ಡಿಕೆ ಬ್ರದರ್ಸ್ ಕೋಟೆ ಛಿದ್ರಕ್ಕೆ ಮೈತ್ರಿ ಮಹಾಗೇಮ್ ಏನು?
ಘಟಾನುಘಟಿಗಳನ್ನೇ ಸಂಸತ್ಗೆ ಕಳಿಸಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಈ ಬಾರಿಯೂ ಹೈವೋಲ್ಟೇಜ್ ಕದನಕ್ಕೆ ಸಾಕ್ಷಿಯಾಗಲಿದೆ. ಹಾಲಿ ಸಂಸದ, ಡಿಸಿಎಂ ಡಿ.ಕೆ ಶಿವಕುಮಾರ್ ಅವ್ರ ಸಹೋದರ, ಕಾಂಗ್ರೆಸ್ನ ಪ್ರಭಾವಿ ನಾಯಕ ಡಿ.ಕೆ ಸುರೇಶ್ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಿನೇಷನ್ ದಿನವೇ ಶಕ್ತಿಪ್ರದರ್ಶನದ ಮೂಲಕ ಎದುರಾಳಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಡಿಕೆ ಬ್ರದರ್ ನಾಮಪತ್ರಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಸಚಿವರ ದಂಡೇ ಸೇರಿತ್ತು. ಈ ಮೂಲಕ ಮೈತ್ರಿ ಅಭ್ಯರ್ಥಿ ವಿರುದ್ಧ ನಾಮಪತ್ರದ ದಿನವೇ ಪವರ್ ಶೋ ತೋರಿಸಿದ್ದಾರೆ. ಮತ್ತೊಂದೆಡೆ ಡಿ.ಕೆ ಸುರೇಶ್ರನ್ನ ಸೋಲಿಸೋಕೆ ಮೈತ್ರಿ ಅಭ್ಯರ್ಥಿಗಳೂ ರಣವ್ಯೂಹ ಹೆಣೆಯುತ್ತಿದ್ದಾರೆ. ದೊಡ್ಡಗೌಡ್ರ ಅಳಿಯನನ್ನೇ ಅಖಾಡಕ್ಕಿಳಿಸಿದ್ದಾರೆ. ಕಳೆದ ಬಾರಿ ಮಂಡ್ಯ ಕ್ಷೇತ್ರದಂತೆಯೇ ಕೊತಕೊತ ಕುದಿಯುತ್ತಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಯಾರ ಪರ ಅಲೆ ಇದೆ..? ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಮತ್ತೆ ಗೆಲ್ತಾರಾ..? ನಾಮಪತ್ರದ ಮೂಲಕ ಕೊಟ್ಟ ಸಂದೇಶ ಏನು? ಡಾ.ಸಿಎನ್ ಮಂಜುನಾಥ್ ಗೆಲುವು ಸಾಧ್ಯನಾ..? ಈ ಬಗೆಗಿನ ಮಾಹಿತಿ ಇಲ್ಲಿದೆ..
ಇದನ್ನೂ ಓದಿ: ಚುನಾವಣೆ ಗೆಲ್ಲಲು ಬಿಜೆಪಿ ನನ್ನ ಹೆಣ ಬೀಳಿಸೋಕು ರೆಡಿ – ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ
ಬೆಂಗಳೂರು ಗ್ರಾಮಾಂತರ ಅಂದ್ರೇ ಅದು ಡಿಕೆ ಬ್ರದರ್ಸ್ ಭದ್ರಕೋಟೆ. ಈ ಕೋಟೆಗೆ ನುಗ್ಗಲು ತುಂಬಾ ಸಲ ಬಿಜೆಪಿ – ಜೆಡಿಎಸ್ ಪ್ರಯತ್ನ ಪಟ್ಟಿವೆ. ಆದ್ರೆ ಅದು ಈವರೆಗೂ ಸಾಧ್ಯವಾಗಿಲ್ಲ.. ಈ ಬಾರಿ ಹಾಲಿ ಸಂಸದ ಡಿಕೆ ಸುರೇಶ್ ಎದುರು ಹೃದಯ ತಜ್ಞ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರ ಅಳಿಯ ಡಾ.ಸಿ.ಎನ್ ಮಂಜುನಾಥ್ ಅವರನ್ನು ಕಣಕ್ಕಿಳಿಸಿವೆ. ಬಡವರ ಪಾಲಿನ ದೇವರು ಅಂತಾನೇ ಕರೆಸಿಕೊಳ್ಳುವ ಮಂಜುನಾಥ್ ಪರ ಜಿಲ್ಲೆಯಲ್ಲಿ ಒಂದಷ್ಟು ಅಲೆ ಇದೆ. ಹಾಗೇ ಜಾತಿ ಲೆಕ್ಕಾಚಾರ ಕೈಹಿಡಿಯುವ ಚಾನ್ಸ್ ಕೂಡ ಇದೆ. 2013ರ ಉಪ ಚುನಾವಣೆ ಸೇರಿ 3 ಬಾರಿ ಜಯಗಳಿಸಿರುವ ಸುರೇಶ್ ಮತ್ತು ಬಡರಾಗಿಗಳ ಆಸರೆದಾತ ಡಾ ಸಿಎನ್ ಮಂಜುನಾಥ್ ಇಬ್ಬರೂ ಪ್ರಬಲ ಅಭ್ಯರ್ಥಿಗಳಾಗಿದ್ದು ಕ್ಷೇತ್ರ ಹೈವೋಲ್ಟೇಜ್ ರಣಕಣವಾಗಿ ಬದಲಾಗಿದೆ. ಇದೇ ಕಾರಣಕ್ಕೆ ಡಿಕೆ ಸುರೇಶ್ ನಾಮಪತ್ರದ ದಿನವೇ ಬೃಹತ್ ಮೆರವಣಿಗೆ ಹೊರಟು ನಾಮಪತ್ರ ಸಲ್ಲಿಸಿ ಶಕ್ತಿ ಪ್ರದರ್ಶಿಸಿದ್ದಾರೆ.
