ಚುನಾವಣೆ ಹೊತ್ತಲ್ಲಿ ಹೆಲಿಕಾಪ್ಟರ್ಗಳಿಗೆ ಫುಲ್ ಡಿಮ್ಯಾಂಡ್! – ಲಕ್ಷ ಲಕ್ಷ ಕೊಟ್ಟು ಸುತ್ತಾಡುತ್ತಿದ್ದಾರೆ ನಾಯಕರು!
ಲೋಕಸಭೆ ಚುನಾವಣೆಗೆ ಕೌಂಟ್ಡೌನ್ ಶುರುವಾಗಿದೆ. ಎಲ್ಲಾ ಪಕ್ಷಗಳು ಸಾಕಷ್ಟು ತಯಾರಿ ನಡೆಸುತ್ತಿವೆ. ರಾಜಕೀಯ ನಾಯಕರು, ಅಭ್ಯರ್ಥಿಗಳು ಎಲ್ಲಾ ಜಿಲ್ಲೆಗಳಲ್ಲಿ ಸುತ್ತಾಡಿ ಪ್ರಚಾರ ನಡೆಸುತ್ತಿದ್ದಾರೆ. ಅಭ್ಯರ್ಥಿಗಳ ಪ್ರಚಾರಕ್ಕಾಗಿ ಸ್ಟಾರ್ಗಳನನ್ನು ರಾಜಕೀಯ ಪಕ್ಷಗಳು ಕರೆಸಿಕೊಳ್ಳುತ್ತಿವೆ. ಸ್ಟಾರ್ ಪ್ರಚಾರಕರಿಗೆ ಪ್ರಚಾರದ ಓಡಾಟಕ್ಕೆ ಹೆಲಿಕಾಪ್ಟರ್ಗಳನ್ನು ಬಳಸಿಕೊಳ್ಳಲಾಗುತ್ತಿದ್ದು, ಇದೀಗ ಹೆಲಿಕಾಪ್ಟರ್ ಗಳಿಗೆ ಫುಲ್ ಡಿಮ್ಯಾಂಡ್ ಶುರುವಾಗಿದೆ.
ಇದನ್ನೂ ಓದಿ: ದಳ – ಕಮಲ ಒಗ್ಗೂಡಿಸಿ ರಾಜ್ಯದಲ್ಲಿ ರಣತಂತ್ರ ಹೆಣೆದ ಚುನಾವಣಾ ಚಾಣಕ್ಯ – ಎಲೆಕ್ಷನ್ ಗೆಲ್ಲಲು ಅಮಿತ್ ಶಾ ಮಾಸ್ಟರ್ ಪ್ಲ್ಯಾನ್
ಹೌದು, ಲೋಕಸಭೆ ಚುನಾವಣೆಯ ಕಾವು ಜೋರಾಗಿದೆ. ಕಾಲಿಗೆ ಚಕ್ರ ಕಟ್ಟಿಕೊಂಡು ನಾಯಕರು ಓಡಾಡುತ್ತಿದ್ದಾರೆ. ಅದರಲ್ಲೂ, ಕೆಲ ನಾಯಕರು ಲಕ್ಷ ಲಕ್ಷ ಬಾಡಿಗೆ ಕೊಟ್ಟು ಹೆಲಿಕಾಪ್ಟರ್ಗಳಲ್ಲಿ ಸವಾರಿ ಮಾಡುತ್ತಿದ್ದಾರೆ. ಮತಬೇಟೆಗೆ ಸುತ್ತಾಡುವ ನಾಯಕರಿಗಾಗಿ ನೂರಾರು ಹೆಲಿಕಾಪ್ಟರ್ಗಳನ್ನು ಕಾಯ್ದಿರಿಸಲಾಗಿದೆ. ರಾಜ್ಯದಲ್ಲಿ ಸುಮಾರು 150 ಹೆಲಿಕಾಪ್ಟರ್ ಹಾಗೂ ಮಿನಿ ವಿಮಾನ ಈಗಾಗಲೇ ಬುಕ್ ಆಗಿವೆ. ಹೆಲಿಕಾಪ್ಟರ್ಗಳ ಬಾಡಿಗೆ ದರದಲ್ಲಿ ಶೇ 20ರಿಂದ 30ರಷ್ಟು ಹೆಚ್ಚಾದರೂ, ತಲೆ ಕೆಡಿಸಿಕೊಳ್ಳದೆ ನಾಯಕರು ಸವಾರಿ ಮಾಡುತ್ತಿದ್ದಾರೆ.
ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾಗಿರುವ ಜನಾರ್ದನ ರೆಡ್ಡಿಯವರೂ ಅಷ್ಟೆ, ಬಳ್ಳಾರಿಗೆ ಹೋಗಲಿ, ಬೆಂಗಳೂರಿಗೆ ಬರಲಿ, ಅಕ್ಕಪಕ್ಕದ ಜಿಲ್ಲೆ, ಸಣ್ಣಪುಟ್ಟ ನಗರ, ಹಳ್ಳಿಗಳಿಗೂ ಹೆಲಿಕಾಪ್ಟರ್ನಲ್ಲೇ ಹೋಗುತ್ತಾರೆ. 15 ವರ್ಷದ ಹಿಂದೆಯೇ ತಮ್ಮದೇ ಹೆಲಿಕಾಪ್ಟರ್ಗಳಲ್ಲಿ ಸುತ್ತಾಡುತ್ತಾ, ರಾಜ್ಯ ರಾಜಕೀಯದಲ್ಲಿ ಜನಾರ್ದನ ರೆಡ್ಡಿ ಸದ್ದು ಮಾಡಿದ್ದರು. ಆದರೆ, ಅವರ ಬಂಧನದ ಬಳಿಕ ಅವರ ಹೆಲಿಕಾಪ್ಟರ್ಗಳು ಸೀಜ್ ಆಗಿದ್ದವು. ಇದೀಗ, ರಾಜಕೀಯ ರಂಗದಲ್ಲಿ ಮತ್ತೆ ತೊಡಗಿಸಿಕೊಂಡಿರುವ ರೆಡ್ಡಿ, ಮತ್ತೆ ಹೆಲಿಕಾಪ್ಟರ್ ಮೂಲಕ ಸುತ್ತಾಡುತ್ತಿದ್ದಾರೆ. ಸದ್ಯ ರೆಡ್ಡಿ ಮಾತ್ರವಲ್ಲ, ಅನೇಕರು ಹೆಲಿಕಾಪ್ಟರ್ ಮೊರೆ ಹೋಗಿದ್ದಾರೆ. ಹೀಗಾಗಿ ಹೆಲಿಕಾಪ್ಟರ್ಗಳಿಗೆ ಬೇಡಿಕೆ ಹೆಚ್ಚಿದೆ.
ಎಷ್ಟಿದೆ ಹೆಲಿಕಾಪ್ಟರ್ಗಳ ಬಾಡಿಗೆ?
2 ಸೀಟ್ನ ಹೆಲಿಕಾಪ್ಟರ್ ಗಂಟೆಗೆ 2.10 ಲಕ್ಷ ರೂ., 4 ಆಸನದ ಹೆಲಿಕಾಪ್ಟರ್ ಗಂಟೆಗೆ 2.50 ಲಕ್ಷ ರೂ. 6 ಆಸನದ ಮಿನಿ ವಿಮಾನ ಗಂಟೆಗೆ 3 ಲಕ್ಷ ರೂ. 8 ಆಸನದ ಮಿನಿ ವಿಮಾನ ಗಂಟೆಗೆ 3.5 ಲಕ್ಷ ರೂ. 13 ಆಸನದ ಮಿನಿ ವಿಮಾನ ಗಂಟೆಗೆ 4 ಲಕ್ಷ ರೂ. ಬಾಡಿಗೆ ದರ ವಿಧಿಸಲಾಗಿದೆ.
ಸ್ವಂತ ಹೆಲಿಕಾಪ್ಟರ್ ಹೊಂದಿರುವವರು ಯಾರೆಲ್ಲ?
ಬಹುತೇಕ ನಾಯಕರು ಬಾಡಿಗೆ ವಿಮಾನಗಳ ಮೊರೆ ಹೋಗಿದ್ದಾರೆ. ಜನಾರ್ದನ ರೆಡ್ಡಿ, ಸತೀಶ್ ಜಾರಕಿಹೊಳಿ, ಕೆ.ಜೆ.ಜಾರ್ಜ್, ಎಸ್ಎಸ್.ಮಲ್ಲಿಕಾರ್ಜುನ್, ರಘು ಆಚಾರ್, ಆನಂದ್ ಸಿಂಗ್ ಸೇರಿ ಕೆಲ ನಾಯಕರು ಸ್ವತಃ ಹೆಲಿಕಾಪ್ಟರ್ ಹೊಂದಿದ್ದಾರೆ. ತಮ್ಮ ಖಾಸಗಿ ಹೆಲಿಕಾಪ್ಟರ್ಗಳಲ್ಲೇ ನಾಯಕರ ಜತೆ ಸುತ್ತಾಡುತ್ತಿದ್ದಾರೆ. ಆಕಾಶದಲ್ಲಿ ಹಾರಾಡುತ್ತಲೇ ರಣತಂತ್ರ ಹೆಣೆಯುತ್ತಿದ್ದಾರೆ.