ವೀರೋಚಿತ ಸೋಲು ಕಂಡ ಪಂಜಾಬ್ ಕಿಂಗ್ಸ್ – ಗೆಲುವಿನ ನಾಗಾಲೋಟ ಮುಂದುವರಿಸಿದ ಸನ್‌ರೈಸರ್ಸ್ ಹೈದರಾಬಾದ್

ವೀರೋಚಿತ ಸೋಲು ಕಂಡ ಪಂಜಾಬ್ ಕಿಂಗ್ಸ್ – ಗೆಲುವಿನ ನಾಗಾಲೋಟ ಮುಂದುವರಿಸಿದ ಸನ್‌ರೈಸರ್ಸ್ ಹೈದರಾಬಾದ್

ಸನ್​ ರೈಸರ್ಸ್ ಹೈದರಾಬಾದ್ ಕೊನೇ ಗಳಿಗೆಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಜಯ ಸಾಧಿಸಿದೆ. ಆದರೆ, ರಣ ರೋಚಕ ಕಾದಾಟದಲ್ಲಿ ಪಂಜಾಬ್ ಕಿಂಗ್ಸ್ ಕಂಡಿದ್ದು ಮಾತ್ರ ವೀರೋಚಿತ ಸೋಲು. ಇನ್ನೇನು ಗೆಲುವು ಪಂಜಾಬ್ ಕಿಂಗ್ಸ್ ಕೈ ವಶವಾಗುವ ಎಲ್ಲಾ ಸೂಚನೆಯಿತ್ತು. ಆದ್ರೆ, ಕೊನೇ ಓವರ್‌ನಲ್ಲಿ 26 ರನ್ ಬಂದರೂ ಕೂಡಾ ಪಂಜಾಬ್ ಹುಡುಗರಿಗೆ ಗೆಲ್ಲಲು ಸಾಧ್ಯವಾಗಲೇ ಇಲ್ಲ.

ಇದನ್ನೂ ಓದಿ: 3 ರನ್ ಗೆ ಧೋನಿ ಬಂದಿದ್ದೇಕೆ? – ಜಡ್ಡುಗೆ ಕ್ರಿಕೆಟ್ ತಲಪತಿ ಎಂದಿದ್ಯಾರು?- ರುತುರಾಜ್ ಲೆಕ್ಕಕ್ಕಷ್ಟೇ ನಾಯಕನಾ?

ಪಂಜಾಬ್ ಕಿಂಗ್ಸ್‌ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್ ಜಯ ಸಾಧಿಸಿದೆ. ಚಂಡೀಗಢದ ಮಹಾರಾಜ ಯದವೀಂದ್ರ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಂಜಾಬ್ ಕಿಂಗ್ಸ್​ ತಂಡದ ನಾಯಕ ಶಿಖರ್ ಧವನ್ ಬೌಲಿಂಗ್ ಆಯ್ದುಕೊಂಡಿದ್ದರು. ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ತಂಡದ ಆರಂಭ ನೀರಸವಾಗಿತ್ತು. ಆರ್ಶ್‌ದೀಪ್‌ ಸಿಂಗ್‌ ಭರ್ಜರಿ ಬೌಲಿಂಗ್‌ ಮುಂದೆ ಸನ್‌ರೈಸರ್ಸ್‌ ಹೈದರಾಬಾದ್‌ ಸ್ಟಾರ್ ಬ್ಯಾಟರ್‌ಗಳು ರನ್‌ಗಾಗಿ ಶತಪ್ರಯತ್ನ ಪಟ್ಟಿದ್ದರು. ತಂಡದ ಟಾಪ್‌ ಆರ್ಡರ್‌ ಬ್ಯಾಟ್ಸ್‌ಮನ್‌ಗಳು ಮಿಂಚಲು ವಿಫಲವಾದ ನಡುವೆಯೂ ಸನ್‌ರೈಸರ್ಸ್ ಹೈದರಾಬಾದ್‌ ತಂಡ 9 ವಿಕೆಟ್‌ಗೆ 182 ರನ್‌ ಬಾರಿಸಲು ಯಶಸ್ವಿಯಾಯ್ತು. ಸನ್‌ ರೈಸರ್ಸ್‌ ತಂಡದ ಪರವಾಗಿ ಬ್ಯಾಟಿಂಗ್‌ನಲ್ಲಿ ಮಿಂಚಿದ ನಿತೀಶ್‌ ರೆಡ್ಡಿ ಕೇವಲ 37 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 4 ಬೌಂಡರಿಯೊಂದಿಗೆ 64 ರನ್‌ ಬಾರಿಸುವ ಮೂಲಕ ತಂಡದ ದೊಡ್ಡ ಮೊತ್ತಕ್ಕೆ ಕಾರಣರಾದರು. ಆದರೆ, ಹಿಂದಿನ ಪಂದ್ಯಗಳಲ್ಲಿ ಸನ್‌ರೈಸರ್ಸ್‌ ತಂಡದ ಬ್ಯಾಟಿಂಗ್‌ನ ಶಕ್ತಿಯಾಗಿ ನಿಂತಿದ್ದ ಹೆನ್ರಿಚ್‌ ಕ್ಲಾಸೆನ್‌, ಅಭಿಷೇಕ್‌ ಶರ್ಮ, ಟ್ರಾವಿಸ್‌ ಹೆಡ್‌ ಈ ಬಾರಿ ಸಂಪೂರ್ಣವಾಗಿ ವಿಫಲರಾದರು.

