ಏಪ್ರಿಲ್ ತಿಂಗಳ ಮೊದಲ ದಿನವೇ ಗ್ರಾಹಕರಿಗೆ ಗುಡ್ ನ್ಯೂಸ್! – ಸಿಲಿಂಡರ್ ಬೆಲೆ 30.50 ರೂ. ಇಳಿಕೆ
ಹೊಸ ಹಣಕಾಸು ವರ್ಷದ ಮೊದಲ ದಿನವೇ ಎಲ್‌ಪಿಜಿ ಗ್ರಾಹರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಏಪ್ರಿಲ್ ತಿಂಗಳ ಆರಂಭದಲ್ಲೇ ಎಲ್‌ಪಿಜಿ ಗ್ಯಾಸ್ ದರ ಪರಿಷ್ಕರಣೆ ಮಾಡಲಾಗಿದೆ.
ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ 30.50 ರೂ. ಇಳಿಕೆಯಾಗಿದೆ. ಇನ್ನು 5ಕೆಜಿ ಎಫ್ಟಿಎಲ್ (ಫ್ರೀ ಟ್ರೇಡ್ ಎಲ್‌ಪಿಜಿ) ಸಿಲಿಂಡರ್ ಬೆಲೆ 7.50 ರೂಪಾಯಿ ಇಳಿಕೆಯಾಗಿದೆ. ಈ ಪರಿಷ್ಕೃತ ದರ ಸೋಮವಾರದಿಂದಲೇ (ಏಪ್ರಿಲ್ 01) ಅನ್ವಯವಾಗಲಿದೆ.
ಇದನ್ನೂ ಓದಿ: ಬನ್ನೇರುಘಟ್ಟ ರಸ್ತೆಯ 2 ಜಂಕ್ಷನ್‌ಗಳಲ್ಲಿ ಒಂದು ವರ್ಷ ವಾಹನ ಸಂಚಾರ ನಿಷೇಧ! – ಕಾರಣವೇನು ಗೊತ್ತಾ?
ದೆಹಲಿಯಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 30.50 ರೂ, ಮುಂಬೈನಲ್ಲಿ 31.50 ರೂ. ಚೆನ್ನೈನಲ್ಲಿ 30.50 ರೂ. ಮತ್ತು ಕೋಲ್ಕತ್ತಾದಲ್ಲಿ 32 ರೂ. ಕಡಿಮೆಯಾಗಿದೆ. ಬೆಲೆ ಇಳಿಕೆ ನಂತರ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ 1764.50 ರೂ. ಗಳಿಗೆ ಲಭ್ಯವಾಗಲಿದೆ. ಇನ್ನು ಮುಂಬೈನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1717.50 ರೂ. ಇದೆ. ಕೋಲ್ಕತ್ತಾದಲ್ಲಿ 1879 ರೂ. ಮತ್ತು ಚೆನ್ನೈನಲ್ಲಿ 1930 ರೂ. ಮತ್ತು ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 1830 ರೂ.ಗೆ ದೊರೆಯಲಿದೆ.
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಹಿಂದಿನ ತಿಂಗಳ ಅಂತರರಾಷ್ಟ್ರೀಯ ಮಾರುಕಟ್ಟೆಯ ಸರಾಸರಿ ಬೆಲೆಯನ್ನು ಆಧರಿಸಿ ಪ್ರತಿ ತಿಂಗಳ ಮೊದಲನೆಯ ದಿನ ಎಲ್‌ಪಿಜಿ ಬೆಲೆಯನ್ನು ಪರಿಷ್ಕರಿಸುತ್ತವೆ. ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಳೆದ ತಿಂಗಳು ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 100 ರೂ. ಇಳಿಕೆ ಮಾಡುವ ಮೂಲಕ ಮಹಿಳೆಯರಿಗೆ ಉಡುಗೊರೆಯನ್ನು ನೀಡಿದ್ದರು.
ಇನ್ನು ಎಲ್‌ಪಿಜಿ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ ಮಾರ್ಚ್ 1 ರಂದು ಹೆಚ್ಚಳವಾಗಿತ್ತು. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಪ್ರತಿ ಸಿಲಿಂಡರ್ ಬೆಲೆಯನ್ನು 25 ರೂಪಾಯಿ ಏರಿಕೆ ಮಾಡಿದ್ದವು.