ತಪ್ಪಾಗಿ ಖರೀದಿಸಿದ್ದ ಆಟಗಾರನೇ ಪಂಜಾಬ್ ಗೆಲ್ಲಿಸಿದ ಹೀರೋ! – ಇನ್ನಾದ್ರೂ ಪಾಠ ಕಲಿಯುತ್ತಾ RCB?
ಈ ಆಟಗಾರನನ್ನು ಖರೀದಿ ಮಾಡುವಾಗ ಪಂಜಾಬ್ ಕಿಂಗ್ಸ್ ಗೊಂದಲಕ್ಕೆ ಒಳಗಾಗಿತ್ತು.. ಫ್ರಾಂಚೈಸಿ ಮಾಲೀಕರಾದ ಪ್ರೀತಿ ಜಿಂಟಾ ಮತ್ತು ನೆಸ್ ವಾಡಿಯಾ ಮುಖ ಮುಖ ನೋಡಿಕೊಂಡಿದ್ದರು.. ಆಟಗಾರರ ಆಕ್ಷನ್ ವೇಳೆ ಹರಾಜು ಕೂಗುತ್ತಿದ್ದ ಮಲ್ಲಿಕಾ ಸಾಗರ್ ಗೂ ಒಂದು ಕ್ಷಣ ಅಚ್ಚರಿಯಾಗಿತ್ತು.. ಯಾಕಂದ್ರೆ ಈ ಆಟಗಾರನ ಹರಾಜು ಮುಗಿದ್ಮೇಲೆ ಪ್ರೀತಿ ಜಿಂಟಾ ಮತ್ತು ನೆಸ್ ವಾಡಿಯಾ, ಆಟಗಾರರ ಲಿಸ್ಟ್ನಲ್ಲಿ ತಾವು ನಿಜಕ್ಕೂ ಖರೀದಿಸಬೇಕಿದ್ದ ಆಟಗಾರ ಇವನೇನಾ ಅಂತ ಹುಡುಕ್ತಾ ಇದ್ರು.. ಆದ್ರೆ ಈಗ ಅದೇ ಆಟಗಾರ ಪಂಜಾಬ್ ಕಿಂಗ್ಸ್ ನ ಹೀರೋ ಆಗಿದ್ದಾನೆ.. ಸ್ಟಾರ್ ಆಟಗಾರರು ಮುಗ್ಗರಿಸಿದಾಗ ತಾನೇ ತಂಡವನ್ನು ಮೇಲೆತ್ತಿದ್ದಾನೆ.. ಗೆಲುವಿನ ದಡ ಸೇರಿಸುವವರೆಗೂ ಕ್ರೀಸ್ನಲ್ಲಿ ನಿಂತು ಕೆಚ್ಚೆದೆಯಿಂದ ಆಡಿದ್ದಾನೆ.. ಈ ಡೊಮೆಸ್ಟಿಕ್ ಪ್ಲೇಯರ್ನ ಸಾಧನೆಯಿಂದ ನಮ್ಮ ಆರ್ಸಿಬಿ ತಂಡದವರು ಕಲೀಬೇಕಾದ ಪಾಠ ಕೂಡ ದೊಡ್ಡದಿದೆ..
ಇದನ್ನೂ ಓದಿ: ಗುಜರಾತ್ ವಿರುದ್ಧ ಮೂರು ವಿಕೆಟ್ಗಳ ಜಯ ಪಡೆದ ಪಂಜಾಬ್ ಕಿಂಗ್ಸ್
ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ಆಟ ಬಹುತೇಕ ಒನ್ಸೈಡ್ ಆಗಿ ಮುಗಿದು ಹೋಗುತ್ತೆ ಅಂತಲೇ ಎಲ್ಲರೂ ಅಂದ್ಕೊಂಡಿದ್ದರು.. ಮೊದಲ ಹತ್ತು ಓವರ್ ಮುಗಿದಾಗ, ಟಿವಿ ಆಫ್ ಮಾಡಿದವರೇ ಹೆಚ್ಚು.. ಬೋರಿಂಗ್ ಮ್ಯಾಚ್.. ಇನ್ನೇನು ಮುಗಿದು ಹೋಗುತ್ತೆ ಅಂತಲೇ ಎಲ್ಲರೂ ಭಾವಿಸಿದ್ದರು.. ಯಾಕಂದ್ರೆ ಪಂಜಾಬ್ ಕಿಂಗ್ಸ್ನ ಸ್ಟಾರ್ ಆಟಗಾರರೆಲ್ಲಾ ಅಷ್ಟೊತ್ತಿಗಾಗಲೇ ಪೆವಿಲಿಯನ್ ಸೇರಿದ್ದರು.. ಆದ್ರೆ ಅಂತಹ ಬೋರಿಂಗ್ ಮ್ಯಾಚನ್ನೇ ಥ್ರಿಲ್ಲರ್ ಆಗಿ ಕನ್ವರ್ಟ್ ಮಾಡಿ, ಗೇಮ್ ಫಿನಿಷ್ ಮಾಡಿದ್ದು ಶಶಾಂಕ್ ಸಿಂಗ್.. ಇದೇ ಶಶಾಂಕ್ ಸಿಂಗ್ ನನ್ನು ಟೀಂಗೆ ಆಕ್ಷನ್ನಲ್ಲಿ ಖರೀದಿ ಮಾಡುವಾಗ ಪ್ರೀತಿ ಝಿಂಟಾ ಮತ್ತು ನೆಸ್ ವಾಡಿಯಾ ಗೊಂದಲಕ್ಕೆ ಒಳಗಾಗಿದ್ದರು.. ನಮಗೆ ಬೇಕಿದ್ದ ಆಟಗಾರ ಇವ್ರೇನಾ ಎಂದು ಕನ್ಫ್ಯೂಸ್ ಆಗಿದ್ದರು.. ಯಾಕಂದ್ರೆ ಆಟಗಾರರ ಲಿಸ್ಟ್ನಲ್ಲಿ ಇಬ್ಬರು ಶಶಾಂಕ್ ಸಿಂಗ್ಗಳಿದ್ದರು.. ಅವರಲ್ಲಿ ಛತ್ತೀಸ್ಗಢದ ಆಟಗಾರ ಈ ಶಶಾಂಕ್ ಸಿಂಗ್ ಕೂಡ ಒಬ್ಬರು.. ಯಾವಾಗ ಆಕ್ಷನ್ ಮಾಡುತ್ತಿದ್ದ ಮಲ್ಲಿಕಾ ಸಾಗರ್ ಅನ್ ಕ್ಯಾಪ್ಡ್ ಪ್ಲೇಯರ್ ಶಶಾಂಕ್ ಸಿಂಗ್ ಅವರನ್ನು 20 ಲಕ್ಷ ಮುಖಬೆಲೆಗೆ ಆಕ್ಷನ್ ಕೂಗಿದ್ದರೋ ತಕ್ಷಣ ಪ್ರೀತಿ ಝಿಂಟಾ, ತಮಗೆ ಬೇಕೆಂದು ಕಾರ್ಡ್ ತೋರಿಸಿದ್ದರು.. ಉಳಿದ ಯಾವುದೇ ಪ್ರಾಂಚೈಸಿಗಳು ಶಶಾಂಕ್ ಖರೀದಿಗೆ ಮುಂದಾಗದೇ ಇದ್ದಾಗ ಮಲ್ಲಿಕಾ ಸಾಗರ್, ಪಂಜಾಬ್ ಕಿಂಗ್ಸ್ ಶಶಾಂಕ್ ಸಿಂಗ್ರನ್ನು ಖರೀದಿಸಿದೆ ಎಂದು ಹರಾಜಿನ ಹ್ಯಾಮರ್ ಹೊಡೆದಿದ್ದರು.. ಆದ್ರೆ ಆ ನಂತರ ಪಂಜಾಬ್ ಕಿಂಗ್ಸ್ ಮಾಲೀಕರು ನಮಗೆ ಬೇಕಿದ್ದ ಶಶಾಂಕ್ ಇವ್ರೇನಾ ಎಂದು ಗೊಂದಲಕ್ಕೊಳಗಾಗಿದ್ದರು.. ಹಾಗಿದ್ದರೂ ನಂತರ, ಎಕ್ಸ್ ಮೂಲಕ, ಇವರನ್ನೇ ಖರೀದಿಸಬೇಕು ಅಂತ ಇದ್ವಿ.. ಸರಿಯಾದ ಶಶಾಂಕ್ ನಮ್ಮ ತಂಡಕ್ಕೆ ಸೇರಿಕೊಂಡಿದ್ದಾರೆ.
