ಚೈತ್ರಾ ಗ್ಯಾಂಗ್ನಿಂದ ವಂಚನೆ ಕೇಸ್ – ಸಾಕ್ಷಿ ಹೇಳದಂತೆ ಪ್ರಮುಖ ಆರೋಪಿಯಿಂದ ವ್ಯಕ್ತಿ ಮೇಲೆ ಹಲ್ಲೆ

ಬೈಂದೂರು ಬಿಜೆಪಿ ಟಿಕೆಟ್ ಕೊಡಿಸೋದಾಗಿ ಉದ್ಯಮಿಗೆ ಚೈತ್ರಾ ಗ್ಯಾಂಗ್ ವಂಚಿಸಿದೆ. ಇದೀಗ ಈ ಪ್ರಕರಣ ಪ್ರಮುಖ ಆರೋಪಿ ಧನರಾಜ್ ಎಂಬಾತ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾನೆ. ಜೈಲಿನಿಂದ ಹೊರ ಬರುತ್ತಿದ್ದಂತೆ ಧನರಾಜ್ ತನ್ನ ವರಸೆ ತೋರಿದ್ದಾನೆ. ಸಾಕ್ಷಿ ಹೇಳಿದರೆ ಕೊಲೆ ಮಾಡುವುದಾಗಿ ಸಲೂನ್ ಮಾಲೀಕ ರಾಮು ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಶಿವರಾಜ್ಕುಮಾರ್ ಸಿನಿಮಾಗಳ ಮೇಲೆ ಬ್ಯಾನ್ ಹೇರಲು ಸಾಧ್ಯವಿಲ್ಲ – ಸ್ಪಷ್ಟಪಡಿಸಿದ ಚುನಾವಣಾ ಆಯೋಗ
ಕಳೆದ ತಿಂಗಳು ಬೇಲ್ ಮೇಲೆ ಜೈಲಿನಿಂದ ಹೊರಬಂದಿರುವ ಧನರಾಜ್ಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿತ್ತು. ಸೋಮವಾರ(ಮಾ.25) ಕಡೂರಿನ ಹೋಟೆಲ್ನಲ್ಲಿ ಹಲ್ಲೆ ನಡೆದಿರುವ ಸಂಬಂಧ ರಾಮು ಅವರು ಬೀರೂರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ದೂರು ನೀಡಿದರೂ ಕೂಡ ಬೀರೂರು ಠಾಣೆಯ ಪೊಲೀಸರು ಮಾತ್ರ ಪ್ರಕರಣ ದಾಖಲಿಸಿಲ್ಲ. ಈ ಹಿನ್ನಲೆ ನ್ಯಾಯಕ್ಕಾಗಿ ರಾಮು ಕುಟುಂಬ ಎಸ್ಪಿ ಕಚೇರಿ ಮೊರೆ ಹೋಗಿದ್ದಾರೆ .
ಇನ್ನು ಚೈತ್ರಾ ವಂಚನೆ ಪ್ರಕರಣದಲ್ಲಿ ಗೋಪಾಲ್ ಜೀ ಪಾತ್ರ ಸೃಷ್ಟಿಸಿ ಕಡೂರಿನ ರಾಮು ಸಲೂನ್ನಲ್ಲಿ ಚೆನ್ನಾ ನಾಯ್ಕಗೆ ಧನರಾಜ್ ಮೇಕಪ್ ಮಾಡಿಸಿದ್ದ. ಈ ಹಿನ್ನಲೆ ವಂಚನೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ರಾಮುವಿಗೆ ಸಾಕ್ಷಿ ಹೇಳದಂತೆ ಬೆದರಿಕೆ ಒಡ್ಡಿದ್ದಾನೆ. ಇದೀಗ ಪ್ರಕರಣ ದಾಖಲಿಸದ ಬೀರೂರು ಪೊಲೀಸರ ವಿರುದ್ಧ ರಾಮು ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ. ಜೊತೆಗೆ ನ್ಯಾಯಕ್ಕಾಗಿ ಎಸ್ಪಿ ವಿಕ್ರಮ್ ಆಮ್ಟೆ ಮೊರೆ ಹೋಗಿದ್ದಾರೆ. ಈ ಕುರಿತು ಚಿಕ್ಕಮಗಳೂರು ನಗರದ ಎಸ್ಪಿ ಕಚೇರಿಯಲ್ಲಿ ದೂರು ನೀಡಿದ್ದಾರೆ.