ಸಮಾಜವಾದಿ ಪಕ್ಷದ ಅಭ್ಯರ್ಥಿ ಕಾಜಲ್ ನಿಶಾದ್ ಆಸ್ಪತ್ರೆಗೆ ದಾಖಲು
ಲೋಕಸಭೆ ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿದೆ. ಈ ಹೊತ್ತಲ್ಲೇ ಗೋರಖ್‌ಪುರ ಲೋಕಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿ ಕಾಜಲ್ ನಿಶಾದ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಲಕ್ನೋದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು!
ಕಾಜಲ್ ನಿಶಾದ್ ಅನಾರೋಗ್ಯದ ಕುರಿತು ಅವರ ಪತಿ ಸಂಜಯ್ ನಿಶಾದ್ ಮಾಹಿತಿ ನೀಡಿದ್ದಾರೆ. ಕಾಜಲ್ ಅವರು ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಏಪ್ರಿಲ್ 5 ರಂದು ಆಕೆಯ ಆರೋಗ್ಯದಲ್ಲಿ ಏರುಪೇರಾಗಿತ್ತು. ಕಾಜಲ್ ಅವರನ್ನು ಸ್ಟಾರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಭಾನುವಾರ ಅವರಿಗೆ ಹೃದಯ ಸ್ತಂಭನವಾಗಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸಗಾಗಿ ವೈದ್ಯರು ಅವರನ್ನು ಲಕ್ನೋಗೆ ಕಳುಹಿಸಿದ್ದಾರೆ ಎಂದು ತಿಳಿಸಿದ್ದಾರೆ.
41 ವರ್ಷದ ಕಾಜಲ್ ನಿಶಾದ್ ಅವರು ಗೋರಖ್‌ಪುರ ಕ್ಷೇತ್ರದಿಂದ ನಟ ಮತ್ತು ಹಾಲಿ ಬಿಜೆಪಿ ಸಂಸದ ರವಿ ಕಿಶನ್ ಶುಕ್ಲಾ ವಿರುದ್ಧ ಕಣದಲ್ಲಿದ್ದಾರೆ. 2019 ರಲ್ಲಿ ಮೊದಲ ಬಾರಿಗೆ ಈ ಸ್ಥಾನವನ್ನು ಗೆದ್ದ ನಂತರ ಮರುಚುನಾವಣೆಗೆ ಸ್ಪರ್ಧಿಸುತ್ತಿರುವ ರವಿ ಕಿಶನ್, ಈ ಸ್ಥಾನದಲ್ಲಿ ಗೆಲುವು ಸಾಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಕಾಜಲ್ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವಿನ ಒಪ್ಪಂದದ ಅಡಿಯಲ್ಲಿ ಇಂಡಿಯಾ ಬ್ಲಾಕ್ ಅಭ್ಯರ್ಥಿಯಾಗಿದ್ದಾರೆ.