ಬಂಡಾಯದಿಂದ ಹಿಂದಕ್ಕೆ ಸರಿಯಲು ಎರಡು ಷರತ್ತು ಹಾಕಿದ ಈಶ್ವರಪ್ಪ!
ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪನವರ ಬಂಡಾಯ ಶಮನಗೊಳ್ಳುತ್ತಿಲ್ಲ. ಬಂಡಾಯದ ಬಿಸಿ ಬಿಸಿಲಿನಷ್ಟೇ ಹೆಚ್ಚಾಗುತ್ತಿದೆ. ಇನ್ನೂ ಸಮಯ ಮೀರಿಲ್ಲ, ವಾಪಸ್ ಬನ್ನಿ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಮನವಿಗೆ ಈಶ್ವರಪ್ಪ ಖಾರವಾಗಿ ತಿರುಗೇಟು ನೀಡಿದ್ದಾರೆ. ತಾನು ಬಿಜೆಪಿ ಬರ್ಬೇಕಂದ್ರೆ ಈಶ್ವರಪ್ಪ ಎರಡು ಕಠಿಣ ಷರತ್ತನ್ನು ಹಾಕಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿ ಪ್ರಚಾರ ವೇದಿಕೆಯ ಫ್ಲೆಕ್ಸ್‌ನಲ್ಲಿ ಬಿಜೆಪಿ ಅಭ್ಯರ್ಥಿಯ ಫೋಟೋ!
ಈಶ್ವರಪ್ಪನವರು ಮತ್ತೆ ಮೋದಿ ಪ್ರಧಾನಿಯಾಗಬೇಕೆಂದು ಬಯಸುತ್ತಿರುವವರು, ಯಾವುದೋ ಪರಿಸ್ಥಿತಿ ಅವರನ್ನು ಬಂಡಾಯ ಏಳುವಂತೆ ಮಾಡಿದೆ. ಅವರು ಹಿರಿಯರು ನಮ್ಮೆಲ್ಲರ ಮಾರ್ಗದರ್ಶಕರು, ಇನ್ನೂ ಸಮಯ ಮೀರಿಲ್ಲ, ವಾಪಸ್ ಬನ್ನಿ ಎಂದು ವಿಜಯೇಂದ್ರ, ಈಶ್ವರಪ್ಪನವರಲ್ಲಿ ಮನವಿ ಮಾಡಿದ್ದರು. ಈ ಮನವಿಗೆ ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ನಿನ್ನ ಅಣ್ಣ ರಾಘವೇಂದ್ರನನ್ನು ಶಿವಮೊಗ್ಗ ಲೋಕಸಭಾ ಕಣದಿಂದ ಹಿಂದಕ್ಕೆ ಸರಿಸು, ನೀನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡು. ಅದಾದ ಕೂಡಲೇ, ನಾನು ವಾಪಸ್ ಬರುತ್ತೇನೆ.. ಇದು ಸಾಧ್ಯನಾ ಅಂತಾ ಈಶ್ವರಪ್ಪ, ವಿಜಯೇಂದ್ರಗೆ ಸವಾಲು ಹಾಕಿದ್ದಾರೆ.
ವಿಜಯೇಂದ್ರನ ಅಪ್ಪ ಕೇಂದ್ರ ಚುನಾವಣಾ ಸಮಿತಿಯ ಸದಸ್ಯ, ಇನ್ನೊಬ್ಬ ಶಿವಮೊಗ್ಗದ ಸಂಸದ, ಇವರು ಶಿಕಾರಿಪುರ ಶಾಸಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ. ಲಿಂಗಾಯತರು ಅಧ್ಯಕ್ಷರು ಆಗಬೇಕೆಂದು ಇದ್ದರೆ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ, ಒಕ್ಕಲಿಗರು ಬೇಕೆಂದಿದ್ದರೆ ಸಿ.ಟಿ.ರವಿಗೆ, ಇಲ್ಲದಿದ್ದರೆ ನನಗೆ ರಾಜ್ಯಾಧ್ಯಕ್ಷ ಹುದ್ದೆ ಬಿಟ್ಟು ಕೊಡಲಿ ನೋಡೋಣ ಎಂದು ಈಶ್ವರಪ್ಪ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.