ಡಿ.ಕೆ ಸುರೇಶ್ ಶಕ್ತಿಪ್ರದರ್ಶನ!
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಸದ ಡಿ.ಕೆ ಸುರೇಶ್ ಗುರುವಾರ ನಾಮಪತ್ರ ಸಲ್ಲಿಸಿದ್ರು. ನಾಮಪತ್ರ ಸಲ್ಲಿಕೆಗೂ ಮನೆಯಲ್ಲಿ ಅಣ್ಣ ಡಿ.ಕೆ.ಶಿವಕುಮಾರ್ ಹಾಗೂ ಅತ್ತಿಗೆ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಬಳಿಕ ಬೆಳಗ್ಗೆ 9 ಗಂಟೆಗೆ ಮನೆದೇವರಾದ ಕನಕಪುರದ ಕೆಂಕೆರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ರು. ನಂತರ ರಾಮನಗರದ ಚಾಮುಂಡೇಶ್ವರಿ ದೇವರ ದರ್ಶನ ಪಡೆದರು. ನಗರದ ಪ್ರಮುಖ ಮಸೀದಿ, ಚರ್ಚ್ಗೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಸಾವಿರಾರು ಕಾರ್ಯಕರ್ತತರ ಜೊತೆಗೆ ತಮಟೆ, ವಾದ್ಯ, ಪಟ್ಟದ ಕುಣಿತ, ವೀರಗಾಸೆ ಮೂಲಕ ಬೃಹತ್ ಮೆರವಣಿಗೆ ನಡೆಸಿದ್ರು. ಈ ವೇಳೆ ಡಿ.ಕೆ.ಸುರೇಶ್ಗೆ ಸಚಿವ ರಾಮಲಿಂಗಾರೆಡ್ಡಿ, ಎಂಎಲ್ಸಿ ರವಿ, ಕುಣಿಗಲ್ ಶಾಸಕ ರಂಗನಾಥ್, ಶಾಸಕ ಬಾಲಕೃಷ್ಣ ಸಾಥ್ ನೀಡಿದ್ರು. ಡಿಸಿ ಕಚೇರಿವರೆಗೂ ಮೆರವಣಿಗೆ ನಡೆಸಿ ನಂತರ ಚುನಾವಣಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರಗೆ ಡಿ.ಕೆ.ಸುರೇಶ್ ಎರಡು ನಾಮಪತ್ರ ಸಲ್ಲಿಸಿದರು.
ಡಾ.ಸಿಎನ್ ಮಂಜುನಾಥ್ ಸ್ಪರ್ಧೆ ಬಳಿಕ ಬೆಂಗಳೂರು ಗ್ರಾಮಾಂತರ ಕೂಡ ಮಂಡ್ಯ ಕ್ಷೇತ್ರದಂತೆಯೇ ಹೈವೋಲ್ಟೇಜ್ ಕಣವಾಗಿ ಬದಲಾಗಿದೆ. ಸುಮಲತಾ ಅಂಬರೀಶ್ ವಿರುದ್ಧ ಸುಮಲತಾ ಹೆಸರಿನ ಹಲವರು ನಾಮಪತ್ರ ಸಲ್ಲಿಸಿದ್ದರು. ಇದೀಗ ಬೆಂಗಳೂರು ಗ್ರಾಮಾಂತರದಲ್ಲೂ ಮತ್ತೊಬ್ಬ ಡಾ ಸಿ.ಎನ್ ಮಂಜುನಾಥ್ ಹೆಸರಿನ ವ್ಯಕ್ತಿ ನಾಮಪತ್ರ ಸಲ್ಲಿಸಿದ್ದಾರೆ. ಡಾ.ಮಂಜುನಾಥ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಹೃದ್ರೋಗ ತಜ್ಞ. ಇಡೀ ಕರುನಾಡಿಗೆ ಚಿರಪರಿಚಿತ ಮುಖ. ಬಹಳ ಮುಖ್ಯವಾಗಿ ಜಯದೇವ ಹೃದ್ರೋಗ ಆಸ್ಪತ್ರೆಯನ್ನು ಬಡ ರೋಗಿಗಳ ಪಾಲಿನ ಭರವಸೆಯಾಗಿ ಬದಲಾಯಿಸಿದವರು ಡಾ.ಮಂಜುನಾಥ್. ಅದಲ್ಲದೇ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಅಳಿಯ ಕೂಡ. ಹೀಗಾಗಿ ಮಂಜುನಾಥ್ ಸ್ಪರ್ಧೆ ಬಾರೀ ಕುತೂಹಲ ಮೂಡಿಸಿದೆ.
