ಡಿಕೆ ಬ್ರದರ್ಸ್ ಭದ್ರಕೋಟೆಯಲ್ಲಿ ಕಮಲ ಅರಳಿಸುತ್ತಾರಾ ಮೋದಿ?

ಡಿಕೆ ಬ್ರದರ್ಸ್ ಭದ್ರಕೋಟೆಯಲ್ಲಿ ಕಮಲ ಅರಳಿಸುತ್ತಾರಾ ಮೋದಿ?

ಬೆಂಗಳೂರು ಗ್ರಾಮಾಂತರ ಕ್ಷೇತ್ರ ಈ ಬಾರಿಯ ಚುನಾವಣೆಯಲ್ಲಿ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದೆ. ಡಾ.ಸಿಎನ್ ಮಂಜುನಾಥ್ ಬಿಜೆಪಿ ಚಿಹ್ನೆಯಡಿ ಸ್ಪರ್ಧೆ ನಡೆಸಿದ್ರೂ ಕೂಡ ದೊಡ್ಡಗೌಡ್ರು ಮತ್ತು ಡಿಕೆ ಬ್ರದರ್ಸ್ ನಡುವಿನ ಪ್ರತಿಷ್ಠೆಯ ಕದನವಾಗಿದೆ. ಶತಾಯ ಗತಾಯ ಡಿಕೆ ಬ್ರದರ್ಸ್​​ಗೆ ಸೋಲಿನ ಪಾಠ ಕಲಿಸ್ಬೇಕು ಅಂತಾ ಬಿಜೆಪಿ-ಜೆಡಿಎಸ್ ಮೈತ್ರಿ ನಾಯಕರು ದೊಡ್ಡ ರಣವ್ಯೂಹವನ್ನೇ ಹೆಣೆಯುತ್ತಿದ್ದಾರೆ. ಈಗಾಗ್ಲೇ ಕೇಂದ್ರ ಗ್ರಹ ಸಚಿವ ಅಮಿತ್ ಶಾ ಬಿಜೆಪಿ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್ ಪರ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ್ದಾರೆ. ಇದೀಗ ಮಂಜುನಾಥ್ ಪರ ಪ್ರಧಾನಿ ನರೇಂದ್ರ ಮೋದಿ ಕೂಡ ಮತಯಾಚನೆ ನಡೆಸುವ ಸಾಧ್ಯತೆ ಇದೆ.

ಇದನ್ನೂ ಓದಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ಮುಂಬೈ ಇಂಡಿಯನ್ಸ್ ಸೆಣಸಾಟ- ಕೊಹ್ಲಿ, ರೋಹಿತ್ ಮೇಲೆ ಅಭಿಮಾನಿಗಳ ಕಣ್ಣು

ಡಿಕೆ ಬ್ರದರ್ಸ್ ಕೋಟೆಗೆ ಮೋದಿ? 

ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಅನ್ನು ಈ ಬಾರಿ ಶತಾಯಗತಾಯ ಸೋಲಿಸಲೇಬೇಕೆಂದು ಬಿಜೆಪಿ ಹಾಗೂ ಜೆಡಿಎಸ್ ಪಣತೊಟ್ಟಿವೆ. ಏಪ್ರಿಲ್ 19 ಅಥವಾ 20ರಂದು ಪ್ರಧಾನಿ ನರೇಂದ್ರ ಮೋದಿ ರಾಮನಗರಕ್ಕೆ ಆಗಮಿಸಿ ಬೃಹತ್ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಇದೇ ಸಮಾವೇಶದಲ್ಲಿ ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡ ಕೂಡ ಮೋದಿ ಜೊತೆ ವೇದಿಕೆ ಹಂಚಿಕೊಳ್ಳುವ ನೀರಿಕ್ಷೆ ಇದೆ. ರಾಮನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬೃಹತ್ ಚುನಾವಣಾ ಪ್ರಚಾರ ಸಮಾವೇಶ ನಡೆಸುವ ಬಗ್ಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಕೋರ್ ಕಮಿಟಿ, ಬಿಜೆಪಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿಗೆ ಪ್ರಸ್ತಾವನೆ ಸಲ್ಲಿಸಿದೆ. ಇದರಂತೆ, ಸಮಾವೇಶ ರಾಮನಗರದಲ್ಲಿ ನಡೆಯುವುದು ಬಹುತೇಕ ಖಚಿತವಾಗಿದೆ. ಸಮಾವೇಶದ ಮೂಲಕ ಬಿಜೆಪಿ-ಜೆಡಿಎಸ್ ಮೈತ್ರಿಯ ಒಗ್ಗಟ್ಟಿನ ಸಂದೇಶ ಸಾರುವುದು ಉಭಯ ಪಕ್ಷಗಳ ನಾಯಕರ ಯೋಜನೆಯಾಗಿದೆ. ಹಾಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ ಉಭಯ ಪಕ್ಷಗಳ ನಾಯಕರ ವೇದಿಕೆ ಹಂಚಿಕೊಂಡು ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಸ್ಪಷ್ಟ ಸಂದೇಶ ನೀಡಲು ಚಿಂತನೆ ನಡೆಸಲಾಗಿದೆ.

