ಡಿಕೆ ಬ್ರದರ್ಸ್ ಕೋಟೆಯಲ್ಲಿ ಅಬ್ಬರಿಸಿದ ಅಮಿತ್ ಶಾ ರಣತಂತ್ರವೇನು?
ಕರ್ನಾಟಕ ಲೋಕಸಭಾ ಚುನಾವಣಾ ಅಖಾಡಗಳ ಪೈಕಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಹೈವೋಲ್ಟೇಜ್ ಕಣವಾಗಿದೆ. ಕಾಂಗ್ರೆಸ್ನ ಭದ್ರಕೋಟೆಯಾಗಿರುವ ಕ್ಷೇತ್ರವನ್ನ ಛಿದ್ರ ಮಾಡಲು ಬಿಜೆಪಿ ಜೆಡಿಎಸ್ ಮೈತ್ರಿ ನಾಯಕರು ರಣತಂತ್ರ ರೂಪಿಸಿದ್ದಾರೆ. ಶತಾಯ ಗತಾಯ ಡಿ.ಕೆ ಸುರೇಶ್ಗೆ ಸೋಲಿನ ರುಚಿ ತೋರಿಸಲೇಬೇಕು ಅಂತಾ ಪಣ ತೊಟ್ಟಿದ್ದಾರೆ. ಇದೇ ಕಾರಣಕ್ಕೆ ಡಿಕೆ ಬ್ರದರ್ಸ್ ಕೋಟೆಗೆ ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್ ಶಾ ಲಗ್ಗೆ ಇಟ್ಟಿದ್ದಾರೆ. ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ ಪರ ಅಬ್ಬರಿಸಿದ್ದಾರೆ. ಅಮಿತ್ ಶಾಗೆ ಪ್ರಭಾವಿ ನಾಯಕರೇ ಕೈ ಜೋಡಿಸಿದ್ದು ಜಿದ್ದಾಜಿದ್ದಿ ತಾರಕಕ್ಕೇರಿದೆ. ಅಷ್ಟಕ್ಕೂ ಅಮಿತ್ ಶಾ ಪ್ರಚಾರಕ್ಕೆ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ..? ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆಯೋ ಪ್ಲ್ಯಾನ್ ಏನು..? ಕಾಂಗ್ರೆಸ್ ಕೌಂಟರ್ ಪ್ಲ್ಯಾನ್ ಏನು..? ಈ ಬಗೆಗಿನ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಸುಮಕ್ಕ ಪಕ್ಷೇತರವಾಗಿ ನಿಂತ್ರೆ ಗೆಲ್ಲೋದ್ಯಾರು? – ದಳಪತಿಗೆ ಬೀಳುತ್ತಾ ಗುನ್ನಾ?
ರಾಜಕೀಯ ಜಿದ್ದಾಜಿದ್ದಿನ ಕ್ಷೇತ್ರವಾಗಿ ಮಾರ್ಪಟ್ಟಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಂಗಳವಾರ ಅಕ್ಷರಶಃ ಸುನಾಮಿ ಎದ್ದಿತ್ತು. ಬಿಜೆಪಿ ಹಾಗೂ ಜೆಡಿಎಸ್ನ ಘಟಾನುಘಟಿ ನಾಯಕರ ದಂಡೇ ಸೇರಿತ್ತು. ಜೆಡಿಎಸ್ ನ ಸರ್ವೋಚ್ಛ ನಾಯಕ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಅಳಿಯ ಡಾ.ಮಂಜುನಾಥ್ ಗೆಲುವಿಗಾಗಿ ಭರ್ಜರಿ ಪ್ರಚಾರ ನಡೆಸಿದ್ರು. ನಗರ ಮತ್ತು ಗ್ರಾಮೀಣ ಪ್ರದೇಶಗಳ ಮಿಶ್ರಣವಾಗಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಲಿ ಸಂಸದ ಡಿ.ಕೆ.ಸುರೇಶ್ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ. ಅಮಿತ್ ಶಾಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಘಟಾನುಘಟಿ ನಾಯಕರೇ ಸಾಥ್ ನೀಡಿದ್ದಾರೆ.
ಅಮಿತ್ ಶಾ ಅಬ್ಬರ!
ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಸಹೋದರರಾಗಿರುವ ಕಾರಣ ಹಾಲಿ ಸಂಸದ ಡಿ.ಕೆ.ಸುರೇಶ್ ಅವರನ್ನು ಅಮಿತ್ ಶಾ ಟಾರ್ಗೆಟ್ ಮಾಡಿದ್ದಾರೆ. ಅಲ್ದೇ ಚುನಾವಣೆ ಬಿರುಸಿನ ನಡುವೆ ಸಂಶದ ಸುರೇಶ್ ಮತ್ತು ಕುಮಾರಸ್ವಾಮಿ ನಡುವೆ ವಾಗ್ದಾಳಿಗಳು ನಡೆದಿದ್ದವು. ಹಾಲಿ ಸಂಸದರು ಮತದಾರರಿಗೆ ಸೀರೆ ಮತ್ತು ಕುಕ್ಕರ್ಗಳನ್ನು ಹಂಚುತ್ತಿದ್ದಾರೆ ಎಂದು ಆರೋಪಿಸಿದ್ದರು. ಕೇಂದ್ರ ಸರ್ಕಾರದ ವಿರುದ್ಧ ದೇಶ ವಿಭಜನೆಯ ಬಗ್ಗೆ ಮಾತನಾಡಿದ್ದ ಡಿ.ಕೆ ಸುರೇಶ್ ಹೇಳಿಕೆಗೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಡಿಕೆ ಸುರೇಶ್ರನ್ನೇ ಸೋಲಿಸೋಕೆ ಎರಡೂ ಪಕ್ಷಗಳ ಘಟಾನುಘಟಿ ನಾಯಕರು ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ. ಕಾಂಗ್ರೆಸ್ನ ಪ್ರಮುಖ ನಾಯಕರಾದ ಡಿಕೆ ಸಹೋದರರ ಕೋಟೆಯಿಂದಲೇ ರಣಕಹಳೆ ಮೊಳಗಿಸಿದ್ದಾರೆ. ಹಳೆ ಮೈಸೂರು ಭಾಗವನ್ನೇ ಅಮಿತ್ ಶಾ ಗುರಿಯಾಗಿಸಿಕೊಂಡಿದ್ದು, ಮೈತ್ರಿ ಅಭ್ಯರ್ಥಿ ಮಂಜುನಾಥ್ ಪರ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಚನ್ನಪಟ್ಟಣದಿಂದಲೇ ಬೃಹತ್ ರೋಡ್ ಶೋ ನಡೆಸಿದ್ರು. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಮತಬೇಟೆ ನಡೆಸಿದ್ರು.
ಅಮಿತ್ ಶಾ ರಾಜ್ಯಕ್ಕೆ ಎಂಟ್ರಿಕೊಟ್ಟ ಹೊತ್ತಲ್ಲೇ ಟಿಕೆಟ್ ವಂಚಿತರ ಅಸಮಾಧಾನವನ್ನು ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ಶಮನಗೊಳಿಸಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದ ಸಂಬಂಧ ಯಲಹಂಕ ಶಾಸಕ ಎಸ್ಆರ್ ವಿಶ್ವನಾಥ್ರನ್ನು ಯಡಿಯೂರಪ್ಪ ಮನೆಗೆ ಕರೆಸಿಕೊಂಡು ಮನವೊಲಿಸಿದ್ದಾರೆ. ಇನ್ನು ಚಿತ್ರದುರ್ಗದಲ್ಲಿ ಚಂದ್ರಪ್ಪ, ರಘುಚಂದನ್ ಬಂಡಾಯಕ್ಕೂ ಯಡಿಯೂರಪ್ಪ ಮದ್ದೆರದಿದ್ದಾರೆ. ಉಳಿದಂತೆ ಹಾಸನದಲ್ಲಿ ಮುನಿಸಿಕೊಂಡಿದ್ದ ಪ್ರೀತಂ ಗೌಡರ ಜತೆ ವಿಜಯೇಂದ್ರ ಮಾತುಕತೆ ನಡೆಸಿ ಪ್ರಜ್ವಲ್ ರೇವಣ್ಣ ಪರ ಕೆಲ್ಸ ಮಾಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗೆ ಒಂದ್ಕಡೆ ಅಸಮಾಧಾನ ತಣಿಸುತ್ತಲೇ ಕಾಂಗ್ರೆಸ್ ಅಭ್ಯರ್ಥಿಗಳನ್ನ ಸೋಲಿಸಲು ತಂತ್ರಗಾರಿಕೆ ಮಾಡುತ್ತಿದ್ದಾರೆ. ಅಷ್ಟಕ್ಕೂ ಡಿ.ಕೆ ಸುರೇಶ್ ಏನು ಉದ್ದೇಶಪೂರ್ವಕವಾಗಿ ರಾಜಕಾರಣಕ್ಕೆ ಬಂದವರಲ್ಲ.