ಆದರೆ, ಇಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಸನ್‌ರೈಸರ್ಸ್‌ ತಂಡಕ್ಕೆ ಅದೃಷ್ಟ ಕೈಹಿಡಿದಿತ್ತು. ಮೊದಲ ಓವರ್‌ನಲ್ಲಿಯೇ ಟ್ರಾವಿಸ್‌ ಹೆಡ್‌ ವಿಕೆಟ್‌ ಕೀಪರ್‌ಗೆ ಕ್ಯಾಚ್‌ ನೀಡಿ ಔಟಾಗಿದ್ದರೂ, ಪಂಜಾಬ್‌ ತಂಡ ಡಿಆರ್‌ಎಸ್‌ನಲ್ಲಿ ಪ್ರಶ್ನೆ ಮಾಡದ ಕಾರಣ ಜೀವದಾನ ಪಡೆದುಕೊಂಡಿದ್ದರು. ಆದರೆ, ಇದು ಟ್ರಾವಿಸ್‌ ಹೆಡ್‌ಗೆ ಹೆಚ್ಚಿನ ಲಾಭವೇನೂ ತಂದುಕೊಡಲಿಲ್ಲ. 15 ಎಸೆತಗಳಳಲ್ಲಿ ನಾಲ್ಕು ಬೌಂಡರಿಗಳೊಂದಿಗೆ 21 ರನ್‌ ಬಾರಿಸಿದ್ದ ಟ್ರಾವಿಸ್‌ ಹೆಡ್‌, 4ನೇ ಓವರ್‌ನಲ್ಲಿ ಆರ್ಶ್‌ದೀಪ್‌ ಸಿಂಗ್‌ ಅವರ ಮೊದಲ ವಿಕೆಟ್‌ ಆಗಿ ನಿರ್ಗಮಿಸಿದರು. ಇದೇ ಮೊತ್ತಕ್ಕೆ ಏಡೆನ್‌ ಮಾರ್ಕ್ರಮ್‌ ಕೂಡ ಶೂನ್ಯಕ್ಕೆ ಔಟಾದಾಗ ಸನ್‌ ರೈಸರ್ಸ್‌ ತಂಡ ಅಘಾತ ಕಂಡಿತ್ತು. ಈ ಮೊತ್ತಕ್ಕೆ 12 ರನ್‌ ಸೇರಿಸುವ ವೇಳೆಗೆ ಅದ್ಭುತ ಫಾರ್ಮ್‌ನಲ್ಲಿರುವ ಇನ್ನೊಬ್ಬ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮ ಕೂಡ ಔಟಾಗಿದ್ದರು. ಈ ಹಂತದಲ್ಲಿ ಯುವ ಆಟಗಾರ ನಿತೀಶ್‌ ರೆಡ್ಡಿ ಆಡಿದ ಇನ್ನಿಂಗ್ಸ್‌ ತಂಡಕ್ಕೆ ಚೇತರಿಕೆ ನೀಡಿತು. ರಾಹುಲ್‌ ತ್ರಿಪಾಠಿ (11) ಹೆಚ್ಚಿನ ಕೊಡುಗೆ ನೀಡಲು ವಿಫಲವಾದರೆ, ಹೆನ್ರಿಚ್‌ ಕ್ಲಾಸೆನ್‌ 9 ಎಸೆತಗಳಲ್ಲಿ 9 ರನ್‌ ಸಿಡಿಸಿ ಔಟಾದಾಗ ಸನ್‌ರೈಸರ್ಸ್‌ ತಂಡದ ಮೊತ್ತ 100 ರನ್‌ ಆಗಿದ್ದವು. ಸಾಧಾರಣ ಮೊತ್ತಕ್ಕೆ ಕುಸಿಯುವ ಹಂತದಲ್ಲಿದ್ದ ವೇಳೆ ಆಸರೆಯಾದ ಅಬ್ದುಲ್‌ ಸಮದ್‌ ಕೇವಲ 12 ಎಸೆತಗಳಲ್ಲಿ 5 ಬೌಂಡರಿಗಳಿದ್ದ 25 ರನ್‌ ಸಿಡಿಸಿ ತಂಡದ ಪಾಲಿಗೆ ಆಪದ್ಭಾಂದವರೆನಿಸಿದ್ದರು.  ತಂಡದ ಮೊತ್ತ 150ರ ಗಡಿ ಮುಟ್ಟಿಸಿ ಅಬ್ದುಲ್‌ ಸಮದ್‌ ಔಟಾದ ಬಳಿಕ, ಶಾಬಾಜ್‌ ಅಹ್ಮದ್‌ (14), ಭುವನೇಶ್ವರ್‌ ಕುಮಾರ್‌ ಹಾಗೂ ಜೈದೇವ್‌ ಉನಾದ್ಕತ್‌ ಕೆಲ ಉಪಯುಕ್ತ ರನ್‌ ಬಾರಿಸಿದ್ದರಿಂದ ತಂಡದ ಮೊತ್ತ 180ರ ಗಡಿ ದಾಟಿತು. ಪಂಜಾಬ್‌ ಕಿಂಗ್ಸ್‌ ತಂಡದ ಪರವಾಗಿ ಆರ್ಶ್‌ದೀಪ್‌ ಸಿಂಗ್‌ 29 ರನ್‌ ನೀಡಿ 4 ವಿಕೆಟ್‌ ಉರುಳಿಸಿದರು.ಸ್ಯಾಮ್‌ ಕರ್ರನ್‌ ಹಾಗೂ ಹರ್ಷಲ್‌ ಪಟೇಲ್‌ ತಲಾ 2 ವಿಕೆಟ್‌ ಉರುಳಿಸಿದರೆ, ಕಗೀಸೋ ರಬಾಡ ಒಂದು ವಿಕೆಟ್‌ ಪಡೆದುಕೊಂಡಿದ್ದರು.