ಈ ಆಟಗಾರನಲ್ಲಿರುವ ಪ್ರತಿಭೆಗೆ ಬೆಳಕು ಚೆಲ್ಲುತ್ತೇವೆ.. ಶಶಾಂಕ್ ನಮ್ಮ ತಂಡ ಸೇರಿಕೊಂಡಿದ್ದಕ್ಕೆ ಖುಷಿಯಾಗಿದೆ ಎಂದು ಸ್ಪಷ್ಟನೆ ಕೊಟ್ಟಿದ್ದರು.. ಪಂಜಾಬ್ ಕಿಂಗ್ಸ್ ಹೀಗೆ ತನ್ನ ಮೇಲೆ ಇಟ್ಟ ವಿಶ್ವಾಸಕ್ಕೆ ಸ್ವಲ್ಪವೂ ಘಾಸಿ ಮಾಡಲಿಲ್ಲ ಈ ಶಶಾಂಕ್ ಸಿಂಗ್.. ಜಿಟಿ ವಿರುದ್ಧ ಶಶಾಂಕ್ ಬ್ಯಾಟಿಂಗ್ಗೆ ಇಳಿದಾಗ 8.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 70 ರನ್ ಗಳಿಸಿತ್ತು ಪಂಜಾಬ್ ಕಿಂಗ್ಸ್.. ಆಗಲೇ ತಂಡದ ಸ್ಟಾರ್ ಆಟಗಾರರಾದ ಕ್ಯಾಪ್ಟನ್ ಶಿಖರ್ ಧವನ್, ಓಪನರ್ ಜಾನಿ ಬೈರ್ ಸ್ಟೋ.. ಹೊಡಿಬಡಿ ಆಟಗಾರ ಪ್ರಭುಸಿಮ್ರನ್ ಸಿಂಗ್, ಆಲ್ರೌಂಡರ್ ಸ್ಯಾಮ್ ಕರ್ರನ್ ಪೆವಿಲಿಯನ್ ಸೇರಿದ್ದರು.. ಆದ್ರೆ ಜಿತೇಶ್ ಶರ್ಮಾ ಬದಲು ಮೇಲಿನ ಕ್ರಮಾಂಕದಲ್ಲಿ ಕ್ರೀಸ್ಗಿಳಿದ ಶಶಾಂಕ್ ಮೊದಲ ಎಸೆತವನ್ನೇ ಬೌಂಡರಿಗಟ್ಟುವ ಮೂಲಕ, ಇಂದು ನನ್ನ ಆಟವಿದೆ ಎಂದು ತೋರಿಸಲು ಮುಂದಾಗಿದ್ದರು.. ಅಲ್ಲದೆ ಮುಂದಿನ ಓವರ್ನಲ್ಲೇ ರಷೀದ್ ಖಾನ್ ಎಸೆತವನ್ನು ಭರ್ಜರಿ ಸಿಕ್ಸರ್ಗೆ ಅಟ್ಟುವ ಮೂಲಕ ಬ್ಯಾಟಿಂಗ್ನಲ್ಲಿ ವಿಶ್ವಾಸ ಮೂಡಿಸಿದ್ದರು.. ಅಲ್ಲಿಂದ ನಂತರ ಶಶಾಂಕ್ ಕಡೆಯ ಓವರ್ ತನಕವೂ ತನ್ನ ಟಾರ್ಗೆಟ್ನಿಂದ ಸ್ವಲ್ಪವೂ ವಿಚಲಿತರಾಗಲಿಲ್ಲ.. ಮತ್ತೊಂದು ಎಂಡ್ನಲ್ಲಿ ವಿಕೆಟ್ ಉರುಳಿತಿದ್ದರೂ ಇಂದು ತನ್ನ ತಂಡವನ್ನು ಗೆಲ್ಲಿಸಲೇಬೇಕು ಎಂಬ ಪಣತೊಟ್ಟವರಂತೆ ಆಡಿದ್ರು..