ಡಿಕೆಸು ಆಕಸ್ಮಿಕ ಎಂಟ್ರಿ!
ಕನಕಪುರ ತಾಲೂಕಿನ ದೊಡ್ಡಆಲಹಳ್ಳಿಯ ಸುರೇಶ್ ಆಕಸ್ಮಿಕವಾಗಿ ರಾಜಕಾರಣ ಪ್ರವೇಶ ಪಡೆದವರು. ಅಣ್ಣ ಡಿಸಿಎಂ ಶಿವಕುಮಾರ್ ಅವರಿಗೆ ಬೆಂಬಲವಾಗಿ ತೆರೆಮರೆಯಲ್ಲಿ ಕೆಲಸ ಮಾಡುತ್ತಾ ಕನಕಪುರ ಕ್ಷೇತ್ರದ ಉಸ್ತುವಾರಿ ಹೊತ್ತಿದ್ದರು. 2008ರಲ್ಲಿ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದ ಜೆಡಿಎಸ್ನ ಎಚ್.ಡಿ. ಕುಮಾರಸ್ವಾಮಿ, 2013ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗ ನಡೆದ ಉಪ ಚುನಾವಣೆಗೆ ಶಿವಕುಮಾರ್, ತಮ್ಮ ಸಹೋದರ ಸುರೇಶ್ ಅವರನ್ನು ಚುನಾವಣಾ ರಾಜಕೀಯಕ್ಕೆ ಕರೆ ತಂದರು. ಸುರೇಶ್ ಅವರು ಜೆಡಿಎಸ್ನಿಂದ ಸ್ಪರ್ಧಿಸಿದ್ದ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು 1.37 ಲಕ್ಷ ಮತಗಳ ಅಂತರದಿಂದ ಸೋಲಿಸಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದರು. ಮರು ವರ್ಷ 2014ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲೂ 2.31 ಮತಗಳ ಅಂತರದಲ್ಲಿ ಮರು ಆಯ್ಕೆಯಾದರು. 2019ರಲ್ಲಿ ಬಿಜೆಪಿಯ ಡಾ. ಅಶ್ವಥ್ ನಾರಾಯಣ ಅವರನ್ನು ಸೋಲಿಸಿ ಮೂರನೇ ಸಲ ಸಂಸತ್ಗೆ ಆಯ್ಕೆಯಾದರು. ಇದೀಗ ನಾಲ್ಕನೇ ಬಾರಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಒಟ್ನಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಹೈವೋಲ್ಟೇಜ್ ಕಣವಾಗಿದೆ. ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಮೂರೂ ಪಕ್ಷಗಳಿಗೂ ಪ್ರತಿಷ್ಠೆಯಾಗಿದೆ. ಮೂರು ಜಿಲ್ಲೆಗಳಿಗೆ ಹೊಂದಿಕೊಂಡಿರುವ ಈ ಕ್ಷೇತ್ರದ ಮತದಾರರು ಮತ್ತೆ ಡಿಕೆ ಸುರೇಶ್ಗೆ ಜೈ ಅಂತಾರೋ ಅಥವಾ ಹೃದಯಗಳ ಒಡೆಯ ಡಾಕ್ಟರ್ ಸಿ.ಎನ್ ಮಂಜುನಾಥ್ರನ್ನ ಗೆಲ್ಲಿಸ್ತಾರೋ ಕಾದು ನೋಡ್ಬೇಕು.