RCB ಗೆಲುವಿನ ರೂವಾರಿ ಕನ್ನಡತಿ ಶ್ರೇಯಾಂಕಾ ಪಾಟೀಲ್ – ಫೈನಲ್ ಪಂದ್ಯದಲ್ಲಿ ಕಲಬುರ್ಗಿ ಕುವರಿಯಿಂದ ಇತಿಹಾಸ ಸೃಷ್ಟಿ

RCB ಗೆಲುವಿನ ರೂವಾರಿ ಕನ್ನಡತಿ ಶ್ರೇಯಾಂಕಾ ಪಾಟೀಲ್ – ಫೈನಲ್ ಪಂದ್ಯದಲ್ಲಿ ಕಲಬುರ್ಗಿ ಕುವರಿಯಿಂದ ಇತಿಹಾಸ ಸೃಷ್ಟಿ

ಈ ಸಲ ಕಪ್ ನಮ್ದೇ.. ಅಲ್ಲಲ್ಲ.. ಈ ಸಲ ಕಪ್ ನಮ್ದು. ಹೌದು. ಈ ಸಲ ಕಪ್ ಗೆದ್ದು ಬೀಗಿದ್ದು ಆರ್‌ಸಿಬಿಯೇ. ಕೋಟಿ ಕೋಟಿ ಹೃದಯಗಳ ಬೇಡಿಕೆ ಕೊನೆಗೂ ಈಡೇರಿದೆ. ಹುಡುಗರು ಗೆದ್ರೂ ಕಪ್ಪೇ, ಹುಡುಗಿಯರೂ ಗೆದ್ರೂ ಕಪ್ಪೇ. ಈ ಸಲ ಕಪ್ ನಮ್ದೇ ಅನ್ನೋ ಪುನೀತ್ ರಾಜ್ ಕುಮಾರ್ ಅವರ ಡೈಲಾಗ್ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಯಾಕೆಂದರೆ, ಐಪಿಎಲ್‌ನಲ್ಲಿ ಆರ್‌ಸಿಬಿ ಕಪ್ ಗೆಲ್ಲದಿದ್ದರ್ರೂ ಡಬ್ಲ್ಯೂಪಿಎಲ್‌ನಲ್ಲಿ ಆರ್‌ಸಿಬಿ ಕಪ್ ಗೆದ್ದು ಬೀಗಿದೆ. ಜೊತೆಗೆ ಹೆಣ್ ಮಕ್ಕೇ ಸ್ಟ್ರಾಂಗ್ ಗುರೂ ಅಂತಾನೂ ಫ್ಯಾನ್ಸ್ ಖುಷಿಯಲ್ಲೇ ಹೇಳ್ತಿದ್ದಾರೆ. ಅದರಲ್ಲೂ, ಕನ್ನಡಿಗರ ಕಣ್ಮಣಿ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ದಿನವೇ ಬೆಂಗಳೂರು ಟೀಮ್‌ನ ಸಿಂಹಿಣಿಯರು ಕಪ್ ಗೆದ್ದು ಚಾಂಪಿಯನ್ ಆಗಿದ್ದಾರೆ. ಈ ವೀರ ವನಿತೆಯರಲ್ಲಿ ನಮ್ಮ ಖಡಕ್ ರೊಟ್ಟಿ, ಎಣ್‌ಗಾಯ್ ತಿಂದು ಖಡಕ್‌ಗಾಗಿಯೇ ಫೀಲ್ಡಿಗಿಳಿದು ಡಿಸಿ ಬ್ಯಾಟರ್‌ಗಳನ್ನು ಬೆವರಿಳಿಸಿದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಬಗ್ಗೆ ಅನೇಕ ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ.

ಇದನ್ನೂ ಓದಿ:ಸಿಎಸ್‌ಕೆಗೆ ಈಗ ಸಿಕ್ಕಿದೆ ಹೊಸ ಬೌಲಿಂಗ್ ಅಸ್ತ್ರ – ಲಸಿತ್ ಮಲಿಂಗಾ ಸ್ಟೈಲ್‌ನಲ್ಲಿ ಬೌಲಿಂಗ್ ಮಾಡುವ ಆ ಆಟಗಾರ ಯಾರು?