ಅದರಲ್ಲೂ ತಂಡದ ಸ್ಕೋರ್ 150 ರನ್ ಆಗಿದ್ದಾಗ, ಜಿತೇಶ್ ಶರ್ಮಾ ಔಟಾದ್ರು.. ಅಲ್ಲಿಗೆ ಪಂಜಾಬ್ ಕತೆ ಮುಗೀತು ಅಂತಲೇ ಎಲ್ಲರೂ ಅಂದ್ಕೊಂಡಿದ್ದರು.. ಯಾಕಂದ್ರೆ ಜಿತೇಶ್ ನಂತರ ಕ್ರೀಸ್ಗಿಳಿದಿದ್ದು ಐಪಿಎಲ್ಗೆ ಡೆಬ್ಯು ಮಾಡಿದ ಅಶುತೋಶ್ ಶರ್ಮಾ ಇಂಪ್ಯಾಕ್ಟ್ ಪ್ಲೇಯರ್ ರೂಪದಲ್ಲಿ.. ಎದುರಾಳಿ ಗುಜರಾತ್ ಟೈಟನ್ಸ್ನಲ್ಲಿ ಅನುಭವಿ ಬೌಲರ್ಗಳಿದ್ದರು.. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ನ ಫ್ಯಾನ್ಸ್ ಅಬ್ಬರ ಕೂಡ ಜೋರಾಗಿತ್ತು.. ಆದ್ರೆ ಗ್ರೌಂಡ್ ಮಧ್ಯದಲ್ಲಿ ಈ ಇಬ್ಬರೂ ಅನನುಭವಿ ಬ್ಯಾಟ್ಸ್ ಮನ್ಗಳು ಮಾತ್ರ ತಮ್ಮ ತಂಡವನ್ನು ಗೆಲ್ಲಿಸಲೇಬೇಕು ಎಂಬ ತೀರ್ಮಾನಕ್ಕೆ ಬಂದಿದ್ದರು.. ನೋಡನೋಡುತ್ತಿದ್ದಂತೆ ರನ್ ಚೇಸ್ಗೆ ವೇಗ ಸಿಕ್ಕಿತ್ತು.. 16 ಎಸೆತಗಳಲ್ಲಿ ಅಶುತೋಶ್ 31 ರನ್ ಗಳಿಸಿದ್ದರು.. ಇದ್ರಿಂದಾಗಿ ಕಡೆಯ ಓವರ್ನಲ್ಲಿ ಕೇವಲ 7 ರನ್ ಮಾತ್ರ ಬೇಕಿತ್ತು.. ಆದ್ರೆ ಅನುಭವಿ ಬೌಲರ್ ಉಮೇಶ್ ಯಾದವ್ ಅಷ್ಟೊತ್ತಿಗಾಗಲೇ ಹೆಚ್ಚು ರನ್ ನೀಡಿದ್ದರು.. ಹೀಗಾಗಿ ಯುವ ಕ್ಯಾಪ್ಟನ್ ಶುಭಮನ್ ಗಿಲ್, ಬುದ್ದಿವಂತಿಕೆ ಉಪಯೋಗಿಸಿ, ದರ್ಶನ್ ನಾಲ್ಕಂಡೆ ಕೈಗೆ ಬಾಲ್ ನೀಡಿದ್ದರು.. ದರ್ಶನ್ ಅದುವರೆಗೆ ಬೌಲಿಂಗ್ ಮಾಡಿರಲಿಲ್ಲ.. ದರ್ಶನ್ ಮೊದಲ ಎಸೆತದಲ್ಲೇ ಅಶುತೋಶ್, ಲಾಂಗ್ ಆನ್ನಲ್ಲಿ ರಶೀದ್ ಖಾನ್ಗೆ ಕ್ಯಾಚಿತ್ತು ಔಟಾದ್ರು.. ಇದ್ರಿಂದ ಸಹಜವಾಗಿಯೇ ಪಂಜಾಬ್ ಟೀಂ ಒತ್ತಡಕ್ಕೆ ಒಳಗಾಗಿತ್ತು.. ಆದರೆ ಎರಡನೇ ಎಸೆತ ವೈಡ್.. ಮೂರನೇ ಎಸೆತವನ್ನು ಅಂಪೈರ್ ವೈಡ್ ಎಂದು ಕೊಟ್ಟರೂ ಅದನ್ನು ವಿಕೆಟ್ ಕೀಪರ್ ವೃದ್ದಿಮಾನ್ ಸಹಾ ಚಾಲೆಂಜ್ ಮಾಡಿದ್ದರಿಂದ, ರಿವ್ಯೂನಲ್ಲಿ ಗುಡ್ ಬಾಲ್ ಎಂಬ ತೀರ್ಪು ಬಂದಿತ್ತು.. ಇದ್ರಿಂದ ಕಡೆಯ ನಾಲ್ಕು ಎಸೆತಗಳಲ್ಲಿ ಆರು ರನ್ ಬೇಕಿತ್ತು.. ಆಗ ಹರ್ಪ್ರೀತ್ ಬ್ರಾರ್ ಸಿಂಗಲ್ ರನ್ ತಗೆದು ಶಶಾಂಕ್ಗೆ ಸ್ಟ್ರೈಕ್ ಕೊಟ್ಟಿದ್ದರು.. ಮೂರು ಎಸೆತಕ್ಕೆ 5 ರನ್ ಬೇಕಿದ್ದಾಗ ಶಶಾಂಕ್ ಬಾಲನ್ನು ಬೌಂಡರಿಗಟ್ಟಿದ್ದರಿಂದ ಸ್ಕೋರ್ ಲೆವೆಲ್ ಆಗಿತ್ತು.. ನಂತರದ ಎಸೆತದಲ್ಲಿ ಲೆಗ್ಬೈ ಮೂಲಕ ಸಿಂಗಲ್ ಪಡೆದ ಪಂಜಾಬ್ ಗೆಲುವಿನ ಕೇಕೆ ಹಾಕಿತ್ತು.. ಆಗಲೂ ಎಲ್ಬಿ ಡಬ್ಲ್ಯುಗೆ ಅಪೀಲ್ ಹೋದ ಜಿಟಿಗೆ ಫಲ ಸಿಗಲಿಲ್ಲ.. ಡೊಮೆಸ್ಟಿಕ್ ಪ್ಲೇಯರ್ ಆಗಿರುವ 32 ವರ್ಷದ ಶಶಾಂಕ್ ಸಿಂಗ್ 29 ಎಸೆತಗಳಲ್ಲಿ 61 ರನ್ ಸಿಡಿಸಿ, ಪಂಜಾಬ್ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.. ಈ ಮೂಲಕ ಗೊಂದಲದಲ್ಲೇ ತಮ್ಮನ್ನು ಖರೀದಿಸಿದರೂ ತಂಡದ ಮಾಲೀಕರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಶಶಾಂಕ್ ಯಶಸ್ವಿಯಾಗಿದ್ದಾರೆ..
