ಬಿಜೆಪಿ – ಜೆಡಿಎಸ್ ಮೈತ್ರಿಯಲ್ಲಿ ಬಿರುಕು – ಕುಮಾರಸ್ವಾಮಿ ಮುನಿಸು ಶಮನಕ್ಕೆ ನಡ್ಡಾ, ಅಮಿತ್ ಶಾ ಅಖಾಡಕ್ಕೆ!
ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಮಧ್ಯೆಯೇ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ನಡುವೆ ಅಪಸ್ವರ ಎದ್ದಿದೆ. ಕ್ಷೇತ್ರ ಹಂಚಿಕೆ ವಿಚಾರ ಹಾಗೂ ಬಿಜೆಪಿ ನಾಯಕರ ನಡವಳಿಕೆಗಳು ಜೆಡಿಎಸ್ ನಾಯಕರನ್ನು ಕೆರಳಿಸಿದ್ದು, ಕೋರ್ ಕಮಿಟಿ ಸಭೆಯಲ್ಲಿ ಮುಖಂಡರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಈ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಮಧ್ಯಪ್ರವೇಶಿಸಿದೆ.
ಇದನ್ನೂ ಓದಿ: ಮತ್ತೊಂದು ಅಪಖ್ಯಾತಿ ಪಡೆದ ರಾಷ್ಟ್ರ ರಾಜಧಾನಿ! – ವಿಶ್ವದಲ್ಲೇ ಅತ್ಯಂತ ಕಲುಷಿತ ನಗರ ದೆಹಲಿ!
ಹೌದು, ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿವೆ. ಆರಂಭದಲ್ಲಿಯೇ ನಮ್ಮನ್ನು ಬಿಜೆಪಿ ನಿರ್ಲಕ್ಷ್ಯ ಮಾಡುತ್ತಿದೆ. ಚುನಾವಣಾ ಸಭೆ, ಪ್ರಚಾರವನ್ನು ಬಿಜೆಪಿ ನಮ್ಮನ್ನು ಬಿಟ್ಟು ಮಾಡುತ್ತಿದೆ. ಯಾವ ಸಭೆಗೂ ನಮ್ಮನ್ನು ಬಿಜೆಪಿಯವರು ಕರೆಯುತ್ತಿಲ್ಲ. ಏಕಪಕ್ಷೀಯವಾಗಿ ಇಪ್ಪತ್ತು ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಈ ಬಗ್ಗೆ ಜೆಡಿಎಸ್ ವರಿಷ್ಠರನ್ನು ಬಿಜೆಪಿ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಸಮ್ಮುಖದಲ್ಲಿಯೇ ಜೆಡಿಎಸ್ ಮುಖಂಡರು, ಚುನಾವಣಾ ಉಸ್ತುವಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಆಲರ್ಟ್ ಆಗಿದೆ. ಜೆಡಿಎಸ್ ಮುನಿಸು ಶಮನಗೊಳಿಸಲು ಬಿಜೆಪಿ ಹೈಕಮಾಂಡ್ ನಾಯಕರು ಹೆಚ್ಡಿ ಕುಮಾರಸ್ವಾಮಿ ಅವರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತುಕತೆ ನಡೆಸಿ, ಮೈತ್ರಿ ವಿಚಾರದಲ್ಲಿ ಯಾವುದೇ ಗೊಂದಲ ಬೇಡ ಎಂದು ಕುಮಾರಸ್ವಾಮಿಗೆ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಮೈತ್ರಿ ವಿಚಾರವಾಗಿ ಯಾವುದೇ ಗೊಂದಲ ಬೇಡ. ಎಲ್ಲವನ್ನೂ ಕುಳಿತು ಮಾತನಾಡಿ ಬಗೆಹರಿಸೋಣ. ಅನಗತ್ಯ ಗೊಂದಲಕ್ಕೆ ಅವಕಾಶ ಮಾಡಿಕೊಡುವುದು ಬೇಡ. ನಿಮ್ಮ ಹೃದಯದ ಚಿಕಿತ್ಸೆ ಸುಸೂತ್ರವಾಗಿ ನೆರವೇರಲಿ. ನಿಮ್ಮ ಆರೋಗ್ಯ ಸುಧಾರಿಸಿದ ನಂತರ ಮಾತುಕತೆ ನಡೆಸೋಣ. ಸದ್ಯದ ಮಟ್ಟಿಗೆ ನಿಮ್ಮ ಆರೋಗ್ಯವೇ ಮೊದಲ ಆದ್ಯತೆ ಆಗಿರಲಿ. ನೀವು ಗುಣಮುಖರಾದ ಬಳಿಕ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಮತ್ತು ಪ್ರಧಾನಿ ಮೋದಿ ಅವರನ್ನು ಒಂದೇ ವೇದಿಕೆಯಲ್ಲಿ ಬರುವಂತೆ ಮಾಡಿ ಕಾರ್ಯಕ್ರಮ ಮಾಡೋಣ ಎಂದು ಬಿಜೆಪಿ ಹೈಕಮಾಂಡ್ ಕುಮಾರಸ್ವಾಮಿಗೆ ಭರವಸೆ ನೀಡಿದೆ ಎಂದು ಮೂಲಗಳು ತಿಳಿಸುವೆ.