ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟನ್ಸ್ 6 ರನ್ ಜಯ
ಇನ್ನೇನು ಗೆಲುವು ಖಚಿತ ಎಂಬ ಸ್ಥಿತಿಯಲ್ಲಿದ್ದ ಮುಂಬೈ ಇಂಡಿಯನ್ಸ್ ಗೆ ಕೊನೆಯಲ್ಲಿ ಆಘಾತ ಉಂಟಾಗಿದೆ. ಕೊನೆಯ ಹಂತದಲ್ಲಿ ಮುಂಬೈ ಇಂಡಿಯನ್ಸ್ ಸೋಲು ಕಂಡಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟನ್ಸ್ 6 ರನ್‌ಗಳ ಗೆಲುವು ದಾಖಲಿಸಿದೆ.
ಅಹಮದಾಬಾದ್ ನ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟಿ-20 ಟೂರ್ನಿಯ ಪಂದ್ಯದಲ್ಲಿ ಗುಜರಾತ್ ಕೊನೆ ಕ್ಷಣದಲ್ಲಿ ರೋಚಕ ಜಯ ಸಾಧಿಸಿತು. ಟಾಸ್ ಗೆದ್ದ ಮುಂಬೈ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 168 ರನ್ ಗಳಿಸಿತು. 169 ರನ್ ಗುರಿ ಬೆನ್ನತ್ತಿದ ಮುಂಬೈ 20 ಓವರ್‌ಗೆ 9 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿ ಸೋಲನುಭವಿಸಿತು.
ಇದನ್ನೂ ಓದಿ: ನಮ್ಮ ಮೆಟ್ರೋಗೂ ಬರಲಿದೆ ಸ್ಕೈವಾಕ್ ಟ್ರಾವೆಲೇಟರ್!
ಗುಜರಾತ್ ಪರ ಸಾಯಿ ಸುದರ್ಶನ್ 45, ಶುಭಮನ್ ಗಿಲ್ 31 ರನ್ ಗಳಿಸಿದರು. ಉಳಿದಂತೆ ಯಾವ ಬ್ಯಾಟರ್ ಕೂಡ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ನೀರಸ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ ಗುಜರಾತ್ 168 ರನ್ ಗಳಿಸಿತು. ಆ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ 169 ರನ್‌ಗಳ ಗುರಿ ನೀಡಿತು. ಮುಂಬೈ ಪರ ಬೂಮ್ರಾ ಉತ್ತಮ ಬೌಲಿಂಗ್ ದಾಳಿ ನಡೆಸಿ 3 ವಿಕೆಟ್ ಪಡೆದರು.
ಇತ್ತ 169 ರನ್ ಗುರಿ ಬೆನ್ನತ್ತಿದ ಮುಂಬೈ ತಂಡಕ್ಕೆ ಇಶಾನ್ ಕಿಶಾನ್ ಆರಂಭಿಕ ಆಘಾತ ನೀಡಿದರು. ನಾಲ್ಕು ಬಾಲ್ ಆಡಿದ ಅವರು ಶೂನ್ಯಕ್ಕೆ ಔಟಾಗಿ ಪೆವಿಲಿಯನ್ ಸೇರಿದರು. ರೋಹಿತ್ ಶರ್ಮಾ (43) ಹಾಗೂ ಡೆವಾಲ್ಡ್ ಬ್ರೆವಿಸ್ ಜವಾಬ್ದಾರಿಯುತ ಆಟವು ಮುಂಬೈಗೆ ಗೆಲುವಿನ ಭರವಸೆ ಮೂಡಿಸಿತ್ತು.
ಕೊನೆ ಎರಡು ಓವರ್ ವರೆಗೂ ಪಂದ್ಯ ರೋಚಕವಾಗಿತ್ತು. ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಕ್ರೀಸ್‌ನಲ್ಲಿದ್ದರು. 19ನೇ ಓವರ್‌ನಲ್ಲಿ 1 ಸಿಕ್ಸ್ ಮತ್ತು 1 ಫೋರ್ ಹೊಡೆದು ಭರವಸೆಯನ್ನು ಮತ್ತಷ್ಟು ಹೆಚ್ಚಿಸಿದ್ದರು. ಆದರೆ ದೊಡ್ಡ ಹೊಡೆತಕ್ಕೆ ಕೈ ಹಾಕಿ ಕ್ಯಾಚ್ ಇತ್ತು ಪೆವಿಲಿಯನ್ ಸೇರಿದರು. ಇದು ಮುಂಬೈ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು. ಗೆಲುವಿನ ಭರವಸೆಯಲ್ಲಿದ್ದ ಮುಂಬೈಗೆ ಪಾಂಡ್ಯ ಔಟಾಗಿದ್ದು, ಸೋಲಿನ ಸೂಚನೆ ನೀಡಿತು. ಕೊನೆಗೆ ಮುಂಬೈ 6 ರನ್‌ಗಳ ಸೋಲನುಭವಿಸಿದೆ.
ಗುಜರಾತ್ ಪರ ಅಜ್ಮತುಲ್ಲಾ ಒಮರ್ಜಾಯ್, ಉಮೇಶ್ ಯಾದವ್, ಸ್ಪೆನ್ಸರ್ ಜಾನ್ಸನ್, ಮೋಹಿತ್ ಶರ್ಮಾ ತಲಾ 2 ಹಾಗೂ ಸಾಯಿ ಕಿಶೋರ್ 1 ವಿಕೆಟ್ ಕಿತ್ತು ತಂಡದ ಗೆಲುವಿಗೆ ಸಹಕಾರಿಯಾದರು.