ಆದ್ರೆ ಇಲ್ಲಿ ಆರ್ಸಿಬಿ ಕಲಿಯಲೇಬೇಕಾದ ಪಾಠವಿದೆ.. ಈ ಆರ್ಸಿಬಿ ತಂಡ ಕ್ರಿಕೆಟ್ನ ಸ್ಟಾರ್ ಪ್ಲೇಯರ್ಗಳ ಮೇಲೆ ಮಾತ್ರ ಭರವಸೆಯಿಟ್ಟಿದೆ.. ಇಂಟರ್ನ್ಯಾಷನಲ್ ಸ್ಟಾರ್ಗಳನ್ನೇ ಆರ್ಸಿಬಿ ಯಾವತ್ತೂ ಹುಡುಕುತ್ತದೆ.. ಡೊಮೆಸ್ಟಿಕ್ ಪ್ಲೇಯರ್ಸ್ ಅದರಲ್ಲೂ ಕರ್ನಾಟಕದ ಆಟಗಾರರನ್ನಂತೂ ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ.. ಮನಸ್ಸು ಮಾಡಿದ್ದರೆ ಕೆ.ಎಲ್.ರಾಹುಲ್, ದೇವದತ್ ಪಡಿಕಲ್ ರಂತಹ ಕರ್ನಾಟಕದ ಸ್ಟಾರ್ ಪ್ಲೇಯರ್ಗಳನ್ನು ತಂಡಕ್ಕೆ ತರಬಹುದಿತ್ತು. ಆದ್ರೆ ಆರ್ಸಿಬಿ ಹೆಸರಿಗಷ್ಟೇ ಬೆಂಗಳೂರು ತಂಡವಾಗಿದೆ.. ಕರ್ನಾಟಕದ ಆಟಗಾರರಿಗೆ ಮಣೆ ಹಾಕೋದೇ ಇಲ್ಲ.. ಈಗಲೂ ಮಹಿಪಾಲ್ ಲೊಮ್ರೊರ್, ಅನುಜ್ ರಾವತ್ ರೀತಿಯ ಡೊಮೆಸ್ಟಿಕ್ ಪ್ಲೇಯರ್ಸ್ ಅಷ್ಟೋ ಇಷ್ಟೋ ತಂಡದ ಮಾನ ಉಳಿಸ್ತಿದ್ದಾರೆ.. ಇಂಟರ್ನ್ಯಾಷನಲ್ ಸ್ಟಾರ್ಗಳ ಜೊತೆಗೆ ಸ್ಥಳೀಯ ಪ್ರತಿಭೆಗಳಿಗೆ ಮಣೆಹಾಕುವ ತಂಡಕ್ಕೆ ಮಾತ್ರ ದೊಡ್ಡ ಯಶಸ್ಸು ಸಿಗುತ್ತದೆ ಎನ್ನುವುದು ಐಪಿಎಲ್ನಲ್ಲಿ ಸಾಬೀತಾಗಿರುವ ಕಟು ಸತ್ಯ.. ಐದು ಚೆನ್ನೈ ಸೂಪರ್ ಕಿಂಗ್ಸ್ ಇರಲಿ.. ಕೆಕೆಆರ್ ಇರಲಿ.. ಅಥವಾ ಮುಂಬೈ ಇಂಡಿಯನ್ಸ್ ತಂಡವೇ ಇರಲಿ.. ಅವರು ಕಪ್ ಗೆದ್ದಾಗೆಲ್ಲಾ ಅನ್ ಕ್ಯಾಪ್ಡ್ ಪ್ಲೇಯರ್ಸ್ ಕೊಡುಗೆ ದೊಡ್ಡದಿತ್ತು.. ಇದು ಆರ್ಸಿಬಿಗೆ ಯಾವ ಕಾಲದಲ್ಲಿ ಅರ್ಥವಾಗುತ್ತೋ ಗೊತ್ತಿಲ್ಲ.. ಆದ್ರೆ ಪಂಜಾಬ್ ಕಿಂಗ್ಸ್ ಮಾತ್ರ ಈ ಸೀಸನ್ನಲ್ಲಿ ಹೈಯೆಸ್ಟ್ ರನ್ ಚೇಸ್ ಮೂಲಕ ದಾಖಲೆ ಬರೆದಿದೆ..ಜೊತೆಗೆ ಶಶಾಂಕ್ ಹಾಗೂ ಅಶುತೋಷ್ ಸೇರಿ, ಭಾರತೀಯ ಆಟಗಾರರ ಮೇಲೆ ಭರವಸೆಯಿಡಿ ಎಂದು ಐಪಿಎಲ್ ಪ್ರಾಂಚೈಸಿ ಮಾಲೀಕರಿಗೂ ಸಂದೇಶ ರವಾನಿಸಿದ್ದಾರೆ..