ಮಂಡ್ಯದಲ್ಲಿ ಹೆಚ್.ಡಿ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ – ಕಾಂಗ್ರೆಸ್ ವಿರುದ್ಧ ಮೈತ್ರಿ ನಾಯಕರ ಬಲ ಪ್ರದರ್ಶನ
ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಕಣಕ್ಕಿಳಿದಿದ್ದಾರೆ. ಮಂಡ್ಯ ರಣಕಣದಲ್ಲಿ ಸ್ವಾಭಿಮಾನಿ ಸಂಸದೆ ಹಿಂದೆ ಸರಿಯುತ್ತಿದ್ದಂತೆ ದಳಪತಿಯ ಎಲ್ಲ ಸಮಸ್ಯೆ ಬಗೆಹರಿದಂತಾಗಿದೆ. ಇದ್ರಿಂದಾಗಿ ಸಕ್ಕರೆನಾಡಿನಲ್ಲಿ ಹೆಚ್ಡಿಕೆ ಒಂದು ಹಂತದಲ್ಲಿ ಗೆದ್ದಂತಾಗಿದೆ. ಇವತ್ತು ಹೆಚ್ಡಿಕೆ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಹೆಚ್ಡಿಕೆ ಬಲ ಪ್ರದರ್ಶನ ಮಾಡಿದ್ದಾರೆ.
ಇದನ್ನೂ ಓದಿ: ಮಂಡ್ಯ ಅಖಾಡದಿಂದ ಹಿಂದೆ ಸರಿದ ಸುಮಲತಾ ರಿಯಲ್ ಗೇಮ್ ಸ್ಟಾರ್ಟ್ ಮಾಡಿದ್ರಾ?
ನಾಮ ಪತ್ರ ಸಲ್ಲಿಕೆ ವೇಳೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಮೈಸೂರು ಕ್ಷೇತ್ರದ ಅಭ್ಯರ್ಥಿ ಯದುವೀರ್ ಒಡೆಯರ್, ಗೋವಾ ಸಿಎಂ ಪ್ರಮೋದ್ ಸಾವಂತ್ ಹೆಚ್ಡಿಕೆಗೆ ಸಾಥ್ ನೀಡಿದ್ರು.. ನಾಮಪತ್ರ ಸಲ್ಲಿಕೆಗೂ ಮುನ್ನ ಎಚ್ ಡಿಕೆ ಮಂಡ್ಯ ನಗರದ ಅರ್ಕೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ರು. ಈ ವೇಳೆ ಪಕ್ಷದ ನೂರಾರು ಕಾರ್ಯಕರ್ತರು ಕುಮಾರಸ್ವಾಮಿ ಜೊತೆಗಿದ್ದರು. ನಂತರ ಅಂಬೇಡ್ಕರ್, ಕಾವೇರಿ, ವಿಶ್ವೇಶ್ವರಯ್ಯ ಪ್ರತಿಮೆಗೆ ಕುಮಾರಸ್ವಾಮಿ ಮಾಲಾರ್ಪಣೆ ಮಾಡಿದ್ರು. ಈ ಮೂಲಕ ಕೈ ಅಭ್ಯರ್ಥಿ ಸ್ಟಾರ್ ಚಂದ್ರು ವಿರುದ್ಧ ಸೆಡ್ಡು ಹೊಡೆದು ಅಧಿಕೃತವಾಗಿ ಪ್ರಜಾಪ್ರಭುತ್ವ ಯುದ್ಧಕ್ಕೆ ಧುಮುಕಿದ್ದಾರೆ.
ನಾಮಪತ್ರ ಸಲ್ಲಿಸುವ ವೇಳೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ ಅವರು, ನಮ್ಮನ್ನು ಮುಗಿಸಲು ಕಾಂಗ್ರೆಸ್ಗೆ ಸಾಧ್ಯವೇ ಇಲ್ಲ. ಮಂಡ್ಯ ಜನತೆಯೇ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಬುದ್ಧಿ ಕಲಿಸುತ್ತಾರೆಂದು ವಾಗ್ದಾಳಿ ನಡೆಸಿದ್ದಾರೆ. ಜಿಲ್ಲೆಯ ತಂದೆ-ತಾಯಂದಿರು ನನಗೆ ದೊಡ್ಡ ಮಟ್ಟದಲ್ಲಿ ಆಶೀರ್ವಾದ ಮಾಡ್ತಾರೆ. ಜೆಡಿಎಸ್ ನೆಲಕಚ್ಚಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಹೆಚ್ಡಿಕೆ, ಜೆಡಿಎಸ್ ಎಲ್ಲಿ ನೆಲ ಕಚ್ಚಿದೆ? ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿರಬಹುದು. ಜೆಡಿಎಸ್ ಅನ್ನು ನೆಲಕಚ್ಚಿಸಲು ಸಾಧ್ಯವೇ ಇಲ್ಲ ಎಂದು ಕಿಡಿಕಾರಿದ್ದಾರೆ.