31 ರನ್​ಗಳಿಂದ ಗೆದ್ದು ಬೀಗಿದ ಹೈದರಾಬಾದ್‌ – ಮುಂಬೈಗೆ ಸತತ 2ನೇ ಸೋಲು!

31 ರನ್​ಗಳಿಂದ ಗೆದ್ದು ಬೀಗಿದ ಹೈದರಾಬಾದ್‌ – ಮುಂಬೈಗೆ ಸತತ 2ನೇ ಸೋಲು!

ಐಪಿಎಲ್​ನ ರೋಚಕ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು 31 ರನ್‌ಗಳಿಂದ ಸೋಲಿಸಿದೆ. ಇತ್ತ ಹೈದರಾಬಾದ್‌ ವಿರುದ್ಧ ಗೆಲುವಿಗಾಗಿ ಹೋರಾಡಿ ವಿರೋಚಿತ ಸೋಲು ಕಂಡ ಮುಂಬೈ ಇಂಡಿಯನ್ಸ್‌ ಲೀಗ್​ನಲ್ಲಿ ಸತತ ಎರಡನೇ ಸೋಲು ದಾಖಲಿಸಿದೆ.

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ  ಮೊದಲಿಗೆ ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ 3 ವಿಕೆಟ್‌ ಕಳೆದುಕೊಂಡು 277 ರನ್ ಗಳಿಸಿ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿತು. ಇತ್ತ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 5 ವಿಕೆಟ್‌ ಕಳೆದುಕೊಂಡು 246 ರನ್ ಗಳಿಸಿ ಸೋಲನುಭವಿಸಿತು.

ಇದನ್ನೂ ಓದಿ:   ಬೆಂಗಳೂರಿಗರೇ ಎಚ್ಚರ.. – ಇನ್ನುಮುಂದೆ ಪಾರಿವಾಳಗಳಿಗೆ ಆಹಾರ ಹಾಕಿದ್ರೆ ಬೀಳುತ್ತೆ ದಂಡ!

ಒಟ್ಟು 523 ರನ್‌ ಸಿಡಿದಿದ್ದು ಐಪಿಎಲ್‌ ಇತಿಹಾಸದಲ್ಲಿ ಇದೇ ಮೊದಲು. ಇಂದಿನ ಪಂದ್ಯದಲ್ಲಿ 31 ಬೌಂಡರಿ, 38 ಸಿಕ್ಸ್‌ ಸಿಡಿಯಲ್ಪಟ್ಟಿದೆ. ಐಪಿಎಲ್‌ನಲ್ಲಿ ಇಷ್ಟು ಬೌಂಡರಿ, ಸಿಕ್ಸ್‌ ಚಚ್ಚುವ ಮೂಲಕ ಮತ್ತೊಂದು ದಾಖಲೆ ಬರೆಯಲಾಗಿದೆ. ಓ ಪಂದ್ಯದಲ್ಲಿ ಹೈದರಾಬಾದ್‌ 277 ರನ್‌ ಹೊಡೆಯುವ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ ಸಿಡಿಸಿದ ತಂಡ ಎಂಬ ಹೆಗ್ಗಳಿಕೆಗೆ ಹೈದರಾಬಾದ್‌ ಪಾತ್ರವಾಗಿದೆ. ಈ ಹಿಂದೆ ಅತಿ ಹೆಚ್ಚು ರನ್‌ ಸಿಡಿಸಿದ ದಾಖಲೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಹೆಸರಿನಲ್ಲಿ ಇತ್ತು. 2013ರಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಪುಣೆ ವಾರಿಯರ್ಸ್‌ ವಿರುದ್ಧ 5 ವಿಕೆಟ್‌ ನಷ್ಟಕ್ಕೆ 263 ರನ್‌ ಹೊಡೆದಿತ್ತು. ಈ ಪಂದ್ಯದಲ್ಲಿ ಕ್ರಿಸ್‌ ಗೇಲ್‌ ಔಟಾಗದೇ 175 ರನ್‌ ಚಚ್ಚಿದ್ದರು.

ಭಾರೀ ದೊಡ್ಡ ಮೊತ್ತವಿದ್ದ ಹಿನ್ನೆಲೆಯಲ್ಲಿ ಆರಂಭದಲ್ಲೇ ರೋಹಿತ್‌ ಶರ್ಮಾ ಮತ್ತು ಇಶನ್‌ ಕಿಶನ್‌  ಅಬ್ಬರಿಸಲು ಆರಂಭಿಸಿದರು. ಇಬ್ಬರು 20 ಎಸೆತಗಳಲ್ಲಿ 56 ರನ್‌ ಚಚ್ಚಿದರು. ಈಶನ್‌ ಕಿಶನ್‌ 34 ರನ್‌(13 ಎಸೆತ, 2 ಬೌಂಡರಿ, 4 ಸಿಕ್ಸರ್‌) ಹೊಡೆದು ಔಟಾದರೆ ರೋಹಿತ್‌ ಶರ್ಮಾ 26 ರನ್‌ (12 ಎಸೆತ, 1 ಬೌಂಡರಿ, 3 ಸಿಕ್ಸರ್‌) ಹೊಡೆದು ಔಟಾದರು. ನಂತರ ನಮನ್‌ ಧೀರ್‌ 30 ರನ್‌(14 ಎಸೆತ, 2 ಬೌಂಡರಿ, 2 ಸಿಕ್ಸರ್‌) ಹೊಡೆದು ಕ್ಯಾಚ್‌ ನೀಡಿದರು.

ವಿಕೆಟ್‌ ಉರುಳಿದರೂ ಗೆಲ್ಲಲೇಬೇಕೆಂದು ಕ್ರೀಸ್‌ಗೆ ಇಳಿದ ತಿಲಕ್‌ ವರ್ಮಾ ಹೈದರಾಬಾದ್‌ ಬೌಲರ್‌ಗಳಿಗೆ ಬಿಸಿ ಮುಟ್ಟಿಸಿದರು. 24 ಎಸೆತಗಳಲ್ಲಿ ಅರ್ಧಶತಕ ಹೊಡೆದ ವರ್ಮಾ 64 ರನ್‌ (34 ಎಸೆತ, 2 ಬೌಂಡರಿ, 6 ಸಿಕ್ಸರ್‌) ಗಳಿಸಿದ್ದಾಗ ಸಿಕ್ಸ್‌ ಸಿಡಿಸಲು ಹೋಗಿ ಕ್ಯಾಚ್‌ ನೀಡಿ ಔಟಾದರು. ಹಾರ್ದಿಕ್‌ ಪಾಂಡ್ಯ 24 ರನ್‌ ಹೊಡೆದರು ಔಟಾದರೆ ಡಿಮ್‌ ಡೇವಿಡ್‌ ಔಟಾಗದೇ 42 ರನ್‌ (22 ಎಸೆತ, 2 ಬೌಂಡರಿ, 3 ಸಿಕ್ಸರ್‌) ಹೊಡೆದರು.  ನಾಯಕ ಪ್ಯಾಟ್‌ ಕಮ್ಮಿನ್ಸ್‌ 4 ಓವರ್‌ ಎಸೆದು 35 ರನ್‌ ನೀಡಿ ರೋಹಿತ್‌ ಶರ್ಮಾ ಮತ್ತು ತಿಕಲ್‌ ವರ್ಮಾ ವಿಕೆಟ್‌ ಪಡೆದು ಹೈದರಾಬಾದ್‌ಗೆ ಮಹತ್ವದ ಮುನ್ನಡೆ ತಂದುಕೊಟ್ಟರು.

Shwetha M