ಬನ್ನೇರುಘಟ್ಟ ರಸ್ತೆಯ 2 ಜಂಕ್ಷನ್‌ಗಳಲ್ಲಿ ಒಂದು ವರ್ಷ ವಾಹನ ಸಂಚಾರ ನಿಷೇಧ! – ಕಾರಣವೇನು ಗೊತ್ತಾ?

ಬನ್ನೇರುಘಟ್ಟ ರಸ್ತೆಯ 2 ಜಂಕ್ಷನ್‌ಗಳಲ್ಲಿ ಒಂದು ವರ್ಷ ವಾಹನ ಸಂಚಾರ ನಿಷೇಧ! – ಕಾರಣವೇನು ಗೊತ್ತಾ?

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸಾರಿಗೆಯ ಜೀವನಾಡಿಯಾಗಿದೆ. ನಿತ್ಯ ಲಕ್ಷಾಂತರ ಜನರು ಪ್ರಯಾಣಿಸುತ್ತಿದ್ದಾರೆ. ಬಿಎಂಆರ್‌ಸಿಎಲ್‌ ನಗರದಾದ್ಯಂತ ಮೆಟ್ರೋವನ್ನು ವಿಸ್ತರಿಸುತ್ತಾ ಬಂದಿದೆ. ಇದೀಗ ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿನ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ ಬನ್ನೇರುಘಟ್ಟ ರಸ್ತೆ 2 ಜಂಕ್ಷನ್‌ಗಳಲ್ಲಿ ಒಂದು ವರ್ಷಗಳ ಕಾಲ ವಾಹನ ಸಂಚಾರ ನಿಷೇಧಿಸಿದೆ.

ಹೌದು ಬೆಂಗಳೂರಿನ ಪ್ರಮುಖ ರಸ್ತೆಯಾಗಿರುವ ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿನ ಮೆಟ್ರೋ ಕಾಮಗಾರಿ ನಿರ್ವಹಣೆಯ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಮುಖ್ಯರಸ್ತೆಯ ಉತ್ತರ ದಿಕ್ಕಿನ ಪಥವಾದ ಮೈಕೋ ಸಿಗ್ನಲ್‌ನಿಂದ ಆನೆಪಾಳ್ಯ ಜಂಕ್ಷನ್‌ವರೆಗೆ 2024ರ ಏ.1ರಿಂದ 2025ರ ಮಾ.30ರವರೆಗೆ ಸಂಪೂರ್ಣವಾಗಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗುತ್ತಿದೆ ಎಂದು ಬೆಂಗಳೂರು ಮೆಟ್ರೋ ರೇಲ್‌ ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಪ್ರಕಟಣೆ ಹೊರಡಿಸಿದೆ.

ಇದನ್ನೂ ಓದಿ: ಬಡ ಕುಟುಂಬಗಳ ಮಹಿಳೆಗೆ ವರ್ಷಕ್ಕೆ ₹1 ಲಕ್ಷ ಆರ್ಥಿಕ ಸಹಾಯ – ಕಾಂಗ್ರೆಸ್‌ನಿಂದ ಮತ್ತೊಂದು ಗ್ಯಾರಂಟಿ!

ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿರುವ ಬಿಎಂಆರ್‌ಸಿಎಲ್, ಈ ಮೂಲಕ ಸಾರ್ವಜನಿಕರ ಗಮನಕ್ಕೆ ತರುವುದೇನೆಂದರೆ ಲಕ್ಕಸಂದ್ರ ಸುರಂಗ ಮೆಟ್ರೋ ನಿಲ್ದಾಣದ ದಕ್ಷಿಣ ಭಾಗದ ಪ್ರವೇಶ ಕಾಮಗಾರಿಯ ನಿರ್ಮಾಣಕ್ಕೆ ಅನುಕೂಲವಾಗುವಂತೆ, ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಉತ್ತರ ದಿಕ್ಕಿನ ಪಥವನ್ನು ಮೈಕೋ ಸಿಗ್ನಲ್‌ನಿಂದ ಆನೆಪಾಳ್ಯ ಜಂಕ್ಷನ್‌ವರೆಗೆ ಸಂಚಾರವನ್ನು ದಿನಾಂಕ 01.04.2024 ರಿಂದ ಒಂದು ವರ್ಷದ ಅವಧಿಗೆ ಮುಚ್ಚಲಾಗುವುದು ಎಂದು ತಿಳಿಸಿದೆ.

ಈ ಸಂಬಂಧ ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಡೈರಿ ಸರ್ಕಲ್ ಕಡೆಯಿಂದ ಚಲಿಸುವ ವಾಹನಗಳು ಆನೆಪಾಳ್ಯ ಜಂಕ್ಷನ್ ಕಡೆಗೆ ಚಲಿಸಬೇಕಾದ ವಾಹನಗಳು ಮೈಕೋ ಸಿಗ್ನಲ್‌ನಲ್ಲಿ ಬಲಕ್ಕೆ ತಿರುಗಿ ಭೋಷ್ ಲಿಂಕ್ ರಸ್ತೆಯ ಮೂಲಕ ಆಡುಗೋಡಿ ಸಿಗ್ನಲ್ ತಲುಪಿ ಎಡಕ್ಕೆ ತಿರುಗಿ ಚಲಿಸಬೇಕು. ಆನೆಪಾಳ್ಯ ಜಂಕ್ಷನ್‌ನಿಂದ ಡೈರಿ ಸರ್ಕಲ್ ಕಡೆಗೆ ಚಲಿಸುವ ವಾಹನ ಸಂಚಾರದಲ್ಲಿ ಯಾವುದೇ ವ್ಯತ್ಯಯವಿರುವುದಿಲ್ಲ. ಡೈರಿ ಸರ್ಕಲ್‌ನಿಂದ ಶಾಂತಿನಗರ ಕಡೆಗೆ ಚಲಿಸುವ ವಾಹನಗಳು ವಿಲ್ಸನ್ ಗಾರ್ಡನ್‌ನ 7ನೇ ಮುಖ್ಯ ರಸ್ತೆಯಲ್ಲಿ ಎಡಕ್ಕೆ ತಿರುವು ತೆಗೆದುಕೊಳ್ಳುವುದು ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮೇಲಿನ ಬದಲಾವಣೆಗಳನ್ನು ಗಮನಿಸಿ ಸಹಕರಿಸಬೇಕಾಗಿ ವಿನಂತಿಸುತ್ತೇವೆ ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

Shwetha M