ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ! – ನಿರ್ಮಲಾ ಸೀತಾರಾಮನ್ ಈ ನಿರ್ಧಾರಕ್ಕೆ ಕಾರಣವೇನು?
ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಹಲವು ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಈ ಹೊತ್ತಲ್ಲೇ ಕೇಂದ್ರ ಹಣಕಾಸು ಸಚಿವೆ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಆಂಧ್ರಪ್ರದೇಶ ಅಥವಾ ತಮಿಳುನಾಡಿನಿಂದ ಸ್ಪರ್ಧಿಸುವ ಆಯ್ಕೆಯನ್ನು ನೀಡಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ನನ್ನ ಬಳಿ ಹಣವಿಲ್ಲ. ಆದ್ದರಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಬಿಜೆಪಿಯ ಪ್ರಸ್ತಾಪವನ್ನು ನಿರಾಕರಿಸಿದ್ದೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ – NIAಯಿಂದ ಮತ್ತಿಬ್ಬರು ವಶಕ್ಕೆ
ಒಂದು ವಾರ ಅಥವಾ ಹತ್ತು ದಿನಗಳ ಕಾಲ ಯೋಚಿಸಿದ ನಂತರ ಈ ನಿರ್ಧಾರ ತಿಳಿಸಿದ್ದೇನೆ. ಸ್ಪರ್ಧಿಸಲು ನನ್ನ ಬಳಿ ಅಷ್ಟು ಹಣವಿಲ್ಲ. ಅದು ಆಂಧ್ರಪ್ರದೇಶ ಅಥವಾ ತಮಿಳುನಾಡೇ ಆಗಿರಲಿ. ನನಗೂ ಸಮಸ್ಯೆ ಇದೆ. ಇದು ಅವರು ಬಳಸುವ ಹಲವಾರು ಇತರ ಗೆಲುವಿನ ಮಾನದಂಡಗಳ ಪ್ರಶ್ನೆಯಾಗಲಿದೆ ಮಾತನಾಡಿದ್ದಾರೆ.
ಅವರು ನನ್ನ ನಿಲುವನ್ನು ಒಪ್ಪಿಕೊಂಡಿದ್ದಾರೆ ಎಂದು ನಾನು ತುಂಬಾ ಕೃತಜ್ಞಳಾಗಿದ್ದೇನೆ. ಹಾಗಾಗಿ ನಾನು ಸ್ಪರ್ಧಿಸುವುದಿಲ್ಲ ಎಂದು ಸಚಿವೆ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ, ದೇಶದ ಹಣಕಾಸು ಸಚಿವರ ಬಳಿ ಚುನಾವಣೆಯಲ್ಲಿ ಹೋರಾಡಲು ಏಕೆ ಸಾಕಷ್ಟು ಹಣವಿಲ್ಲ ಎಂಬ ಪ್ರಶ್ನೆ ಕೇಳಿಬಂದಾಗ, ಭಾರತದ ಕನ್ಸಾಲಿಡೇಟೆಡ್ ಫಂಡ್ ತನಗೆ ಸೇರಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ನನ್ನ ಸಂಬಳ, ನನ್ನ ಗಳಿಕೆ ಮತ್ತು ನನ್ನ ಉಳಿತಾಯ ನನ್ನದೇ ಹೊರತು ಭಾರತದ ಕನ್ಸಾಲಿಡೇಟೆಡ್ ಫಂಡ್ ಅಲ್ಲ. ನಾನು ಇತರೆ ಅಭ್ಯರ್ಥಿಗಳ ಪ್ರಚಾರ ನಡೆಸುತ್ತೇನೆ. ಬಹಳಷ್ಟು ಮಾಧ್ಯಮ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ. ರಾಜೀವ್ ಚಂದ್ರಶೇಖರ್ ಅವರ ಪ್ರಚಾರಕ್ಕೆ ಹೋಗುತ್ತೇನೆ. ನಾನು ಪ್ರಚಾರದ ಹಾದಿಯಲ್ಲಿರುತ್ತೇನೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.