ಅದೇ ರಾಗ.. ಅದೇ ಹಾಡು.. – ಮೊದಲ ಪಂದ್ಯ ದೇವರಿಗೆ ಅರ್ಪಣೆ ಎಂದ ಆರ್‌ಸಿಬಿ ಫ್ಯಾನ್ಸ್!
ಈ ಬಾರಿ ಕಪ್ ಗೆದ್ದೇ ಗೆಲ್ಲುತ್ತೇವೆ ಎಂಬ ನಿರೀಕ್ಷೆಯಲ್ಲಿದ್ದ ಆರ್‌ಸಿಬಿ ಮೊದಲ ಪಂದ್ಯದಲ್ಲೇ ಆಘಾತಕಾರಿ ಸೋಲು ಕಂಡಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಸಿಎಸ್‌ಕೆ ವಿರುದ್ಧ ಮತ್ತೊಮ್ಮೆ ಆರ್‌ಸಿಬಿ ಮುಗ್ಗರಿಸಿದೆ. ಸಿಎಸ್‌ಕೆ ಆರ್‌ಸಿಬಿ ವಿರುದ್ಧ 6 ವಿಕೆಟ್ ಗೆಲುವು ಸಾಧಿಸಿದೆ.
ಶುಕ್ರವಾರ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದ ಆರ್‌ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಕ್ಯಾಪ್ಟನ್ ಫಾಫ್ ಡುಪ್ಲೆಸಿ, ವಿರಾಟ್ ಕೊಹ್ಲಿ ಪವರ್ ಪ್ಲೇನಲ್ಲಿ ಅಬ್ಬರಿಸಲಿಲ್ಲ. 4 ಓವರ್ಗಳಲ್ಲಿ ಕೇವಲ 37 ರನ್ ಸಿಡಿಸಿದರು.
ಇದನ್ನೂ ಓದಿ: ನೂರಾರು ಕೋಟಿ ಒಡೆಯ ಧೋನಿ ಬಳಿ ಇರೋ ಬೈಕ್, ಕಾರುಗಳೆಷ್ಟು?
5ನೇ ಓವರ್ನಲ್ಲಿ ದಾಳಿಗಿಳಿದ ಮುಸ್ತಫಿಜುರ್ ರೆಹಮಾನ್ ಒಂದೇ ಓವರ್ನಲ್ಲಿ ಡಬಲ್ ಶಾಕ್ ಕೊಟ್ರು. ಫಾಫ್ ಡುಪ್ಲೆಸಿ, ರಜತ್ ಪಟಿದಾರ್ಗೆ ಪೆವಿಲಿಯನ್ ದಾರಿ ತೋರಿಸಿದರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್ವೆಲ್ ಡಕೌಟ್ ಆಗಿ ನಿರ್ಗಮಿಸಿದರು. ಅದರ ಬೆನ್ನಲ್ಲೇ, ವಿರಾಟ್ ಕೊಹ್ಲಿ, ಕ್ಯಾಮರೂನ್ ಗ್ರೀನ್ ಆಟಕ್ಕೆ ಮತ್ತೆ ಮುಸ್ತಫಿಜುರ್ ಬ್ರೇಕ್ ಹಾಕಿದರು.
6ನೇ ವಿಕೆಟ್ಗೆ ಜೊತೆಯಾದ ದಿನೇಶ್ ಕಾರ್ತಿಕ್, ಅನುಜ್ ರಾವತ್ ತಂಡಕ್ಕೆ ಚೇತರಿಕೆ ನೀಡಿದರು. 95 ರನ್ಗಳ ಸಾಲಿಡ್ ಜೊತೆಯಾಟವಾಡಿದ ಈ ಜೋಡಿ ಆರ್‌ಸಿಬಿ ಬಿಗ್ಸ್ಕೋರ್ ಕಲೆ ಹಾಕುವಲ್ಲಿ ನೆರವಾದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿತು.
174 ರನ್ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ಚೆನ್ನೈ ಅಬ್ಬರದ ಆರಂಭದ ಸೂಚನೆ ನೀಡಿತು. ಆದ್ರೆ, ಇಂಪ್ಯಾಕ್ಟ್ ಪ್ಲೇಯರ್ ಯಶ್ ದಯಾಳ್, ಋತುರಾಜ್ ಗಾಜ್ವಾಡ್ಗೆ ಪೆವಿಲಿಯನ್ ದಾರಿ ತೋರಿಸುವಲ್ಲಿ ಯಶಸ್ವಿಯಾದರು. ವಿಕೆಟ್ ಕಳೆದರು ಅಬ್ಬರದ ಆಟವಾಡ್ತಿದ್ದ ರಚಿನ್ ರವೀಂದ್ರ, ಕರನ್ ಶರ್ಮಾ ಸ್ಪಿನ್ ಬಲೆಗೆ ಬಿದ್ದರು.
ಬಳಿಕ ಜೊತೆಯಾದ ಡೇರಿಲ್ ಮಿಚೆಲ್, ಅಜಿಂಕ್ಯಾ ರಹಾನೆ ಸ್ಟಡಿ ಇನ್ನಿಂಗ್ಸ್ ಕಟ್ಟೋ ಯುತ್ನದಲ್ಲಿದ್ದರು. ಆದ್ರೆ, ಇವರ ಜೊತೆಯಾಟಕ್ಕೆ ಕ್ಯಾಮರೂನ್ ಗ್ರೀನ್ ಬ್ರೇಕ್ ಹಾಕಿದರು. ಆರ್‌ಸಿಬಿ ಸುಲಭಕ್ಕೆ ಗೆಲ್ಲೋ ಸಿಚ್ಯುವೇಶನ್ ನಿರ್ಮಾಣವಾಗಿತ್ತು. ಆದ್ರೆ, 5ನೇ ವಿಕೆಟ್ಗೆ ಜೊತೆಯಾದ ಶಿವಮ್ ದುಬೆ, ರವಿಂದ್ರ ಜಡೇಜಾ ಎಚ್ಚರಿಕೆಯ ಆಟ ಗೆಲುವಿನ್ನ ಕಸಿದುಕೊಂಡರು. ಆರ್‌ಸಿಬಿ ಶಾರ್ಟ್ಬಾಲ್ ತಂತ್ರ, ಬೈಸ್, ಓವರ್ ಥ್ರೋ ರೂಪದಲ್ಲಿ ನೀಡಿದ ಬಿಟ್ಟಿ ರನ್ಗಳು ಗೆಲುವಿಗೆ ಮುಳುವಾದವು. 18.4 ಓವರ್ಗಳಲ್ಲಿ ಗುರಿ ಮುಟ್ಟಿದ ಚೆನ್ನೈ 6 ವಿಕೆಟ್ಗಳ ಜಯ ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು.