ಗ್ರಾಮದ ಮೇಲೆ ಹಾರಿದ ಹೆಲಿಕಾಪ್ಟರ್ ಶಬ್ದದಿಂದ ನನ್ನ ಎಮ್ಮೆ ಸತ್ತಿದೆ- ರೈತ ಬರೆದ ದೂರಿನ ಪತ್ರ ವೈರಲ್
ಪೈಲಟ್ ವಿರುದ್ದ ದೂರು ದಾಖಲಿಸಿದ ರೈತ

ಜೈಪುರ: ಗ್ರಾಮದ ಮೇಲೆ ಹಾರಿ ಹೋದ ಹೆಲಿಕಾಪ್ಟರ್ ನ ಶಬ್ದದಿಂದ ನನ್ನ ಎಮ್ಮೆ ಸಾವನ್ನಪ್ಪಿದೆ ಎಂದು ರೈತನೊಬ್ಬ ದೂರು ನೀಡಿದ್ದು, ಈ ದೂರಿನ ಪತ್ರ ಭಾರಿ ವೈರಲ್ ಆಗುತ್ತಿದೆ.
ರಾಜಸ್ತಾನದ ಅಲ್ವಾರ್ ಜಿಲ್ಲೆಯ ಬಹ್ರೋಡ್ ವಿಧಾನಸಭಾ ಕ್ಷೇತ್ರದ ಶಾಸಕ ಬಲ್ಜೀತ್ ಯಾದವ್ ಅವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಈ ವೇಳೆ ಹೆಲಿಕಾಪ್ಟರ್ ಮೂಲಕ ಹೂಮಳೆ ಸುರಿಸಿ ಅದ್ದೂರಿಯಾಗಿ ಸ್ವಾಗತ ಮಾಡಲು ಬಯಸಿದ್ದರು. ಯೋಜನೆಯಂತೆ ಭಾನುವಾರ ಶಾಸಕರು ಬಂದಾಗ ಬಹ್ರೋಡ್ ವೃತ್ತದಲ್ಲಿ ಹೆಲಿಕಾಪ್ಟರ್ ಮೂಲಕ ಹೂಮಳೆ ಸುರಿಸಿದ್ದರು. ಇದಾದ ಬಳಿಕ ಹೆಲಿಕಾಪ್ಟರ್ ಕೊಹ್ರಾನಾ ಗ್ರಾಮದ ಮೂಲಕ ಹಾದು ಹೋಗಿದೆ.
ಇದನ್ನೂ ಓದಿ: ತಲೆ ಮೇಲೆ ಮತ್ತೊಬ್ಬನನ್ನು ಉಲ್ಟಾ ಹೊತ್ತು ಮೆಟ್ಟಿಲೇರಿದ ಯುವಕ- ವೈರಲ್ ವಿಡಿಯೋ…
ಈ ವೇಳೆ ಹೆಲಿಕಾಪ್ಟರ್ ತುಂಬಾ ಕೆಳಗೆ ಹಾರಾಟ ನಡೆಸಿದೆ. ಇದರ ಪರಿಣಾಮವಾಗಿ ಗ್ರಾಮದಲ್ಲಿ ಭಾರಿ ಶಬ್ದ ಉಂಟಾಗಿದ್ದು, ಸುತ್ತಮುತ್ತಲಿನ ಜನರಿಗೆ ಕಿರಿಕಿರಿಯಾಗಿದೆ. ಆದರೆ ಕೊಹ್ರಾನಾ ಗ್ರಾಮದ ರೈತನೊಬ್ಬ ವಿಚಿತ್ರ ಆರೋಪವೊಂದನ್ನು ಮಾಡಿದ್ದು, ಇದೀಗ ಭಾರಿ ಸುದ್ದಿಯಲ್ಲಿದೆ.
ಹೆಲಿಕಾಪ್ಟರ್ ತುಂಬಾ ಕೆಳಗೆ ಹಾರಾಟ ನಡೆಸಿದ್ದರಿಂದ ತನ್ನ ಒಂದುವರೆ ಲಕ್ಷ ರೂ.ಮೌಲ್ಯದ ಎಮ್ಮೆ ಹೆಲಿಕಾಪ್ಟರ್ ಸದ್ದಿನಿಂದ ಮೃತಪಟ್ಟಿದೆ ಎಂದು ರೈತನೊಬ್ಬ ದೂರಿದ್ದಾನೆ. ಅಲ್ಲದೇ ಎಮ್ಮೆ ಮೃತಪಟ್ಟ ಸಂಬಂಧ ಹೆಲಿಕಾಪ್ಟರ್ ಪೈಲಟ್ ವಿರುದ್ದ ದೂರು ದಾಖಲಿಸಿದ್ದು, ಈ ದೂರಿನ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ದೂರಿನ ಬೆನ್ನಲ್ಲೇ ಎಮ್ಮೆಯನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಸಾವಿಗೆ ಕಾರಣ ತಿಳಿದು ಬಂದ ಬಳಿಕ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.