ಬೆಂ.ಗ್ರಾಮಾಂತರ ಕ್ಷೇತ್ರದ ಹಿನ್ನೆಲೆ!
2008ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರವು ರಚನೆಯಾದ ಬಳಿಕ ನಡೆಯುತ್ತಿರುವ 5ನೇ ಲೋಕಸಭಾ ಚುನಾವಣೆ ಇದು.ಈ ಹಿಂದೆ ಇಲ್ಲಿ ಮೂರು ಸಾರ್ವತ್ರಿಕ ಚುನಾವಣೆಗಳು ಹಾಗೂ ಒಂದು ಉಪ ಚುನಾವಣೆ ನಡೆದಿತ್ತು. ಒಂದರಲ್ಲಿ ಜೆಡಿಎಸ್ ಗೆಲುವು ಸಾಧಿಸಿದ್ದರೆ, ಉಳಿದ ಚುನಾವಣೆಗಳಲ್ಲಿ ಕಾಂಗ್ರೆಸ್ನ ಡಿಕೆ ಸುರೇಶ್ ಗೆಲುವು ಸಾಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದರೆ, 2ರಲ್ಲಿ ಬಿಜೆಪಿ, 1ರಲ್ಲಿ ಜೆಡಿಎಸ್ ಶಾಸಕರಿದ್ದಾರೆ. ವಿಧಾನಸಭಾ ಚುನಾವಣೆಯ ಮತ ಹಂಚಿಕೆ ಗಮನಿಸಿದರೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಕಾಂಗ್ರೆಸ್ನಿಂದ ಬಹಳ ಮುಂದಿವೆ. ಬೆಂಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು 6 ಲಕ್ಷದ 9 ಸಾವಿರದ 362 ಮತಗಳನ್ನು ಪಡೆದರೆ, ಬಿಜೆಪಿಯವರು 3 ಲಕ್ಷದ 62 ಸಾವಿರದ 805 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ನ ಅಭ್ಯರ್ಥಿಗಳು 8 ಲಕ್ಷದ 12 ಸಾವಿರದ 917 ಮತ ಪಡೆದಿದ್ದು, ಬಿಜೆಪಿ – ಜೆಡಿಎಸ್ ಮೈತ್ರಿ 1 ಲಕ್ಷದ 60 ಸಾವಿರ ಮತಗಳಿಂದ ಮುಂದೆ ಇದೆ. ಇದು ಮೈತ್ರಿಗೆ ಅನುಕೂಲ ಆಗಬಹುದು.
ವಿಧಾನಸಭೆಯಲ್ಲಿ ಬಿಜೆಪಿ ಜೆಡಿಎಸ್ ಎರಡೂ ಪಕ್ಷ ಸೇರಿ ಕಾಂಗ್ರೆಸ್ಗಿಂತ ಜಾಸ್ತಿ ವೋಟ್ ಪಡೆದಿವೆ ನಿಜ. ಆದ್ರೆ ಡಿ.ಕೆ ಸುರೇಶ್ಗೆ ರಾಜಕಾರಣದಲ್ಲಿನ ಅನುಭವ, ಕ್ಷೇತ್ರದಲ್ಲಿ ಹಿಡಿತ ಹೊಂದಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಬೆಂಬಲ ಇರುವುದು ಪ್ಲಸ್ ಆಗೇ ಆಗುತ್ತೆ. ಆದ್ರೆ ಡೋಂಟ್ ಕೇರ್ ಸ್ವಭಾವ, ಕ್ಷೇತ್ರವನ್ನು ಕಬ್ಜ ಮಾಡಿಕೊಂಡಿರುವಂತೆ ವರ್ತಿಸುವುದು ಜೊತೆಗೆ ಎನ್ಡಿಎ ಮೈತ್ರಿ ಅಂಶಗಳು ಸ್ವಲ್ಪ ನೆಗೆಟಿವ್ ಆಗಬಹುದು. ಇನ್ನು ಮಂಜುನಾಥ್ಗೆ ಅವ್ರ ಜನಪ್ರಿಯತೆಯೇ ಪ್ಲಸ್ ಆಗಲಿದೆ. ಸಜ್ಜನ ವ್ಯಕ್ತಿ, ದೇವೇಗೌಡರ ಅಳಿಯ ಎಂಬ ಅಭಿಪ್ರಾಯ ಜನರಲ್ಲಿದೆ. ಆದ್ರೆ ಇದೆಲ್ಲದರ ಹೊರತಾಗಿ ಮತದಾರರು ಯಾರ ಕೈ ಹಿಡಿಯುತ್ತಾರೆ ಅನ್ನೋದೇ ಈಗಿರುವ ಕುತೂಹಲ.