ಏಪ್ರಿಲ್ 26ರಂದು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರಕ್ಕೆ ಮತದಾನ ನಡೆಯಲಿದೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಹೋದರ ಹಾಗೂ ಹಾಲಿ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಮತ್ತು ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಹಾಗೂ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರ ಅಳಿಯ ಡಾ. ಸಿಎನ್ ಮಂಜುನಾಥ್ ಅವರ ನಡುವೆ ನೇರ ಪೈಪೋಟಿ ನಡೆಯುತ್ತಿದೆ. ಇಲ್ಲಿನ ವಿಶೇಷವೆಂದರೆ ಅಖಾಡದಲ್ಲಿ ಇವರಲ್ಲದೆ ಇನ್ನೂ ಇಬ್ಬರು ಸುರೇಶ್ ಮತ್ತು ಒಬ್ಬ ಮಂಜುನಾಥ್ ಇದ್ದಾರೆ. ಪ್ರಸ್ತುತ ಅಂತಿಮವಾಗಿ 15 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಕುಣಿಗಲ್, ಆನೇಕಲ್, ಮಾಗಡಿ, ರಾಮನಗರ, ಕನಕಪುರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಹಾಗೇ ಚನ್ನಪಟ್ಟಣದಲ್ಲಿ ಜೆಡಿಎಸ್ ನಿಂದ ಹೆಚ್​ಡಿ ಕುಮಾರಸ್ವಾಮಿ ಶಾಸಕರಾಗಿದ್ರೆ ಆರ್​ಆರ್​ನಗರ ಮತ್ತು ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿಯ ಶಾಸಕರಿದ್ದಾರೆ. ಮೇಲ್ನೋಟಕ್ಕೆ ಕಾಂಗ್ರೆಸ್​ಗೆ ಹೆಚ್ಚು ಪ್ಲಸ್ ಪಾಯಿಂಟ್ ಇದ್ದಂತೆ ಕಾಣ್ತಿದ್ರೂ ಕೂಡ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ ಸಜ್ಜನ ಮತ್ತು ಸರಳ ವ್ಯಕ್ತಿ ಆಗಿರೋದ್ರಿಂದ ಅಂತಿಮವಾಗಿ ಏನು ಬೇಕಾದ್ರೂ ಆಗಬಹುದು. ಡಾಕ್ಟರ್​ಗೆ ದೊಡ್ಡಗೌಡ್ರ ಫ್ಯಾಮಿಲಿಯ ವರ್ಚಸ್ಸಿನ ಜೊತೆಗೆ ಮೋದಿಯವ್ರ ಪ್ರಚಾರ ಸೇರಿದ್ರೆ ಮತಶಿಕಾರಿ ಈಸಿಯಾಗುತ್ತೆ ಅನ್ನೋದು ಮೈತ್ರಿ ನಾಯಕರ ಲೆಕ್ಕಾಚಾರ. ಪ್ರಧಾನಿ ಮೋದಿ ಕೂಡ ಇದೇ ಆಲೋಚನೆಯಲ್ಲೇ ಇದ್ದಾರೆ. ಕಳೆದ ಲೋಕಸಭಾ ಚುನಾವಣೆಯಂತೆಯೇ ಈ ಬಾರಿಯೂ ಕರ್ನಾಟಕದಲ್ಲಿ ಅತೀ ಹೆಚ್ಚು ಸೀಟ್​ಗಳನ್ನ ಗೆಲ್ಲುವ ಉದ್ದೇಶವನ್ನ ಬಿಜೆಪಿ ಹೊಂದಿದೆ. ಇದಕ್ಕಾಗಿ ಮುಂದಿನ ಭಾನುವಾರ ಅಂದ್ರೆ ಏಪ್ರಿಲ್ 14 ರಂದು ಮಂಗಳೂರು ಮತ್ತು ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಮೊದಲಿಗೆ ಮಂಗಳೂರಿಗೆ ಭೇಟಿ ನೀಡಲಿರುವ ಮೋದಿ, ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಪರ ಮತಯಾಚನೆ ನಡೆಸಲಿದ್ದಾರೆ. ನಂತರ ಬೆಂಗಳೂರಿಗೆ ತೆರಳಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ರೋಡ್ ಶೋ ನಡೆಸಿ ಮತಯಾಚನೆ ನಡೆಸಲಿದ್ದಾರೆ. ಬಳಿಕ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಪ್ರಧಾನಿಯನ್ನ ಕರೆಸಿ ಪ್ರಚಾರ ನಡೆಸಲು ಬಿಜೆಪಿ ಜೆಡಿಎಸ್ ನಾಯಕರು ಪ್ಲ್ಯಾನ್ ಮಾಡಿದ್ದಾರೆ. ಮೋದಿ ಮುಖದ ಮೇಲೆ ಡಿಕೆ ಬ್ರದರ್ಸ್​ಗೆ ಡಿಚ್ಚಿ ಕೊಡಲು ಕಸರತ್ತು ನಡೆಸುತ್ತಿದ್ದಾರೆ.

Shwetha M