IPL ಆಗಲಿ, Wpl ಆಗಲಿ. ನಮ್ಮ ಆರ್‌ಸಿಬಿ ಟೀಮ್‌ಗಿರುವ ತೂಕವೇ ಬೇರೆ. ಆರ್‌ಸಿಬಿ ಫ್ಯಾನ್ಸ್ ಕ್ರೇಜ್ ಇರೋದೇ ಹಾಗೆ.  IPL ಎಂದಾಗ ಆರ್‌ಸಿಬಿ ಅಂದ್ರೆ ಕಿಂಗ್ ಕೊಹ್ಲಿ. Wpl ಬಂದಾಗ ಆರ್‌ಸಿಬಿ ಕ್ಯಾಪ್ಟನ್ ಸ್ಮೃತಿ ಮಂದಾನಾ ಅಭಿಮಾನಿಗಳ ಹಾಟ್ ಫೆವರೇಟ್. ಆದರೆ, ಆರ್‌ಸಿಬಿ ಟೀಮ್‌ನಲ್ಲಿ ಈ ಬಾರಿ ಕನ್ನಡಿಗರ ಮನಗೆದ್ದ ಕುವರಿಯೇ ಶ್ರೇಯಾಂಕಾ ಪಾಟೀಲ್. ಅಪ್ಪಟ ಕನ್ನಡತಿ. ಉತ್ತರ ಕರ್ನಾಟಕದ ಹುಡುಗಿ. ತಂದೆ ರಾಜೇಶ್ ಪಾಟೀಲ್. ಇವರು ಉದ್ಯಮಿ. ನಮ್ಮ ಕಲಬುರ್ಗಿಯ ಕುವರಿ ಶ್ರೇಯಾಂಕಾ ಪಾಟೀಲ್ ಆರ್‌ಬಿಸಿ ಗೆಲುವಿನ ರೂವಾರಿಯೂ ಹೌದು. ಆರ್‌ಸಿಬಿಗೆ ಕಪ್ ಬರ ನೀಗಿಸಿದ್ದು ಕೂಡಾ ಇದೇ ಶ್ರೇಯಾಂಕಾ ಪಾಟೀಲ್ ಅನ್ನೋದು ಕನ್ನಡಿಗರಿಗೆ ಹೆಮ್ಮೆಯ ವಿಚಾರ. ನಿಮಗೆ ಗೊತ್ತಿರಲಿ,  ವುಮೆನ್ಸ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯದಲ್ಲಿ ಶ್ರೇಯಾಂಕಾ ಪಾಟೀಲ್,

ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಇದುವರೆಗೆ ಯಾರೂ ಮಾಡದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ಜೊತೆಗೆ ಹೊಸ ಇತಿಹಾಸ ನಿರ್ಮಿಸಿದ್ದಾರೆ ಈ ಹೆಮ್ಮೆಯ ಕನ್ನಡತಿ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್‌ಗಳ ಭರ್ಜರಿ ಗೆಲುವಿನ ರೂವಾರಿಗಳಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್ ಕೂಡ ಒಬ್ಬರು. ಈ ಪಂದ್ಯದಲ್ಲಿ 3.3 ಓವರ್‌ಗಳನ್ನು ಎಸೆದ ಶ್ರೇಯಾಂಕಾ ಪಾಟೀಲ್ ಕೇವಲ 12 ರನ್‌ಗಳನ್ನು ಮಾತ್ರ ನೀಡಿದ್ದರು. 4 ವಿಕೆಟ್‌ಗಳನ್ನು ಕಬಳಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 113 ರನ್‌ಗಳಿಗೆ ಆಲೌಟ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ವಿಶೇಷ ಎಂದರೆ ಈ 4 ವಿಕೆಟ್‌ಗಳೊಂದಿಗೆ ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಎರಡು ಬಾರಿ ನಾಲ್ಕು ವಿಕೆಟ್ ಪಡೆದ ದಾಖಲೆಯೊಂದು ಶ್ರೇಯಾಂಕಾ ಹೆಸರಿಗೆ ಸೇರ್ಪಡೆಯಾಗಿದೆ. ಅಂದರೆ, ಶ್ರೇಯಾಂಕಾ ಅವರನ್ನು ಹೊರತುಪಡಿಸಿ ಬೇರೆ ಯಾವುದೇ ಆಟಗಾರ್ತಿ WPL ನಲ್ಲಿ 2 ಬಾರಿ 4 ವಿಕೆಟ್ ಕಬಳಿಸಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಲೀಗ್ ಹಂತದ ಪಂದ್ಯದಲ್ಲಿ 4 ವಿಕೆಟ್ ಕಬಳಿಸಿ ಮಿಂಚಿದ್ದ ಶ್ರೇಯಾಂಕ ಪಾಟೀಲ್ ಇದೀಗ ಫೈನಲ್ ಪಂದ್ಯದಲ್ಲೂ 4 ವಿಕೆಟ್ಗಳನ್ನು ಉರುಳಿಸಿದ್ದಾರೆ. ಈ ಮೂಲಕ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಯಾರೂ ಮಾಡದ ಸಾಧನೆ ಮಾಡಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಒಟ್ಟು 12 ವಿಕೆಟ್ ಕಬಳಿಸುವ ಮೂಲಕ ಪರ್ಪಲ್ ಕ್ಯಾಪ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

