ಹೆಚ್ಡಿಕೆ ಸ್ಪರ್ಧೆಗೆ ಜೆಡಿಎಸ್ ನಲ್ಲೇ ಕಿತ್ತಾಟ – ಒಂಟಿಯಾಗೇ ಮಂಡ್ಯ ಗೆಲ್ತಾರಾ ಸುಮಲತಾ?
ಮಂಡ್ಯ ಲೋಕಸಭಾ ಕ್ಷೇತ್ರದ ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿದೆ. ಮೈತ್ರಿಯಲ್ಲಿ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾಗಿದೆ. ಹೀಗಾಗಿ ಖುದ್ದು ಹೆಚ್.ಡಿ ಕುಮಾರಸ್ವಾಮಿ ಅವರೇ ಸ್ಪರ್ಧಿಸಬೇಕು ಎಂದು ಮಂಡ್ಯ ಜೆಡಿಎಸ್ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಚನ್ನಪಟ್ಟಣದ ಜೆಡಿಎಸ್ ಕಾರ್ಯಕರ್ತರು, ಮಂಡ್ಯ ಕಾರ್ಯಕರ್ತರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದಾಗಿ ಕುಮಾರಸ್ವಾಮಿ ಅವರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಮತ್ತೊಂದೆಡೆ ಬಿಜೆಪಿ ಬೆಂಬಲಿತ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಬಿಜೆಪಿ ಟಿಕೆಟ್ ಕೈತಪ್ಪುವ ಸಾಧ್ಯತೆ ಇದ್ದು, ಪಕ್ಷೇತರವಾಗಿ ಕಣಕ್ಕಿಳಿಯಬೇಕು ಎಂದು ಬೆಂಬಲಿಗರು ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಮುಂದಿನ ರಾಜಕೀಯ ನಡೆಗಾಗಿ ಹೆಚ್.ಡಿ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಶ್ ಪ್ರತ್ಯೇಕವಾಗಿ ಸಭೆ ಕರೆದು ಚರ್ಚೆ ನಡೆಸಿದ್ದಾರೆ. ಕುಮಾರಸ್ವಾಮಿ ನಡೆಸಿದ ಚರ್ಚೆಯಲ್ಲಿ ದೊಡ್ಡ ಹೈಡ್ರಾಮಾವೇ ನಡೆದು ಹೋಗಿದೆ.
ಇದನ್ನೂ ಓದಿ: ಸಕ್ಕರೆ ನಾಡಿನಿಂದ ಹೆಚ್ಡಿಕೆ ಸ್ಪರ್ಧೆ ಫಿಕ್ಸ್? – ಮಂಗಳವಾರ ಮಂಡ್ಯ ಮೈತ್ರಿ ಅಭ್ಯರ್ಥಿ ಘೋಷಣೆ
ಕುಮಾರಣ್ಣನಿಗಾಗಿ ಕಿತ್ತಾಟ
ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಚನ್ನಪಟ್ಟಣದ ಶಾಸಕ ಹೆಚ್ಡಿ ಕುಮಾರಸ್ವಾಮಿ ಮನೆ ಮುಂದೆ ಮುಖಂಡರ ಹೈಡ್ರಾಮಾವೇ ನಡೆಯಿತು. ಕ್ಷೇತ್ರ ಬಿಟ್ಟು ಹೋಗದಂತೆ ಕುಮಾರಸ್ವಾಮಿಯನ್ನು ಒತ್ತಾಯಿಸುತ್ತಿರುವ ಚನ್ನಪಟ್ಟಣ ಜೆಡಿಎಸ್ ಮುಖಂಡರು ಮತ್ತು ಕುಮಾರಸ್ವಾಮಿ ಲೋಕಸಭೆ ಸ್ಪರ್ಧೆಗೆ ಒತ್ತಾಯಿಸುತ್ತಿರುವ ಮಂಡ್ಯ ಕ್ಷೇತ್ರದ ಜೆಡಿಎಸ್ ಮುಖಂಡರ ನಡುವೆ ಗಲಾಟೆ, ವಾಗ್ವಾದ ನಡೆಯಿತು. ಗಲಾಟೆ ವೇಳೆ ಕಾರ್ಯಕರ್ತರೊಬ್ಬರು ಕೈ ಕೊಯ್ದುಕೊಂಡಿದ್ದಾರೆ. ಮಂಡ್ಯದಲ್ಲಿ ನಿಖಿಲ್ ನಿಂತಾಗ ನೀವು ಅವರ ಕೈ ಹಿಡಿದಿರಲಿಲ್ಲ. ನಾವು ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣದಲ್ಲಿ ಉಳಿಸಿಕೊಂಡಿದ್ದೇವೆ ಎಂದು ಮಂಡ್ಯ ಜೆಡಿಎಸ್ ಕಾರ್ಯಕರ್ತರನ್ನು ಚನ್ನಪಟ್ಟಣದ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಯಾವುದೇ ಕಾರಣಕ್ಕೂ ಕುಮಾರಸ್ವಾಮಿ ಚನ್ನಪಟ್ಟಣ ಬಿಟ್ಟು ಹೋಗಬಾರದು ಎಂದು ಆಗ್ರಹಿಸಿದರು. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನ ಗೆಲ್ಲಿಸಿ ಎಂದೂ ಒತ್ತಾಯಿಸಿದ್ದಾರೆ.
2018 ರಲ್ಲಿ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದರು. ಅದಕ್ಕೂ ಮುಂಚೆ ಚನ್ನಪಟ್ಟಣ ಮತದಾತರರು ಸಾಕಷ್ಟು ತೊಂದರೆ ಅನುಭವಿಸಿದ್ದರು. ಕಾರ್ಯಕರ್ತರ ಒತ್ತಡಕ್ಕೆ ಮಣಿದು ಎರಡು ಕಡೆ ಸ್ಪರ್ಧೆ ಮಾಡಿದ್ದರು. ಹೀಗೆ ಒಂದೆಡೆ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಾಯಗಳು ಕೇಳಿಬರುತ್ತಿದ್ದರೆ, ಇನ್ನೊಂದೆಡೆ ಅದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಒಂದು ರೀತಿಯಲ್ಲಿ ಒತ್ತಡ ಹಾಗೂ ಇಕ್ಕಟ್ಟಿನಲ್ಲಿ ಸಿಲುಕಿರುವ ಹೆಚ್ಡಿ ಕುಮಾರಸ್ವಾಮಿ ಅವರ ಚಿತ್ತ ಎತ್ತ ಎನ್ನುವ ಕುತೂಹಲ ಮೂಡಿಸಿದೆ. ಅದಾಗ್ಯೂ ದಳ ಪತಿಗಳು ಚನ್ನಪಟ್ಟಣ ಕಾರ್ಯಕರ್ತರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಮಂಡ್ಯ ಹಾಗೂ ರಾಮನಗರ ಕಾರ್ಯಕರ್ತರನ್ನು ಮನವೊಲಿಸಲಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಇತ್ತ ಸುಮಲತಾ ಅವರ ಮುಂದಿನ ನಡೆ ಏನು ಎನ್ನುವುದು ಕುತೂಹಲ ಮೂಡಿಸಿದೆ. ಮುಂದಿನ ರಾಜಕೀಯ ನಿರ್ಧಾರ ತೆಗೆದುಕೊಳ್ಳಲು ಮಂಡ್ಯ ಕಾರ್ಯಕರ್ತರ ಸಭೆ ನಡೆಸಿದ್ರು. ಅಷ್ಟಕ್ಕೂ ಸುಮಲತಾ ಮುಂದಿರುವ ದಾರಿಗಳೇನು ಅನ್ನೋದನ್ನ ನೋಡೋದಾದ್ರೆ..
ಸುಮಲತಾ ದಾರಿ ಯಾವುದು?
