ಲೋಕಸಭಾ ಚುನಾವಣೆಗೆ ಅಧಿಕೃತ ಚಾಲನೆ – ಮೊದಲ ಹಂತದ ಚುನಾವಣೆಗೆ ಬುಧವಾರದಿಂದ ನಾಮಪತ್ರ ಸಲ್ಲಿಕೆ ಆರಂಭ

ಲೋಕಸಭಾ ಚುನಾವಣೆಗೆ ಅಧಿಕೃತ ಚಾಲನೆ – ಮೊದಲ ಹಂತದ ಚುನಾವಣೆಗೆ ಬುಧವಾರದಿಂದ ನಾಮಪತ್ರ ಸಲ್ಲಿಕೆ ಆರಂಭ

ಲೋಕಸಭೆ ಚುನಾವಣೆಯ ಕಾವು ಜೋರಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿಯಲು ನಾನಾ ಸರ್ಕಸ್‌ ಮಾಡುತ್ತಿವೆ. ದೇಶದಲ್ಲಿ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದ್ದು, ಬುಧವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.

18ನೇ ಅವಧಿಯ ಲೋಕಸಭೆ ಚುನಾವಣೆಯು ಏಪ್ರಿಲ್ 19ರಿಂದ ಆರಂಭವಾಗಲಿದೆ.  ಜೂನ್ 4ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.  ಮೊದಲ ಹಂತದ ಚುನಾವಣೆಗೆ ಬುಧವಾರದಿಂದ ಮಾ.27ರವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಮಾ.28ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಮಾ.30 ನಾಮಪತ್ರ ಹಿಂಪಡೆಯಲು ಕಡೆಯ ಅವಕಾಶ ಇರಲಿದ್ದು, ಏ.19ರಂದು ಮತದಾನ ನಡೆಯಲಿದೆ.

ಇದನ್ನೂ ಓದಿ: ಬಿಜೆಪಿ – ಜೆಡಿಎಸ್‌ ಮೈತ್ರಿಯಲ್ಲಿ ಬಿರುಕು – ಕುಮಾರಸ್ವಾಮಿ ಮುನಿಸು ಶಮನಕ್ಕೆ ನಡ್ಡಾ, ಅಮಿತ್ ಶಾ ಅಖಾಡಕ್ಕೆ!

ಇನ್ನು ಎರಡನೇ ಹಂತದ ಮತದಾನ ಏಪ್ರಿಲ್ 26, ಮೇ 7ರಂದು ಮೂರನೇ ಹಂತದ ಮತದಾನ ನಡೆಯಲಿದೆ. ಅದೇ ರೀತಿ ಮೇ 13 ರಂದು ನಾಲ್ಕನೇ, ಮೇ 20 ರಂದು ಐದನೇ, ಮೇ 25 ರಂದು 6 ಹಾಗೂ ಜೂನ್ 1 ರಂದು ಏಳನೇ ಹಂತದಲ್ಲಿ ಮತದಾನ ನಡೆಯಲಿದೆ.

ಮೊದಲ ಹಂತದಲ್ಲಿ 102 ಲೋಕಸಭೆ ಕ್ಷೇತ್ರಗಳಿಗೆ ಮತದಾನ ನಡೆದರೆ, ಎರಡನೇ ಹಂತದಲ್ಲಿ 89, ಮೂರನೇ ಹಂತದಲ್ಲಿ 94, ನಾಲ್ಕನೇ ಹಂತದಲ್ಲಿ 96, ಐದನೇ ಹಂತದಲ್ಲಿ 49, ಆರನೇ ಹಂತದಲ್ಲಿ 57 ಹಾಗೂ ಏಳನೇ ಹಂತದಲ್ಲಿ 57 ಲೋಕಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಮೊದಲ ಹಂತದಲ್ಲಿ ತಮಿಳುನಾಡಿನ 39 ಲೋಕಸಭಾ ಕ್ಷೇತ್ರ, ಉತ್ತರ ಪ್ರದೇಶದ 6, ರಾಜಸ್ಥಾನದ 12, ಮಧ್ಯಪ್ರದೇಶ 6, ಉತ್ತರಾಖಂಡ, ಅಸ್ಸಾಂ, ಮಹಾರಾಷ್ಟ್ರ 5 ಕ್ಷೇತ್ರ ಬಿಹಾರದ 4, ಪಶ್ಚಿಮ ಬಂಗಾಳ 3 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 27ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು, ಮಾರ್ಚ್ 28 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 19 ರಂದು ಮತದಾನ ನಡೆಯಲಿದೆ. ಜೂನ್ 4ರಂದು ಫಲಿತಾಂಶ ಘೋಷಣೆಯಾಗಲಿದೆ.

Shwetha M