ಆರ್‌ಸಿಬಿಗೆ ಕಪ್ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕನ್ನಡತಿ ಶ್ರೇಯಾಂಕಾ ಇದೇ ಡಬ್ಯುಪಿಎಲ್‌ನಲ್ಲಿ ಗಾಯದ ಸಮಸ್ಯೆಯಿಂದ ನರಳಿದ್ದರು. ಜೊತೆಗೆ ಆರಂಭಿಕ ಪಂದ್ಯಗಳಲ್ಲಿ ಮಿಂಚಿರಲಿಲ್ಲ. ಹೀಗಾಗಿಯೇ ಕೆಲ ಪಂದ್ಯಗಳಿಂದ ಶ್ರೇಯಾಂಕಾ ಪಾಟೀಲ್ ಅವರನ್ನು ಕೈ ಬಿಡಲಾಗಿತ್ತು. ಆದರೆ ಮತ್ತೆ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಪಡೆದ ಬಳಿಕ ಕನ್ನಡತಿ ಕಮಾಲ್ ಮಾಡಲಾರಂಭಿಸಿದಳು. ಆರ್‌ಸಿಬಿಯ ಬೌಲಿಂಗ್ ವಿಭಾಗದ ಸ್ಟ್ರೆಂತ್ ಅಂದರೆ ಶ್ರೇಯಾಂಕಾ ಎಂಬ ಮಟ್ಟಿಗೆ ಕನ್ನಡತಿಯ ಸ್ಪಿನ್ ಮೋಡಿ ಮಾಡಿತ್ತು. ನಮ್ಮ ಉತ್ತರ ಕರ್ನಾಟಕದ ಹುಡುಗಿಯ ತಾಕತ್ತು ಗೊತ್ತಲ್ಲ. ಎರಡು ಪಂದ್ಯಗಳಿಂದ ಹೊರಗುಳಿದಿದ್ದ ಶ್ರೇಯಾಂಕಾ ಮತ್ತೆ ತಂಡಕ್ಕೆ ಮರಳಿ ಬಂದಾಗ ಎಲ್ಲರೂ ಅಚ್ಚರಿಪಡುವಂತೆ ಕಂಬ್ಯಾಕ್ ಮಾಡಿದರು. ಎಷ್ಟರಮಟ್ಟಿಗೆ ಶ್ರೇಯಾಂಕಾ ಕಂಬ್ಯಾಕ್ ಮಾಡಿದರು ಎಂದರೆ 8 ಪಂದ್ಯಗಳಲ್ಲಿ ಬರೋಬ್ಬರಿ 13 ವಿಕೆಟ್ ಪಡೆದು ಈ ಟೂರ್ನಿಯ ಹೈಯೆಸ್ಟ್ ವಿಕಿಟ್ ಟೇಕರ್ ಅಂತಾ ಅನಿಸಿಕೊಂಡ್ರು.  ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಯಲ್ಲಾಗಿಯೇ ಟ್ರೋಫಿ ಗೆಲ್ಲಲು ಕಾರಣವಾದ್ರು.

