆಚ್ಚಿನ ನಾಯಕರಿಗೆ ಅಭ್ಯರ್ಥಿಗಳು ಹಾಗೂ ಕಾರ‍್ಯಕರ್ತರು ದೊಡ್ಡ ಹಾರ ತಯಾರಿಸಿ ಜೆಸಿಬಿ ಅಥವಾ ಕ್ರೇನ್‌ ಮೂಲಕ ಹಾಕುತ್ತಿದ್ದಾರೆ.

ಇದನ್ನೂ ಓದಿ: ಡಿಕೆ ಬ್ರದರ್ಸ್ ಭದ್ರಕೋಟೆಯಲ್ಲಿ ಕಮಲ ಅರಳಿಸುತ್ತಾರಾ ಮೋದಿ?

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ನಗರದ ರಸ್ತೆ ಬದಿಯಲ್ಲಿ ಹೂಗುಚ್ಛ ಹಾಗೂ ಹಾರಗಳಿಗೆ ಭಾರಿ ಬೇಡಿಕೆ ಬಂದಿದೆ. ಎಲ್ಲೆಡೆ ಚುನಾವಣಾ ಪ್ರಚಾರ ಇರುವುದರಿಂದ ಮುಖಂಡರು ಹಾಗೂ ಕಾರ್ಯಕರ್ತರು ಹೂವು, ಸೇಬಿನ ಹಾರಕ್ಕೆ ಮೊರೆ ಹೋಗಿದ್ದಾರೆ. ಇದರಿಂದ ವ್ಯಾಪಾರಿಗಳು ಬೆಳಗ್ಗೆಯಿಂದ ಸಂಜೆವರೆಗೂ ತರಹೇವಾರಿ ಹೂಗಳ ಬೊಕ್ಕೆ ಹಾಗೂ ಹಣ್ಣಿನ ಹಾರವನ್ನು ಸಿದ್ಧಪಡಿಸುವುದರಲ್ಲಿ ನಿರತರಾಗಿದ್ದಾರೆ.

ಹಿಂದೆ 60, 70 ರೂ.ಗೆ ಸಿಗುತ್ತಿದ್ದ ಹೂವಿನ ಹಾರ ಈಗ 150 ರಿಂದ 200 ರ ಗಡಿದಾಟಿದೆ. ಚೆಂಡುಮಲ್ಲಿಗೆ, ಸುಗಂಧರಾಜ ಹಾಗೂ ಗುಲಾಬಿ ಹೂವಿನ ಹಾರಗಳಿಗೆ ಡಿಮ್ಯಾಂಡ್‌ ಸೃಷ್ಟಿಯಾಗಿದೆ. ಒಂದು ಜತೆ ಗುಲಾಬಿ ಹೂವಿನ ಹಾರ 300ರಿಂದ 500ರೂ. ವರೆಗೂ ಮಾರಾಟವಾಗುತ್ತಿದೆ. ಒಂದು ಜತೆ ಸುಗಂಧರಾಜ ಹೂವಿನ ಹಾರ 300ರಿಂದ 450 ರೂ., ವರೆಗೂ ಮಾರಾಟವಾಗುತ್ತಿವೆ. ಇನ್ನು ದೊಡ್ಡ ಹಾರಗಳಿಗೆ ಸಾವಿರಾರು ರೂ.ಗಳನ್ನು ನೀಡಬೇಕಿದೆ.

ಮೈಸೂರಿನಲ್ಲಿ ಬಿಸಿಲಿನ ತಾಪಮಾನ ಏರಿಕೆಯಾಗಿದ್ದು, 37 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಅಭ್ಯರ್ಥಿಗಳು ಬಿಸಿಲಿನಲ್ಲೇ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಹೀಗಾಗಿ ಮಜ್ಜಿಗೆ, ನೀರಿನ ಬಾಟಲ್‌ಗೆ ಇದೀಗ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ರಾಜಕೀಯ ಪಕ್ಷಗಳು ಬಿಸಿಲಿನಲ್ಲಿ ಬೆಂಡಾದ ಮುಖಂಡರು ಹಾಗೂ ಕಾರ್ಯಕರ್ತರಿಗೆ ನೀಡಲೆಂದೇ ನೀರಿನ ಬಾಟಲ್‌ ಹಾಗೂ ಮಜ್ಜಿಗೆ ಪ್ಯಾಕೇಟ್‌ ಖರೀದಿಸುತ್ತಿದ್ದಾರೆ.

Shwetha M