85 ವರ್ಷ ದಾಟಿದ ವೃದ್ಧರಿಗಷ್ಟೇ ಮನೆಯಿಂದ ಮತದಾನ ಮಾಡಲು ಅವಕಾಶ – ವಯೋಮಿತಿ ಹೆಚ್ಚಿಸಿದ್ದೇಕೆ ಚುನಾವಣಾ ಆಯೋಗ?
ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ಚುನಾವಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇದೀಗ ಹಿರಿಯ ನಾಗರಿಕರಿಗೆ ಚುನಾವಣಾ ಆಯೋಗ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. ಮನೆಯಿಂದಲೇ ಮತ ಚಲಾಯಿಸುವ ಹಿರಿಯ ನಾಗರಿಕರ ವಯೋಮಿತಿ ಹೆಚ್ಚಳ ಮಾಡಿದೆ. ಇದರಿಂದಾಗಿ ಹಿರಿಯ ನಾಗರಿಕರಿಗೆ ಮತಗಟ್ಟೆಗೆ ಬರಲು ತೀವ್ರ ಸಮಸ್ಯೆ ಉಂಟಾಗಿದೆ.
ಇದನ್ನೂ ಓದಿ: ಅರುಣಾಚಲ ಪ್ರದೇಶ ಭಾರತದ ಭೂ ಪ್ರದೇಶ, ಇದು ಚೀನಾದ ಹಕ್ಕಲ್ಲ – ಯುನೈಟೆಡ್ ಸ್ಟೇಟ್ಸ್
ಕರ್ನಾಟಕದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮನೆಯಿಂದಲೇ ಮತ ಚಲಾಯಿಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿತ್ತು. ಆದ್ರೆ ಈ ಬಾರಿ ಮನೆಯಿಂದ ಮತದಾನ ಮಾಡಲು ವಯೋಮಿತಿಯಲ್ಲಿ ಐದು ವರ್ಷ ಹೆಚ್ಚಳ ಮಾಡಿದೆ. 85 ವರ್ಷ ಮೇಲ್ಪಟ್ಟವರಿಗೆ ಮಾತ್ರ ಈ ಅವಕಾಶ ಕಲ್ಪಿಸಲಾಗಿದೆ ಎಂದು ಆಯೋಗ ಹೇಳಿದೆ. ಇದೀಗ ವಯೋವೃದ್ಧ ಮತದಾರರು ಬೇಸರ ವ್ಯಕ್ತಪಡಿಸಿದ್ದಾರೆ.
ಈಗ 80 ವರ್ಷ ದಾಟಿದ ಮತದಾರರಲ್ಲಿ ಬಹುತೇಕರು ಮತಗಟ್ಟೆಗಳಿಗೆ ಹೋಗಲು ದೈಹಿಕವಾಗಿ ಅಸಮರ್ಥರು. ಜತೆಗೆ, ಅತಿಯಾದ ಬಿಸಿಲಿನಿಂದಾಗಿ ಅವರು ಮತಗಟ್ಟೆಗೆ ಬರುವುದು ಕಷ್ಟಕರ. ಹೀಗಿರುವಾಗ ಮತಗಟ್ಟೆಗಳಿಗೆ ಬರಲು ಅಸಹಾಯಕರಾದ ಎಲ್ಲರಿಗೂ ಮನೆಯಿಂದಲೇ ಮತದಾನ ಮಾಡಲು ಯಾಕೆ ಅವಕಾಶ ನೀಡಬಾರದು ಎಂದು ಅನೇಕ ಪ್ರಶ್ನಿಸುತ್ತಿದ್ದಾರೆ.
ಕರ್ನಾಟಕದಲ್ಲಿ 85 ವರ್ಷ ದಾಟಿದ 5.70 ಲಕ್ಷ ಮತದಾರರಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವು 33,507 ಮಂದಿ ಮತದಾರರೊಂದಿಗೆ ಅತಿ ಹೆಚ್ಚು ಹಿರಿಯ ಮತದಾರರನ್ನು ಹೊಂದಿದ ಕ್ಷೇತ್ರವಾಗಿದೆ. ದಾವಣಗೆರೆ ಕ್ಷೇತ್ರವು 12,840 ಮಂದಿಯೊಂದಿಗೆ ಕಡಿಮೆ ಸಂಖ್ಯೆಯ ಹಿರಿಯ ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.