ಕಳೆದ ವರ್ಷ ಆರಂಭವಾಗಿದ್ದ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ಪರ ಗಮನ ಸೆಳೆದಿದ್ದ ಶ್ರೇಯಾಂಕ ಪಾಟೀಲ್, ನಂತರ ಭಾರತ ತಂಡಕ್ಕೆ ಎಂಟ್ರಿ ಕೊಟ್ಟಿದ್ದರು. ಇದಕ್ಕೂ ಮುನ್ನ ಅಂಡರ್-19 ಏಷ್ಯಾ ಕಪ್ನಲ್ಲಿ ಟೂರ್ನಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು . ಭಾರತ ತಂಡದ ಪರ ತಮ್ಮ ಚೊಚ್ಚಲ ಸರಣಿಯಲ್ಲಿಯೇ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರು. ಅಷ್ಟೇ ಅಲ್ಲದೆ 2023ರ ಕೆರಿಬಿಯನ್ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಗಯಾನ ಅಮೆಜಾನ್ ವಾರಿಯರ್ಸ್ ಪರ ಆಡಿದ್ದ ಶ್ರೇಯಾಂಕ, ಅತಿ ಹೆಚ್ಚು ವಿಕೆಟ್‌ಗಳನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದರು. ಈ ಟೂರ್ನಿಯಲ್ಲಿ ಅವರು 9 ವಿಕೆಟ್ಗಳನ್ನು ಕಿತ್ತಿದ್ದರು. ಜೊತೆಗೆ ಕೆರಿಬಿಯನ್ ಪ್ರೀಮಿಯರ್ ಲೀಗ್ ಆಡಿದ ಭಾರತದ ಮೊದಲ ಆಟಗಾರ್ತಿ ಎಂಬ ಕೀರ್ತಿಗೂ ಭಾಜನರಾಗಿದ್ದರು.

ಟೀಮ್ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದಲ್ಲಿ ಕಮಾಲ್ ಮಾಡುತ್ತಿರುವ ಕನ್ನಡತಿ ಶ್ರೇಯಾಂಕಾ ಪಾಟೀಲ್ ಅವರಿಗೆ ಸ್ಪೂರ್ತಿ ಯಾರು ಗೊತ್ತಾ.. ಭಾರತ ತಂಡದ ಮಾಜಿ ನಾಯಕ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ. ನಾನು ಚಿಕ್ಕ ಬಾಲಕಿ ಇದ್ದಾಗಿಂದಲೂ ವಿರಾಟ್ ಕೊಹ್ಲಿಯ ಆಟವನ್ನು ನೋಡುತ್ತಾ ಬಂದಿದ್ದೇನೆ. ನನ್ನ ಪಾಲಿಗೆ ವಿರಾಟ್ ಕೊಹ್ಲಿ ಕ್ರಿಕೆಟ್ ದೇವರು ಎಂದು ಶ್ರೇಯಾಂಕ ಪಾಟೀಲ್ ಹೇಳಿಕೊಂಡಿದ್ದಾರೆ.

