ಯುಗಾದಿ ಸಂಭ್ರಮಕ್ಕೂ ಬೆಲೆ ಏರಿಕೆ ಬಿಸಿ – ಹೂವು-ಹಣ್ಣುಗಳ ದರ ಹೇಗಿದೆ ಗೊತ್ತಾ..?
ನಾಡಿನೆಲ್ಲಡೆ ಯುಗಾದಿ ಸಂಭ್ರಮ ಮನೆ ಮಾಡುತ್ತಿದೆ. ಯುಗಾದಿ ಹಬ್ಬಕ್ಕೆ ಊರಿಗೆ ಹೋಗೋಣ ಅಂದ್ರೆ, ಬಸ್ ರೇಟ್ ಡಬಲ್ ಆಗಿದೆ. ಮನೇಲೇ ಹಬ್ಬ ಮಾಡೋಣ ಅಂದುಕೊಂಡರೇ ಜೇಬು ಖಾಲಿ ಆಗೋದು ಪಕ್ಕಾ.. ಯಾಕಂದ್ರೆ ಹೂ ಹಣ್ಣುಗಳ ಬೆಲೆ ಗಗನಕ್ಕೇರಿದೆ.
ಹೌದು, ಮಾರ್ಕೆಟ್ನಲ್ಲಿ ಹೂ, ಹಣ್ಣುಗಳಿಗೆ ಸಖತ್ ಡಿಮ್ಯಾಂಡ್ ಬಂದು ಬಿಟ್ಟಿದೆ. ಕೆ.ಆರ್ ಮಾರುಕಟ್ಟೆ ಸೇರಿದಂತೆ ಬೆಂಗಳೂರಿನ ಮಾರುಕಟ್ಟೆಗಳು ಜನರಿಂದ ತುಂಬಿ ತುಳುಕುತ್ತಿದೆ. ಹಿಂದೂಗಳ ಹೊಸ ವರ್ಷ ಯುಗಾದಿ ಹಬ್ಬಕ್ಕೆ ಮೂರು ದಿನವಿದ್ದು, ಹಬ್ಬದ ಸಿದ್ಧತೆ ಜೋರಾಗಿದೆ. ಮಾರುಕಟ್ಟೆಗಳಲ್ಲಿ ಯುಗಾದಿ ಹಬ್ಬದ ವ್ಯಾಪಾರ ವಹಿವಾಟು ಜೋರಾಗಿದ್ದು, ಬೇವು ಬೆಲ್ಲದ ಹಬ್ಬಕ್ಕೆ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಮಾರುಕಟ್ಟೆಗಳಲ್ಲಿ ಹೂವು ಮತ್ತು ಹಣ್ಣುಗಳ ದರ ಗಗನಕ್ಕೇರಿದೆ. ಒಂದು ವಾರದ ಹಿಂದೆ ಇದ್ದ ಬೆಲೆಗಿಂತ ಇದೀಗ ಹೂವು ಮತ್ತು ಹಣ್ಣುಗಳ ದರ ದುಪಟ್ಟಾಗಿದೆ.
ಇದನ್ನೂ ಓದಿ: ಶಾಲಾ ಮಕ್ಕಳಿಗೆ ಏ. 11 ರಿಂದ ಮೇ 29 ರವರೆಗೆ ಬೇಸಿಗೆ ರಜೆ- ರಜೆಯಲ್ಲಿ ಶಾಲಾ ಮಕ್ಕಳಿಗೆ ಆಹಾರ ಧಾನ್ಯ ವಿತರಿಸಲಾಗುತ್ತಾ?
ಸದ್ಯ ಮಾರುಕಟ್ಟೆಗಳಲ್ಲಿ ಹೂವುಗಳ ದರ ವಿವರ ಇಲ್ಲಿದೆ. ಈ ಹಿಂದೆ 100 ರೂಪಾಯಿ ಇದ್ದ 1 ಕೆಜಿ ಗುಲಾಬಿ 400 ರೂಪಾಯಿ ಆಗಿದೆ. ಒಂದು ಕೆಜಿಗೆ 300 ರೂಪಾಯಿ ಇದ್ದ ಸೇವಂತಿ 600 ರಿಂದ 900 ರೂಪಾಯಿಗೆ ಏರಿಕೆಯಾಗಿದೆ. ಚೆಂಡೂ ಹೂ 50 ರೂಪಾಯಿಯಿಂದ 100 ರೂಪಾಯಿ ಆಗಿದ್ದು, ಸುಗಂಧರಾಜದ ಬೆಲೆ 50 ರೂಪಾಯಿಯಿಂದ 160 ರೂಪಾಯಿ ಆಗಿದೆ. ಹಾಗೂ ಕನಕಾಂಬರಿ 600 ರೂಪಾಯಿಯಿಂದ 800 ರೂಪಾಯಿಗೆ ಏರಿಕೆ ಕಂಡಿದೆ.
ಇನ್ನು ಹಣ್ಣಿನ ದರದಲ್ಲೂ ಏರಿಕೆ ಕಂಡಿದೆ. ಕಳೆದ ಕೆಲ ದಿನಗಳ ಹಿಂದೆ ಹೋಲಿಸಿದರೆ ಪ್ರಸ್ತುತ ಕೆಲವು ಹಣ್ಣಿನ ದರ ದುಪಟ್ಟು ಹೆಚ್ಚಾಗಿದೆ. ಸದ್ಯ ಕಿತ್ತಾಳೆ ಹಣ್ಣಿಗೆ ಭಾರೀ ಬೆಡಿಕೆ ಇದ್ದು, ಈ ಹಿಂದೆ ಕೆ.ಜಿ.ಗೆ 70 ರೂಪಾಯಿಗಳಿದ್ದ ಕಿತ್ತಳೆ ಹಣ್ಣಿನ ಬೆಲೆ ಇದೀಗ 120-150 ರೂಪಾಯಿ ಆಗಿದೆ. ಪಪ್ಪಾಯ ಹಣ್ಣಿನ ಬೆಲೆ 50 ರೂಪಾಯಿಂದ 70 ರೂಪಾಯಿಗೆ ಏರಿಕೆ ಆಗಿದೆ. ಮಾವಿನ ಹಣ್ಣಿನ ದರ 150 ರೂಪಾಯಿಯಿದ್ದು, ಇತರ ಹಣ್ಣುಗಳ ಬೆಲೆ ಕೂಡ ಏರಿಕೆ ಕಂಡಿದೆ. ಇನ್ನು ಪೂಜೆಗೆ ಬೇಕಾದ ತೆಂಗಿನ ಕಾಯಿ, ಬಾಳೆ ಹಣ್ಣು, ತೋರಣ, ಬೇವು ಹಾಗೂ ನಿಂಬೆ ಹಣ್ಣುಗಳ ಬೆಲೆ ಕೂಡ ಹೆಚ್ಚಾಗಿದೆ. ಈ ಬಾರಿ ರಾಜ್ಯದಲ್ಲಿ ಬರ ಆವರಿಸಿದ್ದು, ಹೂವು ಬೆಳೆಗಾರರು ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ನೀರಿನ ಸಮಸ್ಯೆ ಹಾಗೂ ತಾಪಮಾನ ಗರಿಷ್ಠ ಏರಿಕೆಯಿಂದ ಎಲ್ಲಾ ಬೆಳೆಗಳು ಹಾಳಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೂವು ಹಣ್ಣುಗಳ ಬೆಲೆ ಹಬ್ಬದ ಸಮಯದಲ್ಲಿ ಗಗನಕ್ಕೇರಿದೆ.