183 ರನ್​ಗಳ ಟಾರ್ಗೆಟ್ ಬೆನ್ನು ಹತ್ತಿದ ಪಂಜಾಬ್ ಕೂಡ ಕಳಪೆ ಆರಂಭ ಕಂಡಿತತು. ಧವನ್ 14 ರನ್ ಗಳಿಸಿ ಔಟ್ ಆದರೆ, ಬ್ರೇಸ್ಟೋ ಸೊನ್ನೆ ಸುತ್ತಿದರು. ಸ್ಯಾಮ್ ಕರನ್, ರಾಜಾ ಕೂಡ ದೊಡ್ಡ ಮೊತ್ತ ಕಲೆ ಹಾಕಲಿಲ್ಲ. 19 ಓವರ್​ಗಳು ಪೂರ್ಣಗೊಳ್ಳುವಾಗ ಪಂಜಾಬ್​ ತಂಡ 154 ರನ್​ಗೆ 6 ವಿಕೆಟ್​ಗಳನ್ನು ಕಳೆದುಕೊಂಡಿತ್ತು. ಕೊನೆಯ ಓವರ್​ನಲ್ಲಿ ಬೇಕಾಗಿದ್ದು 29 ರನ್​ಗಳು. ಉನಾದ್ಕಟ್ ಅವರು ಬೌಲಿಂಗ್​ ಇಳಿದರು. ಮೊದಲ ಬಾಲ್ ಕ್ಯಾಚ್ ಬಿಟ್ಟಿದ್ದರಿಂದ ಸಿಕ್ಸ್ ಹೋಯಿತು. ನಂತರ ಎರಡು ವೈಡ್​ಗಳನ್ನು ಹಾಕಿದರು ಉನಾದ್ಕಟ್. ಎರಡನೇ ಬಾಲ್​ಗೆ ಹೊಡೆದ ಶಾಟ್ ಕೂಡ ಸಿಕ್ಸ್​ ಗಡಿಯಲ್ಲಿ ಫೀಲ್ಡರ್​ನ ಕೈಗೆ ಸಿಗದೆ ಸಿಕ್ಸ್ ಹೋಯಿತು. ನಂತರ ಮೂರು ಹಾಗೂ ನಾಲ್ಕನೇ ಬಾಲ್​ಗೆ ತಲಾ ಎರಡು ರನ್​ಗಳು ಬಂದವು. ನಾಲ್ಕನೇ ಬಾಲ್​ನಲ್ಲಿ ಸುಲಭ ಕ್ಯಾಚ್​ನ ಕೈ ಚೆಲ್ಲಲಾಯಿತು. ಅಷ್ಟೇ ಅಲ್ಲ, ಮೂರು ಹಾಗೂ ನಾಲ್ಕನೇ ಬಾಲ್​ನಲ್ಲಿ ರನೌಟ್ ಅವಕಾಶ ಇತ್ತು. ಅದು ಕೂಡ ಕೈತಪ್ಪಿತು. ನಂತರ ಮತ್ತೊಂದು ವೈಡ್ ಬಾಲ್ ಆಯಿತು. ಐದನೇ ಬಾಲ್​ಗೆ ಒಂದು ರನ್ ಹಾಗೂ ಆರನೇ ಬಾಲ್​ಗೆ ಸಿಕ್ಸ್ ಬಂತು. ಈ ಮೂಲಕ ಹೈದರಾಬಾದ್ 2 ರನ್​ಗಳಿಂದ ಗೆಲುವು ಕಂಡಿತು. ಅಶುತೋಷ್ ಶರ್ಮಾ ಅವರು 15 ಬಾಲ್​ಗೆ 33 ರನ್ ಹೊಡೆದರೂ ಗೆಲುವಿನ ನಗೆ ಬೀರಲು ಸಾಧ್ಯವಾಗಿಲ್ಲ.

Sulekha