ಆರ್‌ಸಿಬಿ ಟೀಮ್‌ ಗೆ ಚಾಂಪಿಯನ್ ಪಟ್ಟ ತಂದುಕೊಟ್ಟ ಕನ್ನಡದ ಕುವರಿ ಶ್ರೇಯಾಂಕಾ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಕನ್ನಡಿಗರ ಪ್ರೀತಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಆರ್ ಸಿಬಿ ಅಭಿಮಾನಿಗಳು ಸದಾ ಈ ಸಲ ಕಪ್ ನಮ್ದೇ ಎಂದು ಜಪ ಮಾಡುತ್ತಿದ್ದರು. ಅವರು ಬಯಸಿದಂತೆ ಈ ಬಾರಿ ಕಪ್ ಗೆದ್ದಿದ್ದೇವೆ. ನನ್ನರ್ಥ ನಾವು ಕಠಿಣ ಪರಿಶ್ರಮ ಪಟ್ಟಿದ್ದೇವೆ ಎಂದು. ನಾವು ನೇರವಾಗಿ ಮೈದಾನಕ್ಕೆ ಇಳಿದು ಡಬ್ಲ್ಯುಪಿಎಲ್ ಪಂದ್ಯಗಳನ್ನು ಆಡಿರಲಿಲ್ಲ. ಅದಕ್ಕೂ ಮುನ್ನ ತಂಡದ ಆಟಗಾರ್ತಿಯರೆಲ್ಲಾ ಸೇರಿ ಕಠಿಣ ಅಭ್ಯಾಸ ಮಾಡಿದ್ದೆವು. ಸೀಸನ್ ಆರಂಭಕ್ಕೂ ಮುನ್ನ ನಾವು ಆರ್ ಸಿಬಿ ಕ್ಯಾಂಪ್ ನಲ್ಲಿ ಕಾಲ ಕಳೆದಿದ್ದೆವು. ತಂಡದ ಎಲ್ಲ ಆಟಗಾರ್ತಿಯರ ಸಂಪರ್ಕ ಪಡೆದು ಅವರನ್ನು ಪರಸ್ಪರ ಅರ್ಥ ಮಾಡಿಕೊಂಡಿದ್ದು ನಿಜಕ್ಕೂ ಒಂದು ಸುಂದರ ಅನುಭವವಾಗಿದೆ. ಪರಸ್ಪರ ಎಲ್ಲರ ಪರಿಚಯವಿದ್ದುದ್ದರಿಂದ ಮೈದಾನದಲ್ಲಿ ಆತ್ಮವಿಶ್ವಾಸದಿಂದ ಆಡಲು ಸಾಧ್ಯವಾಯಿತು. ಪರಸ್ಪರ ಎಲ್ಲರಲ್ಲೂ ಉತ್ತಮ ಬಾಂಧವ್ಯ ಮೂಡಿತ್ತು. ಕೆಲವು ನೃತ್ಯ, ನಾಟಕ ಹಾಗೂ ಸಂತಸ ಕ್ಷಣದಲ್ಲಿ ಪ್ರತಿಯೊಬ್ಬರು ಭಾಗಿಯಾಗಿದ್ದೆವು. ಈ ಟ್ರೋಫಿಯನ್ನು ಅಭಿಮಾನಿಗಳಿಗೆ ಅರ್ಪಿಸುತ್ತೇವೆ,” ಎಂದು ಹೇಳಿದ್ದಾರೆ.

ಎದುರಾಳಿ ತಂಡಕ್ಕೆ ಸ್ಪಿನ್ ಮೋಡಿಯಿಂದಲೇ ಬೆವರಿಳಿಸುವ ಶ್ರೇಯಾಂಕಾಗೆ ಚಾಕಲೋಟ್ ಅಂದ್ರೆ ಪಂಚ ಪ್ರಾಣ. ಚಾಕಲೇಟ್ ಇವರ ಫೆವರೇಟ್. ಜೊತೆಗೆ ಡ್ಯಾನ್ಸ್ ಮಾಡೋದು ಅಂದ್ರೆ ತುಂಬಾ ಇಷ್ಟ. ಮುದ್ದು ಮುದ್ದಾಗಿ ಬಂದು, ಬೆಂಗಳೂರಿಗರ ಮನಸು ಕದ್ದು, ಡಿಸಿ ಟೀಮ್‌ನ್ನು ಉಡೀಸ್ ಮಾಡಿದ ಶ್ರೇಯಾಂಕಾ ಪಾಟೀಲ್ ಬಗ್ಗೆ ಫ್ಯಾನ್ಸ್ ಕ್ರೇಜ್ ದುಪ್ಪಟ್ಟಾಗಿದೆ. 16 ವರ್ಷಗಳಿಂದ ಕಪ್ ನಮ್ದೇ ಎಂದು ಕನವರಿಸುತ್ತಿದ್ದ ಆರ್‌ಸಿಬಿ ಫ್ಯಾನ್ಸ್ ಗೆ ಜೋಶ್ ಕೊಟ್ಟ ಶ್ರೇಯಾಂಕಾ ಪಾಟೀಲ್ ಇನ್ನೂ ಹೆಚ್ಚು ಹೆಚ್ಚು ದಾಖಲೆಗಳನ್ನು ಬರೆಯಲಿ. ಟೀಮ್ ಇಂಡಿಯಾದಲ್ಲಿ ಮತ್ತಷ್ಟು ಇತಿಹಾಸ ಸೃಷ್ಟಿಸಲಿ.

Sulekha