ಮಂಡ್ಯದಲ್ಲಿ ಮತ್ತೆ ಪಕ್ಷೇತರರಾಗಿ ಸುಮಲತಾ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಆದ್ರೆ ಈ ಬಾರಿ ಇಲ್ಲಿ ಗೆಲುವು ಅಷ್ಟು ಸುಲಭ ಆಗಿರಲ್ಲ ಅನ್ನೋದು ಬಹುತೇಕ ಖಚಿತವಾಗಿದೆ. ಹೀಗಾಗಿ ರಾಜ್ಯಸಭೆ ಸದಸ್ಯತ್ವ+ ಕೇಂದ್ರದಲ್ಲಿ ಮಂತ್ರಿಸ್ಥಾನ ಈ ಆಯ್ಕೆಯೂ ರಾಜಕೀಯ ಅಂಗಳದಲ್ಲಿ ಹರಿದಾಡುತ್ತಿದೆ. ಆದ್ರೆ ಈ ಬಗ್ಗೆ ಬಿಜೆಪಿ ಅಥವಾ ಸುಮಲತಾ ಅವರಿಂದಲೂ ಸ್ಪಷ್ಟನೆ ಇಲ್ಲ. ಹೀಗಾಗಿ ಮಂಡ್ಯದಿಂದ ಸುಮಲತಾ ಪಕ್ಷೇತರರಾಗಿ ಮತ್ತೆ ನಿಲ್ತಾರ ಗೊತ್ತಿಲ್ಲ. ಒಂದು ವೇಳೆ ಪಕ್ಷೇತರರಾಗಿ ಮತ್ತೆ ನಿಂತ್ರೆ ಕಳೆದ ಸಲ ಸಿಕ್ಕಂತೆ ಸ್ವಾಭಿಮಾನದ ಮತಗಳು ಈಸಲ ಸಿಗಲ್ಲ. ಅಲದೇ ಸುಮಲತಾ ಅವರು ಸ್ವಾಭಿಮಾನದ ಸಂಕೇತದಲ್ಲಿ 2019ರಲ್ಲಿ ಗೆದ್ದಿದ್ರು. ಆಮೇಲೆ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಅವರಿಗೆ ರಾಷ್ಟ್ರಮಟ್ಟದಲ್ಲಿ ಹತ್ತಿರವಾದರು. ಆದ್ರೆ ರಾಜ್ಯ ಬಿಜೆಪಿ ನಾಯಕರನ್ನ ಹೆಚ್ಚು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಇದೂ ಕೂಡ ಟಿಕೆಟ್ ಕೈತಪ್ಪಲು ಕಾರಣ ಅಂತ ಎನ್ನಲಾಗಿದೆ.
ಜೆಡಿಎಸ್ ಹಾಗೂ ಸುಮಲತಾ ನಡುವೆ ಟಿಕೆಟ್ ಫೈಟ್ ನಡೆಯುತ್ತಿರೋದಾಗ್ಲೇ ಕಾಂಗ್ರೆಸ್ ಬಿಜೆಪಿ ನಾಯಕರಿಗೆ ಗಾಳ ಹಾಕುತ್ತಿದೆ. ಮಂಡ್ಯದಲ್ಲಿ ತನ್ನ ಪ್ರಾಬಲ್ಯ ಸಾಧಿಸಲು, ಕಾಂಗ್ರೆಸ್ ಮತ್ತು ಸುಮಲತಾ ಮಧ್ಯ ಉತ್ತಮ ಬಾಂಧವ್ಯವಿದೆ. ಒಂದೇ ಕುಟುಂಬದಂತಿದ್ದೇವೆ ಎಂದು ಕಾಂಗ್ರೆಸ್ ನಾಯಕ ಮಂಡ್ಯ ಉಸ್ತುವಾರಿ ಸಚಿವ ಚೆಲುವರಾಯ ಸ್ವಾಮಿ ಹೇಳಿದ್ದಾರೆ. ಬಿಜೆಪಿ ನಾಯಕ ನಾರಾಯಣಗೌಡರನ್ನು ಕಾಂಗ್ರೆಸ್ಗೆ ತರಲು ಮತ್ತೊಂದು ಕಡೆ ಕಸರತ್ತು ನಡೆಯುತ್ತಿದೆ. ಇದೆಲ್ಲ ಕಾರಣಗಳಿಂದ ಮಂಡ್ಯ ಕ್ಷೇತ್ರ ಕೌತುಕದ ಕೇಂದ್ರ ಬಿಂದುವಾಗಿದೆ.